ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೆಂಗಿ, ಚಿಕೂನ್ ಗುನ್ಯಾ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಿ

Last Updated 27 ಅಕ್ಟೋಬರ್ 2017, 6:16 IST
ಅಕ್ಷರ ಗಾತ್ರ

ಚಿತ್ರದುರ್ಗ: ಜಿಲ್ಲೆಯಾದ್ಯಂತ ಡೆಂಗಿ, ಚಿಕೂನ್ ಗುನ್ಯಾ ಹಾಗೂ ಮಲೇರಿಯಾ ರೋಗಗಳು ಹೆಚ್ಚುತ್ತಿದ್ದು, ಅದರ ನಿಯಂತ್ರಣಕ್ಕೆ ಜಿಲ್ಲಾ ಆರೋಗ್ಯ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯ್ತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ನಾಗೇಂದ್ರನಾಯ್ಕ್ ತಿಳಿಸಿದರು. ಇಲ್ಲಿನ ಜಿಲ್ಲಾ ಪಂಚಾಯ್ತಿ ಮಿನಿ ಸಭಾಂಗಣದಲ್ಲಿ ಗುರುವಾರ ನಡೆದ ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಚಿತ್ರದುರ್ಗ ತಾಲ್ಲೂಕು ಸೇರಿದಂತೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಡೆಂಗಿ, ಚಿಕೂನ್ ಗುನ್ಯಾ ಪ್ರಕರಣ ಹೆಚ್ಚಳವಾಗಿರುವ ಬಗ್ಗೆ ವರದಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡುವ ಮೂಲಕ ಸ್ವಚ್ಛತೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು ಎಂದರು.

ಜನರ ಆರೋಗ್ಯ ರಕ್ಷಣೆಗಾಗಿ ಅನುದಾನದ ಕೊರತೆ ಇಲ್ಲ. ಮೊದಲು ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ಎಲ್ಲಾ ಆಸ್ಪತ್ರೆಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಯಾವುದೇ ಗ್ರಾಮವಾಗಲಿ ಡೆಂಗಿ, ಚಿಕೂನ್ ಗುನ್ಯಾ ಬಂದಾಗ ಆರೋಗ್ಯ ನಿರೀಕ್ಷಕರು ಗ್ರಾಮಗಳಿಗೆ ಭೇಟಿ ನೀಡುವ ಬದಲಾಗಿ ಆಗಿಂದಾಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸುವ ಮೂಲಕ ಇಂತಹ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದರು.

ಜಿಲ್ಲಾ ಪಂಚಾಯ್ತಿ ಸಿಇಒ ರವೀಂದ್ರ ಮಾತನಾಡಿ, ಎಲ್ಲಾ ಗ್ರಾಮ ಪಂಚಾಯ್ತಿ ಅಭಿವೃದ್ದಿ ಅಧಿಕಾರಿಗಳು ಗ್ರಾಮಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂಬುದಾಗಿ ಈಗಾಗಲೇ ಸೂಚನೆ ನೀಡಲಾಗಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿದಾಗ ಪಂಚಾಯ್ತಿಗೂ ಭೇಟಿ ನೀಡಿ ಅಗತ್ಯ ಸಲಹೆ ನೀಡಬೇಕು ಎಂದರು.

ಡಿಎಚ್ಒ ಡಾ.ನೀರಜ್ ಮಾತನಾಡಿ, ಸಜ್ಜನಕೆರೆ ಗ್ರಾಮದಲ್ಲಿ ಸಾಕಷ್ಟು ಜನರು ಜ್ವರದಿಂದ ಬಳಲುತ್ತಿದ್ದು, ಈ ಬಗ್ಗೆ ವೈದ್ಯಾಧಿಕಾರಿಗಳ ತಂಡ ಭೇಟಿ ನೀಡಿ ಚಿಕಿತ್ಸಾ ಕ್ರಮ ಕೈಗೊಂಡಿದ್ದಾರೆ. ಅಲ್ಲಿ 1 ಡೆಂಗಿ, 1 ಚಿಕೂನ್ ಗುನ್ಯಾ ವರದಿಯಾಗಿದೆ. ಅಲ್ಲದೆ, 40 ಸಂಶಯಾತ್ಮಕ ಪ್ರಕರಣಗಳಿವೆ. ಈಗ ನಿಯಂತ್ರಣದಲ್ಲಿದ್ದು, ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

ಎರಡು ರಕ್ತದ ಮಾದರಿ, ನೀರಿನ ಮಾದರಿ ಸಂಗ್ರಹಿಸಲಾಗಿದ್ದು, ಪರೀಕ್ಷೆಗೆ ಒಳಪಡಿಸಲಾಗಿದೆ. ವರದಿ ಬಂದ ನಂತರ ಸ್ಪಷ್ಟವಾಗಿ ತಿಳಿಯಲಿದೆ. ಕಳೆದ ಒಂದೂವರೆ ತಿಂಗಳಿನಿಂದ ಬಂದ ಮಳೆಯಿಂದ ಹಾಗೂ ಕುಡಿಯುವ ನೀರಿನ ಪೈಪ್‌ಲೈನ್ ಸೋರಿಕೆಯಿಂದ ಅಲ್ಲಲ್ಲಿ ನೀರು ನಿಂತು ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿದೆ ಎಂದು ಸಭೆಗೆ ತಿಳಿಸಿದರು. ಜಿಲ್ಲಾ ಪಂಚಾಯ್ತಿ ಉಪಕಾರ್ಯದರ್ಶಿ ಬಸವರಾಜಪ್ಪ, ಜಿಲ್ಲಾ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಜಯಮ್ಮ, ವಿವಿಧ ಕಾರ್ಯಕ್ರಮಗಳ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT