ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎಚ್ಐವಿ ಮಾತ್ರೆ ಪಡೆಯಲೂ ಆಧಾರ್ ಕಡ್ಡಾಯ’

ಆಧಾರ್‌ ಸಂಖ್ಯೆ ಕಡ್ಡಾಯಕ್ಕೆ ವಿರೋಧ
Last Updated 26 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಎಚ್‌ಐವಿ ಸೋಂಕಿತರು ಎಆರ್‌ಟಿ ಕೇಂದ್ರಗಳಲ್ಲಿ ಮಾತ್ರೆಗಳನ್ನು ತೆಗೆದುಕೊಳ್ಳಲು ಆಧಾರ್‌ ಸಂಖ್ಯೆ ನೀಡಬೇಕು. ಇದರಿಂದ ನಮ್ಮ ಗೋಪ್ಯತೆಗೆ ಧಕ್ಕೆ ಉಂಟಾಗುತ್ತಿದೆ.’

‘ಆಹಾರದ ಹಕ್ಕಿಗಾಗಿ ಆಂದೋಲನ ಕರ್ನಾಟಕ’ ವತಿಯಿಂದ ನಗರದಲ್ಲಿ ಗುರುವಾರ ಆಯೋಜಿಸಿದ್ದ ‘ಆಧಾರ್‌ ಶೋಷಣೆಯ ಮುಖಗಳು’ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಎಚ್‌ಐವಿ ಸೋಂಕಿತ ಮಹಿಳೆ ಆತಂಕ ವ್ಯಕ್ತಪಡಿಸಿದರು.

‘ನಾನು 22 ವರ್ಷಗಳಿಂದ ಎಚ್‌ಐವಿ ಸೋಂಕಿನಿಂದ ಬಳಲುತ್ತಿದ್ದೇನೆ. ಸರ್ಕಾರ ನೀಡುವ ಮಾತ್ರೆಗಳನ್ನು ಪಡೆಯಬೇಕಾದರೆ ಆಧಾರ್‌ ಸಂಖ್ಯೆ ನೀಡಬೇಕು. ಸಮಾಜವು ನಮ್ಮನ್ನು ಕಳಂಕ, ತಾರತಮ್ಯ ಭಾವನೆಯಿಂದ ನೋಡುತ್ತಿದೆ. ಸರ್ಕಾರವು ಆಧಾರ್‌ ಎಂಬ ಬಾಂಬ್‌ ಅನ್ನು ನಮ್ಮ
ಮೇಲೆ ಎಸೆದಿದೆ. ಇದರಿಂದ ನಾವು ಆತಂಕದಲ್ಲಿ ಜೀವನ ನಡೆಸುವಂತಾಗಿದೆ’ ಎಂದು ಅಳಲು ತೋಡಿಕೊಂಡರು.

ಲೈಂಗಿಕ ವೃತ್ತಿನಿರತ ಮಹಿಳೆ, ‘ನಾನು 15 ವರ್ಷಗಳಿಂದ ಎಚ್‌ಐವಿ ಸೋಂಕಿನಿಂದ ಬಳಲುತ್ತಿದ್ದೇನೆ. ಚೇತನ ಯೋಜನೆಯಡಿ ಸಹಾಯಧನ ಪಡೆಯಬೇಕಾದರೆ ಆಧಾರ್‌ ಸಂಖ್ಯೆ ನೀಡಬೇಕು. ಇದರಿಂದ ನಿಮ್ಮ ಜಾತಕ, ಎಷ್ಟು ಗ್ರಾಹಕರಿದ್ದಾರೆ ಎಂಬ ಎಲ್ಲ ಮಾಹಿತಿ ತಿಳಿಯಲಿದೆ ಎಂದು ಕೆಲವರು ಹೆದರಿಸುತ್ತಿದ್ದಾರೆ’ ಎಂದು ಆತಂಕ ವ್ಯಕ್ತಪಡಿಸಿದರು.

ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಸುಕನ್ಯಾ, ‘ಆಧಾರ್‌ ಸಂಖ್ಯೆ ಕಡ್ಡಾಯವಲ್ಲ ಎಂದು ಸುಪ್ರೀಂಕೋರ್ಟ್‌ ಮಧ್ಯಂತರ ಆದೇಶ ನೀಡಿದ್ದರಿಂದ ನಾನು ಈವರೆಗೂ ಆಧಾರ್‌ ಮಾಡಿಸಿಲ್ಲ. ಆದರೆ, ಪಡಿತರ ವ್ಯವಸ್ಥೆಗೆ ಆಧಾರ್‌ ಜೋಡಣೆ ಮಾಡಿಸದ ಕಾರಣ, 2016ರ ಸೆಪ್ಟೆಂಬರ್‌ನಿಂದ ಪಡಿತರ ವಿತರಿಸಿರಲಿಲ್ಲ. ಈ ಕುರಿತು ಹೈಕೋರ್ಟ್‌ ಮೊರೆ ಹೋಗಿದ್ದೆ.

ಸುಪ್ರೀಂಕೋರ್ಟ್‌ನ ಅಂತಿಮ ಆದೇಶ ಬರುವವರೆಗೂ ಪಡಿತರ ನೀಡು ವಂತೆ ಹೈಕೋರ್ಟ್‌ ಆದೇಶ ನೀಡಿತ್ತು. ಹೀಗಾಗಿ ಪಡಿತರ ನೀಡಿದ್ದರು. ಆದರೆ, ಜೂನ್‌ನಿಂದ ಮತ್ತೆ ನಿಲ್ಲಿಸಿದ್ದಾರೆ’ ಎಂದು ದೂರಿದರು.

‘ನಾನು ಪೌರಕಾರ್ಮಿಕಳು. ಎರಡು ವರ್ಷಗಳ ಹಿಂದೆ ಆಧಾರ್‌ ಮಾಡಿಸಿದ್ದೆ. ಆದರೆ, ಬೆರಳಿನ ಗುರುತು ಅಳಿಸಿ
ಹೋಗಿದ್ದರಿಂದ ಪಡಿತರ ವ್ಯವಸ್ಥೆಗೆ ಆಧಾರ್‌ ಜೋಡಣೆ ಮಾಡಿಸಲು ಆಗಲಿಲ್ಲ. ಈಗ ಬದುಕು ದುಸ್ತರವಾಗಿದೆ’ ಎಂದು ಕಾಟನ್‌ಪೇಟೆಯ ಪದ್ಮಾ ನೋವು ತೋಡಿಕೊಂಡರು.

‘ನಮ್ಮ ಮನೆಯಲ್ಲಿ ಐದು ಮಂದಿ ಇದ್ದೇವೆ. ನಾಲ್ಕು ವರ್ಷಗಳ ಹಿಂದೆ ಆಧಾರ್‌ ನೋಂದಣಿ ಮಾಡಿಸಿದ್ದೇವೆ. ಆದರೆ, ಇಬ್ಬರಿಗೆ ಪಡಿತರ
ನೀಡುತ್ತಿಲ್ಲ. ಮಗಳಿಗೆ ವಿದ್ಯಾರ್ಥಿ ವೇತನ ವನ್ನೂ ಕೊಡುತ್ತಿಲ್ಲ’ ಎಂದು ಬೆಳಗಾವಿ ಜಿಲ್ಲೆಯ ಜ್ಯೋತಿ ಅಳಲುತೋಡಿಕೊಂಡರು.

ಆಧಾರ್‌ ಜೋಡಣೆ ಮಾಡದೆ ಪಡಿತರ ಪೂರೈಕೆ ನಿಲ್ಲಿಸಿರುವ ಕುರಿತು ಚಿಕ್ಕಮಗಳೂರು ಜಿಲ್ಲೆಯ ಹೆಗ್ಗಪ್ಪ, ಚಿಕ್ಕಬಳ್ಳಾಪುರ ಜಿಲ್ಲೆಯ ಚೌಡಪ್ಪ ಹಾಗೂ ಚಿಕ್ಕಮುನಿಸ್ವಾಮಿ, ಬೆಳಗಾವಿ ಜಿಲ್ಲೆಯ ಅಂಜಲಿ, ಮೈಸೂರು ಜಿಲ್ಲೆಯ ಜಾನಕಮ್ಮ, ಚಿತ್ರದುರ್ಗ ಜಿಲ್ಲೆಯ ಅನಂತ್‌ ಕುಮಾರ್‌ ನೋವು ತೋಡಿಕೊಂಡರು. ಒಂದು ಹೊತ್ತಿನ ಊಟಕ್ಕೂ ಪಡಿಪಾಟಲು ಅನುಭವಿಸುತ್ತಿರುವ ದಾರುಣ ಸ್ಥಿತಿಯನ್ನು ತೆರೆದಿಟ್ಟರು.

‘ಹಳ್ಳಿಯಿಂದ ದೆಹಲಿವರೆಗೂ ಆಧಾರ್‌’:

‘ಶೌಚಾಲಯದ ಸಹಾಯಧನ, ಇ–ಸ್ವತ್ತು, ವಿದ್ಯಾರ್ಥಿ ವೇತನ, ಹಾಲಿನ ಪ್ರೋತ್ಸಾಹ ಧನ, ಬಿತ್ತನೆ ಬೀಜ ತೆಗೆದುಕೊಳ್ಳಲು, ಎಫ್‌ಐಆರ್‌ ದಾಖಲಿಸಲು, ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ವಿವಾಹ ನೋಂದಣಿ ಮಾಡಿಸಲು, ಮರಣ ಪ್ರಮಾಣಪತ್ರ ಪಡೆಯಲು, ಚುನಾವಣೆಗೆ ನಿಲ್ಲಲು– ಹೀಗೆ ಎಲ್ಲದಕ್ಕೂ ಆಧಾರ್‌ ಕೇಳುತ್ತಾರೆ. ಹಳ್ಳಿಯಿಂದ ದೆಹಲಿಯವರೆಗೆ ಆಧಾರ್ ನೀಡಬೇಕಿದೆ. ಇದಕ್ಕೆ ಬಹಿಷ್ಕಾರ ಹಾಕಬೇಕು’ ಎಂದು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಪಾಪಮ್ಮ ಹೇಳಿದರು.

ಕಾರ್ಯಕ್ರಮದಲ್ಲಿ ನ್ಯಾಯಮಂಡಳಿಯಲ್ಲಿ ಕಾನೂನು ತಜ್ಞೆ ಉಷಾ ರಾಮನಾಥನ್‌, ಆಹಾರ ತಜ್ಞ ಕೆ.ಸಿ.ರಘು, ಡಾ.ಸಿಲ್ವಿಯಾ ಕರ್ಪಗಂ, ವಕೀಲ ಕ್ಲಿಪ್ಟನ್ ರೊಸಾರಿಯೊ ಪಾಲ್ಗೊಂಡಿದ್ದರು. ಅವರು ಕ್ರೋಡೀಕರಿಸುವ ಅಹವಾಲುಗಳನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸಲಾಗುತ್ತದೆ.

‘ಗೋಕರ್ಣದಲ್ಲಿ ಹಸಿವಿನಿಂದ ಸಾವು’

‘ಗೋಕರ್ಣದ ನಾಗಮ್ಮ ಮುಕ್ರಿ ಎಂಬುವರ ಮಕ್ಕಳಾದ ನಾರಾಯಣ, ಸುಬ್ಬು, ವೆಂಕಟ ರಮಣ ಹಸಿವಿನಿಂದ ಮೃತಪಟ್ಟಿದ್ದಾರೆ. ನಾಗಮ್ಮ ಅವರಿಗೆ ಅಂತ್ಯೋದಯ ಕಾರ್ಡ್‌ ಇದೆ. ಆದರೆ, ಆಧಾರ್‌ ಜೋಡಣೆ ಆಗದ ಕಾರಣ 8 ತಿಂಗಳಿಂದ ಪಡಿತರ ನೀಡಿಲ್ಲ. ನಾಗಮ್ಮ ಅವರ ಮೂರನೇ ಮಗ ಗಣಪತಿ ಅವರಿಗೆ ಮದುವೆ ಯಾಗಿದ್ದು, ಅವರ ಪತ್ನಿ ನಾಗಮ್ಮ ಗ್ರಾಮ ಪಂಚಾಯಿತಿ ಸದಸ್ಯೆಯಾಗಿದ್ದಾರೆ. ಆದರೆ, ಅವರಿಗೆ ಪಡಿತರದ ಬಗ್ಗೆ ಅರಿವಿಲ್ಲ’ ಎಂದು ಆಹಾರದ ಹಕ್ಕಿಗಾಗಿ ಆಂದೋಲನದ ನರಸಿಂಹ ತಿಳಿಸಿದರು.

* ಆಧಾರ್‌ ಜೋಡಣೆ ಕಡ್ಡಾಯ ಮಾಡಿರುವುದರಿಂದ ಜನರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಆಹಾರ ಸಚಿವರು ಹಾಗೂ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜತೆ ಮಾತುಕತೆ ನಡೆಸುತ್ತೇನೆ.

–ಡಾ.ಎನ್‌.ಕೃಷ್ಣಮೂರ್ತಿ, ರಾಜ್ಯ ಆಹಾರ ಆಯೋಗದ ಅಧ್ಯಕ್ಷ

ಪಡಿತರ ವ್ಯವಸ್ಥೆಗೆ ಆಧಾರ್‌ ಜೋಡಣೆ, ಪಾಯಿಂಟ್‌ ಆಫ್‌ ಸೇಲ್‌ (ಪಿಒಎಸ್‌) ವ್ಯವಸ್ಥೆಯನ್ನು ರದ್ದು ಪಡಿಸಬೇಕು.

–ಟಿ.ಕೃಷ್ಣಪ್ಪ, ಪಡಿತರ ವಿತರಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ

ಆಧಾರ್‌ ವ್ಯವಸ್ಥೆ ಸರಿಯಿಲ್ಲ. ಪಡಿತರ ವ್ಯವಸ್ಥೆಗೆ ಆಧಾರ್‌ ಜೋಡಣೆ ಆಗಲಿ, ಆಗದಿರಲಿ ಎಲ್ಲರಿಗೂ ಅಕ್ಕಿ ನೀಡಬೇಕು.

–ಎಸ್‌.ಜಿ.ಒಂಬತ್ಕೆರೆ, ನಿವೃತ್ತ ಮೇಜರ್‌ ಜನರಲ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT