ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೋರೂಂ ಮಾಲೀಕರಿಗೆ ಬಿಸಿ: ಜನರಿಗೆ ನಿರಾಸೆ

Last Updated 27 ಅಕ್ಟೋಬರ್ 2017, 5:38 IST
ಅಕ್ಷರ ಗಾತ್ರ

ಬೀದರ್: ಹಿಂಬದಿ ಸೀಟು ಅಳವಡಿಸಿದ 100 ಸಿಸಿಗಿಂತ ಕಡಿಮೆ ಎಂಜಿನ್ ಸಾಮರ್ಥ್ಯದ ಹೊಸ ದ್ವಿಚಕ್ರ ವಾಹನಗಳ ನೋಂದಣಿ ನಿಷೇಧದ ಬಿಸಿ ಜಿಲ್ಲೆಯ ದ್ವಿಚಕ್ರ ವಾಹನ ವಿತರಕರು ಹಾಗೂ ಮಾರಾಟಗಾರರಿಗೂ ತಟ್ಟಿದೆ. ಕೆಲ ಮಾಲೀಕರು ಗ್ರಾಹಕರಿಂದ ಪಡೆದಿದ್ದ ಮುಂಗಡ ಹಣ ಮರಳಿಸಿದ್ದಾರೆ. ಕೆಲ ಶೋರೂಂ ಮಾಲೀಕರು ವಾಹನಗಳನ್ನು ಮರಳಿ ಕಂಪೆನಿಗೆ ಕಳಿಸುವ ಸಿದ್ಧತೆಯಲ್ಲಿದ್ದಾರೆ.

ಬೀದರ್‌ ನಗರದಲ್ಲಿ 6 ದ್ವಿಚಕ್ರ ವಾಹನ ಶೋರೂಂಗಳು ಇವೆ. ಮಾರುಕಟ್ಟೆಯಲ್ಲಿ ಹೀರೊ ಕಂಪೆನಿಯ ವಾಹನಗಳಿಗೆ ಹೆಚ್ಚು ಬೇಡಿಕೆ ಇರುವ ಕಾರಣ ಕೈಲಾಸ್ ಹೀರೊ ಮೋಟರ್ಸ್ ಮಾಲೀಕರು ದೀಪಾವಳಿಗೆ 600 ದ್ವಿಚಕ್ರ ವಾಹನಗಳನ್ನು ತರಿಸಿದ್ದಾರೆ.

ವಂಶ ಟಿವಿಎಸ್‌ ಶೋರೂಂನಲ್ಲಿ 60 ಹಾಗೂ ಸಿಂಧೋಲ್ ಬಜಾಜ್‌ ಶೋರೂಂನಲ್ಲಿ 7 ದ್ವಿಚಕ್ರ ವಾಹನಗಳಿವೆ. ಇವರೆಲ್ಲರೂ ಈಗ 100 ಸಿಸಿಗಿಂತ ಕಡಿಮೆ ಎಂಜಿನ್ ಸಾಮರ್ಥ್ಯದ ದ್ವಿಚಕ್ರ ವಾಹನಗಳನ್ನು ನೆರೆಯ ರಾಜ್ಯದ ವಿತರಕರಿಗೆ ಕಳಿಸಿಕೊಡಲು ತಯಾರಿ ನಡೆಸಿದ್ದಾರೆ.

‘100 ಕ್ಕಿಂತ ಕಡಿಮೆ ಸಿಸಿ ಬೈಕ್‌ಗಳು ₹ 47,500 ರಿಂದ ₹ 52,000 ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಲಭ್ಯ ಇವೆ. 100 ಸಿಸಿ ಮೇಲ್ಪಟ್ಟ ವಾಹನಗಳನ್ನು ಖರೀದಿಸಲು ಗ್ರಾಹಕರು ಹೆಚ್ಚುವರಿಯಾಗಿ ₹10 ಸಾವಿರದಿಂದ ₹15 ಸಾವಿರ ಪಾವತಿಸಬೇಕು. ಹೀಗಾಗಿ ರೈತರು, ಸಣ್ಣ ವ್ಯಾಪಾರಿಗಳು ಹಾಗೂ ಮಧ್ಯಮ ವರ್ಗದವರಿಗೆ ತೊಂದರೆ ಆಗುತ್ತಿದೆ’ ಎಂದು ಹೀರೊ ಮೋಟರ್ಸ್‌ ಶೋರೂಂನ ರಾಜಕುಮಾರ ಬಿರಾದಾರ ಹೇಳುತ್ತಾರೆ.

‘ಈ ಬಾರಿಯ ದೀಪಾವಳಿಗೆ ಗ್ರಾಹಕರ ಹೆಚ್ಚು ಬೇಡಿಕೆ ಇದ್ದ ಕಾರಣ ಕಂಪೆನಿಯಿಂದ 600 ವಾಹನಗಳನ್ನು ತರಿಸಿದ್ದೇವೆ. ನೋಂದಣಿ ನಿಷೇಧದ ನಂತರ ವಹಿವಾಟು ನಿಂತಿದೆ.
ವಿತರಕರು ಹೈಕೋರ್ಟ್‌ ಮೊರೆ ಹೋಗಿದ್ದಾರೆ. ಸ್ವಲ್ಪ ಕಾದು ನೋಡುತ್ತೇವೆ ಇಲ್ಲವೇ ದ್ವಿಚಕ್ರ ವಾಹನಗಳನ್ನು ಕಂಪೆನಿಗೆ ಮರಳಿಸುತ್ತೇವೆ’ ಎನ್ನುತ್ತಾರೆ ಅವರು.

‘ಟಿವಿಎಸ್-ಸ್ಕೂಟಿ ಪೆಪ್‌ಪ್ಲಸ್, ಟಿವಿಎಸ್ ಸ್ಪೋರ್ಟ್, ಟಿವಿಎಸ್ ಎಕ್ಸ್‌ಎಲ್‌–100 ಸೇರಿ 60 ದ್ವಿಚಕ್ರ ವಾಹನಗಳು ನಮ್ಮ ಶೋರೂಂನಲ್ಲಿ ಇವೆ. ವಾಹನ ಖರೀದಿಗಾಗಿ ಮುಂಗಡ ಹಣ ನೀಡಿದ್ದ 30 ಗ್ರಾಹಕರಿಗೆ ಹಣ ಮರಳಿಸಿದ್ದೇವೆ’ಎಂದು ವಂಶ ಟಿವಿಎಸ್‌ ಶೋರೂಂ ಮಾಲೀಕ ಪ್ರಶಾಂತ ಗುತ್ತಿ ವಿವರಿಸುತ್ತಾರೆ.

ನೆರೆಯ ಮಹಾರಾಷ್ಟ್ರ ಹಾಗೂ ತೆಲಂಗಾಣದಲ್ಲಿ ನೋಂದಣಿ ಶುಲ್ಕ ಕಡಿಮೆ ಇರುವ ಕಾರಣ ಗಡಿಯಲ್ಲಿನ ಗ್ರಾಹಕರು ಜಿಲ್ಲೆಯಲ್ಲಿ ವಾಹನ ಖರೀದಿಸುವುದು ಕಡಿಮೆ. ನಿಷೇಧ ಆದೇಶ ಮಾರುಕಟ್ಟೆಯ ಮೇಲೆ ದುಷ್ಪರಿಣಾಮ ಬೀರಿದೆ’ ಎಂದು ಅವರು ಹೇಳುತ್ತಾರೆ.

‘ನಮ್ಮ ಶೋರೂಂನಲ್ಲಿರುವ ಬಜಾಜ್‌ ಸಿಟಿ 100 ಬೈಕ್‌ಗಳನ್ನು ಪಕ್ಕದ ತೆಲಂಗಾಣದಲ್ಲಿರುವ ವಿತರಕರಿಗೆ ಕಳಿಸಲಾಗುವುದು. ಜಿಎಸ್‌ಟಿ ಜಾರಿಯಲ್ಲಿರುವ ಕಾರಣ ವಾಹನ ಖರೀದಿ ದರದಲ್ಲಿ ವ್ಯತ್ಯಾಸ ಆಗುವುದಿಲ್ಲ. ಸಾಗಾಣಿಕೆ ವೆಚ್ಚವನ್ನು ಕಂಪೆನಿ ಭರಿಸಲಿದೆ. ಎರಡು ಆಸನ ಬೇಕಿದ್ದರೆ ಅಧಿಕ ಸಿಸಿಯ ದ್ವಿಚಕ್ರ ವಾಹನ ಖರೀದಿಸಲು ಗ್ರಾಹಕರು ಹೆಚ್ಚಿನ ಹಣ ಕೊಡಬೇಕು’ ಎಂದು ಸಿಂಧೋಲ್ ಬಜಾಜ್‌ ಶೋರೂಂ ಮಾಲೀಕ ಸುಮಿತ್ ಸಿಂಧೋಲ್‌ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT