ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಶಕಗಳ ನಂತರ ಮೈದುಂಬಿದ ಸುಂಕನ ಕೆರೆ

Last Updated 26 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ದಶಕಗಳಿಂದ ನೀರಲ್ಲದೆ ಬಾಯಾರಿದ್ದ ಸುಂಕನ ಕೆರೆ, ಈಗ ಒಡಲು ತುಂಬಿಕೊಂಡು ನಳನಳಿಸುತ್ತಿದೆ.

ಯಾವುದೋ ಹಿನ್ನೀರಿನಂತೆ ಭಾಸವಾಗುತ್ತಿರುವ ಕೆಂಗೇರಿ ಬಳಿಯ ಸುಂಕನಹಳ್ಳಿಯಲ್ಲಿರುವ ಈ ಕೆರೆ, ನೀರಿನ ಪಸೆಯೇ ಕಾಣದಷ್ಟು ಬತ್ತಿ ಹೋಗಿತ್ತು. ನೀರಿಲ್ಲದ ಕಾರಣ ಸುತ್ತಮುತ್ತಲ ಜನರು ಇದನ್ನು ತ್ಯಾಜ್ಯ ವಿಲೇವಾರಿ ತಾಣವನ್ನಾಗಿಸಿಕೊಂಡಿದ್ದರು.

ಈ ಮುಂಗಾರಿನಲ್ಲಿ ನಗರದಲ್ಲಿ ಉತ್ತಮ ಮಳೆಯಾಗಿದೆ. ಅದರಲ್ಲೂ ಕೆಂಗೇರಿ ಭಾಗದಲ್ಲಿ ಅತಿ ಹೆಚ್ಚು ಮಳೆಯಾಗಿದ್ದು, ಜೂನ್‌ನಿಂದ ಸೆಪ್ಟೆಂಬರ್‌ವರೆಗೆ 792 ಮಿ.ಮೀ ಮಳೆಯಾಗಿದೆ. ವಾಡಿಕೆಗಿಂತ (489 ಮಿ.ಮೀ) ಶೇ 62ರಷ್ಟು ಅಧಿಕ ಮಳೆಯಾಗಿದೆ. ಹೀಗಾಗಿ ಈ ಭಾಗದ ಬಹುತೇಕ ಕೆರೆಗಳು ಮರುಜೀವ ಪಡೆದುಕೊಂಡಿವೆ. ಆ.14ರಂದು ಸುರಿದ ಭಾರಿ ಮಳೆಗೆ 12 ವರ್ಷಗಳ ಬಳಿಕ ಸುಂಕನ ಕೆರೆ ಕೋಡಿ ಹರಿದಿತ್ತು.

‘ತುರಹಳ್ಳಿ ಅರಣ್ಯ ವಲಯದಲ್ಲಿರುವ ಈ ಜಲಮೂಲ 10 ವರ್ಷಗಳ ಹಿಂದೆ ನಗರೀಕರಣದ ಅಡಕತ್ತರಿಗೆ ಸಿಲುಕದೆ ಪ್ರಶಾಂತವಾಗಿತ್ತು. ಆದರೆ, ಅಲ್ಲಿಂದ ಈಚೆಗೆ ಕೆರೆಯ ಆಸುಪಾಸಿನಲ್ಲಿ ಶಾಲೆ–ಕಾಲೇಜು, ಆಸ್ಪತ್ರೆ, ಆಶ್ರಮ, ವಸತಿ ಸಮುಚ್ಚಯಗಳು ನಿರ್ಮಾಣಗೊಂಡಿವೆ. ಇದರಿಂದ ಅನೇಕ ಝರಿಗಳು ನಶಿಸಿದವು. ಪರಿಣಾಮವಾಗಿ ಜಲಮೂಲ ಬತ್ತಲು ಪ್ರಾರಂಭವಾಯಿತು’ ಎಂದು ಕೆಂಗೇರಿಯ ಚೆನ್ನಜ್ಜ ಸ್ಮರಿಸಿಕೊಂಡರು.

‘ಕೆರೆ ಹೀಗೆ ತುಂಬಿದನ್ನು ನೋಡಿರುವುದು ಮರೆತೇ ಹೋಗಿತ್ತು. ಭರ್ತಿಯಾಗಿರುವ ಕೆರೆಯನ್ನು ನೋಡುವುದೇ ಒಂದು ಖುಷಿ. ನಾವು ಚಿಕ್ಕವರಿದ್ದಾಗ ಈ ಜಲಮೂಲ ಸದಾ ತುಂಬಿರುತ್ತಿತ್ತು. ಆಗ ಈ ಭಾಗ ಸಂಪೂರ್ಣ ಕಾಡಾಗಿತ್ತು. ಇತ್ತೀಚೆಗೆ ಕೆರೆಯಲ್ಲಿ ನೀರಿಲ್ಲದೆ, ತ್ಯಾಜ್ಯ ಸುರಿಯುತ್ತಿದ್ದರು. ಎಲ್ಲಿ ಕೆರೆಯೇ ಕಳೆದು ಹೋಗುತ್ತದೆ ಎನ್ನುವ ಆತಂಕ ಮೂಡಿತ್ತು. ಮಳೆರಾಯ ಹೀಗೆ ಪ್ರತಿ ವರ್ಷವೂ ಕೃಪೆ ತೋರಲಿ’ ಎನ್ನುತ್ತಾ ವೃದ್ಧೆ ಅಮ್ಮಯ್ಯ ಆಗಸಕ್ಕೊಮ್ಮೆ ಕೈ ಮುಗಿದರು.

ಈಗ ಇದೊಂದು ಪ್ರವಾಸಿ ತಾಣವಾಗಿದ್ದು, ಪ್ರತಿ ದಿನ ಸಾಕಷ್ಟು ಮಂದಿ ಕೆರೆ ವೀಕ್ಷಣೆಗೆ ಬರುತ್ತಿದ್ದಾರೆ. ನೀರಿನೊಂದಿಗೆ ಆಟವಾಡಿ, ಪ್ರಕೃತಿ ಸೌಂದರ್ಯ ಸವಿದು ಜನರು ಸಂಭ್ರಮಿಸುತ್ತಿದ್ದಾರೆ.

**

ಕಳೆದ ತಿಂಗಳು ಸುರಿದ ಮಳೆಗೆ ಕೆರೆ ಕೋಡಿ ಹರಿದಿತ್ತು. ಪಕ್ಕದ ವಸತಿ ಸಮುಚ್ಚಯಗಳಿಗೆ ನೀರು ಹರಿದಂತೆ, ಕೆರೆ ಅಂಚಿಗೆ ಬೃಹತ್‌ ಗಾತ್ರದ ಪೈಪ್‌ ಅಳವಡಿಸಿದ್ದೇವೆ
– ಆರ್ಯ ಶ್ರೀನಿವಾಸ್‌, ಪಾಲಿಕೆ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT