ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಜ್‌ಮಹಲ್‌ಗೆ ಯೋಗಿ ಭೇಟಿ: ಪ್ರೀತಿಯ ಸ್ಮಾರಕದಲ್ಲಿ ಸಿ.ಎಂ ಸ್ವಚ್ಛತಾ ಅಭಿಯಾನ

Last Updated 26 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಆಗ್ರಾ/ ಲಖನೌ:‌ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ವಿಶ್ವಪ್ರಸಿದ್ಧ ತಾಜ್‌ಮಹಲ್‌ಗೆ ಗುರುವಾರ ಭೇಟಿ ನೀಡಿದ್ದರು. ಈ ಪ್ರೀತಿಯ ಸ್ಮಾರಕಕ್ಕೆ ಭೇಟಿ ನೀಡಿದ ಬಿಜೆಪಿಯ ಮೊದಲ ಮುಖ್ಯಮಂತ್ರಿ ಭದ್ರತೆಗಾಗಿ ನಗರದಲ್ಲಿ 14,000 ಪೊಲೀಸರನ್ನು ನಿಯೋಜಿಸಲಾಗಿತ್ತು.

ಪ್ರವಾಸೋದ್ಯಮ ಸಚಿವೆ ರೀಟಾ ಬಹುಗುಣ ಜೋಶಿ ಅವರು ಮುಖ್ಯಮಂತ್ರಿಗೆ ಸಾಥ್‌ ನೀಡಿದರು. ಅಧಿಕಾರಿಗಳು, ಪಕ್ಷದ ಕಾರ್ಯಕರ್ತರು ಅಪಾರ ಸಂಖ್ಯೆಯಲ್ಲಿ ಸೇರಿದ್ದರು.

17ನೇ ಶತಮಾನದ ಮೊಘಲರ ಈ ಸ್ಮಾರಕದ ಬಗ್ಗೆ ಬಿಜೆಪಿ ನಾಯಕರು ಮತ್ತು ಸಚಿವರು ವಿವಾದಾತ್ಮಕ ಹೇಳಿಕೆ ನೀಡಿದ್ದರಿಂದ ಸರ್ಕಾರಕ್ಕೆ ಆಗಿರುವ ಮುಜುಗರ ತಪ್ಪಿಸಲು ಯೋಗಿ ತಾಜ್‌ಮಹಲ್‌ಗೆ ಭೇಟಿ ನೀಡಿದ್ದರು ಎನ್ನಲಾಗಿದೆ.

ಪಶ್ವಿಮ ದ್ವಾರದ ಮೂಲಕ ಸ್ಮಾರಕ ಪ್ರವೇಶಿಸಿದ ಯೋಗಿ, ಸ್ವಚ್ಛ ಭಾರತ ಯೋಜನೆಯ ಭಾಗವಾಗಿ ಹಿರಿಯ ನಾಯಕರೊಂದಿಗೆ ಸೇರಿ ದ್ವಾರದ ಪಕ್ಕದಲ್ಲಿರುವ ರಸ್ತೆಯಲ್ಲಿ ಕಸ ಗುಡಿಸಿದರು. ಅಲ್ಲಿಯೇ ಇರುವ ಪಾರ್ಕಿಂಗ್‌ ಪ್ರದೇಶವನ್ನೂ ಸ್ವಚ್ಛಗೊಳಿಸಿದರು. ಶಾಸಕರು ಸೇರಿದಂತೆ 500 ಬಿಜೆಪಿ ಕಾರ್ಯಕರ್ತರು ಮುಖ್ಯಮಂತ್ರಿ ಕಾರ್ಯಕ್ಕೆ ಜತೆಯಾದರು.

ಉತ್ತರ ಪ್ರದೇಶ ಪ್ರವಾಸೋದ್ಯಮ ಇಲಾಖೆಯು ರಾಜ್ಯದಲ್ಲಿನ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ತಾಜ್‌ಮಹಲ್‌ ಹೆಸರು ಸೇರಿಸಿರಲಿಲ್ಲ. ಇದರಿಂದ ವಿವಾದ
ಗಳು ಹುಟ್ಟಿಕೊಂಡಿದ್ದವು. ಭಾರತೀಯ ಸಂಸ್ಕೃತಿಯಲ್ಲಿ ತಾಜ್‌ಮಹಲ್ ಒಂದು ಕಪ್ಪು ಚುಕ್ಕೆ ಎಂದು ಬಿಜೆಪಿ ಶಾಸಕ ಸಂಗೀತ್ ಸೋಮ್ ಹೇಳಿದ್ದರೆ, ಇದು ಮೂಲತಃ ಶಿವ ದೇವಾಲಯ ಎಂದು ಬಿಜೆಪಿ ಸಂಸದ ವಿನಯ್‌ ಕಟಿಯಾರ್‌ ಹೇಳಿದ್ದರು.

**

‘ರಾಮನ ಚಮತ್ಕಾರ’

ಮುಖ್ಯಮಂತ್ರಿ ಯೋಗಿ ಅವರ ತಾಜಮಹಲ್‌ ಭೇಟಿಗೆ ‘ಇದು ರಾಮನ ಚಮತ್ಕಾರ’ ಎಂದು ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್‌ ಯಾದವ್‌ ವ್ಯಂಗ್ಯವಾಡಿದ್ದಾರೆ.

‘ಈ ಸ್ಮಾರಕವನ್ನು ಪಾರಂಪರಿಕ ತಾಣ ಎಂದು ಬಿಜೆಪಿ ಪರಿಗಣಿಸಿರಲಿಲ್ಲ. ಈಗ ಅದೇ ಪಕ್ಷದ ಮುಖ್ಯಮಂತ್ರಿ ಕೈಯಲ್ಲಿ ಪೊರಕೆ ಹಿಡಿದು ಅಲ್ಲಿ ಕಸ ಗುಡಿಸುತ್ತಿದ್ದಾರೆ. ಕಾಲ ಹೇಗೆ ಬದಲಾಗುತ್ತದೆ ನೋಡಿ’ ಎಂದು ಅಖಿಲೇಶ್‌ ಮಾರ್ಮಿಕವಾಗಿ ಹೇಳಿದ್ದಾರೆ.

**

ಕಪ್ಪು ಬಟ್ಟೆ; ಪ್ರವೇಶ ನಿಷೇಧ

ಆಗ್ರಾದಲ್ಲಿ ಯೋಗಿ ಆದಿತ್ಯನಾಥ ಅವರು ಭಾಗವಹಿಸಿದ್ದ ಸಮಾವೇಶದಲ್ಲಿ ಪಾಲ್ಗೊಳ್ಳಲು ಕಪ್ಪು ಬಣ್ಣದ ಶರ್ಟ್‌ ಮತ್ತು ಟಿ–ಶರ್ಟ್‌ ಧರಿಸಿದ್ದವರಿಗೆ ಜಿಲ್ಲಾಡಳಿತ ಅವಕಾಶ ನಿರಾಕರಿಸಿತ್ತು. ‌ರಾಜ್ಯದ ಪ್ರವಾಸಿ ತಾಣಗಳ ಅಭಿವೃದ್ಧಿ ಪಟ್ಟಿಯಲ್ಲಿ ತಾಜಮಹಲ್‌ ಹೆಸರು ಕೈಬಿಟ್ಟಿದ್ದನ್ನು ಖಂಡಿಸಿ ಮುಖ್ಯಮಂತ್ರಿಗೆ ಕಪ್ಪುಪಟ್ಟಿ ತೋರಿಸಲಾಗುವುದು ಎಂದು ಉತ್ತರ ಪ್ರದೇಶ ಮುಸ್ಲಿಮ್‌ ಮಹಾಸಂಘ ಎಚ್ಚರಿಕೆ ನೀಡಿದ್ದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT