ಜಾತಿ ಗಣತಿ ವರದಿ ಬಿಡುಗಡೆಗೆ ಹಿಂಜರಿಕೆ ಏಕೆ

ಬುಧವಾರ, ಜೂನ್ 19, 2019
29 °C
ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಪ್ರೊ.ರವಿವರ್ಮ ಕುಮಾರ್ ಪ್ರಶ್ನೆ

ಜಾತಿ ಗಣತಿ ವರದಿ ಬಿಡುಗಡೆಗೆ ಹಿಂಜರಿಕೆ ಏಕೆ

Published:
Updated:
ಜಾತಿ ಗಣತಿ ವರದಿ ಬಿಡುಗಡೆಗೆ ಹಿಂಜರಿಕೆ ಏಕೆ

ಬೆಂಗಳೂರು: ‘ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸಿರುವ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಸ್ಥಿತಿಗತಿಯ ಸಮೀಕ್ಷಾ ವರದಿಯನ್ನು ತಕ್ಷಣ ಬಹಿರಂಗಪಡಿಸಬೇಕು. ಇಲ್ಲದಿದ್ದರೆ ಅದು ಹಿಂದುಳಿದ ವರ್ಗಗಳಿಗೆ ಮಾಡಿದ ಮಹಾ ದ್ರೋಹ ಎನಿಸಲಿದೆ. ಅಷ್ಟೊಂದು ಹಣ ವಿನಿಯೋಗಿಸಿ ನಡೆಸಿರುವ ಸಮೀಕ್ಷೆ ವರದಿಯನ್ನು ಬಹಿರಂಗಪಡಿಸಲು ಏಕೆ ಹಿಂಜರಿಕೆ’ ಎಂದು ವಕೀಲ ಪ್ರೊ.ರವಿವರ್ಮಕುಮಾರ್ ಪ್ರಶ್ನಿಸಿದರು.

ಡಿ.ದೇವರಾಜ ಅರಸು ಸಂಶೋಧನಾ ಸಂಸ್ಥೆ ನಗರದಲ್ಲಿ ಗುರುವಾರ ಆಯೋಜಿಸಿದ್ದ ಹಿಂದುಳಿದ ವರ್ಗಗಳ ಒಳವರ್ಗೀಕರಣ ಮತ್ತು ಸಾಮಾಜಿಕ ನ್ಯಾಯ ಕುರಿತ ರಾಜ್ಯಮಟ್ಟದ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

‘ದೇಶದಲ್ಲಿ ಮತ್ತೊಂದು ಅವಧಿಗೆ ಸಂಘಪರಿವಾರವೇ ಅಧಿಕಾರಕ್ಕೆ ಬಂದರೆ ಅದು ಜನಗಳ ಸರ್ಕಾರವಾಗಿರುವುದಿಲ್ಲ, ದನಗಳ ಸರ್ಕಾರವಾಗಲಿದೆ. ಉತ್ತರ ಭಾರತದಲ್ಲಿ ಈಗಾಗಲೇ ದನಗಳಿಗೆ ಹಾಸ್ಟೆಲ್ ಆರಂಭಿಸಿದ್ದಾರೆ, ಮುಂದೆ ವಿದ್ಯಾರ್ಥಿಗಳನ್ನೇ ಹಾಸ್ಟೆಲ್‌ಗಳಿಂದ ಹೊರ ಹಾಕಿ, ದನಗಳಿಗೆ ಅವಕಾಶ ಮಾಡಿಕೊಡುವ ಅಪಾಯವಿದೆ. ದೇಶದ ಜನತೆ ಎಚ್ಚರ ವಹಿಸಬೇಕಿದೆ’ ಎಂದರು.

‘ಸಂಘಪರಿವಾರದ ಜತೆಗೆ ಹಿಂದುಳಿದ ವರ್ಗದವರು ಕೈಜೋಡಿಸಿ ದಲಿತರ ಬಡ್ತಿ ಮೀಸಲಾತಿಯನ್ನು ವಿರೋಧಿಸಬಾರದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಎಲ್ಲಿಯವರೆಗೆ ಮೀಸಲಾತಿಯ ಸಾಮಾಜಿಕ ನ್ಯಾಯ ಸಿಗುವುದಿಲ್ಲವೋ ಅಲ್ಲಿಯವರೆಗೆ ಹಿಂದುಳಿದ ವರ್ಗಗಳಿಗೂ ಅದು ಸಿಗುವುದಿಲ್ಲ. ಆಡಳಿತ ಯಾವಾಗಲೂ ಬ್ರಾಹ್ಮಣರ ಕೈಯಲ್ಲೇ ಇರಬೇಕೆಂದು ಬಯಸುವ ಸಂಘಪರಿವಾರದ ಹುನ್ನಾರಕ್ಕೆ ಬಲಿ ಬೀಳಬೇಡಿ’ ಎಂದು ಎಚ್ಚರಿಸಿದರು.

ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಮಾಜಿ ಅಧ್ಯಕ್ಷ ಜೆ.ಶ್ರಿನಿವಾಸನ್‌ ಮಾತನಾಡಿ, ‘ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಸ್ಥಿತಿಗತಿಯ ಸಮೀಕ್ಷಾ ವರದಿಯನ್ನು ರಾಜ್ಯ ಸರ್ಕಾರ ಯಾವ ಕಾರಣಕ್ಕೆ ಶೈತ್ಯಾಗಾರದಲ್ಲಿ ಇಟ್ಟುಕೊಂಡಿದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಎಚ್‌.ಆಂಜನೇಯ ಅವರಿಗೆ ವರದಿ ಬಹಿರಂಗಪಡಿಸುವ ಇಚ್ಛಾಶಕ್ತಿ ಅಥವಾ ಧೈರ್ಯ ಇಲ್ಲವೇ’ ಎಂದು ಪ್ರಶ್ನಿಸಿದರು.

ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಮಾತನಾಡಿ, ‘ದೇಶದಲ್ಲಿ ಜನಸಂಖ್ಯೆ ಆಧಾರಿತ ಮೀಸಲಾತಿ ವ್ಯವಸ್ಥೆ ಜಾರಿಗೆ ಬರಬೇಕು. ಖಾಸಗಿ ಕ್ಷೇತ್ರದಲ್ಲೂ ಮೀಸಲಾತಿ ಇರಬೇಕು.

ಹಾಗೆಯೇ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗ ಹಾಗೂ ಮಹಿಳೆಯರಿಗೆ ಸಮಗ್ರ ಒಳಮೀಸಲಾತಿ ಸೌಲಭ್ಯ ಕಲ್ಪಿಸುವ ಅಗತ್ಯವಿದೆ. ದಲಿತರ ಒಳಮೀಸಲಾತಿಗಾಗಿ ರಾಷ್ಟ್ರೀಯ ಆಯೋಗ ರಚಿಸಬೇಕು’ ಎಂದು ಆಗ್ರಹಿಸಿದರು.

**

ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಸ್ಥಿತಿಗತಿಯ ಸಮೀಕ್ಷಾ ವರದಿ ಬಹಿರಂಗಪಡಿಸದಿದ್ದರೆ ಯುವಜನರು ದಂಗೆ ಏಳಬೇಕು.

–ಜೆ.ಶ್ರಿನಿವಾಸನ್‌,  ಹಿಂದುಳಿದ ಜಾತಿಗಳ ಒಕ್ಕೂಟದ ಮಾಜಿ ಅಧ್ಯಕ್ಷ

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry