ಗುರುವಾರ , ಸೆಪ್ಟೆಂಬರ್ 19, 2019
22 °C
ಫೈನಲ್‌ಗೆ ಲಗ್ಗೆ ಇಟ್ಟ ಪಟ್ನಾ ಪೈರೇಟ್ಸ್‌; ಪ್ರಶಸ್ತಿಗಾಗಿ ಗುಜರಾತ್‌ ಫಾರ್ಚೂನ್‌ಜೈಂಟ್ಸ್‌ ವಿರುದ್ಧ ಪೈಪೋಟಿ

ರೈಡಿಂಗ್‌ನಲ್ಲಿ ಮೋಡಿ ಮಾಡಿದ ಪ್ರದೀಪ್‌ ‌

Published:
Updated:
ರೈಡಿಂಗ್‌ನಲ್ಲಿ ಮೋಡಿ ಮಾಡಿದ ಪ್ರದೀಪ್‌ ‌

ಚೆನ್ನೈ: ಪಾದರಸದಂತಹ ಚಲನೆಯ ಮೂಲಕ ಎದುರಾಳಿ ರಕ್ಷಣಾ ಕೋಟೆಯನ್ನು ಧ್ವಂಸ ಮಾಡಿದ ಪ್ರದೀಪ್‌ ನರ್ವಾಲ್‌ ಗುರುವಾರ ಜವಾಹರಲಾಲ್‌ ನೆಹರು ಕ್ರೀಡಾಂಗಣದಲ್ಲಿ ಸೇರಿದ್ದ ಕಬಡ್ಡಿ ಪ್ರಿಯರಿಗೆ ಮನರಂಜನೆಯ ರಸದೌತಣ ಉಣಬಡಿಸಿದರು.

ಅವರ ಅಮೋಘ ಆಟದ ಬಲದಿಂದ ಪಟ್ನಾ ಪೈರೇಟ್ಸ್‌ ತಂಡ ಪ್ರೊ ಕಬಡ್ಡಿ ಲೀಗ್‌ ಐದನೇ ಆವೃತ್ತಿಯಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದೆ.

ಎರಡನೇ ಕ್ವಾಲಿಫೈಯರ್‌ ಹಣಾಹಣಿಯಲ್ಲಿ ಪ್ರದೀಪ್‌ ನರ್ವಾಲ್‌ ಬಳಗ 47–44 ಪಾಯಿಂಟ್ಸ್‌ನಿಂದ ಬೆಂಗಾಲ್‌ ವಾರಿಯರ್ಸ್‌ ಸವಾಲು ಮೀರಿ ನಿಂತಿತು. ಪಟ್ನಾ ತಂಡ ಲೀಗ್‌ನಲ್ಲಿ ಸತತ ಮೂರನೇ ಬಾರಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟ ಸಾಧನೆ ಮಾಡಿತು. ಈ ತಂಡ ಹಿಂದಿನ ಎರಡು ಆವೃತ್ತಿಗಳಲ್ಲಿ ಪ್ರಶಸ್ತಿ ಗೆದ್ದಿದೆ.

ಶನಿವಾರ ನಡೆಯುವ ಫೈನಲ್‌ ಹೋರಾಟದಲ್ಲಿ ಪಟ್ನಾ ತಂಡ ಗುಜರಾತ್‌ ಫಾರ್ಚೂನ್‌ಜೈಂಟ್ಸ್‌ ವಿರುದ್ಧ ಸೆಣಸಲಿದೆ.

ಹಿಂದಿನ ಪಂದ್ಯದಲ್ಲಿ ಪುಣೇರಿ ಪಲ್ಟನ್‌ ತಂಡವನ್ನು ಮಣಿಸಿ ವಿಶ್ವಾಸದಿಂದ ಬೀಗುತ್ತಿದ್ದ ಪಟ್ನಾ ತಂಡ ಪ್ರದೀಪ್‌ ಮತ್ತು ಮೋನು ಗೋಯತ್‌ ಅವರ ಅಮೋಘ ರೈಡಿಂಗ್‌ ನೆರವಿನಿಂದ ಎರಡನೇ ನಿಮಿಷದಲ್ಲೇ 3–1ರ ಮುನ್ನಡೆ ಗಳಿಸಿತು.

ಮೂರನೇ ನಿಮಿಷದಲ್ಲಿ ‘ಸೂಪರ್‌ ರೈಡ್‌’ ಮೂಲಕ ಪ್ರದೀಪ್‌ ಅಭಿಮಾನಿಗಳನ್ನು ರಂಜಿಸಿದರು.  ಹೀಗಾಗಿ ಮೊದಲ ಬಾರಿಗೆ ಬೆಂಗಾಲ್‌ ತಂಡದ ಆವರಣ ಖಾಲಿಯಾಯಿತು.ಪಟ್ನಾ ತಂಡದ ಮುನ್ನಡೆ 9–1ಕ್ಕೆ ಹೆಚ್ಚಿತು.

ಏಳನೇ ನಿಮಿಷದಲ್ಲಿ ಮೊದಲ ಬಾರಿಗೆ ಪ್ರದೀಪ್‌ ಅವರನ್ನು ಕಟ್ಟಿಹಾಕಿದ ಬೆಂಗಾಲ್‌ ತಂಡ ಹಿನ್ನಡೆಯನ್ನು 4–10ಕ್ಕೆ ತಗ್ಗಿಸಿಕೊಂಡಿತು.

ಆ ನಂತರ ರಕ್ಷಣಾ ವಿಭಾಗದಲ್ಲೂ ಶ್ರೇಷ್ಠ ಆಟ ಆಡಿದ ಪಟ್ನಾ ತಂಡ 13ನೇ ನಿಮಿಷದ ವೇಳೆಗೆ 15–7ರ ಮುನ್ನಡೆ ಗಳಿಸಿ ಪಂದ್ಯದ ಮೇಲಿನ ಹಿಡಿತ ಬಿಗಿ ಮಾಡಿಕೊಂಡಿತು.

18ನೇ ನಿಮಿಷದಲ್ಲಿ ಮಿಂಚಿದ ಪ್ರದೀಪ್‌ ಮುನ್ನಡೆಯನ್ನು 19–9ಕ್ಕೆ ಹೆಚ್ಚಿಸಿದರು. ಆ ನಂತರವೂ ಪ್ರದೀಪ್‌ ಆಟ ಕಳೆಗಟ್ಟಿತು. ಎದುರಾಳಿ ತಂಡದ ದುರ್ಬಲ ರಕ್ಷಣಾ ವಿಭಾಗದ ಪೂರ್ಣ ಲಾಭ ಎತ್ತಿಕೊಂಡ ಅವರು ಯಶಸ್ವಿ ರೈಡ್‌ಗಳ ಮೂಲಕ ಕ್ರೀಡಾಂಗಣದಲ್ಲಿ ಮೆಕ್ಸಿಕನ್‌ ಅಲೆ ಏಳುವಂತೆ ಮಾಡಿದರು.

ಹೀಗಾಗಿ ಪಟ್ನಾ ತಂಡ 21–12ರ ಮುನ್ನಡೆಯೊಂದಿಗೆ ವಿರಾಮಕ್ಕೆ ಹೋಯಿತು. ದ್ವಿತಿಯಾರ್ಧದಲ್ಲಿ ಚೇತರಿಕೆಯ ಆಟ ಆಡಿದ ಬೆಂಗಾಲ್‌ ತಂಡ ಹಿನ್ನಡೆಯನ್ನು 15–22ಕ್ಕೆ ತಗ್ಗಿಸಿಕೊಂಡಿತು. ಹೀಗಾಗಿ ಆಟದ ರೋಚಕತೆ ಹೆಚ್ಚಿತು. 24ನೇ ನಿಮಿಷದಲ್ಲಿ ದಾಳಿಗಿಳಿದ ಮೋನು ಗೋಯತ್ ಎರಡು ಪಾಯಿಂಟ್ಸ್‌ ಹೆಕ್ಕಿ ಪಟ್ನಾ ತಂಡದ ಮುನ್ನಡೆಯನ್ನು 24–16ಕ್ಕೆ ಹೆಚ್ಚಿಸಿದರು.

ಇಷ್ಟಾದರೂ ಬೆಂಗಾಲ್‌ ಮಾತ್ರ ಛಲ ಬಿಡಲಿಲ್ಲ. ಈ ತಂಡ 29ನೇ ನಿಮಿಷದ ವೇಳೆಗೆ  ಹಿನ್ನಡೆಯನ್ನು 21–29ಕ್ಕೆ ತಗ್ಗಿಸಿಕೊಂಡಿತು. 35ನೇ ನಿಮಿಷದ ಅಂತ್ಯಕ್ಕೆ 40–26ರಿಂದ ಮುಂದಿದ್ದ ಪೈರೇಟ್ಸ್‌ ಸುಲಭ ಗೆಲುವಿನ ಕನಸು ಕಂಡಿತ್ತು. ಆದರೆ ನಂತರ ಬೆಂಗಾಲ್‌ ತಂಡ ದಿಟ್ಟ ಹೋರಾಟ ನಡೆಸಿತು. ಈ ತಂಡದ ಮಣಿಂದರ್‌ ಸಿಂಗ್‌ ‘ಸೂಪರ್‌ 10’ ಸಾಧನೆ ಮಾಡಿ ಸೋಲಿನ ಅಂತರ ತಗ್ಗಿಸಿದರು.

****

23 ರೈಡಿಂಗ್‌ ಪಾಯಿಂಟ್ಸ್‌ ಕಲೆಹಾಕಿದ ಪ್ರದೀಪ್‌ ನರ್ವಾಲ್‌

47–44ರಿಂದ ಬೆಂಗಾಲ್‌ ಸವಾಲು ಮೀರಿದ ಪೈರೇಟ್ಸ್‌

ವಾರಿಯರ್ಸ್‌ ತಂಡದ ಮಣಿಂದರ್‌ ಸಿಂಗ್‌ 17 ಪಾಯಿಂಟ್ಸ್‌ ಹೆಕ್ಕಿದರು

Post Comments (+)