ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್‌ ಕಡಿತ: ಆತಂಕದಲ್ಲೇ ರಾತ್ರಿ ಕಳೆಯುವ ನಿವಾಸಿಗಳು

Last Updated 27 ಅಕ್ಟೋಬರ್ 2017, 5:19 IST
ಅಕ್ಷರ ಗಾತ್ರ

ಚಿಕ್ಕೋಡಿ: ಎದುರಿಗೆ ತುಂಬಿ ಹರಿಯುವ ಕೃಷ್ಣೆ, ಬೆಳೆದು ನಿಂತಿರುವ ಹುಲ್ಲುಗದ್ದೆಗಳು, ಪಕ್ಕದಲ್ಲೆಲ್ಲ ಕಬ್ಬಿನ ಬೆಳೆ. ನದಿ ತೀರದಲ್ಲಿರುವ ಸುಮಾರು 100ಕ್ಕೂ ಹೆಚ್ಚು ಮನೆಗಳ ನಿವಾಸಿಗಳು ನಿತ್ಯವೂ ರಾತ್ರಿ ಕತ್ತಲ್ಲಲ್ಲಿ ಕಾಲ ಕಳೆಯಬೇಕಾದ ಪರಿಸ್ಥಿತಿ. ಹಾವು, ಚೇಳು ವಿಷಜಂತುಗಳ ಭಯದಲ್ಲೇ ರಾತ್ರಿಗಳನ್ನು ದೂಡುತ್ತಿದ್ದಾರೆ.

ತಾಲ್ಲೂಕಿನ ಕಲ್ಲೋಳ ಗ್ರಾಮದ ಕೃಷ್ಣಾ ನದಿದಡದಲ್ಲಿರುವ ಗಣಪತಿ ಗುಡಿ ಪ್ರದೇಶದಲ್ಲಿರುವ ಸುಮಾರು 100ಕ್ಕೂ ಹೆಚ್ಚು ಮನೆಗಳಿಗೆ ರಾತ್ರಿ ವಿದ್ಯುತ್‌ ಸರಬರಾಜು ಕಡಿತಗೊಳ್ಳುತ್ತದೆ. ನದಿ ತೀರದಲ್ಲಿರುವ ವಿದ್ಯುತ್‌ ಪಂಪ್‌ಸೆಟ್‌ಗಳಿಗೆ ಸದ್ಯ ನಿತ್ಯವೂ ಹಗಲು ಮೂರು ತಾಸು ಮತ್ತು ರಾತ್ರಿ ಮೂರು ತಾಸು ತ್ರಿಫೇಸ್‌ ವಿದ್ಯುತ್‌ ಸರಬರಾಜು ಮಾಡಲಾಗುತ್ತದೆ. ಈ ಅವಧಿಯಲ್ಲಿ ನದಿ ತೀರದಲ್ಲಿರುವ ಮನೆಗಳ ವಿದ್ಯುತ್‌ ಕಡಿತಗೊಳ್ಳುತ್ತದೆ.

ಕೃಷ್ಣಾ ನದಿಯಿಂದ ಪಕ್ಕದ ಅನೇಕ ಗ್ರಾಮಗಳ ರೈತರು ಏತ ನೀರಾವರಿ ಯೋಜನೆಗಳನ್ನು ಅಳವಡಿಸಿ ಕೊಂಡಿದ್ದಾರೆ. ಅಲ್ಲದೇ, ಕಲ್ಲೋಳ ಗ್ರಾಮಸ್ಥರ ಸಾವಿರಾರು ನೀರಾವರಿ ಪಂಪ್‌ಸೆಟ್‌ಗಳು ನದಿ ತೀರದಲ್ಲಿವೆ. ಅವುಗಳಿಗೆ ತ್ರಿ ಫೇಸ್ ವಿದ್ಯುತ್‌ ಸರಬರಾಜು ಮಾಡುವಾಗ ನದಿ ತೀರದಲ್ಲಿರುವ ಮನೆಗಳ ವಿದ್ಯುತ್‌ ಕಡಿತಗೊಳ್ಳುತ್ತದೆ. ರಾತ್ರಿ ವೇಳೆ ವಿದ್ಯುತ್‌ ಕಡಿತಗೊಳ್ಳುವುದರಿಂದ ಅಲ್ಲಿನ ನಿವಾಸಿಗಳು ಚಿಮಣಿ ಎಣ್ಣಿ ಬುಡ್ಡಿ ಅಥವಾ ಕಂದೀಲು ಬೆಳಕಿನಲ್ಲೇ ಕಾಲ ಕಳೆಯಬೇಕಾದ ಅನಿವಾರ್ಯತೆ ಎದುರಾಗಿದೆ.

‘ನದಿ ತೀರದಲ್ಲಿರುವ ತಮ್ಮ ಮನೆಗಳಿಗೆ ವಾರದಲ್ಲಿ ಇಂತಿಷ್ಟು ದಿನ ರಾತ್ರಿ 10ರಿಂದ 2 ಗಂಟೆವರೆಗೆ ಮತ್ತು ರಾತ್ರಿ 2ರಿಂದ ಬೆಳಿಗ್ಗೆ 6 ಗಂಟೆವರೆಗೆ ವಿದ್ಯುತ್‌ ಕಡಿತಗೊಳಿಸಲಾಗುತ್ತಿದೆ. ಈ ಅವಧಿಯಲ್ಲಿ ನದಿ ದಡದಲ್ಲಿರುವ ನೀರಾವರಿ ಪಂಪ್‌ ಸೆಟ್‌ಗಳಿಗೆ ವಿದ್ಯುತ್‌ ಸರಬರಾಜು ಆಗುವುದರಿಂದ ಮನೆಗಳ ವಿದ್ಯುತ್‌ ಕಡಿತಗೊಳಿಸಲಾಗುತ್ತದೆ ಎಂದು ರಾಮಗೌಡ ಪಾಟೀಲ ತಿಳಿಸಿದರು.

‘ರಾತ್ರಿ ಹೊತ್ತಿನಲ್ಲಿ ನಾಲ್ಕೈದು ತಾಸು ವಿದ್ಯುತ್‌ ಕಡಿತಗೊಳಿಸುವುದರಿಂದ ಹಾವು, ಚೇಳು ಮೊದಲಾದ ವಿಷ ಜಂತುಗಳ ಭಯ. ಮಕ್ಕಳ ಅಧ್ಯಯನಕ್ಕೂ ಅಡಚಣೆ ಉಂಟಾಗುತ್ತದೆ. ಅಲ್ಲದೇ, ಕೊಟ್ಟಿಗೆಯಲ್ಲಿ ಕಟ್ಟಿದ ದನ ಕರುಗಳಿಗೆ ಕತ್ತಲೆಯಲ್ಲೇ ಕಳೆಯಬೇಕಾದ ಪರಿಸ್ಥಿತಿ ಇದೆ’ ಎಂದು ಅವರು ಹೇಳಿದರು.

‘ನದಿ ತೀರದ ಮನೆಗಳಿಗೂ ನಿರಂತರ ಜ್ಯೋತಿ ವಿದ್ಯುತ್‌ ಸರಬರಾಜು ಮಾಡಬೇಕು ಎಂದು ಸಾಕಷ್ಟು ಬಾರಿ ಮನವಿ ಮಾಡಿಕೊಂಡರೂ ಪ್ರಯೋಜನವಾಗುತ್ತಿಲ್ಲ. ಕಲ್ಲೋಳ ಗ್ರಾಮದಲ್ಲಿ ನಿರಂತರ ಜ್ಯೋತಿ ವಿದ್ಯುತ್‌ ಸರಬರಾಜು ಯೋಜನೆ ಅನುಷ್ಠಾನಗೊಳಿಸಲಾಗಿದೆ. ಅದನ್ನು ನದಿ ತೀರದ ಮನೆಗಳಿಗೂ ವಿಸ್ತರಿಸುವ ಮೂಲಕ ಇಲ್ಲಿನ ನಿವಾಸಿಗಳ ತೊಂದರೆಯನ್ನು ನಿವಾರಿಸಬೇಕು’ ಎಂದು ಅವರು ಆಗ್ರಹಿಸಿದರು.

‘ನಿರಂತರ ಜ್ಯೋತಿ ವಿದ್ಯುತ್‌ ಸರಬರಾಜು ಯೋಜನೆಯಿಂದ ಹೊರಗುಳಿದಿರುವ ಹೆಸ್ಕಾಂನ ಸದಲಗಾ ಉಪ ವಿಭಾಗ ವ್ಯಾಪ್ತಿಯ ಆಯ್ದ ತೋಟಪಟ್ಟಿಯ ಜನವಸತಿ ಪ್ರದೇಶಗಳಿಗೆ ನಿರಂತರ ಜ್ಯೋತಿ ವಿದ್ಯುತ್‌ ಸರಬರಾಜು ಯೋಜನೆಯನ್ನು ವಿಸ್ತರಿಸಲು ಸುಮಾರು ₹11 ಕೋಟಿ ವೆಚ್ಚದ ಕಾಮಗಾರಿಗೆ ಟೆಂಡರ್‌ ಆಗಿದ್ದು, ಮುಂಬರುವ ವಾರದಲ್ಲೇ ಕಾಮಗಾರಿ ಆರಂಭಗೊಳ್ಳಲಿದೆ’ ಎಂದು ಹೆಸ್ಕಾಂನ ಸದಲಗಾ ಉಪವಿಭಾಗದ ಎಇಇ ಎಸ್‌.ಆರ್‌.ಸುಖಸಾರೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT