ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ನಿಯಮ: ಬೈಕ್‌ ಮಾಲೀಕರು ಕಂಗಾಲು

Last Updated 27 ಅಕ್ಟೋಬರ್ 2017, 5:48 IST
ಅಕ್ಷರ ಗಾತ್ರ

ಚಾಮರಾಜನಗರ: 100 ಸಿಸಿ ಮತ್ತು ಅದಕ್ಕಿಂತ ಕಡಿಮೆ ಸಾಮರ್ಥ್ಯದ ದ್ವಿಚಕ್ರ ವಾಹನಗಳಲ್ಲಿ ಹಿಂಬದಿ ಸವಾರರು ಪ್ರಯಾಣಿಸುವಂತಿಲ್ಲ ಹಾಗೂ ಹಿಂಬದಿ ಸೀಟು ಅಳವಡಿಕೆ ಮಾಡಿದ ಈ ವಾಹನಗಳ ನೋಂದಣಿ ಮಾಡಿಕೊಳ್ಳುವಂತಿಲ್ಲ ಎಂಬ ನಿರ್ಬಂಧದಿಂದ ಜಿಲ್ಲೆಯ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.ಭ್ರಮಕ್ಕಿಂತ ಮುಂದೇನು ಎಂಬ ದಿಗಿಲು ಅವರಲ್ಲಿ ಮೂಡಿದೆ.

ನೋಂದಣಿ ಇಲ್ಲ: 100 ಸಿಸಿ ಮತ್ತು ಕಡಿಮೆ ಸಾಮರ್ಥ್ಯದ ದ್ವಿಚಕ್ರ ವಾಹನಗಳ ನೋಂದಣಿಯನ್ನು ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ (ಆರ್‌ಟಿಒ) ಸ್ಥಗಿತಗೊಳಿಸಲಾಗಿದೆ.
ಹೈಕೋರ್ಟ್‌ ತೀರ್ಪಿನ ಅನ್ವಯ, 100 ಸಿಸಿಗೂ ಕಡಿಮೆ ಸಾಮರ್ಥ್ಯದ ಎಂಜಿನ್‌ವುಳ್ಳ ದ್ವಿಚಕ್ರ ವಾಹನಗಳಲ್ಲಿ ಹಿಂಬದಿ ಸೀಟು ಅಳವಡಿಸಿದ್ದಲ್ಲಿ ಅಂತಹ ವಾಹನಗಳ ನೋಂದಣಿಯನ್ನು ನಿಷೇಧಿಸಲಾಗುತ್ತದೆ. ಅವುಗಳಲ್ಲಿ ಹಿಂಬದಿ ಸವಾರನೊಂದಿಗೆ ಪ್ರಯಾಣಿಸುವುದನ್ನೂ ನಿರ್ಬಂಧಿಸಲಾಗಿದೆ. ಇದನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಸಾರಿಗೆ ಆಯುಕ್ತರ ಕಚೇರಿ ಎಲ್ಲ ಆರ್‌ಟಿಒ ಕಚೇರಿಗಳಿಗೆ ಸುತ್ತೋಲೆ ಹೊರಡಿಸಿದೆ.

ಇದರಿಂದ ದ್ವಿಚಕ್ರ ವಾಹನಗಳ ನೋಂದಣಿ ಪ್ರಮಾಣ ಇಳಿಕೆಯಾಗಿದೆ. ಆದೇಶ ಹೊರಬಿದ್ದ ಬಳಿಕ ಬೈಕ್‌ ಖರೀದಿಸಿದವರು ನೋಂದಣಿ ಮಾಡಿಸಿಕೊಳ್ಳಲು ಸಾಧ್ಯವಾಗದೆ ಕಂಗಾಲಾಗಿದ್ದಾರೆ. ಜಿಲ್ಲೆಯಲ್ಲಿ ಸುಮಾರು 1.30 ಲಕ್ಷ ದ್ವಿಚಕ್ರ ವಾಹನಗಳಿವೆ. ನಿತ್ಯ 30–40 ದ್ವಿಚಕ್ರ ವಾಹನಗಳು ನೋಂದಣಿಯಾಗುತ್ತವೆ. ಕೆಲವು ದಿನಗಳಿಂದೀಚೆಗೆ ನೋಂದಣಿ ಪ್ರಮಾಣ ಕಡಿಮೆಯಾಗಿದೆ. 100 ಸಿಸಿಯ ವಾಹನಗಳನ್ನು ವಾಪಸ್‌ ಕಳುಹಿಸುತ್ತಿದ್ದೇವೆ ಎನ್ನುತ್ತಾರೆ ಸಾರಿಗೆ ಇಲಾಖೆ ಅಧಿಕಾರಿಗಳು.

‘ನನಗೆ ಹೊಸ ನಿಯಮ ಗೊತ್ತಿಲ್ಲ. ಬೈಕ್‌ ಕೊಂಡು 15–20 ದಿನ ಆಗಿದೆ. ಕಾರಣಾಂತರದಿಂದ ನೋಂದಣಿ ಮಾಡಿಸಲು ಆಗಿರಲಿಲ್ಲ. ಈಗ ನೋಡಿದರೆ ನಿಮ್ಮ ವಾಹನ ನೋಂದಣಿ ಮಾಡಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಕಷ್ಟಪಟ್ಟು ಹಣ ಕೂಡಿಸಿ ಖರೀದಿಸಿದ್ದೆ. ಏನು ಮಾಡುವುದು ತೋಚುತ್ತಿಲ್ಲ’ ಎಂದು ವ್ಯಕ್ತಿಯೊಬ್ಬರು ಅಳಲು ತೋಡಿಕೊಂಡರು.
‘ಕಷ್ಟಪಟ್ಟು ಖರೀದಿಸಿದ ಬೈಕ್‌ನಲ್ಲಿ ಇಬ್ಬರು ಹೋಗುವಂತಿಲ್ಲ ಎಂದರೆ ಹೇಗೆ? ಮನೆಯವರನ್ನು ಹೇಗೆ ಕರೆದುಕೊಂಡು ಹೋಗುವುದು? ಈ ಬೈಕ್‌ ಮಾರಿ ಹೊಸ ಬೈಕ್‌ ಕೊಳ್ಳುವುದೂ ಸಾಧ್ಯವಿಲ್ಲ. ಇದನ್ನು ಯಾರೂ ಖರೀದಿಸುವುದೂ ಇಲ್ಲ’ ಎಂದು ಸಾರ್ವಜನಿಕರೊಬ್ಬರು ಹೇಳಿದರು.

ಮಾರಾಟ ಇಳಿಕೆ: ಹೊಸ ನಿಯಮದ ಪರಿಣಾಮ ವಾಹನ ತಯಾರಕ ಸಂಸ್ಥೆಗಳಿಗೆ ತೀವ್ರವಾಗಿ ತಟ್ಟಿದೆ. ಅದರಲ್ಲೂ ಟಿವಿಎಸ್‌ ಮತ್ತು ಹೀರೊ ಕಂಪೆನಿಗಳ ಬೈಕ್‌ಗಳ ಮಾರಾಟಕ್ಕೆ ಹೆಚ್ಚು ಹೊಡೆತ ಬಿದ್ದಿದೆ.

ನಿಯಮದಲ್ಲಿ ಬದಲಾವಣೆ ಆಗುವ ಭರವಸೆ ಇದೆ. ಹಾಗಾಗಿ ಸ್ವಲ್ಪ ದಿನ ಕಾಯುವಂತೆ ಜನರ ಮನವೊಲಿಸಲಾಗುತ್ತಿದೆ ಎಂದು ಷೋರೂಂಗಳ ಸಿಬ್ಬಂದಿ ತಿಳಿಸಿದರು.
‘ನಗರ ಪ್ರದೇಶಗಳಲ್ಲಿ ಜ್ಯುಪಿಟರ್‌, ಅಪಾಚೆಯಂತಹ ಬೈಕ್‌ಗಳಿಗೆ ಬೇಡಿಕೆ ಇದೆ. ಜಿಲ್ಲೆಯಲ್ಲಿ 110 ಸಿಸಿಗಿಂತ ಅಧಿಕ ಸಾಮರ್ಥ್ಯದ ಬೈಕ್‌ಗಳ ಮಾರಾಟ ಕಡಿಮೆ. ರೈತಾಪಿ ವರ್ಗದವರು ಹೆಚ್ಚಿರುವುದರಿಂದ ಎಕ್ಸ್‌ಎಲ್‌ ಮೊಪೆಡ್‌ಗಳಿಗೆ ಬೇಡಿಕೆ ಜಾಸ್ತಿ. ಈಗ ಜನರು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ’ ಎಂದು ನಗರದ ಟಿವಿಎಸ್‌ ಷೋರೂಂ ಮಾರಾಟ ವ್ಯವಸ್ಥಾಪಕ ಮೈಕಲ್‌ ತಿಳಿಸಿದರು.

‘ನಮ್ಮಲ್ಲಿ 100 ಸಿಸಿಯ ಸ್ಪ್ಲೆಂಡರ್‌, ಪ್ಯಾಷನ್‌ ಪ್ಲಸ್‌ಗಳಿಗೆ ಬೇಡಿಕೆ ಇದೆ. ಪ್ರತಿ ನಿತ್ಯ ಒಟ್ಟಾರೆ ಸುಮಾರು 20 ಬೈಕ್‌ಗಳು ಮಾರಾಟವಾಗುತ್ತಿದ್ದವು. ಕೆಲವು ದಿನಗಳಿಂದ ನಿತ್ಯ 4–5 ಬೈಕ್‌ಗಳು ಮಾತ್ರ ಮಾರಾಟವಾಗುತ್ತಿದೆ’ ಎಂದು ಹೀರೊ ಕಂಪೆನಿಯ ಮಾರಾಟ ವ್ಯವಸ್ಥಾಪಕಿ ವಿನುತಾ ತಿಳಿಸಿದರು. ‘ಈ ನಿಯಮದಿಂದ ಬೇರೆ ದ್ವಿಚಕ್ರ ತಯಾರಕ ಕಂಪೆನಿಗಳಿಗೆ ಲಾಭವಾಗುತ್ತಿದೆ. ಹೀರೊದ ಗ್ರಾಹಕರು ಹೊಂಡಾ ಕಂಪೆನಿಯತ್ತ ಹೊರಳುತ್ತಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT