ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ, ರಾಹುಲ್‌ ಮಿಮಿಕ್ರಿ ಪ್ರಸಾರ ಕೈಬಿಟ್ಟ ಸ್ಟಾರ್‌ ಪ್ಲಸ್‌

‘ಗ್ರೇಟ್‌ ಇಂಡಿಯನ್‌ ಲಾಫ್ಟರ್‌ ಚಾಲೆಂಜ್‌’
Last Updated 26 ಅಕ್ಟೋಬರ್ 2017, 10:32 IST
ಅಕ್ಷರ ಗಾತ್ರ

ನವದೆಹಲಿ: ಸ್ಟಾರ್‌ ಪ್ಲಸ್‌ ವಾಹಿನಿಯ ‘ಗ್ರೇಟ್‌ ಇಂಡಿಯನ್‌ ಲಾಫ್ಟರ್‌ ಚಾಲೆಂಜ್‌’ ಹಾಸ್ಯ ಕಾರ್ಯಕ್ರಮಕ್ಕಾಗಿ ಹಾಸ್ಯ ಕಲಾವಿದ ಶ್ಯಾಮ್‌ ರಂಗೀಲಾ ಮಾಡಿದ್ದ ಮೋದಿ ಮತ್ತು ರಾಹುಲ್‌ ಗಾಂಧಿ ಅವರ ಮಿಮಿಕ್ರಿಯ ಸಂಚಿಕೆಗಳ ಪ್ರಸಾರವನ್ನು ವಾಹಿನಿ ಕೈಬಿಟ್ಟಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರ ದನಿಯಲ್ಲಿ ಶ್ಯಾಮ್‌ ಮಿಮಿಕ್ರಿ ಮಾಡಿದ್ದರು. ಆದರೆ, ವಾಹಿನಿ ಈ ಸಂಚಿಕೆಗಳ ಪ್ರಸಾರವನ್ನು ಕೈಬಿಟ್ಟಿದೆ ಎಂದು ಶ್ಯಾಮ್‌ ಬೇಸರ ವ್ಯಕ್ತಪಡಿಸಿದ್ದಾರೆ.

‘ಮೊದಲು ಮೋದಿ ಅವರ ದನಿಯನ್ನು ಅನುಕರಿಸಿ ಕಾರ್ಯಕ್ರಮ ನೀಡಿದ್ದೆ. ಈ ಕಾರ್ಯಕ್ರಮ ರೆಕಾರ್ಡ್‌ ಆಗಿತ್ತು. ಇದಾದ ಕೆಲ ದಿನಗಳ ಬಳಿಕ ಕಾರ್ಯಕ್ರಮದ ನಿರ್ಮಾಣ ತಂಡದಿಂದ ನನಗೆ ಕರೆ ಬಂತು. ಈ ಹಿಂದೆ ರೆಕಾರ್ಡ್‌ ಆದ ಮಿಮಿಕ್ರಿ ಪ್ರಸಾರವಾಗುವುದಿಲ್ಲ. ಹೊಸದಾಗಿ ಕಾರ್ಯಕ್ರಮ ರೆಕಾರ್ಡ್‌ ಮಾಡಬೇಕು ಎಂದರು. ಮೋದಿ ಮಿಮಿಕ್ರಿಗೆ ಪ್ರತಿಭಟನೆ ವ್ಯಕ್ತವಾಗಬಹುದು ಎಂಬ ಕಾರಣಕ್ಕೆ ಈ ಹಿಂದೆ ರೆಕಾರ್ಡ್‌ ಆದ ಕಾರ್ಯಕ್ರಮ ಪ್ರಸಾರ ಮಾಡುವುದಿಲ್ಲ ಎಂದು ನಿರ್ಮಾಣ ತಂಡ ತಿಳಿಸಿತ್ತು’ ಎಂದು ಶ್ಯಾಮ್‌ ಹೇಳಿದ್ದಾರೆ.

‘ಮೋದಿ ದನಿಯ ಬದಲಿಗೆ ರಾಹುಲ್‌ ಗಾಂಧಿ ದನಿಯನ್ನು ಅನುಕರಿಸಿ ಕಾರ್ಯಕ್ರಮ ನಡೆಸಿಕೊಡಬಹುದು ಎಂದು ನಿರ್ಮಾಣ ತಂಡದವರು ಹೇಳಿದ್ದರು. ಹೊಸದಾಗಿ ರಾಹುಲ್‌ ಗಾಂಧಿ ದನಿ ಅನುಕರಿಸಿ ಕಾರ್ಯಕ್ರಮ ನಡೆಸಿಕೊಟ್ಟಿದ್ದೆ. ಆದರೆ ಕೆಲ ದಿನಗಳ ಬಳಿಕ ಆ ಕಾರ್ಯಕ್ರಮವೂ ಪ್ರಸಾರವಾಗುವುದಿಲ್ಲ ಎಂದು ನಿರ್ಮಾಣ ತಂಡ ತಿಳಿಸಿತು. ಇದರಿಂದ ನಾನು ಕಾರ್ಯಕ್ರಮದಿಂದ ಹೊರ ಬೀಳುವಂತಾಯಿತು’ ಎಂದು ಶ್ಯಾಮ್‌ ಬೇಸರ ವ್ಯಕ್ತಪಡಿಸಿದ್ದಾರೆ.

ಮೋದಿ ದನಿ ಅನುಕರಿಸಿದ್ದ ಕಾರ್ಯಕ್ರಮದ ದೃಶ್ಯ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಈ ದೃಶ್ಯವನ್ನು ಶ್ಯಾಮ್‌ ಅವರೇ ಹರಿಬಿಟ್ಟಿದ್ದಾರೆ ಎಂದು ವಾಹಿನಿ ಆರೋಪಿಸಿದೆ. ಆದರೆ, ‘ವಿಡಿಯೊ ವೈರಲ್‌ ಆಗಿರುವುದರ ಹಿಂದೆ ನನ್ನ ಪಾತ್ರವಿಲ್ಲ’ ಎಂದು ಶ್ಯಾಮ್‌ ಹೇಳಿದ್ದಾರೆ.

‘ಕಾರ್ಯಕ್ರಮದ ತೀರ್ಪುಗಾರರಾಗಿದ್ದ ಅಕ್ಷಯ್‌ ಕುಮಾರ್‌ ಅವರಿಗೆ ನನ್ನ ಹಾಸ್ಯ ನಿರೂಪಣೆ ಇಷ್ಟವಾಗಿತ್ತು. ನಾನು ಕಾರ್ಯಕ್ರಮದಿಂದ ಹೊರಬಿದ್ದರೂ ನನಗೆ ಹೆಚ್ಚು ಬೇಸರವಾಗಲಿಲ್ಲ. ಆದರೆ, ವೈರಲ್‌ ಆದ ನನ್ನ ಮಿಮಿಕ್ರಿಯ ವಿಡಿಯೊ ಬಗ್ಗೆ ನಿರ್ಮಾಣ ತಂಡದವರು ಪದೇ ಪದೇ ಕರೆ ಮಾಡಿ ನನಗೆ ತೊಂದರೆ ಕೊಡುತ್ತಿದ್ದಾರೆ. ನನ್ನನ್ನು ನನ್ನ ಪಾಡಿಗೆ ಇರಲು ಬಿಡಿ’ ಎಂದು ಶ್ಯಾಮ್‌ ಮನವಿ ಮಾಡಿದ್ದಾರೆ.

ಕೃಪೆ: ದಿ ವೈರ್‌

ವೈರಲ್‌ ಆಗಿದ್ದ ವಿಡಿಯೊ:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT