ವಿದ್ಯಾರ್ಥಿಗಳ ದಿಢೀರ್‌ ಧರಣಿ: ಸಿಬ್ಬಂದಿಗೆ ತರಾಟೆ

ಶನಿವಾರ, ಮೇ 25, 2019
25 °C
ನಚಿಕೇತ ವಿದ್ಯಾರ್ಥಿನಿಲಯಕ್ಕೆ ಕೊಳೆತ ತರಕಾರಿ ಪೂರೈಕೆ

ವಿದ್ಯಾರ್ಥಿಗಳ ದಿಢೀರ್‌ ಧರಣಿ: ಸಿಬ್ಬಂದಿಗೆ ತರಾಟೆ

Published:
Updated:
ವಿದ್ಯಾರ್ಥಿಗಳ ದಿಢೀರ್‌ ಧರಣಿ: ಸಿಬ್ಬಂದಿಗೆ ತರಾಟೆ

ಕೋಲಾರ: ಹಾಸ್ಟೆಲ್‌ಗೆ ಕೊಳೆತ ತರಕಾರಿಗಳನ್ನು ಪೂರೈಸಲಾಗುತ್ತಿದೆ ಎಂದು ಆರೋಪಿಸಿ ನಗರದ ನಚಿಕೇತ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳು ಬುಧವಾರ ದಿಢೀರ್‌ ಧರಣಿ ನಡೆಸಿದರು.

ಹಾಸ್ಟೆಲ್‌ನಲ್ಲಿ ಆಹಾರದ ಗುಣಮಟ್ಟ ಕಳಪೆಯಾಗಿದೆ. ನೀರಿನ ಸೌಕರ್ಯವಿಲ್ಲ. ಶೌಚಾಲಯಗಳು ಶಿಥಿಲಗೊಂಡಿದ್ದು, ಸ್ವಚ್ಛತೆ ಇಲ್ಲವಾಗಿದೆ. ಈ ಬಗ್ಗೆ ವಾರ್ಡನ್‌ಗೆ ಹಲವು ಬಾರಿ ದೂರು ಕೊಟ್ಟಿದ್ದರೂ ಸಮಸ್ಯೆ ಬಗೆಹರಿದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗುತ್ತಿಗೆದಾರರು ಹಾಸ್ಟೆಲ್‌ನ ಅಡುಗೆ ಸಿಬ್ಬಂದಿ ಜತೆ ಶಾಮೀಲಾಗಿ ತರಕಾರಿ ಪೂರೈಕೆಯಲ್ಲಿ ಅಕ್ರಮ ಎಸಗುತ್ತಿದ್ದಾರೆ. ಸಿಬ್ಬಂದಿ ಹುಳು ಬಿದ್ದ ಆಹಾರ ಪದಾರ್ಥಗಳನ್ನು ಬಳಸಿ ಅಡುಗೆ ಮಾಡುತ್ತಿದ್ದಾರೆ. ಅಡುಗೆಗೆ ಶುದ್ಧ ನೀರನ್ನು ಬಳಸುತ್ತಿಲ್ಲ. ಹಾಸ್ಟೆಲ್‌ಗೆ ಮಂಜೂರಾದ ಆಹಾರ ಪದಾರ್ಥಗಳನ್ನು ವಾರ್ಡನ್‌ ಹಾಗೂ ಅಡುಗೆ ಸಿಬ್ಬಂದಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಪ್ರಶ್ನೆ ಮಾಡಿದರೆ ಹಾಸ್ಟೆಲ್‌ನಿಂದ ಹೊರ ಹಾಕುವುದಾಗಿ ಬೆದರಿಸುತ್ತಾರೆ ಎಂದು ಆರೋಪಿಸಿದರು.

ಮಧ್ಯಾಹ್ನದ ಊಟಕ್ಕೆ ಸಿದ್ಧಪಡಿಸಿದ ಆಹಾರವನ್ನು ರಾತ್ರಿಯೂ ಬಡಿಸಲಾಗುತ್ತಿದೆ. ಹಾಸ್ಟೆಲ್‌ನಲ್ಲಿ 40 ವಿದ್ಯಾರ್ಥಿಗಳಿದ್ದೇವೆ. ಆದರೆ, ಅಡುಗೆ ಸಿಬ್ಬಂದಿ ಸಂಖ್ಯೆ ಕಡಿಮೆ ಇದೆ. ಹೀಗಾಗಿ ಅವರು ವಿದ್ಯಾರ್ಥಿಗಳಿಂದ ಅಡುಗೆ ಕೆಲಸ ಮಾಡಿಸುತ್ತಾರೆ. ವಾರ್ಡನ್‌ ಮತ್ತು ಅಡುಗೆ ಸಿಬ್ಬಂದಿಯ ಶೋಷಣೆ ಬಗ್ಗೆ ಹಿರಿಯ ಅಧಿಕಾರಿಗಳಿಗೆ ದೂರು ಕೊಟ್ಟರೂ ಪ್ರಯೋಜನವಾಗಿಲ್ಲ ಎಂದು ಅಳಲು ತೋಡಿಕೊಂಡರು.

ಸಿಬ್ಬಂದಿಗೆ ತರಾಟೆ: ವಿದ್ಯಾರ್ಥಿಗಳ ಅಹವಾಲು ಆಲಿಸಿದ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಜಯಣ್ಣ ಹಾಗೂ ಸಹಾಯಕ ನಿರ್ದೇಶಕ ಬಾಲಾಜಿ ಅವರು ವಾರ್ಡನ್‌ ಕೃಷ್ಣಪ್ಪ ಮತ್ತು ಅಡುಗೆ ನೌಕರರಾದ ನಾರಾಯಣಸ್ವಾಮಿ, ಅಕ್ಕಯ್ಯಮ್ಮ ಅವರನ್ನು ತರಾಟೆಗೆ ತೆಗೆದುಕೊಂಡರು.

‘ನಿಮ್ಮ ಮನೆಗಳಲ್ಲೂ ಅಡುಗೆಗೆ ಇದೇ ರೀತಿ ಕೊಳೆತ ತರಕಾರಿ ಬಳಸುತ್ತೀರಾ. 40 ವಿದ್ಯಾರ್ಥಿಗಳಿಗೆ ಅಡುಗೆ ಮಾಡಲು 6 ಮಂದಿ ಇದ್ದೀರಿ. ಸರಿಯಾಗಿ ಕೆಲಸ ಮಾಡಲು ಆಗುವುದಿಲ್ಲವೇ. ತರಕಾರಿ ಗುಣಮಟ್ಟ ಸರಿಯಿಲ್ಲದಿದ್ದರೆ ವಾಪಸ್‌ ಕಳುಹಿಸಬೇಕು. ಅದು ಬಿಟ್ಟು ಗುತ್ತಿಗೆದಾರರ ಜತೆ ಶಾಮೀಲಾಗಿ ವಿದ್ಯಾರ್ಥಿಗಳಿಗೆ ತೊಂದರೆ ಮಾಡುವುದು ಸರಿಯಲ್ಲ’ ಎಂದು ಎಚ್ಚರಿಕೆ ನೀಡಿದರು.

‘ತರಕಾರಿ ಖರೀದಿಗೆ ಸರ್ಕಾರ ಕೊಡುವುದಿಲ್ಲವೇ, ಅಡುಗೆಗೆ ಗುಣಮಟ್ಟದ ತರಕಾರಿ ಬಳಸಲು ಏನು ತೊಂದರೆ. ನಿಮ್ಮ ತಪ್ಪಿನಿಂದ ನಾವು ವಿದ್ಯಾರ್ಥಿಗಳ ಮಾತು ಕೇಳಬೇಕೇ. ಇನ್ನು ಮುಂದೆ ವಾರದಲ್ಲಿ 3 ಬಾರಿ ಹಾಸ್ಟೆಲ್‌ಗೆ ಭೇಟಿ ನೀಡುತ್ತೇವೆ. ವಿದ್ಯಾರ್ಥಿಗಳಿಂದ ದೂರು ಕೇಳಿ ಬಂದರೆ ಮುಲಾಜಿಲ್ಲದೆ ಶಿಸ್ತುಕ್ರಮ ಜರುಗಿಸುತ್ತೇವೆ’ ಎಂದು ಗುಡುಗಿದರು.

ವಿದ್ಯಾರ್ಥಿಗಳಾದ ನಂದೀಶ್, ಸಂತೋಷ್, ರಾಮಮೂರ್ತಿ, ಅನಿಲ್, ಆನಂದ್, ಮಹೇಶ್, ಹರೀಶ್, ನಾಗೇಂದ್ರ, ಮುನೇಂದ್ರ, ಕಾರ್ತಿಕ್, ಪ್ರತಾಪ್, ಪ್ರಸನ್ನ, ಗಜೇಂದ್ರ ಧರಣಿಯಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry