ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರಕ್ಕೆ ಬಂದ ಗಜಗಾತ್ರದ ಕಾಂಕ್ರೇಜ್‌ ಎತ್ತುಗಳು

ಕುಡುಪು ಇಸ್ಕಾನ್‌ ಮಂದಿರದಲ್ಲಿ ನವೆಂಬರ್‌ 8ರವರೆಗೆ ಬಿಡಾರ
Last Updated 26 ಅಕ್ಟೋಬರ್ 2017, 20:22 IST
ಅಕ್ಷರ ಗಾತ್ರ

ಮಂಗಳೂರು: ಉದ್ದನೆಯ ಕೊಂಬು, ಊಹೆಗೂ ನಿಲುಕದ ತೂಕ, ನೋಡಿದರೆ, ಆನೆಯ ಚಿತ್ರಣ ಕಣ್ಣ ಮುಂದೆ ಕಟ್ಟುತ್ತದೆ. ಹೌದು, ನಗರಕ್ಕೆ ಬಂದಿರುವ ಅಸಾಮಾನ್ಯ ಎತ್ತುಗಳು ಇದೀಗ ಜನರನ್ನು ಆಕರ್ಷಿಸುತ್ತಿವೆ.

ಗುಜರಾತ್‌, ರಾಜಸ್ಥಾನದಲ್ಲಿ ಕಾಣ ಸಿಗುವ ಗಜ ಗಾತ್ರದ ಎತ್ತುಗಳು, ಸದ್ಯ ಕುಡುಪು ಬಳಿಯಿರುವ ಇಸ್ಕಾನ್‌ ಮಂದಿರದಲ್ಲಿ ಬೀಡು ಬಿಟ್ಟಿವೆ. ಈ ಬೃಹತ್‌ ಎತ್ತುಗಳನ್ನು ನೋಡಲು ಸ್ಥಳೀಯರು ಮುಗಿ ಬೀಳುತ್ತಿದ್ದಾರೆ.

ಇಸ್ಕಾನ್‌ನವರು ತಮ್ಮ ಪಾದಯಾತ್ರೆ ಕಾರ್ಯಕ್ರಮದಡಿ, ಕಾಂಕ್ರೇಜ್‌ ತಳಿಯ ಭಾರೀ ಗಾತ್ರದ ಎತ್ತುಗಳನ್ನು ಕರೆತಂದಿದ್ದು, ಪ್ರತಿಯೊಂದು 800ಕ್ಕೂ ಹೆಚ್ಚು ಕೆ.ಜಿ. ಭಾರವಿದೆ. ದೊಡ್ಡ ಗಾತ್ರ ಹಾಗೂ ಅಷ್ಟೇ ದಷ್ಟ- ಪುಷ್ಟವಾದ ದೇಹ ಹೊಂದಿರುವುದರಿಂದ ಜನಾಕರ್ಷಣೆಯ ಕೇಂದ್ರವಾಗಿದೆ. ನವೆಂಬರ್‌ 8ರ ವರೆಗೆ ಅವು ಮಂದಿರದಲ್ಲಿ ಸಾರ್ವಜನಿಕರಿಗೆ ದರ್ಶನಕ್ಕೆ ಲಭ್ಯವಾಗಿವೆ.

ಮುಂಬೈನ ಇಸ್ಕಾನ್‌ ಸಂಸ್ಥೆಯು ತನ್ನ ಧರ್ಮ ಪ್ರಚಾರ, ಹರಿನಾಮದ ಮಹತ್ವ ಸಾರಲೆಂದು ಲೋಕನಾಥ್‌ ಮಹಾರಾಜ್‌ ನೇತೃತ್ವದಲ್ಲಿ ರಾಷ್ಟ್ರವ್ಯಾಪಿ ಪಾದಯಾತ್ರೆಯನ್ನು ಹಲವು ವರ್ಷಗಳಿಂದ ಕೈಗೊಂಡಿದೆ.

ಈ ವೇಳೆ ಮಹಾರಾಜ್‌ ಅವರೊಡನೆ ಎತ್ತುಗಳು ಕೂಡ ದೇಶದೆಲ್ಲೆಡೆ ಕಾಲ್ನಡಿಗೆಯಲ್ಲಿ ಸುತ್ತುತ್ತವೆ. ವಿಶೇಷವೆಂದರೆ, ಗಜಗಾತ್ರದ ಎತ್ತುಗಳ ಈ ದೇಶ ಪರ್ಯಟನೆ, ಒಂದು ಸ್ಥಳದಿಂದ ಪ್ರಾರಂಭಗೊಂಡು ಮತ್ತೆ ಅದೇ ಸ್ಥಳಕ್ಕೆ ತಲುಪುವುದಕ್ಕೆ ಬರೋಬ್ಬರಿ 10 ವರ್ಷ ಬೇಕಾಗುತ್ತದೆ. ಅದರಂತೆ ಈ ರೀತಿಯ ಮತ್ತೂಂದು ದೇಶ ಪರ್ಯಟನೆ ಗುಜರಾತ್‌ ರಾಜ್ಯದಿಂದ ಪ್ರಾರಂಭಗೊಂಡು, ಕೇರಳ ಮೂಲಕ ಇದೀಗ ಮಂಗಳೂರು ನಗರಕ್ಕೆ ಬಂದು ನಿಂತಿದೆ.

ಸಾಮಾನ್ಯವಾಗಿ ಈ ಪಾದಯಾತ್ರೆಯ ಎತ್ತುಗಳು ಒಂದು ಊರಿನಲ್ಲಿ ಕನಿಷ್ಠ ಒಂದೇ ದಿನವಿದ್ದು, ಮುಂದೆ ಸಾಗುತ್ತವೆ. ಆದರೆ ಸದ್ಯ ಕಾರ್ತಿಕ ಮಾಸವಾದ್ದರಿಂದ ಲೋಕನಾಥ್‌ ಮಹಾರಾಜರು, ಮಥುರಾಕ್ಕೆ ತೆರಳಿದ್ದಾರೆ. ಹೀಗಾಗಿ ಕಳೆದ ಕೆಲವು ದಿನಗಳಿಂದ ಎತ್ತುಗಳು ಮಂಗಳೂರಿನ ಬಳಿಯ ಕುಡುಪುವಿನ ಇಸ್ಕಾನ್‌ ಮಂದಿರದ ಆವರಣದಲ್ಲೇ ಬೀಡುಬಿಟ್ಟಿವೆ.

ಈ ಐದೂ ಎತ್ತುಗಳು ನ. 8ರಿಂದ ಮಂಗಳೂರಿನಿಂದ ಉಡುಪಿಯತ್ತ ಪಾದಯಾತ್ರೆ ಬೆಳೆಸಲಿವೆ. ಉಡುಪಿಯಲ್ಲಿ ಕೇವಲ ಒಂದು ದಿನ ವಿರಮಿಸಿ, ಕುಂದಾಪುರ, ಮೈಸೂರು ಅನಂತರ ಬೆಂಗಳೂರಿಗೆ ತೆರಳಲಿವೆ. ಮುಂದಿನ ದಿನಗಳಲ್ಲಿ ಮಹಾರಾಷ್ಟ್ರದಲ್ಲಿ ಪಾದಯಾತ್ರೆ ನಡೆಸಲಿವೆ. ಕರಾವಳಿಗೆ ಈ ಎತ್ತುಗಳು ಬಂದಿರುವುದು ಇದೇ ಮೊದಲ ಬಾರಿ.

**

ಭಾರಿ ಗಾತ್ರದ ಎತ್ತುಗಳು

ನಗರಕ್ಕೆ ಬಂದಿರುವ ಐದೂ ಎತ್ತುಗಳ ತೂಕ ಅಚ್ಚರಿ ಮೂಡಿಸುತ್ತದೆ.

ನಂದಕಿಶೋರ್‌ ಎನ್ನುವ 8 ವರ್ಷದ ಎತ್ತು ಬರೋಬ್ಬರಿ 900 ಕೆ.ಜಿ. ತೂಕವಿದ್ದು, ನರಸಿಂಹ ಎನ್ನುವ 12 ವರ್ಷದ ಇನ್ನೊಂದು ಎತ್ತು ಕೂಡ 800 ಕೆ.ಜಿ.ಯಿದೆ. ಕಾಲಿಯಾ ಮತ್ತು ಜಯ್‌ಹೆಸರಿನ 7 ವರ್ಷದ ಎರಡು ಎತ್ತುಗಳು ಕೂಡ ಕ್ರಮವಾಗಿ 700 ಕೆ.ಜಿ. ಇವೆ. ಕೃಷ್ಣ ಎನ್ನುವ 4 ವರ್ಷದ ಎತ್ತು ಕೂಡ 500 ಕೆ.ಜಿ. ತೂಕವನ್ನು ಹೊಂದಿದೆ.

ಈ ಎತ್ತುಗಳ ಆರೈಕೆಗೆ ಪ್ರತ್ಯೇಕ ಪರಿಚಾರಕರಿದ್ದು, ದಿನದಲ್ಲಿ ಮಿತವಾಗಿ ಆಹಾರ ನೀಡಲಾಗುತ್ತಿದೆ. ನಿತ್ಯ ಬೆಳಿಗ್ಗೆ 7, 10 ಗಂಟೆ, ಮಧ್ಯಾಹ್ನ 12 ಗಂಟೆಗೆ ಒಂದೊಂದು ಎತ್ತಿಗೂ 6 ಕೆ.ಜಿ. ಹುಲ್ಲು ನೀಡಲಾಗುತ್ತದೆ. ಮಧ್ಯಾಹ್ನ 3 ಗಂಟೆ ಮತ್ತು ರಾತ್ರಿ 7 ಗಂಟೆಗೆ 6 ಕೆ.ಜಿ. ಬೂಸ ಆಹಾರವಾಗಿ ನೀಡಲಾಗುತ್ತಿದೆ.

**

ವಿಶೇಷ ಹಾಗೂ ಅಪರೂಪದ ಎತ್ತುಗಳು ಮಂಗಳೂರಿನಲ್ಲಿ ನ.8ರವರೆಗೆ ಬೀಡುಬಿಟ್ಟಿವೆ. ನಿತ್ಯ ಕನಿಷ್ಠ 10 ಕಿ.ಮೀ. ದೂರವನ್ನು ನಡಿಗೆಯಲ್ಲಿ ಕ್ರಮಿಸುತ್ತವೆ.

–ಸ್ಮಿತಾ ಕೃಷ್ಣದಾಸ್‌, ಕುಡುಪು ಇಸ್ಕಾನ್‌ ಉಪಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT