ಶನಿವಾರ, ಸೆಪ್ಟೆಂಬರ್ 21, 2019
24 °C

ಶುಕ್ರವಾರ, 27–10–1967

Published:
Updated:
ಶುಕ್ರವಾರ, 27–10–1967

ಡೈರಿ ಹಾಲಿನ ಕೊಳ್ಳುವ ಮತ್ತು ಮಾರುವ ಬೆಲೆ ನವೆಂಬರ್‌ 1 ರಿಂದ ಏರಿಕೆ

ಬೆಂಗಳೂರು, ಅ. 26– ಬೆಂಗಳೂರು ಹಾಲಿನ ಡೈರಿಗೆ ಬೇಕಾದ ಹೆಚ್ಚಿನ ಪ್ರಮಾಣದ ಹಾಲನ್ನು ಪಡೆಯುವುದಕ್ಕಾಗಿ ಖಾಸಗಿ ಡೈರಿಗಳನ್ನು ನಡೆಸುತ್ತಿರುವವರಿಂದ ನವೆಂಬರ್‌ 1 ರಿಂದ ಹೆಚ್ಚು ದರದಲ್ಲಿ ಹಾಲು ಕೊಳ್ಳಲು ರಾಜ್ಯ ಸರಕಾರ ನಿರ್ಧರಿಸಿದೆ.

ಹೊಸ ದರ ಗ್ರಾಮಾಂತರ ಪ್ರದೇಶದ ಕೇಂದ್ರಗಳಿಗೆ ಸರಬರಾಜು ಮಾಡಿದರೆ ಲೀಟರ್‌ಗೆ 60 ಪೈಸೆಯಿಂದ ಒಂದು ರೂ. 50 ಪೈಸೆ, ಬೆಂಗಳೂರು ಡೈರಿಯಲ್ಲಿ ಸರಬರಾಜು ಮಾಡಿದರೆ ಲೀಟರ್‌ಗೆ 80 ಪೈಸೆಯಿಂದ ಒಂದು ರೂ. 70 ಪೈಸೆ. ದರವು ಹಾಲಿನಲ್ಲಿರಬಹುದಾದ ಮೇದಸ್ಸಿನ ಪ್ರಮಾಣಕ್ಕನುಗುಣವಾಗಿ ನಿರ್ಧರಿಸಲ್ಪಡುವುದು.

**

ಭೂಸುಧಾರಣೆ ಕಮಿಷನರ್‌ ಆಗಿ ಬಾಲಸುಬ್ರಹ್ಮಣ್ಯಂ ಅವರ ನೇಮಕ

ಬೆಂಗಳೂರು, ಅ. 26– ಭೂ ಸುಧಾರಣೆಯನ್ನು ತ್ವರಿತವಾಗಿ ಕಾರ್ಯಗತ ಮಾಡುವುದಕ್ಕಾಗಿ ಬೆಂಗಳೂರು ಕಾರ್ಪೊರೇಷನ್‌ ಆಡಳಿತಾಧಿಕಾರಿ ಶ್ರೀ ಕೆ. ಬಾಲಸುಬ್ರಹ್ಮಣ್ಯಂರವರನ್ನು ಭೂಸುಧಾರಣಾ ಕಮಿಷನರನ್ನಾಗಿ ನೇಮಿಸಲಾಗಿದೆ.

1958 ರಲ್ಲಿಯೇ ಭೂಸುಧಾರಣೆ ಮಸೂದೆಯು ಶಾಸನಸಭೆಯಲ್ಲಿ ಮಂಡಿಸಲ್ಪಟ್ಟು 1961ರಲ್ಲಿ ಶಾಸನವಾದರೂ ಭೂಸುಧಾರಣೆ ಸುಲಭವಾಗಿ ಕಾರ್ಯಗತವಾಗುವಂತಿರಲಿಲ್ಲ. ಕಾನೂನಿನ ಕೆಲವು ಸಮಸ್ಯೆಗಳು ಉದ್ಭವಿಸಿದವು.

**

ಡಾ. ಲೋಹಿಯಾ ಬಗ್ಗೆ ಆಸ್ಪತ್ರೆ ಸಿಬ್ಬಂದಿ ಅಲಕ್ಷ್ಯ ಕುರಿತು ತನಿಖೆ (ನಾರಾಯಣಸ್ವಾಮಿ ಅವರಿಂದ)

ದೆಹಲಿ, ಅ. 26– ಈ ತಿಂಗಳ ಪ್ರಥಮಾರ್ಧದಲ್ಲಿ ದೆಹಲಿಯ ವೆಲಿಂಗ್ಟನ್‌ ಆಸ್ಪತ್ರೆಯಲ್ಲಿ ನಿಧನರಾದ ಸಂಯುಕ್ತ ಸೋಷಲಿಸ್ಟ್‌ ನಾಯಕ ಡಾ. ರಾಮಮನೋಹರ ಲೋಹಿಯಾ ಚಿಕಿತ್ಸೆ ಪಡೆಯುತ್ತಿದ್ದಾಗ ಅವರ ಬಗ್ಗೆ ಆಸ್ಪತ್ರೆ ಸಿಬ್ಬಂದಿ ಅಲಕ್ಷ್ಯದ ಅಪಾದನೆ ಬಗ್ಗೆ ತನಿಖೆ ನಡೆಸಲು ಕೇಂದ್ರ ಆರೋಗ್ಯ ಶಾಖೆ ತಜ್ಞರ ಸಮಿತಿಯೊಂದನ್ನು ನೇಮಿಸಿದೆ.

ತನಿಖೆ ನಡೆಯಬೇಕೆಂದು ಅನೇಕ ಮಂದಿ ಪಾರ್ಲಿಮೆಂಟ್‌ ಸದಸ್ಯರು ಒತ್ತಾಯ ಮಾಡಿದ್ದರು.

**

ಕಾಂಗ್ರೆಸ್‌ ಅಧ್ಯಕ್ಷ ಸ್ಥಾನ: ಕಾಮರಾಜ್‌ ಪುನರಾಯ್ಕೆಗೆ ಇಂದಿರಾ ವಿರೋಧ

(ನಮ್ಮ ಪ್ರತಿನಿಧಿಯಿಂದ)

ನವದೆಹಲಿ, ಅ. 26–ಶ್ರೀ ಕಾಮರಾಜರು ಎ.ಐ.ಸಿ.ಸಿ. ಅಧ್ಯಕ್ಷ ಸ್ಥಾನಕ್ಕೆ ಮತ್ತೆ ಸ್ಪರ್ಧಿಸಲಾರರೆಂದು ಇಲ್ಲಿ ರಾಜಕೀಯ ವಲಯಗಳಲ್ಲಿ ಸೂಚನೆಗಳು ಕಂಡುಬರುತ್ತಿವೆ.

ಈ ಸಂಬಂಧದಲ್ಲಿ ಶ್ರೀ ಕಾಮರಾಜರು ಇನ್ನೊಂದು ಅವಧಿ ಬಗ್ಗೆ ತಮಗಿರುವ ಅವಕಾಶಗಳನ್ನು ತಿಳಿದುಕೊಂಡ ನಂತರ ಎ.ಐ.ಸಿ.ಸಿ. ಸಮಾವೇಶಗೊಳ್ಳುವ ಜಬ್ಬಲ್ಪುರದಲ್ಲಿ ಒಂದಲ್ಲ ಒಂದು ನಿರ್ಧಾರಕ್ಕೆ ಬರಬಹುದು.

ಅವರಿಗೆ ಇನ್ನೊಂದು ಅವಧಿ ವಿಸ್ತರಿಸಲು ಪ್ರಧಾನಿ ಶ್ರೀಮತಿ ಇಂದಿರಾಗಾಂಧಿಯವರಿಗೆ ಇಚ್ಛೆ ಇಲ್ಲವೆಂದು ಅವರಿಗೆ ಸ್ಪಷ್ಟಪಡಿಸಲಾಗಿದೆ. ವಸ್ತುಶಃ ಅವರು ಕೂಡ ಅವರ ಮಿತ್ರರಾದ ಸಡೋಬಾ ಪಾಟೀಲ್‌ ಮತ್ತು ಶ್ರೀ ಅತುಲ್ಯ ಘೋಷರ ಸಲಹೆಗಳನ್ನು ಪುರಸ್ಕರಿಸುವುದಕ್ಕಿಂತ ಪ್ರಧಾನಿ ಅಪೇಕ್ಷೆ ತಿಳಿಯಲು ಬಹಳ ಆಸಕ್ತಿಯಿಂದಿದ್ದಾರೆ.

ಎ.ಐ.ಸಿ.ಸಿ. ಕಚೇರಿ ಪುನರ್ವ್ಯವಸ್ಥೆ ಮತ್ತು ಹೊಸ ಪ್ರಧಾನ ಕಾರ್ಯದರ್ಶಿಗಳ ನೇಮಕಕ್ಕೆ ಶ್ರೀ ಕಾಮರಾಜರು ಕೈ ಹಾಕದಿರುವುದಕ್ಕೆ ಕಾರಣವಾದರೂ ಇದೇ. ಇವು ಕಳೆದ ಚುನಾವಣೆಗಳು ಮುಗಿದ ಸಂದರ್ಭದಲ್ಲೇ ಕಾರ‍್ಯಗತಗೊಳ್ಳಬೇಕಾಗಿತ್ತು.

ಈ ಮಧ್ಯೆ ಪಕ್ಷದ ಚುನಾವಣೆಗಳು ಯಾವುದಾದರೊಂದು ಕಾರಣದಿಂದ ಮುಂದಕ್ಕೆ ಹಾಕಲ್ಪಟ್ಟರೆ ಅಧ್ಯಕ್ಷರ ನಾಮಕರಣ ಮತ್ತು ಆಯ್ಕೆ ವೇಳೆಗೆ ವಿವಿಧ ಗುಂಪುಗಳಲ್ಲಿ ಒಂದು ಬಗೆಯ ಒಪ್ಪಂದ ಅಥವಾ ರಾಜಿ ರೂಪುಗೊಳ್ಳಬಹುದು.

ಅಧ್ಯಕ್ಷ ಸ್ಥಾನಕ್ಕೆ ನವೆಂಬರ್‌ ಎರಡನೇ ಅಥವಾ ಮೂರನೇ ವಾರದ ವೇಳೆಗೆ ನಾಮಪತ್ರಗಳನ್ನು ಸಲ್ಲಿಸಲಾಗುತ್ತದೆ.

Post Comments (+)