ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಲ್ಲರೆ ವರ್ತಕರ ದಾಸ್ತಾನು ಮಿತಿ ಆಕ್ಷೇಪಣೆ ಸಲ್ಲಿಸಲು ನಿರ್ದೇಶನ

Last Updated 26 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಚಿಲ್ಲರೆ ವರ್ತಕರ ದಾಸ್ತಾನು ಸಂಗ್ರಹ ಮಿತಿಯನ್ನು 100 ಕ್ವಿಂಟಲ್‌ಗೆ ಹಾಗೂ ಸೂಪರ್‌ ಮಾರ್ಕೆಟ್‌ ಮತ್ತು ಹೈಪರ್‌ ಮಾರ್ಟ್‌ಗಳ ಮಿತಿಯನ್ನು 500 ಕ್ವಿಂಟಲ್‌ಗೆ ನಿಗದಿಗೊಳಿಸಿರುವ ತಕರಾರಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ರಾಜ್ಯ ಸಹಕಾರ ಇಲಾಖೆ ಕಾರ್ಯದರ್ಶಿಗೆ ಹೈಕೋರ್ಟ್‌ ಆದೇಶಿಸಿದೆ.

ಈ ಕುರಿತಂತೆ ನಗರದ ಎನ್‌.ಟಿ.ಪೇಟೆಯ ಎಚ್‌.ಕೆ.ರಂಗನಾಥ್ ಮತ್ತು ಮೂವರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಸ್.ಎನ್‌.ಸತ್ಯನಾರಾಯಣ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿ, ಆಕ್ಷೇಪಣೆ ಸಲ್ಲಿಸುವಂತೆ ಹೆಚ್ಚುವರಿ ಅಡ್ವೊಕೇಟ್‌ ಜನರಲ್ ಎ.ಜಿ.ಶಿವಣ್ಣ ಅವರಿಗೆ ನಿರ್ದೇಶಿಸಿದೆ.

ಅರ್ಜಿದಾರರ ಆಕ್ಷೇಪ ಏನು?: ‘ಚಿಲ್ಲರೆ ವರ್ತಕರ ದಾಸ್ತಾನು ಮಿತಿಯನ್ನು 100 ಕ್ವಿಂಟಲ್‌ಗೆ ನಿಗದಿಗೊಳಿಸಿ ಸಹಕಾರ ಇಲಾಖೆಯು 2014ರ ಫೆಬ್ರುವರಿ 26ರಂದು ಅಧಿಸೂಚನೆ ಹೊರಡಿಸಿದೆ. ಸೂಪರ್‌ ಮಾರ್ಕೆಟ್ ಮತ್ತು ಹೈಪರ್‌ ಮಾರ್ಟ್‌ಗಳು 500 ಕ್ವಿಂಟಲ್‌ನಷ್ಟು ದಾಸ್ತಾನು ಸಂಗ್ರಹಿಸಲು ಅವಕಾಶ ನೀಡಲಾಗಿದೆ. ಇದು ಅವೈಜ್ಞಾನಿಕ, ಅವಾಸ್ತವಿಕ ಮತ್ತು ತಾರತಮ್ಯ ನೀತಿಯಿಂದ ಕೂಡಿದೆ. ಮಾರ್ಟ್‌ ಮತ್ತು ಸೂಪರ್ ಮಾರ್ಕೆಟ್‌ಗಳೂ ಚಿಲ್ಲರೆ ಮಾರಾಟದ ಅಂಗಡಿಗಳು’ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

‘ಜನಸಂಖ್ಯೆ ಆಧಾರದಲ್ಲಿ ನೀಡಲಾಗುವ ಚಿಲ್ಲರೆ ವರ್ತಕರ ಮಾರಾಟ ಪರವಾನಗಿ, ನಗರದ ಅಭಿವೃದ್ಧಿ ಚಟುವಟಿಕೆ, ಚಿಲ್ಲರೆ ವರ್ತಕರ ಮೂಲಸೌಕರ್ಯ ಮತ್ತು ಅವರು ಭವಿಷ್ಯದಲ್ಲಿ ಎದುರಿಸಬಹುದಾದ ಸಮಸ್ಯೆಗಳು, ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆ ಹಾಗೂ ಮೆಗಾ ಮಾರುಕಟ್ಟೆ ಕೇಂದ್ರಗಳ ತಲೆ ಎತ್ತುತ್ತಿರುವ ಪರಿಣಾಮ ಗಮನದಲ್ಲಿ ಇರಿಸಿಕೊಂಡು ಮಿತಿ ನಿಗದಿಗೊಳಿಸಬೇಕು’ ಎಂಬುದು ಅರ್ಜಿದಾರರ ವಾದ. ಕೃಷಿ ಉತ್ಪನ್ನ ಮಾರುಕಟ್ಟೆ ಕಾಯ್ದೆ ತರುವ ಮೂಲಕ ಆಹಾರ ಹಾಗೂ ಕಾಳು, ತೈಲ ಪದಾರ್ಥಗಳ ದಾಸ್ತಾನು ಮಿತಿ ನಿಗದಿಗೊಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT