ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ ಜಿ.ಪಂ ಆಡಳಿತ ಭವನಕ್ಕೆ ಕೋಳಿವಾಡ ಹೆಸರು?

Last Updated 26 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲಾ ಪಂಚಾಯ್ತಿಯ ನೂತನ ಆಡಳಿತ ಭವನಕ್ಕೆ ವಿಧಾನಸಭಾಧ್ಯಕ್ಷ ಕೆ.ಬಿ. ಕೋಳಿವಾಡ ಅವರ ಹೆಸರಿಡುವ ಪ್ರಯತ್ನಗಳು ಮತ್ತೆ ಚರ್ಚೆಗೆ ಬಂದಿದ್ದು, ಇದೇ 28ರಂದು ನಡೆಯುವ ಸಾಮಾನ್ಯ ಸಭೆಯ ನಡಾವಳಿಯಲ್ಲಿ ಈ ವಿಷಯ ಸೇರಿಸಲಾಗಿದೆ.

‘ಜಿಲ್ಲಾ ಪಂಚಾಯ್ತಿ ಸಭಾಂಗಣಕ್ಕೆ ಈ ಹಿಂದೆ ಬಿಜೆಪಿ ಮುಖಂಡ ಸಿ.ಎಂ.ಉದಾಸಿ ಅವರ ಹೆಸರು ಇಡಲಾಗಿದೆ. ಹೀಗಾಗಿ ₹3.75 ಕೋಟಿ ವೆಚ್ಚದಲ್ಲಿ ನಮ್ಮ ಸರ್ಕಾರ ಕಟ್ಟಿಸಿರುವ ಆಡಳಿತ ಭವನಕ್ಕೆ ಕೋಳಿವಾಡ ಅವರ ಹೆಸರನ್ನು ಇಡಬೇಕು’ ಎಂದು ಅವರ ಬೆಂಬಲಿಗ (ಕಾಂಗ್ರೆಸ್) ಸದಸ್ಯರು ಮೇ 15ರಂದು ನಡೆದ ಸಾಮಾನ್ಯ ಸಭೆಯಲ್ಲಿ ಆಗ್ರಹಿಸಿದ್ದರು.

‘ಸರ್ಕಾರದ ಯಾವುದೇ ಕಟ್ಟಡಕ್ಕೆ ಚುನಾಯಿತ ಸದಸ್ಯರ ಹೆಸರು ಇಡುವುದು ಸಮಂಜಸವಲ್ಲ’ ಎಂದು ಬಿಜೆಪಿ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರು.

ಜಿಲ್ಲಾ ಪಂಚಾಯ್ತಿಯಲ್ಲಿ ಕಾಂಗ್ರೆಸ್‌ ಆಡಳಿತವಿದ್ದರೂ, ಚುನಾಯಿತ ಜನಪ್ರತಿನಿಧಿಯ ಹೆಸರನ್ನು ಭವನಕ್ಕೆ ಇಡುವ ಕುರಿತು ಪರ– ವಿರೋಧದ ಅಭಿಪ್ರಾಯಗಳು ವ್ಯಕ್ತವಾದ ಕಾರಣ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯ ಸಲಹೆ ಕೇಳಲಾಗಿತ್ತು.

ಸಿ.ಇ.ಒ ಬರೆದ ಪತ್ರಕ್ಕೆ ಪ್ರತಿಕ್ರಿಯೆ ನೀಡಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಪ್ರಧಾನ ಕಾರ್ಯದರ್ಶಿ, ‘ನಿಯಮಗಳ ಪ್ರಕಾರ ಇಂತಹ ವಿಷಯಗಳಲ್ಲಿ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯೇ ಅಂತಿಮ ತೀರ್ಮಾನ ಮಾಡಬೇಕಾಗುತ್ತದೆ’ ಎಂದು ಹೇಳಿದ್ದಾರೆ.

‘ಇಲಾಖೆಯಿಂದ ಈ ಅಭಿಪ್ರಾಯ ಬಂದ ತಕ್ಷಣ ಕೋಳಿವಾಡ ಅವರ ಹೆಸರು ಇಡುವ ವಿಷಯ ಮತ್ತೆ ಚರ್ಚೆಗೆ ಬಂದಿದೆ. ಇದಕ್ಕೆ ಪೂರಕವಾಗಿ ನಿರ್ಣಯ ತೆಗೆದುಕೊಳ್ಳುತ್ತೇವೆ‘ ಎಂದು ಕೋಳಿವಾಡ ಬೆಂಬಲಿಗ ಏಕನಾಥ ಬಾನವಳ್ಳಿ ಹೇಳುತ್ತಾರೆ.

* ಪ್ರಧಾನ ಕಾರ್ಯದರ್ಶಿಗಳ ಪತ್ರದ ಹಿನ್ನೆಲೆಯಲ್ಲಿ, ಇದೇ 28ರಂದು ನಡೆಯುವ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಇದನ್ನು ಒಂದು ವಿಷಯವಾಗಿ ಇಡಲಾಗಿದೆ

–ಕೆ.ಬಿ. ಅಂಜನಪ್ಪ, ಸಿಇಒ, ಜಿ.ಪಂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT