ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

34 ನಷ್ಟಪೀಡಿತ ಉದ್ದಿಮೆಗಳ ಷೇರು ವಿಕ್ರಯಕ್ಕೆ ಸಲಹೆ

Last Updated 26 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ನಷ್ಟಪೀಡಿತ 34 ಕೇಂದ್ರೋದ್ಯಮಗಳ ಷೇರು ವಿಕ್ರಯ ಮಾಡಲು ಸರ್ಕಾರಿ ಚಿಂತಕರ ಚಾವಡಿಯಾಗಿರುವ ನೀತಿ ಆಯೋಗವು ಶಿಫಾರಸು ಮಾಡಿದೆ.

‘ನಷ್ಟದಲ್ಲಿ ಇರುವ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳನ್ನು ಪುನಶ್ಚೇತಗೊಳಿಸುವ ಮಾರ್ಗೋಪಾಯಗಳನ್ನು ಪರಿಶೀಲಿಸಲು ಪ್ರಧಾನಿ ಕಚೇರಿಯು ನೀತಿ ಆಯೋಗಕ್ಕೆ ಕೇಳಿಕೊಂಡಿತ್ತು. ಇದುವರೆಗೆ 34 ಕೇಂದ್ರೋದ್ಯಮಗಳ ಷೇರು ವಿಕ್ರಯಕ್ಕೆ ಸಲಹೆ ನೀಡಲಾಗಿದೆ’ ಎಂದು ಆಯೋಗದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಅಮಿತಾಭ್‌ ಕಾಂತ್‌ ಅವರು ಹೇಳಿದ್ದಾರೆ.

ಗುರುವಾರ ಇಲ್ಲಿ ನಡೆದ ಮೂಲಸೌಕರ್ಯ ಸಮಾವೇಶದಲ್ಲಿ ಅವರು ಮಾತನಾಡುತ್ತಿದ್ದರು.

ಪ್ರಸಕ್ತ ಹಣಕಾಸು ವರ್ಷದಲ್ಲಿ ₹ 72,500 ಕೋಟಿಗಳಷ್ಟು ಬಂಡವಾಳವನ್ನು ಷೇರು ವಿಕ್ರಯದ ಮೂಲಕ ಸಂಗ್ರಹಿಸಲು ಸರ್ಕಾರ ಉದ್ದೇಶಿಸಿದೆ.   ಶೇ 50ಕ್ಕಿಂತ ಕಡಿಮೆ ಇರುವ ಪಾಲು ಬಂಡವಾಳ ಮಾರಾಟದ ಮೂಲಕ ₹ 46,500 ಕೋಟಿ, ಷೇರು ವಿಕ್ರಯದ ಮೂಲಕ ₹ 15 ಸಾವಿರ ಕೋಟಿ ಮತ್ತು ಸರ್ಕಾರಿ ವಿಮೆ ಸಂಸ್ಥೆಗಳನ್ನು ಷೇರುಪೇಟೆ ವಹಿವಾಟಿನಲ್ಲಿ ತೊಡಗಿಸುವುದರ ಮೂಲಕ ₹ 11 ಸಾವಿರ ಕೋಟಿ ಸಂಗ್ರಹಿಸುವ ಗುರಿ ಹಾಕಿಕೊಳ್ಳಲಾಗಿದೆ.

ಖಾಸಗಿ ಹೂಡಿಕೆ ಅಗತ್ಯ: ‘ಮೂಲ ಸೌಕರ್ಯ ಯೋಜನೆಗಳಿಗೆ ಅಗತ್ಯವಾದ ಹಣಕಾಸು ಸೌಲಭ್ಯ ಕಲ್ಪಿಸಲು ವಿಮೆ ಮತ್ತು ಪಿಂಚಣಿ ನಿಧಿಗಳು ಮುಂದಾಗಬೇಕಾಗಿದೆ’ ಎಂದು ಅಮಿತಾಭ್‌ ಕಾಂತ್‌ ಪ್ರತಿಪಾದಿಸಿದ್ದಾರೆ.

‘ಅಗತ್ಯ ಇರುವಷ್ಟು ಪ್ರಮಾಣದಲ್ಲಿ ಬಂಡವಾಳ ತೊಡಗಿಸದ ಕಾರಣಕ್ಕೆ ಮೂಲ ಸೌಕರ್ಯ ವಲಯವು ನಿರೀಕ್ಷಿಸಿದ ಮಟ್ಟದಲ್ಲಿ ಬೆಳವಣಿಗೆ ಕಂಡಿಲ್ಲ. ವಿಮೆ ಮತ್ತು ಪಿಂಚಣಿ ನಿಧಿಗಳೂ ಇಂತಹ ಯೋಜನೆಗಳಲ್ಲಿ ಹಣ ತೊಡಗಿಸುವಂತಹ ವಾತಾವರಣವನ್ನು ನಾವು ನಿರ್ಮಿಸಬೇಕಾಗಿದೆ.

‘ರಸ್ತೆ, ವಿಮಾನ ನಿಲ್ದಾಣದಂತಹ ಮೂಲ ಸೌಕರ್ಯ ವಲಯದಲ್ಲಿ ಖಾಸಗಿ ವಲಯದ ಬಂಡವಾಳ ಹೂಡಿಕೆಯನ್ನು ಮರಳಿ ತರಬೇಕಾಗಿದೆ. ಇಂತಹ ಯೋಜನೆಗಳಲ್ಲಿ ಸರ್ಕಾರಿ ಮತ್ತು ಖಾಸಗಿ ಪಾಲುದಾರಿಕೆಯನ್ನೂ ಹೆಚ್ಚಿಸಬೇಕಾಗಿದೆ.

‘ದೇಶಿ ಆರ್ಥಿಕ ವೃದ್ಧಿ ದರವು ಶೇ 9 ರಿಂದ 10ರಷ್ಟು ಬೆಳವಣಿಗೆ ಸಾಧಿಸಬೇಕು ಎನ್ನುವುದಾದರೆ, ಮೂಲಸೌಕರ್ಯ ವಲಯವನ್ನು ಆದ್ಯತೆ ಮೇರೆಗೆ ಅಭಿವೃದ್ಧಿಪಡಿಸಬೇಕು. ಸಿಂಗಪುರ, ದಕ್ಷಿಣ ಕೊರಿಯಾ, ತೈವಾನ್‌ ಮತ್ತು ಜಪಾನ್‌ಗಳು ಉತ್ತಮ ಮೂಲ ಸೌಕರ್ಯ ಯೋಜನೆಗಳ ಫಲವಾಗಿಯೇ ತ್ವರಿತವಾಗಿ ಅಭಿವೃದ್ಧಿ ಸಾಧಿಸಿವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT