ಕೊಳವೆ ಬಾವಿ ನೋಂದಣಿಗೆ ಮತ್ತೆ ಅವಕಾಶ

ಭಾನುವಾರ, ಮೇ 26, 2019
30 °C

ಕೊಳವೆ ಬಾವಿ ನೋಂದಣಿಗೆ ಮತ್ತೆ ಅವಕಾಶ

Published:
Updated:
ಕೊಳವೆ ಬಾವಿ ನೋಂದಣಿಗೆ ಮತ್ತೆ ಅವಕಾಶ

ಬೆಂಗಳೂರು: ರಾಜ್ಯದಲ್ಲಿ ಇದುವರೆಗೂ ನೋಂದಣಿ ಮಾಡಿಸದೆ ಇರುವ ಗೃಹ ಮತ್ತು ವಾಣಿಜ್ಯ ಉದ್ದೇಶದ ಕೊಳವೆಬಾವಿಗಳನ್ನು ಕಡ್ಡಾಯವಾಗಿ ನೋಂದಣಿ ಮಾಡಿಸಲು ರಾಜ್ಯ ಅಂತರ್ಜಲ ಪ್ರಾಧಿಕಾರ ಮತ್ತೊಂದು ಅವಕಾಶ ನೀಡಿದೆ.

ಕೊಳವೆ ಬಾವಿಗಳನ್ನು ನಾಲ್ಕು ತಿಂಗಳೊಳಗೆ (120 ದಿನ) ನೋಂದಣಿ ಮಾಡಿಸದಿದ್ದರೆ ಅಂತಹ ಕೊಳವೆ ಬಾವಿಗಳನ್ನು ಪ್ರಾಧಿಕಾರ ಸ್ಥಗಿತಗೊಳಿಸಲಿದೆ. ಜತೆಗೆ ಕೊಳವೆ ಬಾವಿ ಮಾಲೀಕರಿಗೆ ದಂಡ ವಿಧಿಸಲು ನಿರ್ಧರಿಸಿದೆ.

ರಾಜ್ಯದಲ್ಲಿ ಹೊಸದಾಗಿ ಕೊಳವೆಬಾವಿ ಕೊರೆಯಲು ಕರ್ನಾಟಕ ಅಂತರ್ಜಲ (ನಿಯಂತ್ರಣ, ಅಭಿವೃದ್ಧಿ ಮತ್ತು ನಿರ್ವಹಣೆ) ಕಾಯ್ದೆ 2011 ಮತ್ತು ಕರ್ನಾಟಕ ಅಂತರ್ಜಲ ನಿಯಮ 2012ರ ಪ್ರಕಾರ ಅನುಮತಿ ಪಡೆಯಬೇಕು. ಅಂತರ್ಜಲ ಅತಿ ಬಳಕೆ ಪ್ರದೇಶಗಳೆಂದು ಗುರುತಿಸಿರುವ ಪ್ರದೇಶಗಳಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ಕೊಳವೆ ಬಾವಿಗಳನ್ನೂ ನೋಂದಣಿ ಮಾಡಿಸುವುದು ಕಡ್ಡಾಯವಾಗಿದೆ.

ಪ್ರಾಧಿಕಾರವು 12 ಜಿಲ್ಲೆಗಳ 35 ತಾಲ್ಲೂಕುಗಳನ್ನು ಅಂತರ್ಜಲ ಮಿತಿಮೀರಿದ ಬಳಕೆ ಪ್ರದೇಶಗಳೆಂದು ಗುರುತಿಸಿದೆ. ಈ ಪಟ್ಟಿಯಲ್ಲಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯ ಎಲ್ಲ ತಾಲ್ಲೂಕುಗಳು ಸೇರಿವೆ. ಅಂತರ್ಜಲಕ್ಕೆ ಕನ್ನ ಹಾಕುವವರ ವಿರುದ್ಧ ಚಾಟಿ ಬೀಸಲು ಪ್ರಾಧಿಕಾರ ಮುಂದಾಗಿದೆ.

‘ಈಗಾಗಲೇ ಕೊರೆದಿರುವ ಕೊಳವೆ ಬಾವಿಗಳನ್ನು ನಾಲ್ಕು ತಿಂಗಳೊಳಗೆ ನೋಂದಣಿ ಮಾಡಿಸಬೇಕು. ಈ ಆದೇಶವನ್ನು ರಾಜ್ಯ ಸರ್ಕಾರ ರಾಜ್ಯಪತ್ರದಲ್ಲಿ ಶೀಘ್ರ ಪ್ರಕಟಿಸಲಿದೆ. ಕೊಳವೆ ಬಾವಿ ಮಾಲೀಕರು ಈ ನಿಯಮ ಪಾಲಿಸಬೇಕು’ ಎಂದು ಅಂತರ್ಜಲ ಪ್ರಾಧಿಕಾರದ ನಿರ್ದೇಶಕ ಎಸ್.ಬಿ.

ಶೆಟ್ಟೆಣ್ಣನವರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಅಂತರ್ಜಲ ಮಿತಿಮೀರಿದ ಬಳಕೆ ತಡೆಗಟ್ಟಲು ಸರ್ಕಾರ 2012ರಲ್ಲಿ ಕಾಯ್ದೆ ಮತ್ತು ನಿಯಮ ಜಾರಿಗೆ ತಂದರೂ, ಕೊಳವೆಬಾವಿಗಳನ್ನು ತೋಡುವ ಪ್ರವೃತ್ತಿ ಎಗ್ಗಿಲ್ಲದೆ ಸಾಗಿದೆ. ಅದರಲ್ಲೂ ಬೆಂಗಳೂರು ನಗರದಲ್ಲಿ ಲಕ್ಷಕ್ಕೂ ಕಡಿಮೆ ಮಂದಿ ಕೊಳವೆ ಬಾವಿ ಕೊರೆಯಲು ಅನುಮತಿ ಪಡೆದಿದ್ದಾರೆ. ಬಹುತೇಕರು ಕೊಳವೆ ಬಾವಿಗಳನ್ನು ನೋಂದಣಿ ಮಾಡಿಸಿಲ್ಲ.

ತಜ್ಞರ ಅಧ್ಯಯನದ ಪ್ರಕಾರ ಬಿಬಿಎಂಪಿ ವ್ಯಾಪ್ತಿಯಲ್ಲಿ 4 ಲಕ್ಷಕ್ಕೂ ಹೆಚ್ಚು ಕೊಳವೆ ಬಾವಿಗಳನ್ನು ಕೊರೆಯಲಾಗಿದೆ. ಆದರೆ, ಒಂದು ಲಕ್ಷ ಕೊಳವೆ ಬಾವಿಗಳನ್ನು ಮಾತ್ರ ನೋಂದಣಿ ಮಾಡಿಸಲಾಗಿದೆ.

ನಿಯಮ ಉಲ್ಲಂಘಿಸಿದರೆ ಶಿಕ್ಷೆ:ಕುಡಿಯುವ ಮತ್ತು ಕೃಷಿ ಉದ್ದೇಶದ ಬಳಕೆಯ ಕೊಳವೆಬಾವಿ ಮಾಲೀಕರು ₹50 ಶುಲ್ಕ ಪಾವತಿಸಬೇಕು. ಕೈಗಾರಿಕೆ, ವಾಣಿಜ್ಯ, ಮನರಂಜನೆ ಅಥವಾ ಇತರೆ ಬಳಕೆದಾರರು ₹500 ಪಾವತಿಸಿ, ನೋಂದಣಿ ಮಾಡಿಸಬೇಕು. ಅದೇ ರೀತಿ ಹೊಸದಾಗಿ ಕೊಳವೆಬಾವಿ ಕೊರೆಸಲು ಸಹ ಅರ್ಜಿ ಸಲ್ಲಿಸಿ, ಅನುಮತಿ ಪಡೆಯಬೇಕು. ನಿಯಮ ಉಲ್ಲಂಘಿಸಿದರೆ ₹2,000 ದಂಡ ಮತ್ತು ಆರು ತಿಂಗಳು ಜೈಲು ಶಿಕ್ಷೆ ವಿಧಿಸಲು ಕಾಯ್ದೆಯಲ್ಲಿ ಅವಕಾಶವಿದೆ.

ಬಿಬಿಎಂಪಿ ವ್ಯಾಪ್ತಿಯ ನಿವಾಸಿಗಳು ಜಲಮಂಡಳಿಯಲ್ಲಿ ನೋಂದಣಿ ಮಾಡಿಸಬೇಕು. ಜಿಲ್ಲೆಗಳಲ್ಲಿ ಜಿಲ್ಲಾ ಅಂತರ್ಜಲ ಪ್ರಾಧಿಕಾರದ ಹಿರಿಯ ಭೂವಿಜ್ಞಾನಿಗಳಲ್ಲಿ ನೋಂದಣಿ ಮಾಡಿಸಬೇಕು.

ನಗರದಲ್ಲಿ 400 ಪಟ್ಟು ದುರ್ಬಳಕೆ: ‘ಕಾಯ್ದೆ ಜಾರಿಗೆ ತಂದ 5 ವರ್ಷಗಳಿಂದಲೂ ಪ್ರಾಧಿಕಾರ ಅಂತರ್ಜಲ ಮರುಪೂರಣ ಹಾಗೂ ಅಂತರ್ಜಲದ ಅತಿಯಾದ ಬಳಕೆಗೆ ಕಡಿವಾಣ ಹಾಕಲಿಲ್ಲ. ಬೆಂಗಳೂರು ನಗರವೊಂದರಲ್ಲೇ ಅಂತರ್ಜಲ ಅತಿ ಬಳಕೆ 400 ಪಟ್ಟು ಏರಿಕೆಯಾಗಿದೆ’ ಎಂದು ಹಿರಿಯ ಭೂ ವಿಜ್ಞಾನಿ ಜಿ.ವಿ.ಹೆಗ್ಡೆ ಪ್ರತಿಕ್ರಿಯಿಸಿದರು.

‘ನಗರದಲ್ಲಿ ಹೊಸ ಕೊಳವೆ ಬಾವಿಗಳನ್ನು ಕೊರೆಯಲು ನಿರಂತರ ಅನುಮತಿ ನೀಡಲಾಯಿತು. ಇದನ್ನು ತಡೆಯಬೇಕಾದ ಪ್ರಾಧಿಕಾರವೂ ಜಾಣ ಕುರುಡು ಪ್ರದರ್ಶಿಸಿತು. ಇನ್ನಾದರೂ ಅಂತರ್ಜಲ ದುರ್ಬಳಕೆ ತಡೆಯಲು ಕಾಯ್ದೆಯನ್ನು ಸರಿಯಾಗಿ ಅನುಷ್ಠಾನಗೊಳಿಸಬೇಕು’ ಎಂದು ಒತ್ತಾಯಿಸಿದರು.

**

ಅಂತರ್ಜಲ ಅತಿ ಬಳಕೆ ತಾಲ್ಲೂಕುಗಳು

ರಾಜ್ಯ ಅಂತರ್ಜಲ ಪ್ರಾಧಿಕಾರವು 12 ಜಿಲ್ಲೆ­ಗಳ 35 ತಾಲ್ಲೂಕುಗಳನ್ನು ಅಂತರ್ಜಲ ಅತಿ­ಬಳಕೆ ಪ್ರದೇಶಗಳೆಂದು ಗುರುತಿಸಿದೆ.

ಜಿಲ್ಲಾವಾರು ತಾಲ್ಲೂಕುಗಳ ಪಟ್ಟಿ: ಬಾಗಲಕೋಟೆ (ಬಾದಾಮಿ, ಬಾಗಲಕೋಟೆ); ಬೆಂಗಳೂರು ಗ್ರಾಮಾಂತರ (ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ, ನೆಲಮಂಗಲ); ಬೆಂಗಳೂರು ನಗರ (ಆನೇಕಲ್‌, ಬೆಂಗಳೂರು ಪೂರ್ವ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ); ಬೆಳಗಾವಿ (ರಾಮದುರ್ಗ, ಅಥಣಿ, ಸವದತ್ತಿ); ಬಳ್ಳಾರಿ (ಹಗರಿಬೊಮ್ಮನಹಳ್ಳಿ; ಚಾಮರಾಜನಗರ (ಗುಂಡ್ಲುಪೇಟೆ); ಚಿಕ್ಕಬಳ್ಳಾಪುರ (ಚಿಕ್ಕಬಳ್ಳಾಪುರ, ಚಿಂತಾಮಣಿ, ಗುಡಿಬಂಡೆ, ಶಿಡ್ಲಘಟ್ಟ); ಚಿಕ್ಕಮಗಳೂರು (ಕಡೂರು); ಚಿತ್ರದುರ್ಗ (ಚಿತ್ರದುರ್ಗ, ಹೊಳಲ್ಕೆರೆ, ಚಳ್ಳಕೆರೆ, ಹಿರಿಯೂರು); ದಾವಣಗೆರೆ (ಚನ್ನಗಿರಿ, ಹರಪನಹಳ್ಳಿ, ಜಗಳೂರು); ಗದಗ (ಗದಗ, ರೋಣ); ಹಾಸನ (ಅರಸೀಕೆರೆ); ಕೋಲಾರ (ಕೋಲಾರ, ಮಾಲೂರು, ಮುಳಬಾಗಿಲು, ಶ್ರಿನಿವಾಸಪುರ); ರಾಮನಗರ (ಕನಕಪುರ, ರಾಮನಗರ); ತುಮಕೂರು (ಚಿಕ್ಕನಾಯಕನಹಳ್ಳಿ, ಕೊರಟಗೆರೆ, ಮಧುಗಿರಿ, ತಿಪಟೂರು, ತುಮಕೂರು).

**

ಕೊಳವೆ ಬಾವಿಗಳನ್ನು ಕಡ್ಡಾಯವಾಗಿ ನೋಂದಣಿ ಮಾಡಿಸಬೇಕು. ಹೊಸದಾಗಿ ಕೊರೆಯಲು ಅನುಮತಿ ಪಡೆಯಲೇಬೇಕು.

–ಎಸ್.ಬಿ.ಶೆಟ್ಟೆಣ್ಣನವರ್, ನಿರ್ದೇಶಕ, ಅಂತರ್ಜಲ ಪ್ರಾಧಿಕಾರ

**

ಕೊಳವೆ ಬಾವಿ ನೋಂದಣಿ ಮಾಡಿಸಲು ಮತ್ತೊಂದು ಅವಕಾಶ ಕೊಡಲು ಕರ್ನಾಟಕ ಅಂತರ್ಜಲ ಕಾಯ್ದೆಯಲ್ಲಿ ಹೇಳಿಲ್ಲ. ಕಾಯ್ದೆ ಉಲ್ಲಂಘಿಸಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು.

ಜಿ.ವಿ.ಹೆಗ್ಡೆ, ಹಿರಿಯ ಭೂ ವಿಜ್ಞಾನಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry