ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ನಿರ್ಧಾರ ಪರಿಶೀಲನೆ ‘ಸುಪ್ರೀಂ’ ಅಧಿಕಾರ

ನ್ಯಾಯಪೀಠ–ಅಟಾರ್ನಿ ಜನರಲ್‌ ನಡುವೆ ಮಾತಿನ ಚಕಮಕಿ
Last Updated 26 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಕಾರ್ಯಾಂಗದ ನಿರ್ಧಾರಗಳನ್ನು ಪರಿಶೀಲನೆಗೆ ಒಳಪಡಿಸುವ ಅಧಿಕಾರ ತನಗೆ ಇದೆ ಎಂದು ಸುಪ್ರೀಂ ಕೋರ್ಟ್‌ ಗುರುವಾರ ದೃಢಪಡಿಸಿದೆ. ನ್ಯಾಯಾಂಗದ ಪರಾಮರ್ಶೆ ಸಂವಿಧಾನದ ಭಾಗವೇ ಆಗಿದೆ ಎಂದು ಸ್ಪಷ್ಟಪಡಿಸಿದೆ.

ಪೂರ್ಣ ನ್ಯಾಯ ಒದಗಿಸುವುದಕ್ಕಾಗಿ ಸಕಾರಾತ್ಮಕವಾದ ನಿರ್ದೇಶನಗಳನ್ನು ನೀಡುವುದಕ್ಕೆ ಯಾವಾಗಲೂ ಅವಕಾಶ ಇದೆ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅವರ ನೇತೃತ್ವದ ಸಂವಿಧಾನ ಪೀಠ ಹೇಳಿದೆ.

ಪ್ರಕರಣಗಳ ತೀರ್ಪು ನೀಡುವಾಗ ಸಂಸತ್‌ ಸಮಿತಿಗಳ ವರದಿಗಳನ್ನು ಆಧಾರವಾಗಿ ಇರಿಸಿಕೊಳ್ಳಬಹುದೇ ಎಂಬ ಬಗ್ಗೆ ಸಂವಿಧಾನ ಪೀಠವು ವಿಚಾರಣೆ ನಡೆಸುತ್ತಿದೆ. ಸರ್ಕಾರದ ಪರ ಹಾಜರಾಗಿದ್ದ ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌ ಮತ್ತು ನ್ಯಾಯಪೀಠದ ನಡುವೆ ಈ ವಿಚಾರಣೆ ಸಂದರ್ಭದಲ್ಲಿ ಮಾತಿನ ಚಕಮಕಿಯೂ ನಡೆಯಿತು. ಸಂಸತ್‌ ಸಮಿತಿಯ ವರದಿಗಳನ್ನು ಸಂಸತ್‌ ಮಾತ್ರ ಪರಿಶೀಲನೆಗೆ ಒಳಪಡಿಸಬಲ್ಲುದು ಎಂದು ವೇಣುಗೋಪಾಲ್ ಹೇಳಿದರು.

ಈ ವಾದದ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ ಪೀಠವು, ‘ಸಂಸತ್‌ ಏನು ಮಾಡುತ್ತದೆ ಎಂಬುದು ನಮ್ಮ ಕಾಳಜಿಯ ವಿಚಾರ ಅಲ್ಲ. ಯಾವುದೋ ವಿಷಯದ ಬಗ್ಗೆ ಸಂಸತ್‌ ಚರ್ಚಿಸುತ್ತಿದೆ. ಹಾಗಾಗಿ ನ್ಯಾಯಾಲಯ ಆ ಬಗ್ಗೆ ಗಮನ ಹರಿಸಬಾರದು ಎಂದು ಹೇಳಲು ಸಾಧ್ಯವಿಲ್ಲ. ಸಂಸತ್‌ನಲ್ಲಿ ಚರ್ಚೆ ನಡೆಯುತ್ತಿದೆ ಎಂಬುದು ನ್ಯಾಯಾಂಗದ ಪರಿಶೀಲನೆಯ ಅಧಿಕಾರದ ಮೇಲೆ ಪರಿಣಾಮ ಬೀರುವುದಿಲ್ಲ. ನ್ಯಾಯ ಪೂರ್ಣವಾಗಿ ದೊರಕುವಂತಾಗಬೇಕು ಎಂಬ ಕಾರಣಕ್ಕೆ ನಿರ್ದೇಶನಗಳನ್ನು ನೀಡುವುದು ನಮ್ಮ ಕರ್ತವ್ಯ’ ಎಂದು ಪೀಠ ಖಾರವಾಗಿ ಹೇಳಿತು.

ಸಂಸತ್ತು ಮತ್ತು ನ್ಯಾಯಾಂಗದ ನಡುವೆ ಸಾಂವಿಧಾನಿಕ ಬಿಕ್ಕಟ್ಟು ಉಂಟಾಗಬಾರದು ಎಂಬ ಕಾರಣಕ್ಕೆ ಈ ವಿಚಾರವನ್ನು ಪರಿಶೀಲನೆಗೆ ಒಳಪಡಿಸಲಾಗುತ್ತಿದೆ ಎಂದು ಪೀಠ ಹೇಳಿತು.

ಸಂವಿಧಾನದ 21ನೇ ವಿಧಿಗೆ (ಜೀವಿಸುವ ಮತ್ತು ಸ್ವಾತಂತ್ರ್ಯದ ಹಕ್ಕು) ವಿವಿಧ ಆದೇಶಗಳ ಮೂಲಕ ಸುಪ್ರೀಂ ಕೋರ್ಟ್‌ 30 ಹೊಸ ಮೂಲಭೂತ ಹಕ್ಕುಗಳನ್ನು ಸೇರಿಸಿದೆ. ಯಾವುದೇ ವ್ಯಕ್ತಿಗೆ ಜೀವಿಸುವ ಅಥವಾ ಸ್ವಾತಂತ್ರ್ಯ ದ ಹಕ್ಕನ್ನು ನಿರಾಕರಿಸಬಾರದು ಎಂದು 21ನೇ ವಿಧಿ ಹೇಳುತ್ತದೆ. ಅಂತಹ ವಿಧಿಗೆ ಮತ್ತೆ 30 ಮೂಲಭೂತ ಹಕ್ಕುಗಳನ್ನು ಸೇರಿಸಲಾಗಿದೆ. ಅವುಗಳಲ್ಲಿ ಕೆಲವು ಚೆನ್ನಾಗಿದ್ದರೂ ಹಲವನ್ನು ಜಾರಿ ಮಾಡುವುದೇ ಸಾಧ್ಯವಿಲ್ಲ ಎಂದು ವೇಣುಗೋಪಾಲ್‌ ವಾದಿಸಿದರು. 

ಇದು ನ್ಯಾಯಪೀಠವನ್ನು ಕೆರಳಿಸಿತು. ‘ಆದೇಶವನ್ನು ಜಾರಿ ಮಾಡಲು ಸಾಧ್ಯವಾಗಿಲ್ಲ ಎಂದಾದರೆ ಅದು ನಿಮ್ಮ ವೈಫಲ್ಯ’ ಎಂದು ಪೀಠ ಹೇಳಿತು. ದೀಪಾವಳಿ ಸಂದರ್ಭದಲ್ಲಿ ದೆಹಲಿಯಲ್ಲಿ ಪಟಾಕಿ ನಿಷೇಧಿಸಿದ ಆದೇಶವನ್ನು ಉಲ್ಲೇಖಿಸಿದ ಪೀಠ, ಇದರಿಂದಾಗಿ ದೆಹಲಿಯ ಜನರು ಸ್ವಚ್ಛ ಗಾಳಿಯನ್ನು ಉಸಿರಾಡಲು ಸಾಧ್ಯವಾಗಿದೆ ಎಂದಿತು.

ಆದರೆ, ಹೆದ್ದಾರಿ ಸಮೀಪ ಮದ್ಯ ಮಾರಾಟ ನಿಷೇಧದ ಆದೇಶದಿಂದಾಗಿ ಒಂದು ಲಕ್ಷಕ್ಕೂ ಹೆಚ್ಚು ಜನರು ಕೆಲಸ ಕಳೆದುಕೊಂಡಿದ್ದಾರೆ ಎಂದು ವೇಣುಗೋಪಾಲ್‌ ಹೇಳಿದರು.

ವೇಣುಗೋಪಾಲ್‌ ಅವರ ಈ ವಾದವನ್ನೂ ಪೀಠ ಒಪ್ಪಲಿಲ್ಲ. ದೇಶವು ಜಗತ್ತಿನ ಅಪಘಾತ ರಾಜಧಾನಿಯಾಗುತ್ತಿದೆ ಎಂದು ಸರ್ಕಾರ ವಾದಿಸಿತ್ತು. ಅದರ ಅನುಸಾರ ಈ ಆದೇಶ ನೀಡಲಾಗಿದೆ. ಸರ್ಕಾರದ ನೀತಿಯನ್ನು ನ್ಯಾಯಾಲಯ ಜಾರಿಗೆ ತಂದಿದೆ. ಹೆದ್ದಾರಿ ಬದಿಯಿಂದ ಮದ್ಯದ ಅಂಗಡಿಗಳನ್ನು ತೆರವುಗೊಳಿಸುವಂತೆ ರಾಜ್ಯಗಳಿಗೆ ಕೇಂದ್ರವು ನೂರಾರು ನಿರ್ದೇಶನಗಳನ್ನು ನೀಡಿದೆ. ಸರ್ಕಾರದ ನೀತಿ ಜಾರಿಯಾಗುವಂತೆ ಕೋರ್ಟ್‌ ನೋಡಿಕೊಂಡಿದೆ ಎಂದು ಪೀಠ ಹೇಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT