ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಂದಣಿ ಸ್ಥಗಿತ: ಗ್ರಾಹಕರು, ಡೀಲರು ಇಕ್ಕಟ್ಟಿನಲ್ಲಿ

Last Updated 27 ಅಕ್ಟೋಬರ್ 2017, 5:31 IST
ಅಕ್ಷರ ಗಾತ್ರ

ಬಳ್ಳಾರಿ: 100 ಸಿಸಿಗಿಂತ ಕಡಿಮೆ ಎಂಜಿನ್ ಸಾಮರ್ಥ್ಯದ ದ್ವಿಚಕ್ರವಾಹನಗಳ ನೋಂದಣಿ ಸ್ಥಗಿತಗೊಂಡಿರುವುದರಿಂದ ವಿವಿಧ ಕಂಪೆನಿಗಳ ಇಲ್ಲಿನ ಡೀಲರುಗಳು ಮತ್ತು ಖರೀದಿದಾರರು ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ. ದೀಪಾವಳಿ ಸಂದರ್ಭದಲ್ಲಿ ವಾಹನಗಳನ್ನು ಖರೀದಿಸಿದ ಗ್ರಾಹಕರಂತೂ ದಿಗ್ಭ್ರಮೆಗೊಂಡಿದ್ದಾರೆ, ಹೂಡಿದ ಬಂಡವಾಳ ವ್ಯರ್ಥವಾಗುವ ಆತಂಕ ಇಬ್ಬರನ್ನೂ ಆವರಿಸಿದೆ.

ಕೆಲವೇ ದಿನಗಳ ಹಿಂದೆ ಮುಗಿದ ಹಬ್ಬದ ಸಂದರ್ಭದಲ್ಲಿ ನೂರಾರು ವಾಹನಗಳು ಮಾರಾಟವಾಗಿವೆ. ಅವುಗಳಲ್ಲಿ ಬಹುತೇಕ ವಾಹನಗಳಿಗೆ ತಾತ್ಕಾಲಿಕ ಪರವಾನಗಿಯನ್ನೂ ಡೀಲರ್‌ಗಳು ಗ್ರಾಹಕರಿಗೆ ದೊರಕಿಸಿಕೊಟ್ಟಿದ್ದಾರೆ. ಈಗ ಅವುಗಳಿಗೆ ಪೂರ್ಣಾವಧಿ ಪರವಾನಗಿ ಸದ್ಯಕ್ಕೆ ದೊರಕುವುದಿಲ್ಲ ಎಂಬ ಸನ್ನಿವೇಶ ಏರ್ಪಟ್ಟಿದೆ. ಇಂಥ ಸನ್ನಿವೇಶದಲ್ಲೇ, ಕಡಿಮೆ ಸಾಮರ್ಥ್ಯದ ಹಳೇ ವಾಹನಗಳಲ್ಲಿ ಎಂದಿನಂತೆ ಮೂವರು, ನಾಲ್ವರು ಕುಳಿತು ಸಂಚರಿಸುತ್ತಿದ್ದಾರೆ.

‘ದೀಪಾವಳಿ ದಿನವೇ ಸುಮಾರು 80 ವಾಹನಗಳು ನಮ್ಮಲ್ಲಿ ಮಾರಾಟವಾದವು. ಅವುಗಳ ಪೈಕಿ 50 ವಾಹನಗಳಿಗೆ ತಾತ್ಕಾಲಿಕ ಪರವಾನಗಿಯನ್ನು ದೊರಕಿಸಿಕೊಟ್ಟಿದ್ದೇನೆ. ಈಗ ಗ್ರಾಹಕರು ಬಂದು ನೋಂದಣಿ ಮಾಡಿಸಿಕೊಡುವಂತೆ ಕೇಳುತ್ತಿದ್ದಾರೆ. ಏನು ಮಾಡಬೇಕೆಂಬುದೇ ತೋಚುತ್ತಿಲ್ಲ’ ಎಂದು ನಗರದ ಎಸ್ಪಿ ವೃತ್ತದ ಸಮೀಪದಲ್ಲಿರುವ ಶ್ರೀಬಾಲಾಜಿ ಟಿವಿಎಸ್ ಶೋರೂಂ ವ್ಯವಸ್ಥಾಪಕ ಬಿ.ಪ್ರಸಾದ್‌ ಅಸಹಾಯಕತೆ ವ್ಯಕ್ತಪಡಿಸಿದರು.

ಶೋರೂಂಗೆ ಬುಧವಾರ ಭೇಟಿ ನೀಡಿದ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ಕಡಿಮೆ ಸಾಮರ್ಥ್ಯದ ವಾಹನಗಳಲ್ಲಿ ಒಬ್ಬರು ಮಾತ್ರ ಪ್ರಯಾಣಿಸಬಹುದು ಎಂದು ವಾಹನದ ಕಂಪೆನಿಗಳು ಫಾರಂ ನಂ 22ರಲ್ಲಿ ನಮೂದಿಸಬೇಕು. ಹಾಗೆ ನಮೂದಿಸಬೇಕು ಎಂದರೆ ಸಾರಿಗೆ ಇಲಾಖೆಯು ಸ್ಪಷ್ಟ ಸೂಚನೆ ನೀಡಬೇಕು. ಆದರೆ ಇಲ್ಲಿವರೆಗೆ ಅಂಥ ಯಾವುದೇ ಸೂಚನೆ ಬಂದಿಲ್ಲ. ಹೀಗಾಗಿ ಡೀಲರುಗಳು ಮತ್ತು ಸಬ್‌ಡೀಲರುಗಳಿಗೆ ಸಂಕಟ ಎದುರಾಗಿದೆ’ ಎಂದರು. ‘ನಮ್ಮಿಂದ ವಾಹನಗಳನ್ನು ಖರೀದಿಸಿದ ಸಿರುಗುಪ್ಪ, ಮೋಕಾ, ತೋರಣಗಲ್ಲು, ಚಿತ್ರದುರ್ಗ ಜಿಲ್ಲೆಯ ರಾಂಪುರದ ಸಬ್‌ಡೀಲರ್‌ಗಳಿಂದಲೂ ನಾವು ಒತ್ತಡ ಎದುರಿಸುತ್ತಿದ್ದೇವೆ’ ಎಂದರು.

ಒಂದು ಸೀಟಿಗೆ ಮಾತ್ರ ನೋಂದಣಿ: ಈ ಬಗ್ಗೆ ಪ್ರತಿಕ್ರಿಯಿಸಿದ ಪ್ರಭಾರಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಶಿವಶಂಕರ್‌, ‘ಸದ್ಯಕ್ಕೆ ನಾವು ಕಡಿಮೆ ಸಾಮರ್ಥ್ಯದ ವಾಹನಗಳನ್ನು ನೋಂದಣಿ ಮಾಡುತ್ತಿಲ್ಲ. ವಾಹನ ತಯಾರಿಸುವ ಕಂಪೆನಿಗಳು ನೀಡುವ ಪ್ರಮಾಣಪತ್ರದಲ್ಲಿ ಒಂದು ಸೀಟಿನ ಪ್ರಯಾಣ ಎಂದು ನಮೂದಿಸಿದ್ದರೆ ಮಾತ್ರ ನೋಂದಣಿ ಮಾಡಲಾಗುವುದು. ಆದರೆ ಆ ಬಗ್ಗೆ ಇನ್ನೂ ನಿರ್ಧರಿಸಿಲ್ಲ’ ಎಂದು ಸ್ಪಷ್ಟಪಡಿಸಿದರು.

ಕಡಿಮೆ ಸಾಮರ್ಥ್ಯದ ವಾಹನಗಳು: ಟಿವಿಎಸ್‌ ಸ್ಕೂಟಿ ಪೆಪ್‌ ಪ್ಲಸ್‌, ಟಿವಿಎಸ್‌ ಸ್ಪೋರ್ಟ್‌, ಹೀರೋ ಎಚ್‌ಎಫ್‌ ಡಿಲಕ್ಸ್‌, ಹೀರೋ ಸ್ಪ್ಲೆಂಡರ್‌ ಪ್ಲಸ್‌, ಟಿವಿಎಸ್‌ ಎಕ್ಸ್‌ಎಲ್‌ 100, ಹೀರೋ ಸ್ಪ್ಲೆಂಡರ್‌ ಪ್ರೋ, ಬಜಾಜ್‌ ಸಿಟಿ 100, ಹೀರೋ ಎಚ್‌ಎಫ್‌ ಡಿಲಕ್ಸ್‌ ಇಸಿಒ ಮತ್ತು ಹೀರೋ ಪ್ಯಾಶನ್‌ ಪ್ರೋ ಐ3ಎಸ್‌ ಕಡಿಮೆ ಸಾಮರ್ಥ್ಯವನ್ನು ಹೊಂದಿವೆ ಎಂಬ ಮಾಹಿತಿಯುಳ್ಳ ವಾಟ್ಸ್‌ ಆ್ಯಪ್‌ ಸಂದೇಶ ನಗರದ ಹಲವರ ಫೋನ್‌ಗಳಲ್ಲಿ ಹರಿದಾಡುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT