ಸಮಸ್ಯೆಗಳಿಂದ ಕಿಕ್ಕಿರಿದ ಬಂಗಲೆಗಳ ಬಡಾವಣೆ

ಗುರುವಾರ , ಮೇ 23, 2019
29 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಈ ಪ್ರತಿಷ್ಠಿತ ಬಡಾವಣೆಗೆ ಗಗನ ಕುಸುಮವಾಗಿರುವ ಮೂಲಸೌಕರ್ಯಗಳು; ಅವ್ಯವಸ್ಥೆಯಿಂದ ಹೈರಾಣಾದ ನಾಗರಿಕರು

ಸಮಸ್ಯೆಗಳಿಂದ ಕಿಕ್ಕಿರಿದ ಬಂಗಲೆಗಳ ಬಡಾವಣೆ

Published:
Updated:
ಸಮಸ್ಯೆಗಳಿಂದ ಕಿಕ್ಕಿರಿದ ಬಂಗಲೆಗಳ ಬಡಾವಣೆ

ತುಮಕೂರು: ನಗರದ ಕುಣಿಗಲ್ ರಸ್ತೆ ಹಾಗೂ ರಿಂಗ್ ರಸ್ತೆ ಪಕ್ಕಕ್ಕೆ ಹೊಂದಿಕೊಂಡಿರುವ ಪ್ರತಿಷ್ಠಿತ ಬಡಾವಣೆಗಳಲ್ಲೊಂದಾದ ಸರಸ್ವತಿಪುರ ಸಮಸ್ಯೆಗಳ ಆಗರವಾಗಿದೆ. ಅದರಲ್ಲೂ 2ನೇ ಹಂತದ ಬಡಾವಣೆ ವಾಸಿಗಳು ಮೂಲಸೌಕರ್ಯದಿಂದ ವಂಚಿತರಾಗಿದ್ದಾರೆ.

ಸುಂದರವಾದ, ಬೃಹತ್ ಬಂಗಲೆಗಳು ಬಡಾವಣೆಯಲ್ಲಿ ಎದ್ದು ಕಾಣುತ್ತವೆ. ಆದರೆ, ಅದಕ್ಕೆ ತಕ್ಕಂತೆ ರಸ್ತೆಗಳು ಇಲ್ಲ. ಸಮರ್ಪಕ ಕುಡಿಯುವ ನೀರು ಪೂರೈಕೆ ಇಲ್ಲ. ಎಲ್ಲೆಂದರಲ್ಲಿ ವಿದ್ಯುತ್ ಪರಿವರ್ತಕಗಳು ವಾಲಿಕೊಂಡಿವೆ.

ಬಡಾವಣೆಯ ಒಳ ರಸ್ತೆಗಳು ಇಂದಿಗೂ ಮಣ್ಣಿನ ರಸ್ತೆಗಳಾಗಿಯೇ ಉಳಿದಿವೆ. ಮಳೆ ಬಂದಾಗ ಕೆಸರು ಗದ್ದೆಗಳಾಗುತ್ತವೆ. ಸೈಕಲ್, ದ್ವಿಚಕ್ರವಾಹನ ಸವಾರರು ಸಾಕಪ್ಪ ಸಾಕು ಈ ರಸ್ತೆ ಸಹವಾಸ. ಇನ್ನೆಂದೂ ಈ ರಸ್ತೆಗೆ ಕಾಲಿಡುವುದು ಬೇಡ ಎಂಬುವಷ್ಟರ ಮಟ್ಟಿಗೆ ಹೈರಾಣಾಗಿರುತ್ತಾರೆ.

ಬೇಸಿಗೆ, ಚಳಿಗಾಲದಲ್ಲಿ ಈ ರಸ್ತೆಗಳಲ್ಲಿ ದೂಳು ಆವರಿಸಿರುತ್ತದೆ. ಇದರಿಂದ ಬಡಾವಣೆ ರಸ್ತೆ ಅಕ್ಕಪಕ್ಕದ ಮನೆಗಳು ಅಂದಗೆಡುತ್ತವೆ. ಆಸ್ತಮಾ, ಶ್ವಾಸಕೋಶ ತೊಂದರೆ, ಅಲರ್ಜಿ ಇರುವವರಿಗೆ ಆರೋಗ್ಯ ಸಮಸ್ಯೆ ಹೆಚ್ಚು ಕಾಡುತ್ತದೆ ಎಂದು ನಿವಾಸಿಗಳು ಹೇಳಿಕೊಳ್ಳುತ್ತಾರೆ.

ಮಳೆಗಾಲದಲ್ಲಿ ಕಾರುಗಳನ್ನು ಮನೆಯಿಂದ ಹೊರ ತೆಗೆಯುವುದು ಕಷ್ಟ. ರಸ್ತೆಗಿಳಿದರೆ ಹೂತು ಹೋಗುತ್ತವೆ. ಬಡಾವಣೆ ರಸ್ತೆ ದಾಟಿಕೊಂಡು ಹೋಗುವುದೂ ಕಷ್ಟವಾಗುತ್ತದೆ. ಕೆಸರು ಮೆತ್ತಿಕೊಂಡು ಬರೀ ಸ್ವಚ್ಛಗೊಳಿಸುವುದೇ ಆಗುತ್ತದೆ. ಹೀಗಾಗಿ ಕಾರುಗಳು ರಸ್ತೆಗಿಳಿಯುವುದು ಕಡಿಮೆ ಎಂದು ಬಂಗಲೆವಾಸಿಗಳು ತಮ್ಮ ಸಂಕಷ್ಟ ಹೇಳಿಕೊಂಡರು.

ಬಡಾವಣೆಯ ಪ್ರಮುಖ ರಸ್ತೆಗಳಿಗೂ ಇನ್ನೂ ಡಾಂಬರು ಹಾಕಿಲ್ಲ. ಅವುಗಳ ದುರಸ್ತಿಗೆ ಒತ್ತು ಕೊಟ್ಟಿಲ್ಲ. ಬದಲಾಗಿ ದೇವರಾಜ ಅರಸು ರಸ್ತೆಯ (ಎಸ್‌ಎಸ್ಐಟಿ ಕಾಲೇಜು ಹತ್ತಿರ) ಪ್ರವೇಶ ಮಾಡುವ ಕಡೆ ಬಲ ಬದಿಯಲ್ಲಿ ಕೆಲ ತಿಂಗಳ ಹಿಂದೆಯಷ್ಟೇ ನಿರ್ಮಿಸಿದ್ದ 100 ಮೀಟರ್ ಫುಟ್‌ ಪಾತ್ ನ್ನು ಈಗ ಒಡೆದು ಹಾಕಲಾಗಿದೆ. ‘ಕಾಂಕ್ರೀಟ್ ಟೈಲ್ಸ್’ ಹಾಕಿ ಫುಟ್ ಪಾತ್ ನಿರ್ಮಾಣ ಮಾಡಲಾಗಿತ್ತು.

ಈಗ ಪುನಃ ಫುನಃ ಅಭಿವೃದ್ಧಿ ಕಾಮಗಾರಿ ನೆಪದಲ್ಲಿ ಇದ್ದ ಫುಟ್ ಪಾತ್‌ ತೆರವುಗೊಳಿಸಲಾಗುತ್ತಿದೆ. ಸಾರ್ವಜನಿಕರ ತೆರಿಗೆ ಹಣ ಹೀಗೆ ವ್ಯರ್ಥವಾಗುವಂತೆ ಮಾಡಲಾಗಿದೆ ಎಂದು ರಸ್ತೆ ಅಕ್ಕಪಕ್ಕದ ವ್ಯಾಪಾರಸ್ಥರು, ಬಡಾವಣೆ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.

ಬಡಾವಣೆಯ ಕೆಲ ಕಡೆ ಒಳ ರಸ್ತೆ, ಸಂಪರ್ಕ ರಸ್ತೆಗಳನ್ನು ನಿವಾಸಿಗಳು ವೈಯಕ್ತಿಕವಾಗಿ ಹಣ ಸಂಗ್ರಹಿಸಿ ಮಣ್ಣು, ಜಲ್ಲಿಕಲ್ಲು ಹಾಕಿಸಿ ರಸ್ತೆ ನಿರ್ಮಿಸಿಕೊಂಡಿದ್ದಾರೆ. ಇನ್ನೂ ಕೆಲ ಕಡೆ ಪ್ರಭಾವಿಗಳ ಒತ್ತಡಕ್ಕೆ ರಸ್ತೆ ನಿರ್ಮಾಣ ಮಾಡಿಕೊಡಲಾಗಿದೆ ಎಂದು ನಿವಾಸಿಗಳು ದೂರುತ್ತಾರೆ.

ಕಸದ ತೊಟ್ಟಿಯಾದ ಉದ್ಯಾನಗಳು: ಈ ಬಡಾವಣೆಯಲ್ಲಿ ವಿವೇಕಾನಂದ, ರಾಜಕುಮಾರ್ ಹೀಗೆ ಹಲವು ಹೆಸರಿನಲ್ಲಿ ಉದ್ಯಾನಗಳು ಇವೆ. ಆದರೆ, ಅವುಗಳು ಹೆಸರಿಗೆ ಮಾತ್ರ. ಇವುಗಳಿಗೆ ಬೇಲಿ ಹಾಕಿ ರಕ್ಷಣೆ ಮಾಡುವ ಪ್ರಯತ್ನ ಮಹಾನಗರ ಪಾಲಿಕೆ ಮಾಡಿದ್ದರೂ ಅಭಿವೃದ್ಧಿಗೆ ಒತ್ತು ಕೊಟ್ಟಿಲ್ಲ ಎಂಬುದು ಗೊತ್ತಾಗುತ್ತದೆ.

ಉದ್ಯಾನದಲ್ಲಿ ಹಾಕಿರುವ ಬೆಂಚ್‌ಗಳು ಮುರಿದು ಬಿದ್ದಿವೆ. ಮುಳ್ಳು, ಕಸದ ಗಿಡಗಳು ಬೆಳೆದು ನಿಂತಿವೆ. ಇದರಲ್ಲಿಯೇ ಎಲ್ಲೆಂದರಲ್ಲಿ ಕಸವನ್ನು ಸುರಿಯಲಾಗಿದೆ. ಸ್ವಚ್ಛಗೊಳಿಸಿ ಅಭಿವೃದ್ಧಿಪಡಿಸುವ ಕೆಲಸವನ್ನೂ ಮಹಾನಗರ ಪಾಲಿಕೆ, ವಾರ್ಡ್ ಸದಸ್ಯರು ಮಾಡಿಲ್ಲ ಎಂದು ನಿವಾಸಿಗಳು ಆರೋಪಿಸುತ್ತಾರೆ.

***

ಒಳಚರಂಡಿ ಇದ್ದರೂ ಮನೆ ಮುಂದೆ ಕೊಚ್ಚೆ ಗುಂಡಿ

‘ಒಳಚರಂಡಿ ವ್ಯವಸ್ಥೆ ಆಗಿದ್ದರೂ ಇವುಗಳಿಗೆ ಸಂಪರ್ಕ ಕಲ್ಪಿಸಿಲ್ಲ. ಹೀಗಾಗಿ, ಒಳಚರಂಡಿ ಸೇರಬೇಕಾದ ನೀರು ರಸ್ತೆಗೆ ಹರಿಯುತ್ತದೆ. ಮನೆ ಅಕ್ಕಪಕ್ಕ ಗುಂಡಿಗಳಲ್ಲಿ ನಿಂತು ರೋಗ ರುಜಿನಗಳ ತಾಣವಾಗುತ್ತಿದೆ’ ಎಂದು ನಿವಾಸಿ ಗಂಗಮ್ಮ ‘ಪ್ರಜಾವಾಣಿ’ಗೆ ತಿಳಿಸಿದರು.

‘ಡೆಂಗಿ, ಮಲೇರಿಯಾ, ಚಿಕೂನ್ ಗುನ್ಯಾ ಜ್ವರಕ್ಕೆ ಬಡಾವಣೆಯ ಜನರು ತುತ್ತಾಗಿದ್ದಾರೆ. ಬಡಾವಣೆಯಲ್ಲಿ ಸುಸಜ್ಜಿತ ಮನೆ ಇದ್ದರೂ ಮೂಲಸೌಕರ್ಯಗಳಿಗೆ ಪರದಾಡಬೇಕಿದೆ. ತೆರಿಗೆ ಕಟ್ಟಿದರೂ ಮಹಾನಗರ ಪಾಲಿಕೆಯಿಂದ ಮೂಲಸೌಕರ್ಯ ಕಲ್ಪಿಸಲು ಸಾಧ್ಯವಾಗಿಲ್ಲ’ ಎಂದು ಹೇಳಿದರು.

***

ನಮ್ಮ ಬವಣೆ ಕೇಳುವವರಿಲ್ಲ

‘ನೋಡುವವರಿಗೆ ಇಲ್ಲಿನ ಬಂಗಲೆ, ಅಂದ ಚೆಂದದ ಮನೆಗಳನ್ನು ಕಂಡಾಗ ಒಳ್ಳೆಯ ಬಡಾವಣೆ. ಚೆನ್ನಾಗಿದೆ ಎಂದು ಅನಿಸುತ್ತದೆ. ಇಲ್ಲಿ ವಾಸಿಸುತ್ತಿರುವವರ ಬವಣೆ ಕೇಳುವವರಿಲ್ಲ’ ಎಂದು ಗುತ್ತಿಗೆದಾರರಾದ ರಘು ತಿಳಿಸಿದರು.

‘ಇಲ್ಲಿನ ನಿವಾಸಿಗಳೆಲ್ಲರೂ ₹ 30 ಸಾವಿರ ಹಣದಲ್ಲಿ ಮನೆ ಮುಂದಿನ ರಸ್ತೆಗೆ ಮಣ್ಣು ಹಾಕಿಸಿ ಅಭಿವೃದ್ಧಿಪಡಿಸಿದ್ದೇವೆ. ರಸ್ತೆ ಅಭಿವೃದ್ಧಿ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಆದರೆ, ಈವರೆಗೂ ಆಗಿಲ್ಲ’ ಎಂದು ಹೇಳಿದರು.

***

30 ವರ್ಷ ಕಳೆದರೂ ಡಾಂಬರ್ ಕಾಣದ ರಸ್ತೆ

‘ಬಡಾವಣೆಯಲ್ಲಿ ಸ್ವಚ್ಛತೆ ಇಲ್ಲದೇ ಇರುವುದು, ಚರಂಡಿಗಳು ಹೂತು ಕೊಳಚೆ ನೀರು ರಸ್ತೆಗೆ ಹರಿಯುತ್ತಿರುವುದು, ಖಾಲಿ ನಿವೇಶನಗಳು, ಉದ್ಯಾನಗಳು ಕಸದ ತೊಟ್ಟಿಗಳಾಗಿರುವುದರಿಂದ ಇದರ ಅಕ್ಕಪಕ್ಕದ ನಿವಾಸಿಗಳಿಗೆ ಹಾವು, ಚೇಳು, ಹೆಗ್ಗಣ, ನಾಯಿಗಳ ಕಾಟಕ್ಕೆ ಹೆಚ್ಚಾಗಿದೆ’ ಎಂದು ನಿವಾಸಿ ವಿವೇಕಾನಂದ ರಸ್ತೆಯ ನಿವಾಸಿ ಹರೀಶ್ ಸಮಸ್ಯೆ ಹೇಳಿಕೊಂಡರು.

‘30 ವರ್ಷವಾದರೂ ವಿವೇಕಾನಂದ ರಸ್ತೆ ಡಾಂಬರ್ ಕಂಡಿಲ್ಲ. ಉದ್ಯಾನ ಜಾಗ ಅದರ ಅಸ್ತಿತ್ವ ಕಳೆದುಕೊಳ್ಳುತ್ತಿದೆ’ ಎಂದು ತಿಳಿಸಿದರು.

***

6 ತಿಂಗಳಲ್ಲಿ ರಸ್ತೆ ಅಭಿವೃದ್ಧಿ

‘ದೇವರಾಜ ಅರಸು ರಸ್ತೆ ಪ್ರವೇಶ ಮಾಡುವ ಬಲ ಬದಿಯಲ್ಲಿ ಮಾತ್ರ ಒಂದು ವರ್ಷದ ಹಿಂದೆ ₹ 5 ಲಕ್ಷದಲ್ಲಿ ಫುಟ್ ಪಾತ್ ನಿರ್ಮಾಣ ಮಾಡಲಾಗಿತ್ತು. ಈಗ ಅಮೃತ ಯೋಜನೆಯಡಿ ಕೈಗೊಂಡ ಅಭಿವೃದ್ಧಿ ಕಾಮಗಾರಿಯಲ್ಲಿ ರಸ್ತೆ ಎರಡೂ ಬದಿ ಫುಟ್ ಪಾತ್ ನಿರ್ಮಾಣ ಮಾಡಲಾಗುತ್ತಿದೆ’ ಎಂದು 28ನೇ ವಾರ್ಡಿನ ಸದಸ್ಯೆ ಎಂ.ಆರ್.ಜಯಲಕ್ಷ್ಮಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಮೊದಲು ನಿರ್ಮಿಸಿದ ಫುಟ್ ಪಾತ್ ನೆಲಮಟ್ಟದಿಂದ ಎತ್ತರ ಇರಲಿಲ್ಲ. ಹೀಗಾಗಿ, ಒಂದೇ ಸಮನಾಗಿ ಇರಬೇಕು ಎಂಬ ಕಾರಣಕ್ಕೆ ಅದನ್ನು ತೆರವುಗೊಳಿಸಿ ಹೊಸದಾಗಿ ನಿರ್ಮಾಣ ಮಾಡಲಾಗುತ್ತದೆ. ಬಡಾವಣೆಯ ರಾಜಕುಮಾರ್ ಉದ್ಯಾನವನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ದಿಪಡಿಸಲಾಗುತ್ತಿದೆ’ ಎಂದರು.

ಪ್ರಮುಖ ರಸ್ತೆ, ಒಳ ರಸ್ತೆ ಅಭಿವೃದ್ಧಿಗೆ ₹ 2 ಕೋಟಿ ಮೊತ್ತದ ಕಾಮಗಾರಿಗಳಿಗೆ ಟೆಂಡರ್ ಆಗಿದೆ. 6 ತಿಂಗಳಲ್ಲಿ ರಸ್ತೆ ನಿರ್ಮಾಣ ಮಾಡಲಾಗುತ್ತದೆ ಎಂದು ತಿಳಿಸಿದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry