ಸ್ವಾಮೀಜಿಯ ಲೈಂಗಿಕ ಕ್ರಿಯೆ ವಿಡಿಯೊ ಬಹಿರಂಗ

ಶುಕ್ರವಾರ, ಜೂನ್ 21, 2019
22 °C
ಭಕ್ತರು, ಗ್ರಾಮಸ್ಥರಿಂದ ಭಾರೀ ಆಕ್ರೋಶ * ಸ್ವಾಮೀಜಿ, ಪುತ್ರ ನಾಪತ್ತೆ

ಸ್ವಾಮೀಜಿಯ ಲೈಂಗಿಕ ಕ್ರಿಯೆ ವಿಡಿಯೊ ಬಹಿರಂಗ

Published:
Updated:
ಸ್ವಾಮೀಜಿಯ ಲೈಂಗಿಕ ಕ್ರಿಯೆ ವಿಡಿಯೊ ಬಹಿರಂಗ

ಬೆಂಗಳೂರು: ಯಲಹಂಕ ಸಮೀಪದ ಹುಣಸಮಾರನಹಳ್ಳಿಯ ಜಂಗಮ ಮಠದ ಪೀಠಾಧ್ಯಕ್ಷರ ಪುತ್ರ ದಯಾನಂದ ಅವರು ಮಠದ ಕೋಣೆಯಲ್ಲೇ ಯುವತಿಯೊಬ್ಬರ ಜತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದರು ಎನ್ನಲಾದ ವಿಡಿಯೊ ಗುರುವಾರ ಬಹಿರಂಗಗೊಂಡು, ಸ್ವಾಮೀಜಿ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಯಿತು.

ಈ ಕುರಿತು ವಾಹಿನಿಗಳಲ್ಲಿ ಸುದ್ದಿ ಪ್ರಸಾರವಾದ ಬೆನ್ನಲ್ಲೇ ಪೀಠಾಧ್ಯಕ್ಷ ಪರ್ವತರಾಜ ಶಿವಾಚಾರ್ಯ ಸ್ವಾಮೀಜಿ ಹಾಗೂ ಅವರ ಪುತ್ರ ದಯಾನಂದ ನಾಪತ್ತೆಯಾಗಿದ್ದಾರೆ.

ಗುರುವಾರ ಬೆಳಿಗ್ಗೆಯಿಂದ ಆ ವಿಡಿಯೊ ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿತ್ತು. ಈ ಸಂಗತಿ ತಿಳಿದ ಭಕ್ತರು ಹಾಗೂ ಗ್ರಾಮಸ್ಥರು, ಬೆಳಿಗ್ಗೆಯೇ ಮಠದ ಮುಂದೆ ಜಮಾಯಿಸಿ ಸ್ವಾಮೀಜಿ ಕುಟುಂಬದ ವಿರುದ್ಧ ಕಿಡಿಕಾರಿದರು. ಮಠದೊಳಗೆ ನುಗ್ಗಲು ಯತ್ನಿಸಿದ ಅವರನ್ನು ಪೊಲೀಸರು ತಡೆದರು. ಇದರಿಂದ ಪರಸ್ಪರರ ನಡುವೆ ಮಾತಿನ ಚಕಮಕಿ ನಡೆಯಿತು.

‘ಸ್ವಾಮೀಜಿ ಕುಟುಂಬವು ಮಠದ ಪರಂಪರೆಗೆ ಕಳಂಕ ತಂದಿದೆ. ಹೀಗಾಗಿ ಅವರನ್ನು ಪೀಠದಿಂದ ಕೆಳಗಿಳಿಸಬೇಕು. ಹಾಗೆಯೇ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ದಯಾನಂದ ಅವರನ್ನು ಬಂಧಿಸಬೇಕು’ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದರು ಎನ್ನಲಾದ ಯುವತಿ ದೂರು ಕೊಟ್ಟರೆ ಕ್ರಮ ತೆಗೆದುಕೊಳ್ಳುವುದಾಗಿ ಪೊಲೀಸರು ಪ್ರತಿಭಟನಾಕಾರರಿಗೆ ಸ್ಪಷ್ಟಪಡಿಸಿದರು.

‘‌ಮಠದ ಆಸ್ತಿ ಕಬಳಿಕೆ ಸೇರಿದಂತೆ ಹಲವು ಅಪರಾಧ ಪ್ರಕರಣಗಳಲ್ಲಿ ದಯಾನಂದ ಸ್ವಾಮೀಜಿ ಭಾಗಿಯಾಗಿದ್ದಾರೆ. ರಂಭಾಪುರಿ ಶ್ರೀಗಳು ಹಾಗೂ ಶ್ರೀಶೈಲ ಜಗದ್ಗುರುಗಳು ಮಧ್ಯಪ್ರವೇಶಿಸಿ ಕುಟುಂಬ ಸಮೇತ ಅವರನ್ನು ಹೊರಹಾಕಬೇಕು’ ಎಂದು ಮಠದ ಟ್ರಸ್ಟಿ ಬಸವರಾಜ್‌ ಆಗ್ರಹಿಸಿದರು.

ಮಠದ ಬಳಿ ಯಲಹಂಕ ಉಪ ವಿಭಾಗದ ಪೊಲೀಸರ ಬಿಗಿ ಭದ್ರತೆ ಕಲ್ಪಿಸಲಾಗಿತ್ತು. ದಯಾನಂದ ಪರ ಮಾಧ್ಯಮಗಳಿಗೆ ಹೇಳಿಕೆ ನೀಡಲು ಮುಂದಾದ ಗುಂಡ್ಲುಪೇಟೆಯ ನಿರಂಜನ ಎಂಬುವರನ್ನು ಸ್ಥಳೀಯರು ಸುತ್ತುವರಿದು ಆಕ್ರೋಶ ವ್ಯಕ್ತಪಡಿಸಿದರು.

ನಿಯೋಜಿತ ಉತ್ತರಾಧಿಕಾರಿ: ‘ವೀರಶೈವ ಸಮುದಾಯಕ್ಕೆ ಸೇರಿದ ಈ ಮಠವು ಐತಿಹಾಸಿಕ ಹಿನ್ನೆಲೆ ಹೊಂದಿದೆ. ಆಗಿನ ಮೈಸೂರು ಮಹಾರಾಜರು 1,000 ಎಕರೆ ಜಮೀನನ್ನು ಮಠಕ್ಕೆ ದಾನವಾಗಿ ನೀಡಿದ್ದರು. ಮೂರು ದಶಕಗಳ ಹಿಂದೆ ಪರ್ವತರಾಜ ಶಿವಾಚಾರ್ಯ ಸ್ವಾಮೀಜಿ ಅವರನ್ನು ಪೀಠಾಧ್ಯಕ್ಷರನ್ನಾಗಿ ನೇಮಿಸಲಾಯಿತು. ಮಠದ ಭಕ್ತೆಯಾಗಿದ್ದ ಪುಟ್ಟಮ್ಮ ಎಂಬುವರ ಜತೆ ಪರ್ವತರಾಜ ಸ್ವಾಮೀಜಿ ಅವರಿಗೆ ಪ್ರೇಮಾಂಕುರವಾಯಿತು. ಈ ವಿಚಾರ ತಿಳಿದ ಸಮಾಜದ ಮುಖಂಡರು, ಆಕೆ ಜತೆ ಸ್ವಾಮೀಜಿಯ ವಿವಾಹ ಮಾಡಿದ್ದರು. ಈ ಬೆಳವಣಿಗೆ ಬಳಿಕ ಮಠವು ಸನ್ಯಾಸಿ ಪೀಠದಿಂದ ಸಂಸಾರಿ ಪರಂಪರೆಗೆ ಬದಲಾಯಿತು’ ಎಂದು ಮಠದ ಟ್ರಸ್ಟಿಯೊಬ್ಬರು ಹೇಳಿದರು.

‘ಸ್ವಾಮೀಜಿ ದಂಪತಿಗೆ ಮೂವರು ಹೆಣ್ಣು ಮಕ್ಕಳಿದ್ದು, ದಯಾನಂದ ಏಕೈಕ ಪುತ್ರ. ಎಸ್ಸೆಸ್ಸೆಲ್ಸಿಗೇ ಶಿಕ್ಷಣ ತೊರೆದ ದಯಾನಂದ, ಮಠದ ಚಟುವಟಿಕೆಗಳ ಉಸ್ತುವಾರಿ ನೋಡಿಕೊಂಡಿದ್ದರು. ಮಠದ ಆಸ್ತಿ ಪರರ ಪಾಲಾಗಬಾರದು ಎಂದು ಪರ್ವತರಾಜ ಸ್ವಾಮೀಜಿ ಅವರು ಉತ್ತರಾಧಿಕಾರಿಯಾಗಿ ದಯಾನಂದ ಪಟ್ಟ ಕಟ್ಟಲು ಮುಂದಾಗಿದ್ದರು. ಇದಕ್ಕೆ ವ್ಯಾಪಕ ವಿರೋಧ ಕೂಡ ವ್ಯಕ್ತವಾಗಿತ್ತು.’

‘ಭಕ್ತರ ಹಾಗೂ ಸ್ಥಳೀಯರ ಆಕ್ಷೇಪದ ನಡುವೆಯೇ ಸ್ವಾಮೀಜಿ 2011ರಲ್ಲಿ ದಯಾನಂದ ಅವರುನ್ನು ನಿಯೋಜಿತ ಉತ್ತರಾಧಿಕಾರಿ ಎಂದು ಘೋಷಿಸಿದರು. ಅಂದಿನಿಂದ ಅವರು ಕಾವಿ ಧರಿಸಿ, ಮಠದ ಪರವಾಗಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದರು’ ಎಂದು ವಿವರಿಸಿದರು.

‌ಮೂರು ಆರೋ‍ಪ: ದೂರು ಪರಿಶೀಲನೆ

‘ಸ್ವಾಮೀಜಿ ಅವರ ಕುಟುಂಬ ಮಠದ ಆಸ್ತಿಯನ್ನು ಸ್ವಂತಕ್ಕೆ ಬಳಕೆ ಮಾಡಿಕೊಳ್ಳುತ್ತಿದೆ. ಮಠದಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ. ನಿಯೋಜಿತ ಉತ್ತಾರಾಧಿಕಾರಿ ದಯಾನಂದ ಅವರು ಮಠದಲ್ಲೇ ಲೈಂಗಿಕ ಕ್ರಿಯೆ ನಡೆಸಿದ್ದಾರೆ. ಈ ಮೂರು ಆರೋಪಗಳನ್ನು ಗಂಭೀರವಾಗಿ ತೆಗೆದುಕೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ಆರೋಪಿಸಿ ಮಠದ ಟ್ರಸ್ಟಿ ಮಹೇಶ್ ಅವರು ಚಿಕ್ಕಜಾಲ ಠಾಣೆಗೆ ದೂರು ಕೊಟ್ಟಿದ್ದಾರೆ. ಅದನ್ನು ಪರಿಶೀಲಿಸಲಾಗುತ್ತಿದೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಗಿರೀಶ್ ತಿಳಿಸಿದರು.

ನೂತನ ಪೀಠಾಧಿಪತಿ ನೇಮಕಕ್ಕೆ ರಂಭಾಪುರಿ ಸ್ವಾಮೀಜಿ ಸಲಹೆ

ಬಾಳೆಹೊನ್ನೂರು: ಬೆಂಗಳೂರಿನ ಯಲಹಂಕ ಸಮೀಪದ ಹುಣಸಮಾರನಹಳ್ಳಿ ಸಂಸ್ಥಾನ ಮಠವು ಶ್ರೀಶೈಲ ಪೀಠದ ಶಾಖಾ ಮಠವಾಗಿದೆ. ಅಲ್ಲಿನ ದಯಾನಂದ ಆಲಿಯಾಸ್ ಗುರುನಂಜೇಶ್ವರ ಶಿವಾಚಾರ್ಯ ಸ್ವಾಮೀಜಿಯ ಇತ್ತೀಚಿನ ಬೆಳವಣಿಗೆ ಕಂಡು ಮನಸ್ಸಿಗೆ ನೋವಾಗಿದೆ ಎಂದು ರಂಭಾಪುರಿ ಪೀಠದ ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಗುರುವಾರ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ಅಲ್ಲಿನ ಮಠದ ಸಂಪೂರ್ಣ ಜವಾಬ್ದಾರಿ ಮತ್ತು ಮಾರ್ಗದರ್ಶನ ನೀಡುತ್ತಿರುವ ಪರ್ವತರಾಜ ಶಿವಾಚಾರ್ಯ ಸ್ವಾಮೀಜಿ ಹೆಚ್ಚಿನ ಜವಾಬ್ದಾರಿ ವಹಿಸಿಕೊಳ್ಳಬೇಕಾಗಿದೆ. ಗುರುನಂಜೇಶ್ವರ ಸ್ವಾಮೀಜಿ ಬಗ್ಗೆ ಶ್ರೀಶೈಲ ಪೀಠದ ಜಗದ್ಗುರು ಸೂಕ್ತವಾದ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಈಗಾಗಲೇ ಆ ಭಾಗದ ಭಕ್ತರು ಉದ್ರಿಕ್ತರಾಗಿ ಮಠದ ಆವರಣದಲ್ಲಿ ನಡೆಸುತ್ತಿರುವ ಧರಣಿ ಸತ್ಯಾಗ್ರಹ ಧಾರ್ಮಿಕ ಪರಂಪರೆಯಲ್ಲಿ ಕಪ್ಪು ಚುಕ್ಕೆ ತರುವಂತಹದ್ದಾಗಿದೆ. ಧರಣಿ ನಿರತರಿಗೆ ಹೇಳುವುದಿಷ್ಟೇ, ‘ಶ್ರೀಶೈಲ ಪೀಠವನ್ನು ಮುಂದಿಟ್ಟುಕೊಂಡು ಮಠದ ಹಿರಿಯ ಪರ್ವತರಾಜ ಶಿವಾಚಾರ್ಯ ಸ್ವಾಮೀಜಿಯ ಮನಸ್ಸನ್ನು ಒಲಿಸಿ, ನೂತನ ಉತ್ತರಾಧಿಕಾರಿಯನ್ನು ನೇಮಕ ಮಾಡಿ ಪಟ್ಟಾಭಿಷೇಕ ನಡೆಸುವುದು ಸೂಕ್ತ ಎನ್ನುವುದು ನನ್ನ ಭಾವನೆ’ ಎಂದರು.

‘ಸಾರ್ವತ್ರಿಕವಾಗಿ ಜನರಿಂದ ತಿರಸ್ಕೃತರಾದ ಗುರುನಂಜೇಶ್ವರ ಸ್ವಾಮೀಜಿ ಕೂಡ ಹಠಕ್ಕೆ ಬೀಳದೆ ಮಾಡಿದ ತಪ್ಪನ್ನು ಒಪ್ಪಿಕೊಂಡು ಮಠದ ಸ್ಥಾನವನ್ನು ಬಿಟ್ಟುಕೊಡುವ ಮೂಲಕ ಸಂಸ್ಥಾನ ಮಠದ ಗೌರವ, ಘನತೆಯನ್ನು, ವೀರಶೈವ ಧರ್ಮದ ಪಾವಿತ್ರ್ಯತೆಯನ್ನು ಉಳಿಸಬೇಕು. ಈ ವಿಚಾರವಾಗಿ ಶ್ರೀಶೈಲ ಜಗದ್ಗುರು ಜತೆ ಮಾತನಾಡಿ ಸಮಸ್ಯೆ ಪರಿಹಾರಕ್ಕೆ ಮಾರ್ಗದರ್ಶನ ನೀಡುವಂತೆ ಕೇಳಿಕೊಳ್ಳುತ್ತೇನೆ. ಅವರು ಸ್ಪಂದಿಸಿ ಉತ್ತಮ ಮಾರ್ಗದರ್ಶನ ನೀಡುವ ಭರವಸೆ ಇದೆ’ ಎಂದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry