ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಲುವಿನ ಮುನ್ನುಡಿ ಬರೆದ ಸಿಂಧು

ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌–ಚಿರಾಗ್‌ಗೆ ಗೆಲುವು
Last Updated 26 ಅಕ್ಟೋಬರ್ 2017, 19:57 IST
ಅಕ್ಷರ ಗಾತ್ರ

ಪ್ಯಾರಿಸ್‌: ಭಾರತದ ಪಿ.ವಿ.ಸಿಂಧು ಮತ್ತು ಕಿದಂಬಿ ಶ್ರೀಕಾಂತ್, ಫ್ರೆಂಚ್‌ ಓಪನ್‌ ಸೂಪರ್‌ ಸರಣಿ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಗೆಲುವಿನ ಆರಂಭ ಕಂಡಿದ್ದಾರೆ.

ಗುರುವಾರ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಆರಂಭಿಕ ಸುತ್ತಿನ ಹೋರಾಟದಲ್ಲಿ ಸಿಂಧು 21–19, 21–18ರ ನೇರ ಗೇಮ್‌ಗಳಿಂದ ಸ್ಪೇನ್‌ನ ಬಿಯಾಟ್ರಿಜ್‌ ಕೊರಾಲೆಸ್‌ ಅವರನ್ನು ಪರಾಭವಗೊಳಿಸಿದರು.

ಮುಂದಿನ ಸುತ್ತಿನಲ್ಲಿ ಸಿಂಧು, ಜಪಾನ್‌ನ ಸಯಾಕ ಟಕಹಶಿ ವಿರುದ್ಧ ಆಡುವರು.

ಈ ವರ್ಷ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿಯ ಸಾಧನೆ ಮಾಡಿದ್ದ ಸಿಂಧು ಮೊದಲ ಗೇಮ್‌ನಲ್ಲಿ ಉತ್ತಮ ಆರಂಭ ಕಂಡರು. ಆಕರ್ಷಕ ಸರ್ವ್‌ ಮತ್ತು ಚುರುಕಿನ ಡ್ರಾಪ್‌ಗಳ ಮೂಲಕ ಪಾಯಿಂಟ್ಸ್‌ ಹೆಕ್ಕಿ ಶೀಘ್ರವೇ ಮುನ್ನಡೆ ಗಳಿಸಿದರು.

ಇದರಿಂದ ಬಿಯಾಟ್ರಿಜ್‌ ಎದೆಗುಂದ ಲಿಲ್ಲ. ಭಾರತದ ಆಟಗಾರ್ತಿಯ ತಂತ್ರಗಳಿಗೆ ಪ್ರತಿ ತಂತ್ರ ಹೆಣೆದ ಅವರು ಪ್ರಬಲ ಪೈಪೋಟಿ ನೀಡಿ ಆಟದ ರೋಚಕತೆ ಹೆಚ್ಚುವಂತೆ ಮಾಡಿದರು.

ಹೀಗಿದ್ದರೂ ಸಿಂಧು ಛಲ ಬಿಡಲಿಲ್ಲ. ಬೇಸ್‌ಲೈನ್‌ ಮತ್ತು ದೀರ್ಘ ರ‍್ಯಾಲಿಗಳಿಗೆ ಒತ್ತು ನೀಡಿದ ಅವರು ಈ ಮೂಲಕ ಎದುರಾಳಿಯನ್ನು ಕಂಗೆಡಿಸಿದರು. ಇನ್ನೊಂದೆಡೆ ಬಿಯಾಟ್ರಿಜ್‌ ಕೂಡ ದಿಟ್ಟ ಹೋರಾಟ ಮುಂದುವರಿಸಿದರು. ಹೀಗಾಗಿ ಗೇಮ್‌ನಲ್ಲಿ 19–19ರ ಸಮಬಲ ಕಂಡುಬಂತು.

ಈ ಹಂತದಲ್ಲಿ ಒತ್ತಡವನ್ನು ಮೀರಿ ನಿಂತು ಆಡಿದ ಸಿಂಧು ಲೀಲಾಜಾಲವಾಗಿ ಎರಡು ಪಾಯಿಂಟ್ಸ್ ಸಂಗ್ರಹಿಸಿ ಗೆಲುವಿನ ತೋರಣ ಕಟ್ಟಿದರು.

ಎರಡನೇ ಗೇಮ್‌ನಲ್ಲಿ ಬಿಯಾಟ್ರಿಜ್‌ ಮಿಂಚು ಹರಿಸಿದರು. ಆರಂಭದಿಂದಲೇ ಗರ್ಜಿಸಿದ ಅವರು ಚಾಕಚಕ್ಯತೆಯಿಂದ ಪಾಯಿಂಟ್ಸ್‌ ಸಂಗ್ರಹಿಸಿ ತಿರುಗೇಟು ನೀಡುವ ಮುನ್ಸೂಚನೆ ನೀಡಿದ್ದರು.

ಆದರೆ ಸಿಂಧು ಇದಕ್ಕೆ ಅವಕಾಶ ನೀಡಲಿಲ್ಲ. ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಎರಡನೇ ಸ್ಥಾನ ಹೊಂದಿರುವ ಅವರು ಕೆಚ್ಚೆದೆಯಿಂದ ಹೋರಾಡಿದರು.

ಎದುರಾಳಿ ಆಟಗಾರ್ತಿ ನೆಟ್‌ನಿಂದ ಸಾಕಷ್ಟು ದೂರ ನಿಂತು ಆಡುತ್ತಿದ್ದುದನ್ನು ಗಮನಿಸಿದ ಸಿಂಧು, ಷಟಲ್‌ ಅನ್ನು ನೆಟ್‌ನ ಸಮೀಪದಲ್ಲಿ ಡ್ರಾಪ್‌ ಮಾಡುವ ತಂತ್ರ ಅನುಸರಿಸಿದರು. ಇದರೊಂದಿಗೆ ಲೀಲಾಜಾಲವಾಗಿ ಪಾಯಿಂಟ್ಸ್‌ ಬುಟ್ಟಿಗೆ ಹಾಕಿಕೊಂಡ ಅವರು ಮುನ್ನಡೆ ಗಳಿಸಿ ಎದುರಾಳಿಯನ್ನು ಒತ್ತಡಕ್ಕೆ ಸಿಲುಕಿಸುವ ಪ್ರಯತ್ನ ಮಾಡಿದರು.

ಹೀಗಿದ್ದರೂ ಬಿಯಾಟ್ರಿಜ್‌ ವಿಶ್ವಾಸ ಕಳೆದುಕೊಳ್ಳಲಿಲ್ಲ. ಬಲಿಷ್ಠ ಬ್ಯಾಕ್‌ ಹ್ಯಾಂಡ್‌ ಹೊಡೆತಗಳ ಮೂಲಕ  ಮೋಡಿ ಮಾಡಿದ ಅವರು 18–18ರಲ್ಲಿ ಸಮಬಲ ಸಾಧಿಸಿದರು. ಹೀಗಾಗಿ ಅಭಿಮಾನಿಗಳ ಎದೆಬಡಿತ ಜೋರಾಗಿತ್ತು.

ಈ ಹಂತದಲ್ಲಿ ಮತ್ತೆ ಸಿಂಧು ಪ್ರಾಬಲ್ಯ ಮೆರೆದರು. ಕ್ರಾಸ್‌ಕೋರ್ಟ್‌ ಹೊಡೆತಗಳ ಮೂಲಕ ಅಂಗಳದ ಮೂಲೆ ಮೂಲೆಗೂ ಷಟಲ್‌ ಅಟ್ಟಿ ಎದುರಾಳಿಯನ್ನು ಹೈರಾಣಾಗಿಸಿದರು. ಆ ನಂತರ ಬಿಯಾಟ್ರಿಜ್‌ ಮಂಕಾದರು. ಎದುರಾಳಿಗೆ ತಕ್ಕ ಉತ್ತರ ನೀಡಲು ವಿಫಲವಾದ ಅವರು ಸೋಲಿಗೆ ಶರಣಾದರು.

ಶ್ರೀಕಾಂತ್‌ಗೆ ಜಯ: ಶ್ರೀಕಾಂತ್‌ ಮೊದಲ ಸುತ್ತಿನಲ್ಲಿ ಸುಲಭ ಗೆಲುವು ತಮ್ಮದಾಗಿಸಿಕೊಂಡರು.

ಮೊದಲ ಗೇಮ್‌ನಲ್ಲಿ ಶ್ರೀಕಾಂತ್‌ 3–0ರಿಂದ ಮುನ್ನಡೆ ಹೊಂದಿದ್ದರು. ಈ ವೇಳೆ ಅವರ ಎದುರಾಳಿ ಜರ್ಮನಿಯ ಫ್ಯಾಬಿಯಾನ್‌ ರೊತ್‌ ಗಾಯಗೊಂಡು ಅಂಗಳ ತೊರೆದರು. ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಎಂಟನೇ ಸ್ಥಾನ ಹೊಂದಿ ರುವ ಶ್ರೀಕಾಂತ್‌ ಮುಂದಿನ ಸುತ್ತಿನಲ್ಲಿ ಹಾಂಕಾಂಗ್‌ನ ವಾಂಗ್‌ ವಿಂಗ್‌ ಕಿ ವಿನ್ಸೆಂಟ್‌ ಸವಾಲಿಗೆ ಎದೆಯೊಡ್ಡಲಿದ್ದಾರೆ.

ಡೆನ್ಮಾರ್ಕ್‌ ಓಪನ್‌ ಸೂಪರ್‌ ಸರಣಿ ಟೂರ್ನಿಯ ಪಂದ್ಯದಲ್ಲಿ ಶ್ರೀಕಾಂತ್‌, ವಿನ್ಸೆಂಟ್‌ ವಿರುದ್ಧ ಸುಲಭ ಗೆಲುವು ದಾಖಲಿಸಿದ್ದರು.

ಸಾತ್ವಿಕ್‌ ಜೋಡಿಯ ಮಿಂಚು:
ಪುರುಷರ ಡಬಲ್ಸ್‌ ವಿಭಾಗದಲ್ಲಿ ಭಾರತದ ಸವಾಲು ಎತ್ತಿಹಿಡಿದಿರುವ ಸಾತ್ವಿಕ್‌ ಸಾಯಿರಾಜ್‌ ರಂಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ ಶುಭಾರಂಭ ಮಾಡಿದರು.

ಮೊದಲ ಸುತ್ತಿನ ಹಣಾಹಣಿಯಲ್ಲಿ ಸಾತ್ವಿಕ್‌ ಮತ್ತು ಚಿರಾಗ್‌ 21–12, 21–14ರ ನೇರ ಗೇಮ್‌ಗಳಿಂದ ಫ್ರಾನ್ಸ್‌ನ ಬಾಸ್ಟಿಯನ್‌ ಕೆರ್ಸೌಡಿ ಮತ್ತು ಜೂಲಿಯನ್‌ ಮಾಯಿಯೊ ಅವರನ್ನು ಸೋಲಿಸಿದರು.

30 ನಿಮಿಷಗಳ ಹೋರಾಟದ ಎರಡೂ ಗೇಮ್‌ಗಳಲ್ಲೂ ಭಾರತದ ಆಟಗಾರರು ಪ್ರಾಬಲ್ಯ ಮೆರೆದರು.

ಮುಂದಿನ ಸುತ್ತಿನಲ್ಲಿ ಸಾತ್ವಿಕ್‌ ಮತ್ತು ಚಿರಾಗ್‌, ಡೆನ್ಮಾರ್ಕ್‌ನ ಆರನೇ ಶ್ರೇಯಾಂಕದ ಜೋಡಿ ಮ್ಯಾಡ್ಸ್‌ ಕಾನ್‌ರಡ್‌ ಪೀಟರ್‌ಸನ್‌ ಮತ್ತು ಮ್ಯಾಡ್ಸ್‌ ಪಿಯೆಲರ್‌ ಕೋಲ್ಡಿಂಗ್‌ ವಿರುದ್ಧ ಆಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT