ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 1.50 ಕೋಟಿಗೆ ಎ.ಸಿ ಹುದ್ದೆ..!

Last Updated 27 ಅಕ್ಟೋಬರ್ 2017, 4:26 IST
ಅಕ್ಷರ ಗಾತ್ರ

ಬೆಂಗಳೂರು: ‘ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) 2011ನೇ ಸಾಲಿನ ಗೆಜೆಟೆಡ್‌ ಪ್ರೊಬೆಷನರಿ ‘ಎ’ ಮತ್ತು ‘ಬಿ’ ವೃಂದದ ನೇಮಕಾತಿಯಲ್ಲಿ ಅಸಿಸ್ಟೆಂಟ್‌ ಕಮಿಷನರ್‌ ಹುದ್ದೆ ₹ 1.50 ಕೋಟಿ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳ ಹುದ್ದೆ ₹ 30 ಲಕ್ಷಕ್ಕೆ ಬಿಕರಿಯಾಗಿವೆ’ ಎಂದು ಹಿರಿಯ ವಕೀಲ ಎಂ.ಬಿ.ನರಗುಂದ ಹೈಕೋರ್ಟ್‌ಗೆ ತಿಳಿಸಿದರು.

‘2011ರ ಸಾಲಿನ ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗೆ ಕರ್ನಾಟಕ ಲೋಕಸೇವಾ ಆಯೋಗದ ಮೂಲಕ (ಕೆಪಿಎಸ್‌ಸಿ) ಆಯ್ಕೆಯಾದ ಎಲ್ಲ 362 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಬೇಕು’ ಎಂಬ ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಆದೇಶ ಪ್ರಶ್ನಿಸಿ ಅನುತ್ತೀರ್ಣ ಅಭ್ಯರ್ಥಿಗಳು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ನರಗುಂದ ಅವರು, ಈ ಅಂಶವನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್.ಜಿ.ರಮೇಶ್‌ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠಕ್ಕೆ ವಿವರಿಸಿದರು.

‘ಈ ನೇಮಕಾತಿ ವೇಳೆ ಅಧಿಕಾರದಲ್ಲಿದ್ದ ಕೆಪಿಎಸ್‌ಸಿ ಅಧ್ಯಕ್ಷರು ಮತ್ತು ಸದಸ್ಯರು ನಡೆಸಿರುವ ಹಗರಣವನ್ನು ಸಿಐಡಿ ತನಿಖೆ ನಡೆಸಿ ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಸಿದೆ. ಈ ವರದಿಯಲ್ಲಿ ಭ್ರಷ್ಟಾಚಾರದ ಎಲ್ಲ ಸಂಗತಿಗಳೂ ದಾಖಲಾಗಿವೆ’ ಎಂದು ಕೆಪಿಎಸ್‌ಸಿ ವೃತ್ತಾಂತವನ್ನು ಸವಿವರವಾಗಿ ತೆರೆದಿಟ್ಟರು.

ಇದಕ್ಕೂ ಮೊದಲು ಕೆಪಿಎಸ್‌ಸಿ ಪರ ಹಿರಿಯ ವಕೀಲ ಪಿ.ಎಸ್.ರಾಜಗೋಪಾಲ್‌ ಅವರು, ‘ಆಡಳಿತ ಸೇವೆಗೆ ಸಂಬಂಧಿಸಿದ ವ್ಯಾಜ್ಯಗಳನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಅಡಿಯಲ್ಲಿ ಪರಿಗಣಿಸಲು ಬರುವುದಿಲ್ಲ’ ಎಂಬ ಆಕ್ಷೇಪ ವ್ಯಕ್ತಪಡಿಸಿದರು.

ಇದನ್ನು ಪರಿಗಣಿಸಿದ ಎಚ್‌.ಜಿ.ರಮೇಶ್‌ ಅರ್ಜಿದಾರ ವಕೀಲರಿಗೆ, ‘ಪಿಐಎಲ್‌ ಆಗಿ ಈ ಅರ್ಜಿ ವಿಚಾರಣೆ ನಡೆಸಲು ಬರುತ್ತದೆಯೇ ಇಲ್ಲವೇ ಎಂಬ ಅಂಶದ ಬಗ್ಗೆ ಮಾತ್ರವೇ ನಿಮ್ಮ ವಾದ ಕೇಂದ್ರೀಕರಿಸಿ’ ಎಂದು ಹೇಳಿದರು.

ಇದಕ್ಕೆ ಅನುತ್ತೀರ್ಣ ಅಭ್ಯರ್ಥಿಗಳ ವಕೀಲ ರಹಮತ್ ಉಲ್ಲಾ ಕೊತ್ವಾಲ್‌ ಮತ್ತು ಎಂ.ಬಿ.ನರಗುಂದ ವಾದ ಮಂಡಿಸಿದರು.

ವಿಚಾರಣೆಯನ್ನು ಗುರುವಾರಕ್ಕೆ(ಅ.27) ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT