ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಜೀವನಾಡಿಯಾಗಿವೆ ಕೃಷಿ ಹೊಂಡಗಳು

Last Updated 26 ಅಕ್ಟೋಬರ್ 2017, 19:47 IST
ಅಕ್ಷರ ಗಾತ್ರ

ಬೆಂಗಳೂರು: ಈ ಬಾರಿ ಹೆಸರಘಟ್ಟ ಹೋಬಳಿಯಲ್ಲಿ ಉತ್ತಮ ಮಳೆಯಾಗಿದ್ದು, ಸುತ್ತಮುತ್ತಲ ಗ್ರಾಮಗಳಲ್ಲಿ ನಿರ್ಮಿಸಿರುವ ಬಹುತೇಕ ಎಲ್ಲಾ ಕೃಷಿ ಹೊಂಡಗಳು ಭರ್ತಿಯಾಗಿವೆ.

ಕೃಷಿ ಹೊಂಡಗಳು ತುಂಬಿರುವುದರಿಂದ ರೈತರ ಮೊಗದಲ್ಲಿ ಸಂತಸ ಮನೆ ಮಾಡಿದೆ. ಮುಂದಿನ ಬೆಳೆಗಳಿಗೆ ಅನುಕೂಲವಾಗಲಿದೆ ನೆಮ್ಮದಿಯ ನಿಟ್ಟಿಸಿರು ಬಿಟ್ಟಿದ್ದಾರೆ.

‘ಕೃಷಿ ಹೊಂಡದ ಬಗ್ಗೆ ಅಧಿಕಾರಿಗಳು ಹೇಳಿದಾಗ ಜಮೀನಿನಲ್ಲಿ ಸುಮ್ಮನೆ ಜಾಗ ಬಿಡಬೇಕಾ ಎನ್ನಿಸಿತ್ತು. ಒಲ್ಲದ ಮನಸ್ಸಿನಿಂದ ಸಮ್ಮಿತಿ ನೀಡಿದ್ದೆ. ಆದರೆ, ಈಗ ಅದರ ಉಪಯೋಗ ತಿಳಿಯುತ್ತಿದೆ. ಇದರಿಂದ ಈ ಬಾರಿ ಎಕರೆಗೆ 12 ಕ್ವಿಂಟಾಲ್‌ ಹೆಚ್ಚುವರಿ ಮೆಕ್ಕೆಜೋಳ ಬೆಳೆದಿದ್ದೇನೆ’ ಎಂದು ಚೊಕ್ಕನಹಳ್ಳಿ ರೈತ ವೆಂಕಟಪ್ಪ ತನ್ನ ಅನುಭವ ಹಂಚಿಕೊಂಡರು.

‘ನೀರಿನ ಅಭಾವದಿಂದ ಏಳು ಎಕರೆ ಜಮೀನಿನಲ್ಲಿ ದಾಕ್ಷಿಯನ್ನು ಮಾತ್ರ ಬೆಳೆಯುತ್ತಿದ್ದೆ. ಕೃಷಿ ಹೊಂಡ ನಿರ್ಮಾಣದ ನಂತರ ತೊಂಡೆಕಾಯಿ, ಪಪ್ಪಾಯಿ, ಸೇವಂತಿಗೆ ಹೂವನ್ನು ಬೆಳೆಯಲು ಸಾಧ್ಯವಾಗಿದೆ’ ಎಂಬುದು ಬ್ಯಾತ ಗ್ರಾಮದ ರೈತ ಬಸವರಾಜು ಮಾತು.

ಹೆಸರಘಟ್ಟ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಅರುಣಾ, ‘ಈ ಯೋಜನೆಯನ್ನು ರೈತರಿಗೆ ತಲುಪಿಸುವುದು ಸವಾಲಿನ ಕೆಲಸವಾಗಿತ್ತು. ಸಾಕಷ್ಟು ರೈತರಿಗೆ ಇದರ ಬಗ್ಗೆ ಅರಿವು ಇರಲಿಲ್ಲ. ನಾಲ್ಕು ಅಂಗೈ ಜಾಗದಲ್ಲಿ ಇವೆಲ್ಲವನ್ನು ಮಾಡ್ತಾ ಕೂತ್ರೆ ಬೆಳೆ ಬೆಳೆದ್ಹಂಗೆ ಅಂತ ಮೂಗು ಮುರಿಯುತ್ತಿದ್ದರು’ ಎಂದು ವಿವರಿಸಿದರು.

‘ಕೃಷಿ ಹೊಂಡದಿಂದ ಆಗುವ ಲಾಭ ಮತ್ತು ಸರ್ಕಾರ ನೀಡುವ ಅನುದಾನದ ಬಗ್ಗೆ ಹೇಳಿದ ನಂತರ ಕೃಷಿ ಹೊಂಡ ನಿರ್ಮಿಸಲು ರೈತರು ಮುಂದೆ ಬಂದರು. ಹೆಸರಘಟ್ಟ ಹೋಬಳಿಯಲ್ಲಿ ಈಗಾಗಲೇ 93 ಕೃಷಿ ಹೊಂಡಗಳಿವೆ’ ಎಂದರು.

ಸಹಾಯಕ ಕೃಷಿ ನಿರ್ದೇಶಕರಾದ ವಾಣಿ, ‘ಸುಮಾರು ಒಂದು ಕೋಟಿ ಕೃಷಿ ಹೊಂಡಗಳಿಗೆ ಸರ್ಕಾರ ಅನುದಾನ ನೀಡಿದೆ. ರೈತರಿಗೆ ಕೃಷಿ ಹೊಂಡದ ಕುರಿತು ವಿವರಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಈ ಸಾರಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿರುವುದರಿಂದ ರಾಗಿ, ಮೆಕ್ಕೆಜೋಳ, ತರಕಾರಿ ಬೆಳೆಗಳಲ್ಲಿ ಹೆಚ್ಚಿನ ಇಳುವರಿ ಬರುವ ಸಾಧ್ಯತೆ ಇದೆ’ ಎಂದು ಹೇಳಿದರು.

ಒಮ್ಮೆಗೆ ಎರಡು ಟಾರ್ಪಲ್‌ ನೀಡಿ: ‘ಕೃಷಿ ಹೊಂಡಗಳ ಟಾರ್ಪಲ್ ತುಂಬಾ ತೆಳುವಾಗಿದೆ. ಟಾರ್ಪಲ್ ಹರಿದು ಹೋದರೆ ಮತ್ತೊಂದು ಕೊಡುವುದಕ್ಕೆ ಸಾಕಷ್ಟು ದಿನ ಆಗುತ್ತದೆ ಬೇಕಾಗುತ್ತದೆ. ಹಾಗಾಗಿ ಒಮ್ಮೆಗೆ ಎರಡು ಟಾರ್ಪಲ್ ನೀಡಬೇಕು’ ಎಂದು ಹೆಸರಘಟ್ಟ ರೈತ ರಾಜಣ್ಣ ಮನವಿ ಮಾಡಿದರು.

**

ಹೋಬಳಿಯಲ್ಲಿ ನಿರ್ಮಾಣವಾಗಿರುವ ಕೃಷಿ ಹೊಂಡಗಳು

ಇಸವಿ         ಕೃಷಿ ಹೊಂಡಗಳು
2014-15,     11
2015–16,     44
2016–17,     33
2017–18,     05 (ಆಗಸ್ಟ್ ವರೆಗೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT