ಶುಕ್ರವಾರ, ಸೆಪ್ಟೆಂಬರ್ 20, 2019
25 °C

ಕಲ್ಲಿದ್ದಲು ಆಮದು ನಿರ್ಧಾರ

Published:
Updated:
ಕಲ್ಲಿದ್ದಲು ಆಮದು ನಿರ್ಧಾರ

ಬೆಂಗಳೂರು: ಬೇಸಿಗೆಯಲ್ಲಿ ವಿದ್ಯುತ್‌ ಅಭಾವ ನೀಗಿಸಲು ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯ ಸರ್ಕಾರ ಒಂದು ದಶಲಕ್ಷ ಟನ್‌ ಕಲ್ಲಿದ್ದಲು ಆಮದು ಮಾಡಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡಿದೆ.

ವಿಧಾನಸಭಾ ಚುನಾವಣೆಯೂ ಬೇಸಿಗೆಯಲ್ಲಿ ನಡೆಯುವುದರಿಂದ ನಿರಂತರ ವಿದ್ಯುತ್‌ ಪೂರೈಕೆ ಆಗುವಂತೆ ನೋಡಿಕೊಳ್ಳಲು ಅಗತ್ಯ ಪ್ರಮಾಣದ ಕಲ್ಲಿದ್ದಲು ಸಂಗ್ರಹಿಸಿಟ್ಟುಕೊಳ್ಳಲು ನಿರ್ಧರಿಸಿದೆ. ಈ ಸಂಬಂಧ ಕರ್ನಾಟಕ ವಿದ್ಯುತ್‌ ನಿಗಮ ನಿಯಮಿತ(ಕೆಪಿಸಿಎಲ್‌) ಒಂದು ದಶಲಕ್ಷ ಟನ್‌ ಕಲ್ಲಿದ್ದಲು ಆಮದಿಗೆ ಜಾಗತಿಕ ಟೆಂಡರ್‌ ಕರೆಯಲಿದೆ.

ಎಲ್ಲ ಶಾಖೋತ್ಪನ್ನ ಕೇಂದ್ರಗಳಲ್ಲೂ ಅಡೆ–ತಡೆ ಇಲ್ಲದೆ ವಿದ್ಯುತ್‌ ಉತ್ಪಾದನೆ ಮಾಡಲು ಸುಮಾರು ಒಂದು ದಶಲಕ್ಷ ಟನ್‌ಗಳಷ್ಟು ಕಲ್ಲಿದ್ದಲು ಅಗತ್ಯವಿದೆ. ರಾಯಚೂರು ಶಾಖೋತ್ಪನ್ನ  ಕೇಂದ್ರ (ಆರ್‌ಟಿಪಿಎಸ್‌) , ಬಳ್ಳಾರಿ ಶಾಖೋತ್ಪನ್ನ ಕೇಂದ್ರಗಳು (ಬಿಟಿಪಿಎಸ್‌) ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಿದರಷ್ಟೇ ಬೇಸಿಗೆಯಲ್ಲಿ ವಿದ್ಯುತ್‌ ಅಭಾವ ಕಾಡುವುದಿಲ್ಲ.

ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸಲು ಮೂರು ತಿಂಗಳು ಬೇಕಾಗುತ್ತದೆ. ಆ ಬಳಿಕ ಕಲ್ಲಿದ್ದಲು ಆಮದಿಗೆ ಒಂದು ತಿಂಗಳು ಬೇಕಾಗುತ್ತದೆ. ಕಲ್ಲಿದ್ದಲು ಹೊತ್ತು ತರುವ ಮೊದಲ ಹಡಗು ರಾಜ್ಯಕ್ಕೆ ಮಾರ್ಚ್‌ನಲ್ಲಿ ತಲುಪುತ್ತದೆ. ಇಂಡೊನೇಷ್ಯಾ, ಚೀನಾ ಮತ್ತು ದಕ್ಷಿಣ ಆಫ್ರಿಕಾ ದೇಶಗಳು ಕಲ್ಲಿದ್ದಲು ರಫ್ತು ಮಾಡುವ ಪ್ರಮುಖ ರಾಷ್ಟ್ರಗಳು. ಕಡಿಮೆ ಬಿಡ್‌ ಮೊತ್ತ ಸಲ್ಲಿಸುವವರಿಗೆ ಕಲ್ಲಿದ್ದಲು ಪೂರೈಕೆ ಟೆಂಡರ್‌ ನೀಡಲಾಗುತ್ತದೆ ಎಂದು ಕೆಪಿಸಿಎಲ್‌ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಕಲ್ಲಿದ್ದಲಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು ರಾಜ್ಯಗಳಿಗೆ ಭಾರತೀಯ ಕಲ್ಲಿದ್ದಲು ಸಂಸ್ಥೆ ಸೂಚನೆ ನೀಡಿದ ಕಾರಣ, ರಾಜ್ಯ ಸರ್ಕಾರ ಪರ್ಯಾಯ ವ್ಯವಸ್ಥೆಗೆ ಅನಿವಾರ್ಯವಾಗಿ ಕೈ ಹಾಕಿದೆ. ಭಾರತೀಯ ಕಲ್ಲಿದ್ದಲು ಸಂಸ್ಥೆ ನಿಗದಿ ಮಾಡುವ ಕಲ್ಲಿದ್ದಲನ್ನು ಪಡೆಯುವುದರ ಜೊತೆಗೆ, ರಾಜ್ಯದ ಅಗತ್ಯಕ್ಕೆ ಅನುಗುಣವಾಗಿ ಹೆಚ್ಚುವರಿ ಕಲ್ಲಿದ್ದಲು ದಾಸ್ತಾನು ಇಟ್ಟುಕೊಳ್ಳಬೇಕಾಗಿದೆ. ಮುಂಬರುವ ದಿನಗಳಲ್ಲಿ ಕೃಷಿ ಕ್ಷೇತ್ರ ಮತ್ತು ನಗರ ಪ್ರದೇಶಗಳ ವಿದ್ಯುತ್ ಬೇಡಿಕೆ ಕ್ರಮೇಣ ಹೆಚ್ಚಲಿದೆ. ಮಳೆಯೂ ನಿಂತು ಹೋಗಿದೆ. ಶಾಖೋತ್ಪನ್ನ ಕೇಂದ್ರಗಳಿಗೆ ಕನಿಷ್ಠ ಒಂದು ತಿಂಗಳಿಗೆ ಆಗುವಷ್ಟು ದಾಸ್ತಾನು ಇಟ್ಟುಕೊಳ್ಳಬೇಕು. ಮುಂದಿನ ಬೇಸಿಗೆಯಲ್ಲಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕಿದೆ ಎಂದು ಅಧಿಕಾರಿಗಳು ತಿಳಿಸಿದರು.

ಆರ್‌ಟಿಪಿಎಸ್‌ ಮತ್ತು ಬಿಟಿಪಿಎಸ್‌ನಲ್ಲಿ ವಿದ್ಯುತ್‌ ಉತ್ಪಾದನೆಗೆ ಅಗತ್ಯವಿರುವ ಕಲ್ಲಿದ್ದಲು ಖರೀದಿಗಾಗಿ ರಾಜ್ಯ ಸರ್ಕಾರ ಪ್ರತಿ ವರ್ಷ ₹ 8000 ಕೋಟಿ ಖರ್ಚು ಮಾಡುತ್ತಿದೆ. ದೇಶದಲ್ಲಿ ಒಂದು ಟನ್‌ ಕಲ್ಲಿದ್ದಲು ದರ ₹ 4000 ಇದೆ. ವಿದೇಶಿ ಕಲ್ಲಿದ್ದಲು ದರ ₹ 5,500 ಆಗುತ್ತದೆ.

ರಾಜ್ಯದಲ್ಲಿ ಪ್ರಸ್ತುತ ವಿದ್ಯುತ್‌ ಬೇಡಿಕೆ 1.40 ರಿಂದ 1.50 ಕೋಟಿ ಯುನಿಟ್‌ಗಳು. ಮುಂದಿನ ದಿನಗಳಲ್ಲಿ ಆ ಪ್ರಮಾಣ 2.20 ಕೋಟಿ ಯುನಿಟ್‌ಗಳಾಗುವ ಸಾಧ್ಯತೆ ಇದೆ. ಬಿಟಿಪಿಎಸ್‌ ಮತ್ತು ಆರ್‌ಟಿಪಿಎಸ್‌ ಈಗ ತಲಾ 15,000 ಟನ್‌ ಕಲ್ಲಿದ್ದಲು ಸಂಗ್ರಹವನ್ನು ಹೊಂದಿವೆ. ಇದು ಒಂದು ದಿನಕ್ಕೂ ಸಾಲುವುದಿಲ್ಲ. ಆರ್‌ಟಿಪಿಎಸ್‌ನ ಎಂಟು ಘಟಕಗಳಿಗೆ ಪ್ರತಿದಿನ 28,000 ಟನ್‌ಗಳು ಮತ್ತು  ಬಿಟಿಪಿಎಸ್‌ನ ಎರಡು ಘಟಕಗಳಿಗೆ 15,000 ಟನ್‌ಗಳು ಬೇಕಾಗುತ್ತವೆ.

ಬೇಸಿಗೆಯಲ್ಲಿ ಆರ್‌ಟಿಪಿಎಸ್‌ಗೆ 30,000 ಟನ್‌ ಮತ್ತು ಬಿಟಿಪಿಎಸ್‌ಗೆ 24,000 ಟನ್‌ ಕಲ್ಲಿದ್ದಲು ಅಗತ್ಯವಿದೆ. ರಾಜ್ಯಕ್ಕೆ ವೆಸ್ಟರ್ನ್‌ ಕೋಲ್‌ಫೀಲ್ಡ್‌ ಲಿಮಿಟೆಡ್‌(ಡಬ್ಲ್ಯುಸಿಎಲ್‌) ಮತ್ತು ಸಿಂಗರೇಣಿ ಕಲ್ಲಿದ್ದಲು ಕಂಪೆನಿಯಿಂದ ಈಗ ಕಲ್ಲಿದ್ದಲು ಪೂರೈಕೆ ಪ್ರಮಾಣ ತಗ್ಗಿರುವುದರಿಂದ ಕಲ್ಲಿದ್ದಲು ಅಭಾವ ಉಂಟಾಗಿದೆ.

ಡಬ್ಲ್ಯುಸಿಎಲ್‌ ಮತ್ತು ರಾಜ್ಯ ಸರ್ಕಾರ ನಡುವೆ ಆದ ಒಪ್ಪಂದ ಪ್ರಕಾರ, ಆರ್‌ಟಿಪಿಎಸ್‌ಗೆ ಪ್ರತಿದಿನ 4,000 ಟನ್‌ ಕಲ್ಲಿದ್ದಲು ಪೂರೈಕೆ ಮಾಡಬೇಕು. ಅಕ್ಟೋಬರ್‌ನಲ್ಲಿ 64,000 ಟನ್‌ ಮಾತ್ರ ಪೂರೈಕೆ ಮಾಡಿದೆ. 1.4 ಲಕ್ಷ ಟನ್ ಪೂರೈಕೆ ಆಗಬೇಕಿತ್ತು. ಸಿಂಗರೇಣಿ ಬಿಟಿಪಿಎಸ್‌ ಪ್ರತಿದಿನ 14,000 ಟನ್‌ ಪೂರೈಕೆ ಮಾಡುವುದಕ್ಕೆ ಬದಲು 4,000 ಟನ್‌ಗಳಿಂದ 8,000 ಟನ್‌ ಮಾತ್ರ ಪೂರೈಕೆ ಮಾಡುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.

Post Comments (+)