ಶನಿವಾರ, ಸೆಪ್ಟೆಂಬರ್ 21, 2019
22 °C

ಬರಲಿದ್ದಾರೆ ‘ವಿದ್ಯಾ ವಿನಾಯಕ’

Published:
Updated:

ಜೀ ಕನ್ನಡ ಚಾನೆಲ್ ಈಗ ಮತ್ತೊಂದು ವಿನೂತನ ಧಾರಾವಾಹಿಯನ್ನು ಹೊತ್ತು ತರುತ್ತಿದೆ. ಅಕ್ಟೋಬರ್ 30ರ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8ಗಂಟೆಗೆ ಆರಂಭವಾಗಲಿರುವ ಈ ಧಾರಾವಾಹಿಯ ಹೆಸರು ‘ವಿದ್ಯಾ ವಿನಾಯಕ’.

ಈವರೆಗೆ ನಾಗಿಣಿ, ಗಂಗಾ, ಸುಬ್ಬಲಕ್ಷ್ಮಿ ಸಂಸಾರ, ನಿಗೂಢ ರಾತ್ರಿ ಧಾರಾವಾಹಿ ಸೇರಿದಂತೆ ಹಲವಾರು ರಿಯಾಲಿಟಿ ಷೋಗಳು ಈ ವಾಹಿನಿಗೆ ಉತ್ತಮ ಟಿ.ಆರ್.ಪಿ. ತಂದುಕೊಟ್ಟಿವೆ. ವಿದ್ಯಾವಿನಾಯಕ ಧಾರಾವಾಹಿಯು ಸಾಂಸಾರಿಕ ಪ್ರೇಮಕಥಾ ಹಂದರ ಹೊಂದಿದ್ದು, ಹೊಸ ಥರದ ನಿರೂಪಣೆ ಕೂಡಿದೆ.

ತಾತ, ಅಜ್ಜಿ, ಅಪ್ಪ, ಅಮ್ಮ, ಅತ್ತೆ- ಮಾವ, ಅಣ್ಣ- ತಮ್ಮ, ಅಕ್ಕ- ತಂಗಿ ಹೀಗೆ ಎಲ್ಲ ಸಂದರ್ಭದಲ್ಲೂ ಒಂದೇ ಸೂರಿನಡಿ ಹೊಂದಿರುವ ದಿವಾನ್ ಕುಟುಂಬದಲ್ಲಿ ನಡೆಯುವ ಘಟನಾವಳಿಗಳೇ ಈ ಧಾರಾವಾಹಿಯ ಕಥಾ ವಸ್ತು. ದಿವಾನ್ ಕುಟುಂಬದಲ್ಲಿ ಚಿಕ್ಕವಳದಾಗಿನಿಂದಲೂ ಮನೆ ಮಗಳಂತೆ ಬೆಳೆದ ವಿದ್ಯಾ ಹೊರಗಿನಿಂದ ಬಂದವಳಾದರೂ ಮನೆಯ ಸದಸ್ಯಳಂತೆಯೇ ಎಲ್ಲರೊಂದಿಗೆ ಬೆರೆತು ಅವರ ಸಂತೋಷಕ್ಕೆ ಕಾರಣಳಾಗುತ್ತಾಳೆ. ಮನೆಯೊಡತಿಯ ಪುತ್ರ ವಿನಾಯಕ ಸದಾಶಿಸ್ತಿನ ಸಿಪಾಯಿ. ಸದಾ ಸುತ್ತಲಿನ ಪರಿಸರ ಶುದ್ಧವಾಗಿರಬೇಕು ಎಂದು ಬಯಸುವ ವ್ಯಕ್ತಿ.

ಇನ್ನು ಮದುವೆಯ ವಿಚಾರಕ್ಕೆ ಬಂದರೆ ಇಬ್ಬರದೂ ತದ್ವಿರುದ್ಧ ಸ್ವಭಾವ. ಮದುವೆಯಿಂದಲೇ ಮನುಷ್ಯಯ ಹೊಸಬಾಳು ಆರಂಭವಾಗುತ್ತದೆ ಎಂದು ನಾಯಕಿ ವಿದ್ಯಾಳ ನಂಬಿಕೆ. ಮದುವೆಯ ಸಂಬಂಧದಿಂದಲೇ ಎಲ್ಲ ಸಂಬಂಧಗಳು ಹಾಳಾಗುತ್ತವೆ ಎನ್ನುವುದು ನಾಯಕ ವಿನಾಯಕನ ಅನಿಸಿಕೆ.

ಹೀಗೆ ಪ್ರೀತಿ, ಪ್ರೇಮ ಬಾಂಧವ್ಯ ವಿಷಯದಲ್ಲಿ ಉತ್ತರ- ದಕ್ಷಿಣ ಆಗಿರುವ ಈ ವಿದ್ಯಾ- ವಿನಾಯಕ ಮದುವೆಯ ಬಂಧನದಲ್ಲಿ ಜೊತೆಯಾದರೆ ಹೇಗಿರುತ್ತದೆ ಎಂಬುದನ್ನು ಈ ಧಾರಾವಾಹಿ ಮೂಲಕ ನಿರ್ದೇಶಕ ಸಂತೋಷ ಕೋಟಿ ಅವರು ಹೇಳ ಹೊರಟಿದ್ದಾರೆ.

ದಿಲೀಪ್ ರಾಜ್ ನಿರ್ಮಾಣದ ಈ ಧಾರಾವಾಹಿಯಲ್ಲಿ ದಿಲೀಪ್ ಶೆಟ್ಟಿ, ಕವಿತಾ, ಸಂಜಯ್ ಸೂರಿ, ಆರ್.ಟಿ. ರಮಾ, ಸ್ಪಂದನಾ, ಕೀರ್ತಿ ಬಾನು ನಟಿಸುತ್ತಿದ್ದಾರೆ.

Post Comments (+)