ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್‌ ಚುನಾವಣೆ: ಬಿಜೆಪಿ, ಕಾಂಗ್ರೆಸ್‌ಗೆ ಪ್ರತಿಷ್ಠೆಯ ಕಣ

Last Updated 26 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಗುಜರಾತ್ ವಿಧಾನಸಭೆ ಚುನಾವಣಾ ದಿನಾಂಕಗಳನ್ನು ಚುನಾವಣಾ ಆಯೋಗ ಕಡೆಗೂ ಪ್ರಕಟಿಸಿದೆ. ದಿನಾಂಕ ಪ್ರಕಟಣೆಯಲ್ಲಿ ವಿಳಂಬ ಕುರಿತಂತೆ ಅನಗತ್ಯ ಊಹಾಪೋಹಗಳಿಗೆ ಇದರಿಂದ ತೆರೆ ಬಿದ್ದಂತಾಗಿದೆ. ಹಿಮಾಚಲ ಪ್ರದೇಶದ ಚುನಾವಣಾ ದಿನಾಂಕವನ್ನು ಇದೇ 12ರಂದು ಘೋಷಿಸಲಾಗಿತ್ತು. ಅದಾಗಿ ಸುಮಾರು ಎರಡು ವಾರಗಳ ಬಳಿಕ ಗುಜರಾತ್ ಚುನಾವಣಾ ದಿನಾಂಕಗಳು ಪ್ರಕಟವಾಗಿವೆ. ಗುಜರಾತ್‌ಗೆ ವಿವಿಧ ಯೋಜನೆಗಳನ್ನು ಘೋಷಿಸಲು ಅನುಕೂಲ ಕಲ್ಪಿಸುವುದಕ್ಕಾಗಿ ದಿನಾಂಕ ಪ್ರಕಟಿಸುವುದನ್ನು ವಿಳಂಬ ಮಾಡಲಾಗಿತ್ತು ಎಂದು ವಿರೋಧ ಪಕ್ಷಗಳು ಆರೋಪಿಸಿದ್ದವು.

ಆದರೆ ಇದನ್ನು ಆಯೋಗ ತಳ್ಳಿಹಾಕಿತ್ತು. ಡಿಸೆಂಬರ್ 9 ಹಾಗೂ 14ರಂದು ಎರಡು ಹಂತಗಳಲ್ಲಿ ನಡೆಯಲಿರುವ ಗುಜರಾತ್ ಚುನಾವಣೆ, ರಾಜ್ಯದಲ್ಲಿ ಅಧಿಕಾರದಲ್ಲಿರುವ ಆಡಳಿತ ಪಕ್ಷ ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಪ್ರತಿಷ್ಠೆಯ ಹೋರಾಟವಾಗಲಿದೆ.

ಕಳೆದ 22 ವರ್ಷಗಳಿಂದ ಗುಜರಾತ್‌ನಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಆದರೆ ಕಳೆದ 15 ವರ್ಷಗಳಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ನರೇಂದ್ರ ಮೋದಿ ಅವರಿಲ್ಲದ ಮೊದಲ ಚುನಾವಣೆ ಇದು. 2014ರಲ್ಲಿ ಮೋದಿಯವರು ಪ್ರಧಾನಿ ಗದ್ದುಗೆಗೆ ಏರಿದ ನಂತರ ರಾಜ್ಯದಲ್ಲಿ ಅನೇಕ ಬದಲಾವಣೆಗಳಾಗಿವೆ. ಮೀಸಲಾತಿಗೆ ಆಗ್ರಹಿಸಿದ ಪಟೇಲ್ ಸಮುದಾಯದ ಚಳವಳಿ, ಬಲಗೊಂಡ ದಲಿತ ಪ್ರಜ್ಞೆ ಬಿಜೆಪಿಗೆ ದೊಡ್ಡ ಸವಾಲಾಗಿವೆ. ಮುಖ್ಯಮಂತ್ರಿಯಾಗಿದ್ದ ಆನಂದಿಬೆನ್ ಪಟೇಲ್ ಅವರನ್ನು ಬದಲಿಸಿ ವಿಜಯ್ ರೂಪಾನಿ ಅವರನ್ನು ಮುಖ್ಯಮಂತ್ರಿ ಮಾಡಿದಂತಹ ವಿದ್ಯಮಾನವೂ ಕಳೆದ ವರ್ಷ ನಡೆದಿದೆ. ಇಂತಹ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ತೀವ್ರ ಸವಾಲನ್ನು ಒಡ್ಡಲು ಯತ್ನಿಸುತ್ತಿದೆ.

ಇತ್ತೀಚಿನ ವರ್ಷಗಳಲ್ಲಿ ಮಹಾರಾಷ್ಟ್ರ, ಹರಿಯಾಣ, ಜಾರ್ಖಂಡ್ ಹಾಗೂ ಉತ್ತರ ಪ್ರದೇಶಗಳಲ್ಲಿ ಪ್ರತಿಪಕ್ಷಗಳಿಂದ ಬಿಜೆಪಿ ಅಧಿಕಾರ ಸೂತ್ರ ಕಿತ್ತುಕೊಂಡಿದೆ. ಆದರೆ ತನ್ನದೇ ಆಡಳಿತ ಇರುವ ಪ್ರಮುಖ ರಾಜ್ಯವಾದ ಗುಜರಾತ್‌ನಲ್ಲಿ ಅದು ಮತ್ತೆ ತನ್ನನ್ನು ತಾನು ಪ್ರತಿಪಾದಿಸಿಕೊಳ್ಳಬೇಕಿದೆ. ಕಾಂಗ್ರೆಸ್ ಪ್ರಚಾರದ ಮುಂಚೂಣಿಯಲ್ಲಿರುವ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಬಿಜೆಪಿಯ ಅಭಿವೃದ್ಧಿ ಮಾದರಿ ಪ್ರಶ್ನಿಸುವುದರ ಬಗ್ಗೆ ಗಮನ ಕೇಂದ್ರೀಕರಿಸಿದ್ದಾರೆ. 2014ರ ಲೋಕಸಭಾ ಚುನಾವಣೆಗಳಲ್ಲಿ ತೀವ್ರ ಹಿನ್ನಡೆ ಅನುಭವಿಸಿದ ನಂತರ ಬಿಜೆಪಿ ವಿರುದ್ಧ ಗಂಭೀರವಾದ ಸವಾಲನ್ನು ಇದೇ ಮೊದಲ ಬಾರಿಗೆ ಕಾಂಗ್ರೆಸ್ ಒಡ್ಡುತ್ತಿರುವುದು ಆಸಕ್ತಿದಾಯಕ.

ಮೋದಿ ಬಣದಲ್ಲಿ ಬಿರುಕುಗಳಿದ್ದು ಅದನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳಬೇಕೆಂಬನಿಲುವು ಕಾಂಗ್ರೆಸ್‌ನದಾಗಿದೆ. ಅಧಿಕ ಮೌಲ್ಯಗಳ ನೋಟು ರದ್ದತಿ ಹಾಗೂ ಜಿಎಸ್‌ಟಿ ದೋಷಪೂರ್ಣ ಅನುಷ್ಠಾನದ ಬಗ್ಗೆ ವರ್ತಕ ಸಮುದಾಯ ಆಕ್ರೋಶಗೊಂಡಿದೆ. ರಾಹುಲ್ ಗಾಂಧಿ ಬಹಿರಂಗ ಸಭೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುತ್ತಿರುವುದು ಕಾಂಗ್ರೆಸ್ ಭರವಸೆಯನ್ನು ಹೆಚ್ಚಿಸಿದೆ.

ಗುಜರಾತ್‌ನಲ್ಲಿ ಕಳೆದ 22 ವರ್ಷಗಳಲ್ಲಿ ಬಿಜೆಪಿಯ ಚುನಾವಣಾ ಇತಿಹಾಸವನ್ನು ಇಲ್ಲಿ ಗಮನಿಸುವುದು ಮುಖ್ಯ. ಕಳೆದ ಮೂರು ಚುನಾವಣೆಗಳ ಫಲಿತಾಂಶ ಗಮನಿಸಿದಲ್ಲಿ 182 ಸದಸ್ಯ ಬಲದ ಗುಜರಾತ್ ವಿಧಾನಸಭೆಯಲ್ಲಿ ಕಾಂಗ್ರೆಸ್ ಸದಸ್ಯರ ಸಂಖ್ಯೆ 51ರಿಂದ 61ರ ಆಸುಪಾಸಿನಲ್ಲಿ ಹೊಯ್ದಾಡಿದೆ. ಇಷ್ಟು ದೊಡ್ಡ ಅಂತರವನ್ನು ಮುಚ್ಚಲು ಕಾಂಗ್ರೆಸ್ ಈಗ ಸೆಣಸಬೇಕಿದೆ. ಹಲವು ಬಣಗಳನ್ನು ಒಗ್ಗೂಡಿಸಿ ಬಲ ಪ್ರದರ್ಶನಕ್ಕೆ ಕಾಂಗ್ರೆಸ್ ಅಣಿಯಾಗುತ್ತಿದೆ. ಒಬಿಸಿ ನಾಯಕ ಅಲ್ಪೇಶ್ ಠಾಕೂರ್ ಇತ್ತೀಚೆಗೆ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ಪಟೇಲ್ ಸಮುದಾಯದ ಯುವ ಮುಖಂಡ ಹಾರ್ದಿಕ್ ಪಟೇಲ್ ಜೊತೆಗೂ ಸಂಧಾನ ಯತ್ನವನ್ನು ಕಾಂಗ್ರೆಸ್ ನಡೆಸುತ್ತಿದೆ.

ಅಭಿವೃದ್ಧಿ ರಾಜಕಾರಣ ಅಥವಾ ವಂಶಾಡಳಿತ ರಾಜಕಾರಣದ ನಡುವಿನ ಸ್ಪರ್ಧೆ ಇದು ಎಂದು ಬಿಜೆಪಿ ವ್ಯಾಖ್ಯಾನಿಸುತ್ತಿದೆ. ಕಳೆದ ಕೆಲವು ದಿನಗಳಲ್ಲಿ ರಾಜ್ಯಕ್ಕೆ ಅನೇಕ ಕೊಡುಗೆಗಳನ್ನು ಕೇಂದ್ರ ಹಾಗೂ ಗುಜರಾತ್ ರಾಜ್ಯ ಸರ್ಕಾರ ಪ್ರಕಟಿಸಿವೆ. ಆಡಳಿತ ವಿರೋಧಿ ಅಲೆಯನ್ನು ಎದುರಿಸುವುದಕ್ಕಾಗಿ ‘ಗುಜರಾತಿ ಹೆಮ್ಮೆ’ಯ ಬಗ್ಗೆ ಮಾತನಾಡುತ್ತಾ ಜನರನ್ನು ಭಾವನಾತ್ಮಕವಾಗಿ ತಲುಪಲು ನರೇಂದ್ರ ಮೋದಿಯವರು ಯತ್ನಿಸಿದ್ದಾರೆ.

ಗುಜರಾತ್‌ನಲ್ಲಿ ಬಿಜೆಪಿಯೇ ಗೆಲ್ಲಲಿದೆ ಎಂದು ಈಗಾಗಲೇ ಕೆಲವು ಸಮೀಕ್ಷೆಗಳು ಹೇಳಿವೆ. ಏನಾದರಿರಲಿ, ಸ್ಪರ್ಧೆ ಆರೋಗ್ಯಕರ ರೀತಿಯಲ್ಲಿ ನಡೆಯಲು ಚುನಾವಣಾ ಆಯೋಗ ಎಲ್ಲಾ ಎಚ್ಚರಿಕೆಗಳನ್ನೂ ವಹಿಸಬೇಕು. ಕೋಮು ಹಾಗೂ ಧಾರ್ಮಿಕ ದ್ವೇಷಗಳ ಸಂದರ್ಭಗಳಲ್ಲಿ ಚುನಾವಣಾ ಆಯೋಗ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದು ಮುಖ್ಯವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT