ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂದಿಬೆಟ್ಟದ ತಪ್ಪಲಲ್ಲಿ ಪ್ಯಾಟೆ ಮಂದಿ ಕಲರವ

Last Updated 26 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ನೋಟು ರದ್ದತಿಯ ನಂತರ ಭೂ ವ್ಯವಹಾರ ಮಂಕಾಗಿತ್ತು. ಕೋಟಿಗಟ್ಟಲೆ ರೂಪಾಯಿ ಸುರಿದು ಬಡಾವಣೆಗಳನ್ನು ಅಭಿವೃದ್ಧಿಪಡಿಸಿರುವ ಉದ್ಯಮಿಗಳು ಗ್ರಾಹಕರಿಗಾಗಿ ಕಾಯುತ್ತಿದ್ದಾರೆ. ಬೆಟ್ಟದ ತಪ್ಪಲಿನಲ್ಲಿ ರಿಯಲ್‌ ಎಸ್ಟೇಟ್ ಹೂಡಿಕೆಗೆ ಇದು ಸಕಾಲ.

ಕೆಲ ದಶಕಗಳ ಹಿಂದಿನವರೆಗೆ ರಮ್ಯ ತಾಣ ಎನಿಸಿದ್ದ ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ನಂದಿಬೆಟ್ಟದ ತಪ್ಪಲಲ್ಲಿ ಇದೀಗ ಎಲ್ಲಿ ನೋಡಿದರಲ್ಲಿ ‘ರಿಯಲ್‌ ಎಸ್ಟೆಟ್‌’ ಕಾರುಬಾರು. ಬೆಟ್ಟದ ಪಾದದಡಿ ಇರುವ ಸಣ್ಣಪುಟ್ಟ ಊರುಗಳ ರಸ್ತೆ ಬದಿಯಲ್ಲಿ ಅಡಿಗಡಿಗೆ ನೆಟ್ಟ ಕಂಬಗಳಿಗೆ ‘ಸೈಟ್ ಫಾರ್ ಸೇಲ್’ ಎಂಬ ಫಲಕಗಳು ರಾರಾಜಿಸುತ್ತಿವೆ.

ಮೂರು ದಶಕಗಳ ಹಿಂದೆ ಕುಗ್ರಾಮಗಳಂತಿದ್ದ ನಂದಿ, ಅಂಗಟ್ಟ, ಈರೇನಹಳ್ಳಿ, ಕುಡುವತಿಯಲ್ಲಿ ‘ಒಂದು ಸಾವಿರ ಕೊಡಿ ಸೋಮಿ, ಎಕರೆ ಜಮೀನು ನಿಮ್ಮ ಹೆಸರಿಗೆ ಬರೆದು ಕೊಡುವೆ’ ಎಂದರೂ ಕಳ್ಳಕಾಕರ ಕಾಟಕ್ಕೆ ಭೂಮಿ ಕೊಳ್ಳುವವರೇ ಇರಲಿಲ್ಲ. ಇಂಥ ಊರುಗಳಲ್ಲಿ ಇವತ್ತು ಕೋಟಿಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಸದ್ಯ ಈ ಭಾಗದಲ್ಲಿ ಒಂದು ಎಕರೆ ಜಮೀನಿಗೆ ₹1.50 ಕೋಟಿಯಿಂದ ₹2 ಕೋಟಿ ಬೆಲೆ ಬಂದಿದೆ.

ಉದ್ಯಾನ ನಗರಿ ಬೆಂಗಳೂರು ಸಿಲಿಕಾನ್ ಸಿಟಿಯ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ನಂದಿಬೆಟ್ಟದ ತಪ್ಪಲಲ್ಲಿ ಕೂಡ ರಿಯಲ್‌ ಎಸ್ಟೆಟ್‌ ಮಿಸುಕಾಟ ಶುರುವಾಯಿತು. ದೇವನಹಳ್ಳಿಯಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಕಾಮಗಾರಿ ಆರಂಭವಾಗಿದ್ದು 2005ರಲ್ಲಿ. ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿಬೆಟ್ಟದ ಬುಡದಲ್ಲಿ ರಿಯಲ್ ಎಸ್ಟೇಟ್ ಗರಿಗೆದರಿದ ಕಾಲಘಟ್ಟವೂ ಇದೇ ಎನ್ನುವುದು ಉಲ್ಲೇಖಾರ್ಹ ಸಂಗತಿ. ಬೆಂಗಳೂರಿನಿಂದ ದೇವನಹಳ್ಳಿ 40 ಕಿ.ಮೀ ದೂರಲ್ಲಿದ್ದರೆ, ನಂದಿಬೆಟ್ಟದಿಂದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ 35 ಕಿ.ಮೀ ದೂರದಲ್ಲಿದೆ.

ಅವಿಭಜಿತ ಕೋಲಾರ ಜಿಲ್ಲೆಯಿಂದ ಚಿಕ್ಕಬಳ್ಳಾಪುರ ಪ್ರತ್ಯೇಕಗೊಂಡಿದ್ದು 2007ರಲ್ಲಿ. ಅದರ ಬೆನ್ನಲ್ಲೇ, ಅಂದರೆ 2008ರಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಿತು. ಚಿಕ್ಕಬಳ್ಳಾಪುರವನ್ನು ತಾಗಿ ಹೋಗುವ ಬೆಂಗಳೂರು–ಹೈದರಾಬಾದ್‌ ರಾಷ್ಟ್ರೀಯ ಹೆದ್ದಾರಿ–7ರ ಸುತ್ತಮುತ್ತ ಮತ್ತು ನಂದಿ ವಲಯದಲ್ಲಿ ಪ್ಯಾಟೆ ಮಂದಿಯ ಕಲರವ ಹೆಚ್ಚಿದ್ದೂ ಇದೇ ಅವಧಿಯಲ್ಲಿ. ಬೇಡಿಕೆ ಹೆಚ್ಚಾದಂತೆ ಭೂಮಿಗೆ ಚಿನ್ನದ ಬೆಲೆ ಬಂತು.

ಮನೆಯ ಅಡಚಣೆಗಾಗಿ ಜಮೀನು ಮಾರಬೇಕಾಗಿ ಬಂದಾಗ ಅಕ್ಕಪಕ್ಕದವರನ್ನು ಒಂದು ಮಾತು ಕೇಳುವ, ಬಲವಂತ ಮಾಡುವ ತಲೆಮಾರುಗಳ ಸಂಪ್ರದಾಯ ನೇಪಥ್ಯಕ್ಕೆ ಸರಿದಿದೆ. ರಾತ್ರಿ ಕಳೆದು ಬೆಳಗಾಗುವುದರೊಳಗೆ ನೆರೆಹೊರೆಯವರಿಗೂ ಸುಳಿವು ನೀಡದೆ ಜಮೀನು ಮಾರಿ ಕೋಟ್ಯಧೀಶರಾದವರ ಸಾಕಷ್ಟು ಕಥೆಗಳು ಇಲ್ಲಿ ಸಿಗುತ್ತವೆ.

ಇಲ್ಲಿನ ಜನರಿಗೆ ಬೆಂಗಳೂರು ಮತ್ತು ವಿಮಾನ ನಿಲ್ದಾಣ ವರವಾಗಿ ಪರಿಣಮಿಸಿದೆ. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳ ದೊಡ್ಡ ಹಿಂಡೇ ವಾರಾಂತ್ಯದ ಮೋಜಿಗಾಗಿ ನಂದಿಬೆಟ್ಟಕ್ಕೆ ಬರುತ್ತದೆ. ಇದು ಇಲ್ಲಿನ ರಿಯಲ್‌ ಎಸ್ಟೇಟ್ ವಹಿವಾಟಿಗೆ ಪ್ರವಾಸೋದ್ಯಮದ ಆಯಾಮ ನೀಡಿದೆ. ಇನ್ನೂ ಕೆಲವರು ನಿವೃತ್ತಿಯ ನಂತರದ ಜೀವನಕ್ಕಾಗಿ ನಂದಿಬೆಟ್ಟವನ್ನು ಆರಿಸಿಕೊಳ್ಳುತ್ತಿದ್ದಾರೆ. ಇದು ರಿಯಲ್ ಎಸ್ಟೇಟ್ ವಹಿವಾಟಿಗೆ ವಸತಿ ಯೋಜನೆಗಳ ಆಯಾಮ ನೀಡಿದೆ.

ನಂದಿಬೆಟ್ಟದ ಕೆಳಭಾಗದಿಂದ ಮುಖ್ಯರಸ್ತೆ ಬದಿಯಲ್ಲಿ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳು ದಾಂಗುಡಿ ಇಟ್ಟಿವೆ. ಸುಸಜ್ಜಿತ ಬಡಾವಣೆಗಳು, ವೈಭವೋಪೇತ ವಿಲ್ಲಾಗಳು, ಐಷಾರಾಮಿ ರೆಸಾರ್ಟ್‌ಗಳು ತಲೆ ಎತ್ತುತ್ತಿವೆ. ಮಂಜು ಮುಸುಕಿದ ನಂದಿಗಿರಿಧಾಮದ ಚಿತ್ರವನ್ನೇ ಬಂಡವಾಳ ಮಾಡಿಕೊಂಡು ಕೋಟಿಗಟ್ಟಲೆ ರೂಪಾಯಿ ಬಂಡವಾಳ ಹೂಡಿ ಸಿಟಿ ಮಂದಿಯನ್ನು ಆಕರ್ಷಿಸುವ ತಂತ್ರಗಾರಿಕೆ ಭಾರಿ ಫಲ ನೀಡಿದೆ.

ಚಿಕ್ಕಬಳ್ಳಾಪುರದವರೆಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ, ಉತ್ತಮ ಸಾರಿಗೆ ಸೌಲಭ್ಯ, ಪ್ರಾಕೃತಿಕ ಸೌಂದರ್ಯ, ಉತ್ತಮ ವಾತಾವರಣಗಳು ಭವಿಷ್ಯದ ಸೂರಿನ ಹೂಡಿಕೆಗೆ ನಂದಿಬೆಟ್ಟವನ್ನು ನೆಚ್ಚಿನ ತಾಣವಾಗಿಸಿದೆ. ಇದನ್ನು ಅರಿತ ಅನೇಕ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳು ‘ನಾಳೆಯ ಮೌಲ್ಯಯುತ ಆಸ್ತಿಗಾಗಿ ಇಂದೇ ಸೂಕ್ತ ಹೂಡಿಕೆ ಮಾಡಿ’ ಎಂದು ಬೆಟ್ಟದ ತಪ್ಪಲಲ್ಲಿ ಬಡಾವಣೆಗಳನ್ನು ರೂಪಿಸುತ್ತಿದ್ದಾರೆ.

ಇವತ್ತು ನಂದಿ ಬೆಟ್ಟದ ಕೆಳಗಿನ ಊರುಗಳಲ್ಲಿ ತಿರುಗಾಡಿದರೆ ನಂದಿ ವಿವ್ಯೂ, ನಂದಿ ಪ್ರೈಮ್, ನಂದಿ ಕೋಲಾಸ್ಟ್ರಿಯಲ್ಸ್, ನಂದಿ ವಿಲ್ಲಾಸ್, ಸಿಲ್ವರ್‌ ಓಕ್‌, ಮೆಲ್‌ವಿಲ್ಲೆ ಕೌಂಟಿ, ಹಿಲ್‌ ಕ್ರೆಸ್ಟ್, ಸ್ಕಂದಗಿರಿ ಕೌಂಟಿ, ಪ್ರಶಾಂತಿ ಕೌಂಟಿ, ಅಂಬರ್‌ ವ್ಯಾಲಿ.. ಸೇರಿದಂತೆ ಸುಮಾರು 30ಕ್ಕೂ ಹೆಚ್ಚು ಬಡಾವಣೆಗಳು ಗೋಚರಿಸುತ್ತವೆ.

ಹಳ್ಳಿಗಳ ನಡುವೆ ತಲೆ ಎತ್ತಿರುವ ‘ದಿ ಹಿಲ್ಸ್‌ ಕ್ಯೂವಿಸಿ’ ಮತ್ತು ‘ಪ್ರೆಸ್ಟೀಜ್‌’ ಕಂಪೆನಿಗಳ ‘ಕೋಟಿ’ ಬೆಲೆ ಬಾಳುವ ಐಷಾರಾಮಿ ವಿಲ್ಲಾಗಳ ಬಡಾವಣೆಗಳು ಬೆರಗು ಮೂಡಿಸುತ್ತವೆ. ಕೆಲ ವರ್ಷಗಳ ಹಿಂದೆ ಇಲ್ಲಿನ ಬಡಾವಣೆಗಳಲ್ಲಿ ನಿವೇಶನಗಳು ಚದರ ಅಡಿಗೆ ₹300ಕ್ಕೆ ಸಿಗುತ್ತಿತ್ತು. ಆದರೆ ಈಗ ಅದು ₹1000 ದಾಟಿದೆ.

‘ಕಾಸಿಗೆ ತಕ್ಕ ಕಜ್ಜಾಯ’ ಎನ್ನುವಂತೆ ಬಡಾವಣೆಯಲ್ಲಿರುವ ಮೂಲಸೌಕರ್ಯಗಳನ್ನು ಆಧರಿಸಿ ಕೂಡ ಈ ಬೆಲೆಯಲ್ಲಿ ಏರಿಳಿಕೆ ಕಂಡುಬರುತ್ತದೆ. ಕನಿಷ್ಠ ₹15 ಲಕ್ಷ ಹೂಡಿಕೆ ಮಾಡಲು ಸಾಧ್ಯವಿದ್ದವರು ಅತ್ಯುತ್ತಮ ಎನಿಸುವ ಲೇಔಟ್‌ಗಳಲ್ಲಿ ನಿವೇಶನ ಕೊಳ್ಳಬಹುದು.

ಭೂ ಪರಿವರ್ತನೆಗೆ ತಾಂತ್ರಿಕ ಅಡಚಣೆ
ಚಿಕ್ಕಬಳ್ಳಾಪುರ ನಗರ ಸುತ್ತಲಿನ 95 ಗ್ರಾಮಗಳನ್ನು ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ರಿಗೆ ಸೇರಿಸುವ ಪರಿಷ್ಕೃತ ಸ್ಥಳೀಯ ಯೋಜನೆಗೆ ಈವರೆಗೆ ನಗರಾಭಿವೃದ್ಧಿ ಇಲಾಖೆ ಅನುಮೋದನೆ ನೀಡಿಲ್ಲ. ಇದೇ ಕಾರಣದಿಂದ ಕಳೆದ ಎರಡೂವರೆ ವರ್ಷಗಳಿಂದ ಚಿಕ್ಕಬಳ್ಳಾಪುರ ಸುತ್ತಮುತ್ತ ಕೃಷಿ ಜಮೀನಿನ ಭೂ ಪರಿವರ್ತನೆಗೆ ಜಿಲ್ಲಾಧಿಕಾರಿ ಅನುಮತಿ ನೀಡುತ್ತಿಲ್ಲ. ಹೊಸ ಬಡಾವಣೆಗಳನ್ನು ನಿರ್ಮಿಸುವ ಕನಸು ಹೊತ್ತಿದ್ದ ರಿಯಲ್‌ ಎಸ್ಟೇಟ್ ಕಂಪೆನಿಗಳಿಗೆ ಇದು ತಾಂತ್ರಿಕ ಅಡಚಣೆ ತಂದೊಡ್ಡಿದೆ. ಈ ಸಮಸ್ಯೆ ನಿವಾರಣೆಯಾಗಿದ್ದರೆ ಇಷ್ಟು ಹೊತ್ತಿಗೆ ನಂದಿ ಸುತ್ತಮುತ್ತ ಬಡಾವಣೆಯ ಸಂಖ್ಯೆ ನೂರರ ಗಡಿ ದಾಟುತ್ತಿತ್ತು ಎಂದು ಇಲ್ಲಿ ಭೂವ್ಯವಹಾರ ಬಲ್ಲವರು ಹೇಳುತ್ತಾರೆ.

ನಗರಾಭಿವೃದ್ಧಿ ಪ್ರಾಧಿಕಾರವು ಪರಿಷ್ಕೃತ ಸ್ಥಳೀಯ ಯೋಜನೆ ಪ್ರಸ್ತಾವವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದೆ. ಅದಕ್ಕೆ ಶೀಘ್ರದಲ್ಲಿಯೇ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದನೆ ಪಡೆಯುವುದಾಗಿ ಜಿಲ್ಲಾಧಿಕಾರಿ ದೀಪ್ತಿ ಕಾನಡೆ ಆಶಾಭಾವನೆ ವ್ಯಕ್ತಪಡಿಸಿದ್ದಾರೆ. ಒಂದೊಮ್ಮೆ ಇಲ್ಲಿ ಭೂಪರಿವರ್ತನೆಗೆ ಅನುಮತಿ ನೀಡಲು ಆರಂಭಿಸಿದರೆ ಮತ್ತಷ್ಟು ಲೇಔಟ್‌ಗಳು ತಲೆ ಎತ್ತುವುದರಲ್ಲಿ ಸಂಶಯವಿಲ್ಲ.

ಖರೀದಿಗಿದು ಸಕಾಲ
ಕಳೆದ ವರ್ಷ ನವೆಂಬರ್‌ ತಿಂಗಳಲ್ಲಿ ಕೇಂದ್ರ ಸರ್ಕಾರ ₹500 ಮತ್ತು ₹1000 ಮುಖಬೆಲೆಯ ನೋಟುಗಳನ್ನು ಕೇಂದ್ರ ರದ್ದುಪಡಿಸಿತ್ತು. ಏರುಗತ್ತಿಯಲ್ಲಿದ್ದ ರಿಯಲ್‌ ಎಸ್ಟೇಟ್‌ ಉದ್ಯಮಕ್ಕೆ ಇದು ಕಡಿವಾಣ ಹಾಕಿತ್ತು. ನಂತರದ ದಿನಗಳಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕು ವ್ಯಾಪ್ತಿಯಲ್ಲಿ ರಿಯಲ್‌ ಎಸ್ಟೇಟ್ ಉದ್ಯಮ ಅಕ್ಷರಶಃ ನೆಲಕಚ್ಚಿತ್ತು. ಸದಾ ಜನದಟ್ಟಣೆಯಿಂದ ಕೂಡಿರುತ್ತಿದ್ದ ಉಪ ನೋಂದಣಾಧಿಕಾರಿ ಕಚೇರಿ ಇದೀಗ ನಿವೇಶನ ಕ್ರಯಪತ್ರ ನೋಂದಣಿ ಮಾಡಿಸುವವರು ಇಲ್ಲದೆ ಬಣಗುಡುತ್ತಿದೆ.

‘ನೋಟು ರದ್ದತಿಗೆ ಮೊದಲು ನಮ್ಮಲ್ಲಿ ನಿತ್ಯ ಸುಮಾರು 20 ಕ್ರಯಪತ್ರಗಳು ನೋಂದಣಿಯಾಗುತ್ತಿದ್ದವು. ಕಳೆದ ವರ್ಷ ನವೆಂಬರ್‌ನಿಂದ ಇತ್ತೀಚೆಗೆ ಕ್ರಯಪತ್ರಗಳ ನೋಂದಣಿ ಅಪರೂಪ ಎನ್ನುವಂತಾಗಿದೆ. ವಾಡಿಕೆಯ ಶೇ 30ರಷ್ಟು ಮಾತ್ರವೇ ನೋಂದಣೆ ನಡೆಯುತ್ತಿದೆ. ಅದರಲ್ಲೂ ದಾನಪತ್ರ, ಕರಾರು ಪತ್ರಗಳ ಸಂಖ್ಯೆಯೇ ಹೆಚ್ಚು. ರಾಜಸ್ವ ಸಂಗ್ರಹ ಕೂಡ ಗಣನೀಯವಾಗಿ ಕಡಿಮೆಯಾಗಿದೆ’ ಎಂದು ಉಪ ನೋಂದಣಾಧಿಕಾರಿ ವೈ.ಎನ್.ರಾಮಚಂದ್ರ ಪ್ರತಿಕ್ರಿಯಿಸಿದರು.

ಲೇಔಟ್‌ಗಾಗಿ ಹತ್ತಾರು ಕೋಟಿ ಬಂಡವಾಳ ತೊಡಗಿಸಿರುವ ಕಂಪೆನಿಗಳು ಸದ್ಯ ಗ್ರಾಹಕರಿಗಾಗಿ ಕಾಯುತ್ತಿವೆ. ದರ ನಿಗದಿ ಮತ್ತು ನಿಯಮಗಳ ವಿಚಾರದಲ್ಲಿ ತುಸು ಮೃದುಧೋರಣೆ ಅನುಸರಿಸುತ್ತಿವೆ. ‌ನಿವೇಶನಗಳ ಬೆಲೆ ಸಹ ಕಳೆದ ವರ್ಷಕ್ಕೆ ಹೋಲಿಸಿದರೆ ಕಡಿಮೆಯಾಗಿದೆ. ಇದು ನಿವೇಶನಕೊಳ್ಳಲು ಸಕಾಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT