ಮುಕ್ತವಾಗಿರಲಿ ಭಾಷಾ ಮಾಧ್ಯಮ

ಸೋಮವಾರ, ಮೇ 20, 2019
30 °C

ಮುಕ್ತವಾಗಿರಲಿ ಭಾಷಾ ಮಾಧ್ಯಮ

Published:
Updated:
ಮುಕ್ತವಾಗಿರಲಿ ಭಾಷಾ ಮಾಧ್ಯಮ

–ಡಾ. ವಾಸುದೇವ ಬೆಳ್ಳೆ

**

ಪದವಿ ಪೂರ್ವ ಶಿಕ್ಷಣ ಇಲಾಖೆಯು ಪಿಯುಸಿ ಹಂತದಲ್ಲಿ ಪರೀಕ್ಷೆ ಬರೆಯಲು ಕನ್ನಡ ಅಥವಾ ಇಂಗ್ಲಿಷ್‌ ಮಾಧ್ಯಮಗಳ ಪೈಕಿ ಒಂದನ್ನು ಆಯ್ಕೆ ಮಾಡಿಕೊಳ್ಳುವುದನ್ನು ಕಡ್ಡಾಯಗೊಳಿಸಿದೆ. ಈವರೆಗೆ ಹೀಗೆ ಇರಲಿಲ್ಲ. ಬೋಧನೆ ಮತ್ತು ಪರೀಕ್ಷಾ ಮಾಧ್ಯಮದ ಆಯ್ಕೆಗೆ ಮುಕ್ತ ಅವಕಾಶ ಇತ್ತು. ಪ್ರಶ್ನೆಪತ್ರಿಕೆ ಕೈಗೆ ಬಂದ ನಂತರವೂ ಕನ್ನಡ ಅಥವಾ ಇಂಗ್ಲಿಷ್‌ ಈ ಎರಡರಲ್ಲಿ ಯಾವುದರಲ್ಲಾದರೂ ಉತ್ತರ ಬರೆಯಬಹುದಾಗಿತ್ತು.

ಆದರೆ ಈಗ ಹೊರಡಿಸಿರುವ ಸುತ್ತೋಲೆ ಪ್ರಕಾರ, 2017–18ರ ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿಗಳು ಪಿಯುಸಿಗೆ ದಾಖಲಾಗುವಾಗಲೇ ಐಚ್ಛಿಕ ವಿಷಯಗಳಿಗೆ ಪರೀಕ್ಷೆ ಬರೆಯಲು ಕನ್ನಡ ಅಥವಾ ಇಂಗ್ಲಿಷ್ ಮಾಧ್ಯಮಗಳಲ್ಲಿ ಒಂದನ್ನು ಕಡ್ಡಾಯವಾಗಿ ಆಯ್ಕೆ ಮಾಡಿಕೊಳ್ಳಬೇಕಾಗಿದೆ. ‘ವಿದ್ಯಾರ್ಥಿಗಳಿಗೆ ಆಯ್ಕೆ ಮಾಡಿಕೊಂಡ ಮಾಧ್ಯಮದ ಪ್ರಶ್ನೆಪತ್ರಿಕೆಗಳನ್ನು ಮಾತ್ರ ಪರೀಕ್ಷೆಯಲ್ಲಿ ವಿತರಿಸಬೇಕು. ವಿದ್ಯಾರ್ಥಿಯು ದ್ವಿಭಾಷೆಯಲ್ಲಿ ಉತ್ತರ ಬರೆದರೆ ಅಂಥ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡುವುದಿಲ್ಲ’ ಎಂದು ಸುತ್ತೋಲೆ ಎಚ್ಚರಿಸಿದೆ. ವಿದ್ಯಾರ್ಥಿ ಆಯ್ಕೆ ಮಾಡಿಕೊಂಡ ಮಾಧ್ಯಮವನ್ನೇ ದ್ವಿತೀಯ ಪಿಯುಸಿ ಅಂಕಪಟ್ಟಿಯಲ್ಲಿ ಇಲಾಖೆ ದಾಖಲಿಸಲಿದೆ.

ಈ ಸುತ್ತೋಲೆಯು ವಿದ್ಯಾರ್ಥಿಗಳನ್ನು ಗೊಂದಲಕ್ಕೆ, ಆತಂಕಕ್ಕೆ ದೂಡಿದೆ. ಕಲಿಕೆ ಮತ್ತು ಪರೀಕ್ಷೆಗೆ ಸಂಬಂಧಿಸಿದ ಮಾಧ್ಯಮ ಇಲ್ಲಿಯವರೆಗೆ ಮುಕ್ತವಾಗಿತ್ತು. ವಿದ್ಯಾರ್ಥಿಗಳಿಗೆ ಆಯ್ಕೆಯ, ಬದಲಾವಣೆಯ ಸ್ವಾತಂತ್ರ್ಯ ಇತ್ತು. ಅಂದರೆ ಅವರು ಕನ್ನಡದಲ್ಲಾದರೂ ಓದಬಹುದಿತ್ತು, ಇಂಗ್ಲಿಷ್‌ನಲ್ಲಾದರೂ ಓದಬಹುದಿತ್ತು. ಪರೀಕ್ಷೆ ಬರೆಯುವುದಕ್ಕೂ ಇದೇ ಸ್ವಾತಂತ್ರ್ಯ ಇತ್ತು. ಈಗ ಅದಕ್ಕೆ ಅವಕಾಶ ಇಲ್ಲ.

ಈ ಗೊಂದಲ ಇಂಗ್ಲಿಷ್ ಮಾಧ್ಯಮದ ವಿದ್ಯಾರ್ಥಿಗಳಿಗೆ ಎದುರಾಗುವುದಿಲ್ಲ. ಮಾಧ್ಯಮ ಆಯ್ಕೆ ವಿಚಾರದಲ್ಲಿ ಅವರಿಗೆ ಸ್ಪಷ್ಟತೆ ಇದೆ. ಆದರೆ ಸಮಸ್ಯೆ ಇರುವುದು ಕನ್ನಡ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿಗಳಿಗೆ. ಅದರಲ್ಲೂ ಸರ್ಕಾರಿ ಶಾಲೆಗಳಲ್ಲಿ ಕಲಿತ ವಿದ್ಯಾರ್ಥಿಗಳಿಗೆ. ಕನ್ನಡ ಮಾಧ್ಯಮದಲ್ಲಿ ಓದಿದ ಈ ವಿದ್ಯಾರ್ಥಿಗಳು ಪಿಯುಸಿ ನಂತರ ನಿಧಾನವಾಗಿ ಇಂಗ್ಲಿಷಿನಲ್ಲಿ ಓದಲು, ಬರೆಯಲು ಮತ್ತು ಆ ಭಾಷೆಯ ಮೇಲೆ ಹಿಡಿತವನ್ನು ಸಾಧಿಸಲು ಪ್ರಯತ್ನ ಮಾಡುತ್ತಾರೆ. ಇಂಥ ಪ್ರಯತ್ನದಲ್ಲಿ ಸಂಪೂರ್ಣವಾಗಿ ಸಫಲವಾಗದಿದ್ದರೆ ಕನ್ನಡದಲ್ಲಿ ಪರೀಕ್ಷೆ ಬರೆಯಲು ಮುಕ್ತ ಅವಕಾಶ ಇತ್ತು. ಅದನ್ನು ಈಗ ಕಳೆದುಕೊಳ್ಳಲಿದ್ದಾರೆ.

ಕನ್ನಡ ಮಾಧ್ಯಮದಿಂದ ಬಂದ ವಿದ್ಯಾರ್ಥಿಗಳಿಗೆ ಇಂಗ್ಲಿಷ್‌ ಬಗ್ಗೆ ಒಂದು ಬಗೆಯ ಅವ್ಯಕ್ತ ಭಯ ಇದ್ದೇ ಇದೆ. ಆದರೆ ಈಗಿನ ಸಂದರ್ಭ ಹೇಗಿದೆಯೆಂದರೆ ಅದನ್ನು ಕಲಿಯುವ ಅಗತ್ಯ, ಅನಿವಾರ್ಯ ಇದೆ. ಮುಕ್ತ ಅವಕಾಶ ಇದ್ದರೆ, ಪಿಯುಸಿಗೆ ಸೇರುವ ವಿದ್ಯಾರ್ಥಿಗಳು ಐಚ್ಛಿಕ ವಿಷಯಗಳನ್ನು ಕರಗತ ಮಾಡಿಕೊಳ್ಳುವುದರ ಜತೆ ಜತೆಗೇ ಇಂಗ್ಲಿಷನ್ನೂ ಕಲಿಯುವ ಪ್ರಯತ್ನ ಮಾಡುತ್ತಿದ್ದರು.

ಇಂಥ ಪ್ರಯತ್ನದ ಹೊರತಾಗಿಯೂ ಇಂಗ್ಲಿಷಿನಲ್ಲಿ ಪರೀಕ್ಷೆ ಬರೆಯುವ ಆತ್ಮವಿಶ್ವಾಸ ಮೂಡದೇ ಹೋದಾಗ ಸುಲಭವಾಗಿ ಸಂವಹನ ಮಾಡಬಲ್ಲ ಕನ್ನಡದಲ್ಲಿ ಬರೆಯುತ್ತಿದ್ದರು. ಇದೊಂದು ರೀತಿಯಲ್ಲಿ ಇಂಗ್ಲಿಷ್ ಭಾಷೆ ಅಗತ್ಯವಾಗಿರುವ ಪದವಿ ಮತ್ತು ಉನ್ನತ ಶಿಕ್ಷಣಕ್ಕೆ ತಯಾರಾಗುವ ಪ್ರಕ್ರಿಯೆ. ಜೊತೆಗೆ ಇಂಗ್ಲಿಷನ್ನು ಕಲಿಯುವ ಕಾರಣದಿಂದ ಒದಗಿಬರುವ ಉದ್ಯೋಗಾವಕಾಶವನ್ನು ತನ್ನದಾಗಿಸಿಕೊಳ್ಳಲು ಇರುವ ಸದವಕಾಶವೂ ಹೌದು. ಇದು ಬರೀ ಶೈಕ್ಷಣಿಕ ಚಟುವಟಿಕೆ ಮಾತ್ರವಾಗಿರದೆ ಸಾಮಾಜಿಕ, ಆರ್ಥಿಕ ವಿಚಾರಗಳಿಗೆ ಸಂಬಂಧಪಟ್ಟ ವಿಚಾರವೂ ಹೌದು.

ತನ್ನ ಕುಟುಂಬ ಮತ್ತು ಪರಿಸರದಲ್ಲಿ ಬಳಕೆಯಲ್ಲಿ ಇಲ್ಲದ ಭಾಷೆಯನ್ನು, ವಿಷಯವನ್ನು ಕಲಿಯುವುದು ಅಷ್ಟು ಸುಲಭವಲ್ಲ. ಅದು ನಿಧಾನವಾಗಿ ಆಗುವ ಪ್ರಕ್ರಿಯೆ. ಇದಕ್ಕೆ ಪೂರಕ ವಾತಾವರಣ ಮತ್ತು ಅವಕಾಶ ಒದಗಿಸುವುದು ಅಗತ್ಯ. ಆ ಮೂಲಕ ಉನ್ನತ ಶಿಕ್ಷಣಕ್ಕೆ ತಯಾರುಗೊಳಿಸುವುದು ಆಗಬೇಕು. ‘ಚೆನ್ನಾಗಿ ಓದಿದರೆ ಯಾವ ಭಾಷೆಯಲ್ಲಾದರೂ ಬರೆಯಬಹುದು. ಕಲಿಕೆಗೆ ಭಾಷೆ ಮುಖ್ಯ ಅಲ್ಲ. ಪ್ರಯತ್ನ ಮುಖ್ಯ’ ಎಂಬ ವಾದವನ್ನು ನಾನು ಒಪ್ಪಲಾರೆ.

ಕನ್ನಡ ಮಾಧ್ಯಮದ ಬಹುತೇಕ ವಿದ್ಯಾರ್ಥಿಗಳು ಪ್ರಥಮ ಪಿಯುಸಿಗೆ ದಾಖಲಾಗುವ ಸಂದರ್ಭದಲ್ಲಿಯೇ ಯಾವ ಭಾಷೆಯಲ್ಲಿ ಪರೀಕ್ಷೆ ಬರೆಯಬೇಕು ಎಂದು ನಿರ್ಣಯಿಸಿರುವುದಿಲ್ಲ. ಕನ್ನಡದಲ್ಲಿ ಬರೆಯುತ್ತಲೇ ಇಂಗ್ಲಿಷ್‌ ರೂಢಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಅಥವಾ ಕೆಲವು ವಿಷಯಗಳನ್ನು ಕನ್ನಡದಲ್ಲಿ ಬರೆದು ಕೆಲವನ್ನು ಇಂಗ್ಲಿಷಿನಲ್ಲಿ ಬರೆಯುತ್ತಾರೆ. ಕೆಲವರು ಪ್ರಥಮ ಪಿಯುಸಿ ಪರೀಕ್ಷೆಯನ್ನು ಕನ್ನಡದಲ್ಲಿ ಬರೆದು, ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಇಂಗ್ಲಿಷಿನಲ್ಲಿ ಬರೆಯುತ್ತಾರೆ.

ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಹಾಗೂ ಉದ್ಯೋಗ ಅವಕಾಶಕ್ಕೆ ತಯಾರಾಗುವ ಒಂದು ಶೈಕ್ಷಣಿಕ, ಸಾಮಾಜಿಕ ವಿದ್ಯಮಾನವನ್ನು ಇದು ಸೂಚಿಸುತ್ತದೆ. ಈ ದೃಷ್ಟಿಯಿಂದ ವಿಶ್ಲೇಷಿಸುವುದಾದರೆ ಈ ಸುತ್ತೋಲೆಗೆ ಸಾಮಾಜಿಕ ದೃಷ್ಟಿಕೋನ ಇಲ್ಲ ಎಂದು ಹೇಳಬಹುದು. ಶಿಕ್ಷಣಕ್ಕೆ ಸಂಬಂಧಿಸಿದ ಒಂದು ತೀರ್ಮಾನ ಇಷ್ಟೆಲ್ಲಾ ಸಾಮಾಜಿಕ, ಆರ್ಥಿಕ, ಜಾಗತಿಕ ವಿಷಯಗಳನ್ನು ಒಳಗೊಂಡಿದೆ ಎನ್ನುವುದನ್ನು ನಾವು ಗಮನದಲ್ಲಿಟ್ಟುಕೊಳ್ಳುವುದು ಬೇಡವೇ?

ಕನ್ನಡ ಮಾಧ್ಯಮದಲ್ಲಿ ಕಲಿತ ಹಿಂದುಳಿದ, ದಲಿತ, ಆದಿವಾಸಿ, ಕಾಡುವಾಸಿ, ಅಲೆಮಾರಿ, ಅಲ್ಪಸಂಖ್ಯಾತ ಸಮುದಾಯಗಳ ವಿದ್ಯಾರ್ಥಿಗಳ ನೆಲೆಯಲ್ಲೂ ನಾವು ಯೋಚಿಸಬೇಕಿದೆ.

ಸುತ್ತೋಲೆಯ ಆಶಯ ಜಾರಿಗೆ ಬಂದರೆ ವಿದ್ಯಾರ್ಥಿಗಳು ಮುಂದೆ ಕನ್ನಡದಲ್ಲೇ ಪಾಠ ಕೇಳಬೇಕು, ಕನ್ನಡ ಮಾಧ್ಯಮದ ಪಠ್ಯಗಳನ್ನೇ ಓದಬೇಕು ಮತ್ತು ಕನ್ನಡದಲ್ಲಿಯೇ ಪರೀಕ್ಷೆಗಳನ್ನು ಬರೆಯಬೇಕು ಎನ್ನುವ ಸ್ಥಿತಿ ನಿರ್ಮಾಣವಾಗುತ್ತದೆ. ಆದರೆ ಅವರ ಮುಂದಿರುವುದು ಯಾವ ಬಗೆಯ ಉನ್ನತ ಶಿಕ್ಷಣ ಹಾಗೂ ಯಾವ ಬಗೆಯ ಸ್ಪರ್ಧಾ ಜಗತ್ತು?!

ಇಂಗ್ಲಿಷಿನಲ್ಲಿಯೂ ಓದುವ, ಬರೆಯುವ ಅವಕಾಶ ಇದ್ದರೆ ಇಂಗ್ಲಿಷಿನಲ್ಲಿ ಪಾರಿಭಾಷಿಕ ಪದಗಳನ್ನು, ಪರಿಕಲ್ಪನೆಗಳನ್ನು, ವಿಷಯಗಳನ್ನು ಅರಿಯಲು ಪ್ರಯತ್ನಪಡುತ್ತಾರೆ. ಇಂಗ್ಲಿಷ್ ಪಠ್ಯಪುಸ್ತಕಗಳನ್ನು ಓದಲು, ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಹಾಗಾಗಿ ನಮ್ಮ ಎಲ್ಲಾ ವಿದ್ಯಾರ್ಥಿಗಳನ್ನು ಒಳಗೊಳ್ಳುವ ರೀತಿಯಲ್ಲಿ ಶೈಕ್ಷಣಿಕ ವ್ಯವಸ್ಥೆ ಯೋಚಿಸಬೇಕು.

ಈ ಸುತ್ತೋಲೆಯು ‘ಶೈಕ್ಷಣಿಕ ಸುಧಾರಣೆ, ಶಿಸ್ತು, ಪಾರದರ್ಶಕತೆ ತರುವ ಉದ್ದೇಶ ಹೊಂದಿದೆ’ ಎಂದು ಹೇಳಲಾಗಿದೆ. ಆದರೆ ಮೇಲೆ ಗುರುತಿಸಿದ ಮಕ್ಕಳ ಗತಿಯೇನು? ತಾಂತ್ರಿಕ ಸುಧಾರಣೆಯನ್ನೇ ಶೈಕ್ಷಣಿಕ ಸುಧಾರಣೆ ಎನ್ನಬೇಕೇ? ಈಗಿರುವ ಪದ್ಧತಿಯನ್ನು ಮುಂದುವರಿಸಿದರೆ ಸಮಸ್ಯೆ ಏನು?

ಕನ್ನಡ ಮಾಧ್ಯಮದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಿನ್ನಡೆಯಾಗಬಾರದು ಎನ್ನುವ ದೃಷ್ಟಿಯಿಂದಲೇ ಕೆಪಿಎಸ್‌ಸಿ, ಯುಪಿಎಸ್‌ಸಿ ಪರೀಕ್ಷೆಗಳಲ್ಲಿ, ಸಂದರ್ಶನಗಳಲ್ಲಿ ರಾಜ್ಯ ಭಾಷೆ ಮತ್ತು ಇಂಗ್ಲಿಷ್ ಭಾಷೆಗಳೆರಡಕ್ಕೂ ಅವಕಾಶಗಳನ್ನು ಸರ್ಕಾರ ನೀಡಿದೆಯಲ್ಲವೇ? ಹೀಗಾಗಿ ಶಿಕ್ಷಣ ಮತ್ತು ಭಾಷಾ ಮಾಧ್ಯಮವನ್ನು ಒಂದು ತಾಂತ್ರಿಕ ಅಂಶವೆಂದು ಭಾವಿಸದೆ, ಅದನ್ನು ವಿಶಾಲ ಅರ್ಥದಲ್ಲಿ ಪರಿಭಾವಿಸಬೇಕು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry