ಭಾನುವಾರ, ಸೆಪ್ಟೆಂಬರ್ 22, 2019
23 °C

ಮೊಬೈಲ್ ಆ್ಯಪ್‌ ಮೂಲಕ ಬೆಳೆ ಸಮೀಕ್ಷೆ

Published:
Updated:

ಸವಣೂರ: ತಾಲ್ಲೂಕಿನ ಹಲವು ಗ್ರಾಮಗಳ ರೈತರ ಜಮೀನುಗಳಿಗೆ ತಹಶೀಲ್ದಾರ್‌ ವಿ.ಡಿ.ಸಜ್ಜನ ನೇತೃತ್ವದ ತಂಡ ಬುಧವಾರ ಭೇಟಿ ನೀಡಿ, ಮೊಬೈಲ್ ಆ್ಯಪ್‌ ಮೂಲಕ ಬೆಳೆ ಹಾನಿ ಸಮೀಕ್ಷೆ ಕೈಗೊಂಡಿತು.

ಈ ವೇಳೆ ಮಾತನಾಡಿದ ತಹಶೀಲ್ದಾರ್ ಸಜ್ಜನ, ‘ಮೊಬೈಲ್ ತಂತ್ರಾಶ ಬಳಸಿ 2017-18ನೇ ಸಾಲಿನ ಮುಂಗಾರು ಬೆಳೆಹಾನಿ ಸಮೀಕ್ಷೆ ಮಾಡುವಂತೆ ಸರ್ಕಾರ ಸೂಚನೆ ನೀಡಿದೆ. ಅದರಂತೆ ಸಮೀಕ್ಷೆ ಮಾಡುತ್ತಿದ್ದೇವೆ’ ಎಂದು ಮಾಹಿತಿ ನೀಡಿದರು.

‘ಸಾಮಾನ್ಯವಾಗಿ ಬೆಳೆ ಇರುವ ಕ್ಷೇತ್ರದ ಮೂಲ ಮಾಹಿತಿಯು ಗ್ರಾಮ ಲೆಕ್ಕಾಧಿಕಾರಿಗಳು ನೀಡುವ ಅಂಕಿ ಅಂಶಗಳನ್ನೇ ಅವಲಂಬಿಸಿರುತ್ತದೆ. ಬೆಳೆ ಕೊಯ್ಲು ಆಧಾರದ ಮೇಲೆ ನಿರ್ಧರಿಸಲಾಗುವ ಇಳುವರಿ ಮಾಹಿತಿಯೂ ವಾಸ್ತವಾಂಶದಿಂದ ಕೂಡಿರುವುದಿಲ್ಲ. ಹೀಗಾಗಿ, ಬೆಳೆಹಾನಿ ಪರಿಹಾರ ವಿತರಣೆಯಲ್ಲಿ ವ್ಯತ್ಯಾಸ ಆಗುತ್ತಿತ್ತು. ಇದನ್ನು ತಪ್ಪಿಸಲು ಮತ್ತು ಕ್ಷೇತ್ರ ತಪಾಸಣೆ ನಡೆಸಿಯೇ ಬೆಳೆ ವಿವರ ದಾಖಲಿಸಲು ಈ ತಂತ್ರಾಂಶ ನೆರವಾಗಲಿದೆ’ ಎಂದರು.

‘ಈ ಅಪ್ಲಿಕೇಷನ್ ಬಳಸಿ ಪ್ರತಿ ದಿನ ಒಬ್ಬ ಸರ್ವೆ ಅಧಿಕಾರಿ ಸರಾಸರಿ 50 ರೈತರ ಜಮೀನಿನ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಬಹುದು. ರೈತರಿಗೆ ಆಗಿರುವ ಬೆಳೆ ಹಾನಿಯ ನೈಜ ಚಿತ್ರಣ ಇದರಿಂದ ಸರ್ಕಾರಕ್ಕೆ ಲಭಿಸುತ್ತದೆ’ ಎಂದರು

‘ಈ ಮೊಬೈಲ್ ತಂತ್ರಾಶದಲ್ಲಿ ಬೆಳೆ ಕ್ಷೇತ್ರದ ಅಂಕಿ ಅಂಶಗಳನ್ನು ಸುಲಭವಾಗಿ ದಾಖಲು ಮಾಡಬಹುದು. ಆದರೆ, ಗ್ರಾಮೀಣ ಭಾಗದಲ್ಲಿ ನೆಟ್‌ವರ್ಕ್‌ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಈ ಕುರಿತು ಸಭೆ ನಡೆದಿದ್ದು, ಒಂದು ತಿಂಗಳ ಕಾಲ ಕೃಷಿ, ಕಂದಾಯ ಇಲಾಖೆಗಳಲ್ಲಿ ಉಳಿದ ಎಲ್ಲ ಕೆಲಸಗಳನ್ನು ಸ್ಥಗಿತಗೊಳಿಸಿ, ಸಂಪೂರ್ಣವಾಗಿ ಬೆಳೆ ಸಮೀಕ್ಷೆಗೆ ಆದ್ಯತೆ ನೀಡುವಂತೆ ಸೂಚನೆ ನೀಡಲಾಗಿದೆ’ ಎಂದು ತಿಳಿಸಿದರು.

 

Post Comments (+)