ಶನಿವಾರ, ಸೆಪ್ಟೆಂಬರ್ 21, 2019
22 °C

ಐಎಸ್ ಸೇರಲು ಸಿರಿಯಾಕ್ಕೆ ತೆರಳಿದ್ದವರು ಮತ್ತೆ ಭಾರತಕ್ಕೆ ವಾಪಸ್

Published:
Updated:
ಐಎಸ್ ಸೇರಲು ಸಿರಿಯಾಕ್ಕೆ ತೆರಳಿದ್ದವರು ಮತ್ತೆ ಭಾರತಕ್ಕೆ ವಾಪಸ್

ಕಾಸರಗೋಡು: ಉಗ್ರಗಾಮಿ ಸಂಘಟನೆ ಐಎಸ್‌ಗೆ ಸೇರಲು ಸಿರಿಯಾಗೆ ತೆರಳಿದ್ದ ಮೂವರು ಹಾಗೂ ಅವರಿಗೆ ನೆರವು ಒದಗಿಸಿದ ಇಬ್ಬರನ್ನು ಕಣ್ಣೂರು ಪೊಲೀಸರು ಬಂಧಿಸಿದ್ದಾರೆ.

ಸಿರಿಯಾಕ್ಕೆ ತೆರಳುತ್ತಿದ್ದ ಮೂವರನ್ನು ಟರ್ಕಿ ಪೊಲೀಸರು ಬಂಧಿಸಿ, ಭಾರತಕ್ಕೆ ಕಳುಹಿಸಿದ್ದರು. ಮರಳಿದ ಇವರ ಚಲನವಲನಗಳ ಬಗ್ಗೆ ನಿಗಾ ಇಟ್ಟಿದ್ದ ಪೊಲೀಸರು, ಬುಧವಾರ ಮೂವರನ್ನು ಹಾಗೂ ಗುರುವಾರ ಇಬ್ಬರನ್ನು ಬಂಧಿಸಿದ್ದಾರೆ.

ಕಣ್ಣೂರು ಮುಂಡೇರಿ ಕೈಪಕೈ ಮೊಟ್ಟ ನಿವಾಸಿ ಕೆ.ಸಿ. ಮಿತಿಲಾಜ್ (26), ಚೆಕ್ಕಿಕುಳಂ ಪಳ್ಳಿಯತ್ ಪಂಡಾರ ವಳಪ್ಪಿಲ್ ಕೆ.ವಿ. ಅಬ್ದುಲ್ ರಜಾಕ್ (24), ಚಕ್ಕರಕ್ಕಲ್ ಮುಂಡೇರಿ ಪಡನ್ನೋಟ್ ಮೊಟ್ಟ ನಿವಾಸಿ ಎಂ.ವಿ. ರಾಶೀದ್ (23) ಬಂಧಿತರು.

ಆರೋಪಿಗಳು ಪಾಪ್ಯುಲರ್ ಫ್ರಂಟ್ ಜತೆ ನಿಕಟ ಸಂಪರ್ಕ ಇಟ್ಟುಕೊಂಡಿದ್ದರು ಎನ್ನಲಾಗಿದೆ. ಈ ಮೂವರೂ ಜಿಹಾದಿ ತರಬೇತಿಗಾಗಿ ಸಿರಿಯಾಕ್ಕೆ ಹೊರಟಿದ್ದರು ಎನ್ನಲಾಗಿದೆ. ಆದರೆ ಟರ್ಕಿ ಪೊಲೀಸರು ಪರಿಶೀಲನೆ ನಡೆಸಿದಾಗ, ಇವರಲ್ಲಿ ಅಗತ್ಯ ದಾಖಲೆಗಳಿಲ್ಲದ ಕಾರಣ ಬಂಧಿಸಿ, ಭಾರತಕ್ಕೆ ಮರಳಿಸಿದ್ದರು.

ಯುವಕರಿಗೆ ಸಿರಿಯಾಕ್ಕೆ ತೆರಲು ನೆರವು ನೀಡಿದ ಕಣ್ಣೂರು ತಲಶ್ಶೇರಿ ನಿವಾಸಿಗಳಾದ ಹಂಸ ಹಾಗೂ ಮನಾಫ್ ಅವರನ್ನೂ ಗುರುವಾರ ಡಿವೈಎಸ್ಪಿ ಪಿ.ಟಿ. ಸದಾನಂದನ್ ನೇತೃತ್ವದ ತಂಡ ಬಂಧಿಸಿದೆ.

ಸಿರಿಯಾಕ್ಕೆ ತೆರಳಲು ರಿಕ್ರೂಟಿಂಗ್ ಏಜೆನ್ಸಿಯಾಗಿ ತಲಶ್ಶೇರಿಯ ತಾಲಿಬಾನ್ ಹಂಸ ಯಾನೆ ಬಿರಿಯಾನಿ ಹಂಸ ಕಾರ್ಯನಿರ್ವಹಿಸಿದ್ದ ಎನ್ನಲಾಗಿದೆ. ಹಂಸ ಈಗಾಗಲೇ ಹಲವರನ್ನು ಐಎಸ್ ಕೇಂದ್ರಕ್ಕೆ ತಲುಪಿಸಿದ್ದಾನೆ ಎನ್ನಲಾಗಿದೆ. ಈ ಪೈಕಿ ದೆಹಲಿಯಲ್ಲಿ ಬಂಧಿತನಾಗಿದ್ದ ಶಹಜಾಹಾನ್, ಹತನಾಗಿರುವ ಶಮೀರ್, ಶಜಿಲ್ ಎಂಬವರನ್ನು ಈತನ ನೇತೃತ್ವದಲ್ಲಿ ಐಎಸ್‌ಗೆ ಸೇರಿಸಲಾಗಿತ್ತು.

ಆರೋಪಿಗಳ ವಿರುದ್ಧ ಉಗ್ರಗಾಮಿ ಸಂಘಟನೆಗಳ ಜತೆ ಸಂಪರ್ಕ, ರಾಷ್ಟ್ರ ವಿರೋಧಿ ಚಟುವಟಿಕೆ ನಡೆಸಿದ ಪ್ರಕರಣ ದಾಖಲಿಸಲಾಗಿದೆ.

**

ಸಿರಿಯಾಗೆ ತೆರಳಲು ಯೋಜಿಸಿದ್ದ 70 ಜನ

ಕಾಸರಗೋಡು, ಕಣ್ಣೂರು, ಕೋಝಿಕ್ಕೋಡು, ತ್ರಿಶ್ಶೂರು ಜಿಲ್ಲೆಗಳಿಂದ ಐಎಸ್ ಸೇರಲು ಸುಮಾರು 70 ಮಂದಿ ಸಿರಿಯಾಕ್ಕೆ ತೆರಳಲು ಯೋಜನೆ ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇವರಲ್ಲಿ ಹಲವರು ಪೊಲೀಸರಿಗೆ ಸೆರೆ ಸಿಕ್ಕಿದ್ದು, ಇನ್ನೂ ಹಲವರು ಅಲ್ಲಿಗೆ ತಲುಪಲಾರದೆ ಅರ್ಧ ದಾರಿಯಲ್ಲೇ ಮರಳಿದ್ದಾರೆ. ಕಾಸರಗೋಡು ಪಡನ್ನ- ತ್ರಿಕರಿಪುರ ಪ್ರದೇಶಗಳಿಂದ 21 ಮಂದಿ, ಕಣ್ಣೂರು ಜಿಲ್ಲೆಯ ವಳಪಟ್ಟಣದಿಂದ 15 ಮಂದಿ, ಚಕ್ಕರಕ್ಕಲ್ ಎಂಬಲ್ಲಿಂದ 10 ಮಂದಿ ಹಾಗೂ ಕನಕಮಲೆ ಎಂಬಲ್ಲಿಂದ 10 ಮಂದಿ ಈಗಾಗಲೇ ಐಎಸ್‌ಗೆ ಸೇರಿದ್ದಾರೆ ಎನ್ನಲಾಗಿದೆ.

ಐಎಸ್‌ಗೆ ತೆರಳಿದವರಲ್ಲಿ ಕಾಸರಗೋಡಿನ ಮೂವರು, ಕಣ್ಣೂರಿನ ಇಬ್ಬರು, ಬಡಗರದ ಇಬ್ಬರು, ತ್ರಿಶ್ಶೂರಿನ ಮೂವರು ಈಗಾಗಲೇ ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಪೊಲೀಸ್‌ ಮೂಲಗಳಿಂದ ಲಭ್ಯವಾಗಿದೆ.

Post Comments (+)