ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಚ್ಚೇರಿ: ಸಾಂಕ್ರಾಮಿಕ ರೋಗ ಭೀತಿ

Last Updated 27 ಅಕ್ಟೋಬರ್ 2017, 6:02 IST
ಅಕ್ಷರ ಗಾತ್ರ

ಕಡೂರು: ಗ್ರಾಮೀಣ ನೈರ್ಮಲ್ಯಕ್ಕಾಗಿ ಸರ್ಕಾರ ಸಾಕಷ್ಟು ಅನುದಾನ ನೀಡುತ್ತಿದೆಯಾದರೂ ಕೆಲ ಗ್ರಾಮಗಳಲ್ಲಿ ಅದು ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ. ಇದಕ್ಕೆ ಕಡೂರು ತಾಲ್ಲೂಕಿನ ಮಚ್ಚೇರಿ ಗ್ರಾಮದಲ್ಲಿ ನಿರ್ಮಾಣವಾದ ಚರಂಡಿ ಕಾಮಗಾರಿ ಉತ್ತಮ ಉದಾಹರಣೆಯಂತಿದೆ. ತಾಲ್ಲೂಕಿನ ಮಲ್ಲೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಚ್ಚೇರಿ ಗ್ರಾಮದಲ್ಲಿ ರಾಜ್ಯ ಹೆದ್ದಾರಿ ಹಾದು ಹೋಗಿದೆ.

ಆದರೆ, ಇಡೀ ಗ್ರಾಮದಲ್ಲಿ ಚರಂಡಿಗಳ ನಿರ್ವಹಣೆಯ ಕೊರತೆ ಯಿಂದ ನೀರು ರಸ್ತೆ ಬದಿಯೇ ಸಂಗ್ರಹವಾ ಗುತ್ತಿರುವುದರಿಂದ ಸೊಳ್ಳೆಗಳ ಅವಾಸ ಸ್ಥಾನವಾಗಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಆವರಿಸಿದೆ ಎಂಬುದು ಸ್ಥಳೀಯರ ಆರೋಪ.

ಮೂರ್ನಾಲ್ಕು ವರ್ಷಗಳಿಂದ ಸರಿಯಾಗಿ ಮಳೆ ಬಾರದೆ ಇದ್ದುದರಿಂದ ನೀರಿನ ಕೊರತೆ ಎದುರಾಗಿತ್ತು. ಇತ್ತೀಚೆಗೆ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿ ಟ್ಯಾಂಕರ್ ಮೂಲಕ ನೀರು ಸರಬರಾಜು ಆಗುತ್ತಿದ್ದುದರಿಂದ ಚರಂಡಿಗಳಲ್ಲಿ ನೀರು ಹೆಚ್ಚಾಗಿ ಹರಿಯುತ್ತಿರಲಿಲ್ಲ. 1 ತಿಂಗಳಿನಲ್ಲಿ ಸಮಾಧಾನಕರವಾಗಿ ಮಳೆ ಬಂದಿದ್ದರಿಂದ ಸ್ವಲ್ಪ ಭೂಮಿ ತಂಪಾದ ಕಾರಣದಿಂದ ಚರಂಡಿಯಲ್ಲಿ ನೀರು ಹರಿದು ಗ್ರಾಮದ ಹತ್ತಾರು ಕಡೆ ಗುಂಡಿಗಳಲ್ಲಿ ಸಂಗ್ರಹವಾಗಿದೆ.

ಇದು ಸೊಳ್ಳೆಗಳ ಉತ್ಪತ್ತಿಯ ತಾಣವಾಗಿರುವುದು ಜನರ ಆರೋಗ್ಯದ ಮೇಲೆ ಪರಿಣಾಮ ಬೀರಲಾರಂಭಿಸಿದೆ. ಡೆಂಗಿ ಮತ್ತು ಚಿಕೂನ್ ಗುನ್ಯಾ ರೋಗ ಹರಡುವ ಸಂಭವ ಅಧಿಕವಾಗಿದೆ ಎಂಬುದು ಗ್ರಾಮಸ್ಥರ ಆತಂಕ.

‘ಈ ಸಮಸ್ಯೆಗೆ ಮಳೆ ಬಂದಿದ್ದೊಂದೇ ಕಾರಣವಲ್ಲ. ಬದಲಾಗಿ ಗ್ರಾಮ ಪಂಚಾಯಿತಿ ವತಿಯಿಂದ ಕಳೆದೆರಡು ವರ್ಷದಿಂದ ಚರಂಡಿಗಳ ನಿರ್ವಹಣೆ ಮಾಡದಿರುವುದು ಮತ್ತೊಂದು ಕಾರಣ. ಚರಂಡಿಗಳ ಅಪೂರ್ಣ ಮತ್ತು ಅವೈಜ್ಞಾನಿಕ ಕಾಮಗಾರಿಗಳೂ ಕಾರಣವಾಗಿವೆ.

ಕೆಲ ವರ್ಷಗಳ ಹಿಂದೆ ನಿರ್ಮಿಸಿದ ಬಾಕ್ಸ್ ಚರಂಡಿ ನಿರ್ಮಾಣ ಸರಿಯಾಗಿ ಆಗಿಲ್ಲ. ನೀರು ಅದರೊಳಗೇ ನಿಲ್ಲುತ್ತದೆ. ಇನ್ನು ಗ್ರಾಮದೊಳಗಿನ ಮೂರ್ನಾಲ್ಕು ಬಾಕ್ಸ್ ಚರಂಡಿಗಳು ಅರ್ಧಕ್ಕೇ ನಿಂತಿವೆ. ಮತ್ತೆ ಅದನ್ನು ಪೂರ್ಣಗೊಳಿಸುವತ್ತ ಗ್ರಾಮ ಪಂಚಾಯಿತಿ ಗಮನ ಹರಿಸಿಲ್ಲ. ಒಮ್ಮೆ ಆರಂಭಿಸಿದ ಚರಂಡಿಯನ್ನು ಪೂರ್ಣಗೊಳಿಸಲು ಆದ್ಯತೆ ಮೇಲೆ ಅವಕಾಶ ಮಾಡಿಕೊಳ್ಳುವುದನ್ನು ಬಿಟ್ಟು ಹೊಸ ಹಾಗೂ ಜರೂರಿಲ್ಲದ ಕಾಮಗಾರಿ ಕೈಗೆತ್ತಿಕೊಂಡಿರುವುದು ಎಷ್ಟು ಸರಿ’ ಎಂಬುದು ಗ್ರಾಮಸ್ಥರ ಪ್ರಶ್ನೆ.

ಅತ್ಯಂತ ತುರ್ತಾಗಿ ಆಗಬೇಕಾಗಿ ರುವುದು ಚರಂಡಿಗಳ ಕಾಮಗಾರಿ ಪೂರ್ಣಗೊಳಿಸಬೇಕು ಮತ್ತು ಅದರ ನಿರ್ವಹಣೆ ಮಾಡಬೇಕು. ಸೊಳ್ಳೆಗಳ ನಾಶಕ್ಕಾಗಿ ಆರೋಗ್ಯ ಇಲಾಖೆಯವರು ಔಷಧಿ ಸಿಂಪಡಣೆ ಮಾಡುವತ್ತ ಗಮನ ಹರಿಸಬೇಕೆಂಬುದು ಜನರ ಒತ್ತಾಯವಾಗಿದೆ.
ಬಾಲುಮಚ್ಚೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT