ಸರಿಯಾದ ಆಯ್ಕೆ ನಿಮ್ಮದು

ಬುಧವಾರ, ಜೂನ್ 19, 2019
23 °C

ಸರಿಯಾದ ಆಯ್ಕೆ ನಿಮ್ಮದು

Published:
Updated:
ಸರಿಯಾದ ಆಯ್ಕೆ ನಿಮ್ಮದು

ಮಹಾಬಲ ವಿದ್ಯಾಧರ ಮಹಾರಾಜ. ಅವನಿಗೆ ನಾಲ್ವರು ಬುದ್ಧಿವಂತ ಮಂತ್ರಿಗಳು. ಆ ನಾಲ್ವರು ನಾಲ್ಕು ರೀತಿಯ ಜೀವನ ದೃಷ್ಟಿಯನ್ನು ಹೊಂದಿದ್ದರು. ತಾವು ಏನನ್ನು ನಂಬಿದ್ದರೋ ಅದನ್ನೇ ಅರಸನಲ್ಲಿ ಅರಹುತ್ತಿದ್ದರು. ಅವರು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವಲ್ಲಿ ಕುಶಲರಾಗಿದ್ದರು. ತಾನು ಯಾವುದನ್ನು ನಂಬಬೇಕು? ಯಾವ ಜೀವನ ಶೈಲಿಯನ್ನು ಅನುಸರಿಸಬೇಕು? ಎಂಬುದು ಪ್ರಭುವಿನ ವಿವೇಚನೆಗೆ ಬಿಟ್ಟ ವಿಚಾರವಾಗಿತ್ತು. ಒಮ್ಮೆ ಮಹಾಬಲ ಆಸ್ಥಾನದಲ್ಲಿದ್ದಾಗ–

"ಒಡಲಿನಲ್ಲಿ ಜೀವ ಅನ್ನುವುದು ಇರುವುದೇ? ಅದು ಪುಣ್ಯ ಪಾಪಗಳನ್ನು ಗಳಿಸುತ್ತಿರುವುದೇ? ಅದು ಬೇರೊಂದು ಒಡಲಿನಲ್ಲಿ ತನ್ನ ಧರ್ಮದ ಕರ್ಮದ ಫಲವನ್ನು ಅನುಭವಿಸುವುದೇ? ಸತ್ತವನು ಮತ್ತೆ ಹುಟ್ಟುವನೇ? ಹುಸಿ ಕಾಣ, ಡಂಬವಿದು. ಇದನ್ನೆಲ್ಲ ನೀನು ಹೇಗೆ ನಂಬುವೆ? ಬಾಳುವುದಾದರೆ ಇಂದ್ರಿಯಗಳ ಆಸೆಯನ್ನು ಸಲ್ಲಿಸಿ, ವಸಂತಕಾಲದ ಕೋಗಿಲೆಯಂತೆ ನಲಿಯುತ್ತಿರು. ಮರುಹುಟ್ಟು ಇರುವುದನ್ನು ಕಂಡವರು ಯಾರು?"

- ಎಂದು ಒಬ್ಬ ಮಂತ್ರಿ ತನ್ನ ಜೀವನ ದೃಷ್ಟಿಯನ್ನು ವ್ಯಕ್ತಪಡಿಸಿದ. ಇನ್ನೊಬ್ಬ ಸಚಿವ, ಆತ್ಮನಿರುವುದನ್ನೇ ನಿರಾಕರಿಸಿ, ತನ್ನ ಅಭಿಪ್ರಾಯವನ್ನು ಮಂಡಿಸಿದ. ಮತ್ತೊಬ್ಬ ಅಮಾತ್ಯ ಶೂನ್ಯವಾದದ ತನ್ನ ಜೀವನ ದೃಷ್ಟಿಯನ್ನು ಪ್ರತಿಪಾದಿಸಿದ. ಈ ಸಂದರ್ಭದಲ್ಲಿ ಸ್ವಯಂಬುದ್ಧನೆಂಬ ಮಹಾಮಂತ್ರಿ ತನ್ನ ಸಮ್ಯಕ್ ಜೀವನ ದೃಷ್ಟಿಯನ್ನು ಹೀಗೆ ನಿವೇದಿಸಿದ-

" ಎಲೈ ಪ್ರಭುವೇ, ನಿನ್ನ ಈ ಹೊತ್ತಿನ ವಿದ್ಯಾಧರ ಸಂಪತ್ತು, ನಿನ್ನ ಪೂರ್ವ ಭವದ ಪುಣ್ಯದ ಫಲವಾಗಿ ಪ್ರಾಪ್ತವಾಗಿದೆ. ಭವ ಎಂದರೆ ಸಂಸಾರ, ಜನ್ಮಾಂತರ. ಈ ಭವವೆನ್ನುವುದು ಸಮುದ್ರವಿದ್ದ ಹಾಗೆ. ಈಜಲು ಬಾರದವನು ಇದರಲ್ಲಿ ಮುಳುಗುತ್ತಾನೆ. ಹೀಗೆ ಮುಳುಗುತ್ತಿರುವ ಜೀವವನ್ನು ಮೇಲಕ್ಕೆತ್ತುವ ಶಕ್ತಿ ಇರುವುದು ಧರ್ಮ ಒಂದಕ್ಕೆ ಮಾತ್ರ. ಅದು ಮುಳುಗುತ್ತಿರುವ ಜೀವಗಳನ್ನು ರಕ್ಷಿಸಿ, ಮುಕ್ತಿಯೆಂಬ ದಡವನ್ನು ಸೇರಿಸುವುದು. ಈ ಮುಕ್ತಿ ಮಾರ್ಗದ ಮಧ್ಯದಲ್ಲಿ ದೊರೆಯುವ (ಮಂತ್ರಿ ಪದವಿಯಾಗಲಿ, ರಾಷ್ಟ್ರಪತಿ ಹುದ್ದೆ ಆಗಲಿ), ಭೂಪೇಂದ್ರ ದೇವೇಂದ್ರ ವೈಭವವಾಗಲಿ ಶಾಶ್ವತವಲ್ಲ. ಅದು ಧರ್ಮಾಚರಣೆಯಿಂದ ಲಭಿಸುವ ಆನುಷಂಗಿಕ (ತಾತ್ಕಾಲಿಕ) ಫಲ.

ಆದರೆ ಮುಖ್ಯಫಲ ಮೋಕ್ಷವೇ ಆಗಿದೆ. ಆ ಮೋಕ್ಷಕ್ಕೆ ಕಾರಣವಾದ ಧರ್ಮದ ಸ್ವರೂಪವನ್ನು ನೀನು ಚೆನ್ನಾಗಿ ವಿಚಾರಮಾಡಿ ತಿಳಿಯಬೇಕು. ಆ ಧರ್ಮವು ದಯೆ, ದಮ, ದಾನ, ತಪ, ಶೀಲ ಎಂಬ ಐದು ಗುಣಗಳಿಂದ ಕೂಡಿದೆ.

"ಅಹಿಂಸೆ, ಅನುಕಂಪ, ಸಹಾನುಭುತಿಯ ಭಾವವೇ ದಯೆ. ಇದೇ ಧರ್ಮದ ಮೂಲವಾಗಿದೆ. ಐದು ಇಂದ್ರಿಯಗಳನ್ನು ಮತ್ತು ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಳ್ಳುವುದೇ ದಮ. ಉಪಕಾರ ದೃಷ್ಟಿಯಿಂದ ಇತರರಿಗೆ ಶಕ್ತಿಯಿದ್ದಷ್ಟು ನೀಡುವುದೇ ದಾನ. ತಪದಲ್ಲಿ ಉಪವಾಸ ಮೊದಲನೆಯದಾದರೆ, ಧ್ಯಾನ ಕೊನೆಯದು. ತತ್ತ್ವಗಳನ್ನು ಸಂಕಲ್ಪ (ವ್ರತ) ಪೂರ್ವಕವಾಗಿ ಆಚರಿಸುವುದೇ ಶೀಲ. ಈ ಐದು ಗುಣಯುಕ್ತವಾದುದೇ ಧರ್ಮ. ಎಲೈ ರಾಜನೇ ಇಂಥ ಸಮ್ಯಕ್ ಧರ್ಮವನ್ನು ಆಚರಿಸು."

- ಹೀಗೆ ಲೋಕದಲ್ಲಿ ನೂರಾರು ಜೀವನ ದೃಷ್ಟಿಗಳು ನಮ್ಮ ಸುತ್ತ ಮುತ್ತ ಇವೆ. ಇವುಗಳಲ್ಲಿ ಸರಿಯಾದುದನ್ನು ಆಯ್ಕೆ ಮಾಡಿ ಕೊಳ್ಳುವುದು ನಮ್ಮ ಕೈಯಲ್ಲೇ ಇದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry