ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆಯಿಂದ 86ನೇ ಜಾನುವಾರು ಜಾತ್ರೆ

Last Updated 27 ಅಕ್ಟೋಬರ್ 2017, 6:40 IST
ಅಕ್ಷರ ಗಾತ್ರ

ಹಿರೀಸಾವೆ: ಸಾಕಿದ ಜಾನುವಾರುಗಳ ಆರೋಗ್ಯ ರಕ್ಷಣೆಗೆ ಪ್ರಾರ್ಥಿಸಿ, ರಾಸುಗಳ ಮೈಮೇಲೆ ತೀರ್ಥ ಪ್ರೋಕ್ಷಣೆ ಮಾಡುವ ಕಬ್ಬಳಿಯ ಬಸವೇಶ್ವರಸ್ವಾಮಿಯ ದನಗಳ ಜಾತ್ರೆ ಶನಿವಾರ ಇಲ್ಲಿ ಆರಂಭವಾಗಲಿದೆ. ಹೋಬಳಿಯ ಕಬ್ಬಳ್ಳಿ ಗ್ರಾಮದ ಹೊರಗಿನ ವಿಶಾಲ ಆವರಣದಲ್ಲಿ ಬಸವೇಶ್ವರ ಸ್ವಾಮಿ ದೇವಸ್ಥಾನವಿದೆ. ಇದೇ ನವೆಂಬರ್‌ 4ರ ವರೆಗೆ ಜಾತ್ರಾ ಮಹೋತ್ಸವ ನಡೆಯುತ್ತದೆ.

ಗ್ರಾಮದಲ್ಲಿ ಕಲ್ಲೇಶ್ವರ, ಮಲ್ಲೇಶ್ವರ, ಸೋಮೆಶ್ವರ, ಬೈರವೇಶ್ವರ ಮತ್ತು ಬಸವೇಶ್ವರ ಎಂಬ ಪಂಚಲಿಂಗಗಳ ದೇವಾಲಯಗಳಿದ್ದು, ಇಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ.
ಜಾನುವಾರು ಕರು ಹಾಕಿದರೆ ಅದರ ಹಾಲು, ಮಾಡಿದ ಮೊಸರನ್ನು ದೇವರಿಗೆ ಅರ್ಪಿಸುತ್ತಾರೆ. ಕಾರ್ತಿಕ ಸೋಮವಾರ ರಾಸುಗಳನ್ನು ದೇವಸ್ಥಾನದ ಆವರಣಕ್ಕೆ ಕರೆ ತಂದು. ದೇವಸ್ಥಾನದ ಸುತ್ತು ಮೂರು ಸುತ್ತು ಪ್ರದಕ್ಷಿಣೆ ಹಾಕಿಸಿ ನಂತರ ಪೂಜೆ ಮಾಡಿಸಿ, ದೇವರ ತೀರ್ಥವನ್ನು ರಾಸುಗಳ ಮೈಮೆಲೆ ಹಾಕುತ್ತಾರೆ.

ಹಲವು ವರ್ಷಗಳ ಹಿಂದೆ ಗ್ರಾಮದ ಗುಡಿಗೌಡರಾದ ಗಂಗಾಧರೇಗೌಡ ಜಾತ್ರೆ ಪ್ರಾರಂಭಿಸಿದರು. 8 ದಿನ ಕಾಲ ನಡೆಯುತ್ತದೆ. ನಿತ್ಯ ವಿವಿಧ ಗ್ರಾಮಗಳ ಗ್ರಾಮಸ್ಥರು ಮೆರವಣಿಗೆ ಮತ್ತು ವಿಶೇಷ ಪೂಜೆ ಮಾಡಿಸುತ್ತಾರೆ.

ಕೆಲ ವರ್ಷಗಳ ಹಿಂದೆ ಬಸವೇಶ್ವರಸ್ವಾಮಿ ದೇವಸ್ಥಾನವನ್ನು ಆದಿ ಚುಂಚನಗಿರಿ ಮಠ ವಹಿಸಿ ಕೊಂಡಿತು. ದಿವಂಗತ ಡಾ.ಬಾಲಗಂಗಾಧರ ನಾಥ ಸ್ವಾಮೀಜಿ ಕ್ಷೇತ್ರವನ್ನು ಶಾಖಾ ಮಠವಾಗಿ ಪರಿವರ್ತಿಸಿದರು. ಸ್ವಾಮೀಜಿ ಆಶಯದಂತೆ ₹40 ಕೋಟಿ ವೆಚ್ಚದಲ್ಲಿ ದೇವಾಲಯವನ್ನು ನಿರ್ಮಾಣ ಮಾಡುವ ಕಾರ್ಯವನ್ನು ಡಾ. ನಿರ್ಮಲಾನಂದನಾಥ ಸ್ವಾಮೀಜಿ ಪ್ರಾರಂಭಿಸಲಿದ್ದಾರೆ.

ತಮಿಳುನಾಡಿನ ಶಿಲ್ಪಿಗಳಾದ ಶಂಕರ ಸ್ತಪತಿ ತಂಡ ನಿರ್ಮಾಣ ಕಾರ್ಯದ ನೇತೃತ್ವ ವಹಿಸಲಿದೆ. ನಿತ್ಯದ ಪೂಜೆ ಮತ್ತು ದರ್ಶನಕ್ಕೆ ತೊಂದರೆ ಇಲ್ಲ ಎಂದು ಶಂಭುನಾಥಸ್ವಾಮೀಜಿ ಹೇಳಿದ್ದಾರೆ. ಜಾತ್ರೆಗೆ ಬರುವ ಭಕ್ತರಿಗೂ ಕುಡಿಯವ ನೀರು, ದಾಸೋಹ ಸೇರಿದಂತೆ ಎಲ್ಲ ರೀತಿಯ ಮೂಲ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಕಬ್ಬಳಿಯ ಶಿವಪುತ್ರನಾಥ ಸ್ವಾಮೀಜಿ ತಿಳಿಸಿದ್ದಾರೆ.

ಜಾತ್ರೆಯ ಹಿನ್ನೆಲೆ: ಅನೇಕ ವರ್ಷಗಳ ಹಿಂದೆ ಗ್ರಾಮದಿಂದ ಸ್ವಲ್ಪ ದೂರದ ಭೂಮಿಯಲ್ಲಿ ಬಸವನ ರೂಪದ ಕಲ್ಲಿನ ಮೂರ್ತಿ ಗೋಚರಿಸಿತು. ಈ ಸ್ಥಳದಲ್ಲಿ ಗ್ರಾಮದ ರಾಸುಗಳನ್ನು ಮೇಯಿಸುತ್ತಿದ್ದರು. ಒಮ್ಮೆ ಒಂದು ರಾಸು ಆನಾರೋಗ್ಯಪೀಡಿತವಾಯಿತು. ರೈತ ಎತ್ತು ಗುಣಮುಖವಾದರೆ ಆದನ್ನು ಮೂರು ಸುತ್ತು ಪ್ರದಕ್ಷಣೆ ಹಾಕಿಸುತ್ತೆನೆ ಎಂದು ಹರಕೆ ಕಟ್ಟಿಕೊಂಡರು.

ಅಂದಿನಿಂದ ಈ ವ್ಯಾಪ್ತಿಯ ರೈತರು ಜಾನುವಾರುಗಳ ಆರೋಗ್ಯ ಕೆಟ್ಟರೆ ಹರಕೆ ಕಟ್ಟುವ ಪದ್ಧತಿಯೂ ಆರಂಭವಾಯಿತು. ಈ ಜಾತ್ರೆಗೆ ನೂರಾರು ರಾಸುಗಳನ್ನು ಕರೆತರಲಾಗುತ್ತದೆ. ಆದರೆ ಜಾನುವಾರುಗಳ ವ್ಯಾಪಾರ ನಡೆಯುವುದಿಲ್ಲ ಎಂಬುದೇ ಇಲ್ಲಿನ ವಿಶೇಷ. ಬಸವೇಶ್ವರ ಸ್ವಾಮಿಯ ದನಗಳ ಜಾತ್ರೆ ಎಂದೇ ಈ ಭಾಗದಲ್ಲಿ ಹೆಸರಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT