7

ಅಂದದ ಮನೆಗೆ ಚೆಂದದ ಮೆಟ್ಟಿಲು

Published:
Updated:
ಅಂದದ ಮನೆಗೆ ಚೆಂದದ ಮೆಟ್ಟಿಲು

ಮೆಟ್ಟಿಲು ಮಹಡಿಯನ್ನು ತಲುಪುವ ಹಾದಿಯಷ್ಟೇ ಎಂಬ ಕಲ್ಪನೆ ಈಗಿಲ್ಲ. ಮೆಟ್ಟಿಲುಗಳನ್ನು ಕಲಾತ್ಮಕವಾಗಿ ಕಟ್ಟಲಾಗುತ್ತದೆ. ಮೆಟ್ಟಿಲುಗಳ ಕೆಳಗಿನ ಜಾಗವನ್ನು ಹಲವು ಉದ್ದೇಶಗಳಿಗೆ ಬಳಸುತ್ತಾರೆ. ರ‍್ಯಾಕ್‌ಗಳನ್ನು ಜೋಡಿಸುವ ಮೂಲಕ ಪುಸ್ತಕ, ಬಟ್ಟೆಗಳನ್ನು ಅಲ್ಲಿ ಇರಿಸಿಕೊಳ್ಳಬಹುದು.

ಸುರಕ್ಷತೆ ಮತ್ತು ಅನುಕೂಲದ ದೃಷ್ಟಿಯಿಂದ ಮನೆಯ ಒಳಗೇ ಮೆಟ್ಟಿಲುಗಳನ್ನು ನಿರ್ಮಾಣ ಮಾಡಲಾಗುತ್ತದೆ. ಮೆಟ್ಟಿಲುಗಳನ್ನು ಅಂದವಾಗಿ ನಿರ್ಮಿಸಿ ಮನೆಯ ಒಳಾಂಗಣಕ್ಕೆ ವಿಶೇಷ ಮೆರುಗು ನೀಡಲು ಕೆಲ ಸಲಹೆಗಳು ಇಲ್ಲಿವೆ.

ಬಜೆಟ್: ಮೆಟ್ಟಿಲಿಗೆ ಎಷ್ಟು ಹಣ ವ್ಯಯ ಮಾಡಬೇಕು ಎಂಬುದು ಮೊದಲೇ ನಿರ್ಧರಿಸಿಕೊಳ್ಳುವುದು ಅವಶ್ಯ. ಗುಣಮಟ್ಟ, ವಿನ್ಯಾಸ ಆಧರಿಸಿ ಸಾವಿರ ರೂಪಾಯಿಗಳಿಂದ ಹಿಡಿದು ಲಕ್ಷ ರೂಪಾಯಿಗಳವರೆಗೆ ವಿವಿಧ ವಿನ್ಯಾಸದ ಮೆಟ್ಟಿಲುಗಳು ಮಾರುಕಟ್ಟೆಯಲ್ಲಿ ಲಭ್ಯ. ಮೊದಲೇ ನಿಮ್ಮ ಬಜೆಟ್ ನಿಗದಿಪಡಿಸಿಕೊಂಡರೆ ಗೊಂದಲ ಕಡಿಮೆ ಆಗುತ್ತದೆ. ಈ ಹಿಂದೆ ಮೆಟ್ಟಿಲುಗಳನ್ನು ಕಲ್ಲು ಅಥವಾ ಸಿಮೆಂಟ್ ಬಳಸಿ ಕಟ್ಟುತ್ತಿದ್ದರು. ಈಗ ಟ್ರೆಂಡ್‌ ಬದಲಾಗಿದೆ. ಸಾಂಪ್ರದಾಯಿಕ ನೋಟ ಇಷ್ಟಪಡುವವರು ಮರದ ಮೆಟ್ಟಿಲು ನಿರ್ಮಾಣಕ್ಕೆ ಆದ್ಯತೆ ಕೊಡುತ್ತಾರೆ.

ಸ್ಥಳಾವಕಾಶ: ಮನೆಯಲ್ಲಿ ಸ್ಥಳಾವಕಾಶ ಎಷ್ಟಿದೆ ಎಂಬುದರ ಮೇಲೆ ಮೆಟ್ಟಿಲಿನ ವಿನ್ಯಾಸ ಆಯ್ಕೆ ಮಾಡಿಕೊಳ್ಳಬೇಕು. ಲಭ್ಯವಿರುವ ಸ್ಥಳಕ್ಕೆ ಅನುಗುಣವಾಗಿ ಮೆಟ್ಟಿಲು ಇರಲಿ. ಕಡಿಮೆ ಸ್ಥಳವಿದ್ದರೆ ಸಣ್ಣ ಅಳತೆಯ ವೃತ್ತಾಕಾರವಾದ ಮೆಟ್ಟಿಲು ನಿಮ್ಮ ಆಯ್ಕೆಯಾಗಿರಲಿ. ಮೆಟ್ಟಿಲು ವಿಶಾಲವಾಗಿದ್ದರೆ ಅಲ್ಲಿ ಚಿಕ್ಕಚಿಕ್ಕ ಹೂಕುಂಡಗಳನ್ನು ಇಟ್ಟರೆ ಅದರ ಅಂದ ಹೆಚ್ಚುತ್ತದೆ.

ಸುರಕ್ಷತೆ: ಸುರಕ್ಷತೆ ಬಹಳ ಮುಖ್ಯ. ಮಕ್ಕಳಿರುವ ಮನೆಗಳಲ್ಲಾದರೆ ಮೆಟ್ಟಿಲಿನ ಗ್ರಿಲ್ ಗಳ ನಡುವೆ ಕಡಿಮೆ ಅಂತರವಿರಲಿ. ವಯಸ್ಸಾದವರಿದ್ದರೆ ಹೆಚ್ಚು ಕಡಿದಾದ ಮೆಟ್ಟಿಲುಗಳು ಬೇಡ. ಮೆಟ್ಟಿಲುಗಳಿಗೆ ಹ್ಯಾಂಡಲ್ ಗಳನ್ನು ಮರೆಯದೇ ಇರಿಸಿ. ಇದರಿಂದ ಮೆಟ್ಟಿಲು ಹತ್ತಲು ಇಳಿಯಲು ಸಹಾಯವಾಗುತ್ತದೆ ಮತ್ತು ಬೀಳುವ ಅಪಾಯ ತಪ್ಪುತ್ತದೆ.

ಗುಣಮಟ್ಟ: ಸ್ಟೀಲ್ ಮೆಟ್ಟಿಲು, ಮರದ ಮೆಟ್ಟಿಲು, ಇಟ್ಟಿಗೆ, ಟೈಲ್ಸ್‌ನಿಂದ ಮಾಡಿದ ಮೆಟ್ಟಿಲುಗಳು ಈಗ ಹೆಚ್ಚಾಗಿ ಬಳಕೆಯಲ್ಲಿವೆ. ಮೂರು ವಿಧದಲ್ಲೂ ಬೆಲೆ ಆಧರಿಸಿ ಗುಣಮಟ್ಟದ ಮತ್ತು ವಿವಿಧ ವಿನ್ಯಾಸದ ಮೆಟ್ಟಿಲುಗಳು ಲಭ್ಯ. ಇತ್ತೀಚೆಗೆ ಮೆಟ್ಟಿಲಿನ ಪಕ್ಕದ ಗ್ರಿಲ್‌ಗೆ ಗಾಜು ಅಳವಡಿಸುವುದು ಫ್ಯಾಷನ್ ಆಗಿದೆ ಇದು ಐಶಾರಾಮಿ ನೋಟ ನೀಡುತ್ತದೆ. ಈಗಂತೂ ಕಡಿಮೆ ಖರ್ಚಿನಿಯಂದ ತೀರಾ ದುಬಾರಿ ವೆಚ್ಚದಲ್ಲಿ ಮೆಟ್ಟಿಲುಗಳನ್ನು ಕಟ್ಟಲಾಗುತ್ತದೆ. ಮನೆಯ ನಿರ್ಮಾಣದ ಬಜೆಟ್‌ನಲ್ಲಿಯೇ ಅಂದದ ಮೆಟ್ಟಿಲು ಕಟ್ಟುವುದು ಸಾಧ್ಯವಿದೆ.

ವಿನ್ಯಾಸ: ನೇರ ಮೆಟ್ಟಿಲು, ಯು ಆಕಾರದ ಮೆಟ್ಟಿಲು, ವೃತ್ತಾಕಾರದ ಮೆಟ್ಟಿಲು, ಇನ್ನೂ ಹಲವು ವಿನ್ಯಾಸದ ಮೆಟ್ಟಿಲುಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಆದರೆ ವಿನ್ಯಾಸವು ಮನೆಯ ಸ್ಥಳಾವಕಾಶಕ್ಕೆ ಪೂರಕವಾಗಿರಲಿ. ಮನೆ ನಿರ್ಮಿಸುವ ಮನ್ನ ಮೆಟ್ಟಿಲು ಹೇಗಿರಬೇಕು ಎಂಬ ಕಲ್ಪನೆ ಇದ್ದರೆ ಒಳಿತು. ಮೆಟ್ಟಿಲು ಕಟ್ಟಿಸುವಾಗ ಎಂಜಿನಿಯರ್‌ಗಳ ಸಲಹೆ ಅವಶ್ಯ. ಇಲ್ಲದಿದ್ದರೆ ಕಟ್ಟಡದ ನಿರ್ಮಾಣ ಅನುಪಾತಕ್ಕೆ ಧಕ್ಕೆಯಾಗುವ ಸಾಧ್ಯತೆ ಇರುತ್ತದೆ. ಇದು ಕಟ್ಟಡದ ಸಮತೋಲನ ತಪ್ಪಿಸಬಹುದು.

(ವಿವಿಧ ಮೂಲಗಳಿಂದ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry