ಸೋಮವಾರ, ಸೆಪ್ಟೆಂಬರ್ 16, 2019
29 °C

ಇನ್ನರ್ ವೀಲ್ ಕ್ಲಬ್‍ನ ‘ಕನಕಧಾರಾ’

Published:
Updated:

ಜಗತ್ತಿನ ನೂರಾಎರಡು (102) ದೇಶಗಳಲ್ಲಿ ನಿರಂತರವಾಗಿ ಸಮಾಜಸೇವೆ ಮಾಡುತ್ತಿರುವ ಸ್ವಯಂಸೇವಾ ಸಂಸ್ಥೆ ಇನ್ನರ್ ವೀಲ್ ಕ್ಲಬ್ ಬೆಂಗಳೂರಿನಲ್ಲೂ ಅಗತ್ಯವಿದ್ದೆಡೆ ನೆರವಿನ ತಂಪುನೆರಳು ಹಾಸಲು ಶ್ರಮಿಸುತ್ತಿದೆ. ಆರೋಗ್ಯ, ಶಿಕ್ಷಣ, ಗ್ರಾಮ ಸೌಲಭ್ಯ ಮುಂತಾದ ಹಲವಾರು ಕ್ಷೇತ್ರಗಳಲ್ಲಿ ಕೊರತೆಗಳನ್ನು ಗುರುತಿಸಿ ಬೆಂಬಲ ನೀಡುವ ಈ ಅಂತರರಾಷ್ಟ್ರೀಯ ಸಾಮಾಜಿಕ ಸಂಸ್ಥೆಯಲ್ಲಿ ಮಹಿಳೆಯರದೇ ಪ್ರಧಾನ ಪಾತ್ರ ಎನ್ನುವುದು ಗಮನಾರ್ಹ.

'ಇನ್ನರ್ ವೀಲ್ ಕ್ಲಬ್- ಬೆಂಗಳೂರು ಉತ್ತರ' ಇದೀಗ ಸುವರ್ಣ ಮಹೋತ್ಸವದ ಸಾರ್ಥಕ ಸಂಭ್ರಮದಲ್ಲಿದೆ. ಇದರ ನೆನಪಿನಲ್ಲಿ 'ಕನಕಧಾರಾ' ಎಂಬ ಹೊಸ ಸೇವಾ ಕಾರ್ಯಕ್ರಮವನ್ನು ವರ್ಷವಿಡೀ ನಡೆಸಲಿದೆ.

‘ಬಡವರ ಕಷ್ಟಗಳಿಗೆ ಕಿಂಚಿತ್ತಾದರೂ ಸ್ಪಂದಿಸಿ ಅವರ ಮುಖದಲ್ಲಿ ಒಂದು ಮುಗುಳ್ನಗೆ ಮೂಡಿಸುವುದೇ ಇದರಲ್ಲಿ ಸ್ವಯಂ ಪ್ರೇರಣೆಯಿಂದ ಪಾಲ್ಗೊಳ್ಳುತ್ತಿರುವ ಮಹಿಳೆಯರ ಧ್ಯೇಯ' ಎಂದು ಬೆಂಗಳೂರು ಉತ್ತರ ಇನ್ನರ್ ವೀಲ್ ಕ್ಲಬ್‍ನ ಅಧ್ಯಕ್ಷೆ ವೀಣಾ ಅನಂತ್ ಮತ್ತು ಸಂಚಾಲಕಿ ಗಾಯತ್ರಿ ಕಾಂಗೋವಿ ಹೇಳುತ್ತಾರೆ.

ಬೆಂಗಳೂರಿನ ಹೊರವಲಯದ ಅಬ್ಬಿಗೆರೆಯ ಸರ್ಕಾರಿ ಶಾಲೆಯಲ್ಲಿ ಮೂರು ತರಗತಿ ಕೊಠಡಿಗಳನ್ನು ನಿರ್ಮಿಸುವುದು ಈಗ ಸುವರ್ಣ ಮಹೋತ್ಸವದ ಪ್ರಮುಖ ಯೋಜನೆಯಾಗಿದೆ.

ಸರ್ಕಾರಿ ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಣೆ, ತರಗತಿ ಕೊಠಡಿಗಳಿಗೆ ಬೆಂಚುಗಳ ಕೊಡುಗೆ, ವಿದ್ಯಾರ್ಥಿಗಳಿಗೆ ಆರೋಗ್ಯ ಸಲಹೆ, ಮಹಿಳೆಯರಿಗೆ ಎದೆಹಾಲು ಮಹತ್ವ ತಿಳಿಸುವ ಶಿಬಿರಗಳು, ಅಂಗವಿಕಲರಿಗೆ ಗಾಲಿಕುರ್ಚಿ ವಿತರಣೆ, ಕಟ್ಟಿಗೇನಹಳ್ಳಿ ಮತ್ತು ಸಾತನೂರು ಗ್ರಾಮಗಳ ಶಾಲೆಗಳಿಗೆ ಕಂಪ್ಯೂಟರ್ ಕೊಡುಗೆ, ಮಹಾಲಕ್ಷ್ಮಿ ಲೇಔಟ್‍ನ ಸರ್ಕಾರಿ ಶಾಲೆಗೆ ತರಗತಿ ಕೊಠಡಿಗಳ ನಿರ್ಮಾಣ, ಕ್ಯಾನ್ಸರ್ ಪೀಡಿತರಿಗೆ ಔಷಧ ವಿತರಣೆ, ಶಂಕರ ಕ್ಯಾನ್ಸರ್ ಆಸ್ಪತ್ರೆ, ಅಬಲಾಶ್ರಮ, ಪರಪ್ಪನ ಅಗ್ರಹಾರ ಸೆರೆಮನೆಗಳಲ್ಲಿ ಅಗತ್ಯ ವಸ್ತುಗಳ ಕೊಡುಗೆ ಹೀಗೆ ಹತ್ತು ಹಲವು ಕೆಲಸಗಳನ್ನು ಮಾಡುತ್ತ ಬೆಂಗಳೂರು ಉತ್ತರ ಇನ್ನರ್ ವೀಲ್ ಕ್ಲಬ್ ಅರ್ಧ ಶತಮಾನದ ಹಾದಿ ಕ್ರಮಿಸಿದೆ.

Post Comments (+)