ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಗ್ಗಾವಿ: ಬೆಳೆ ಕಸಿದ ಸೆಪ್ಟೆಂಬರ್ ಮಳೆ

Last Updated 27 ಅಕ್ಟೋಬರ್ 2017, 6:53 IST
ಅಕ್ಷರ ಗಾತ್ರ

ಶಿಗ್ಗಾವಿ: ಮುಂಗಾರು ಮಳೆಯ ಕೊರತೆಯ ನಡುವೆಯೂ ಬೆಳೆದಿದ್ದ ಭತ್ತ, ಹತ್ತಿ, ಶೇಂಗಾ, ಗೋವಿನಜೋಳ ಬೆಳೆಗಳು ಸೆಪ್ಟೆಂಬರ್–ಅಕ್ಟೋಬರ್‌ನಲ್ಲಿ ಸುರಿದ ಮಳೆಗೆ ಶೇ 80ರಷ್ಟು ಹಾನಿಗೊಂಡಿವೆ. ಇದರಿಂದ ತಾಲ್ಲೂಕಿನ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

‘ಮುಂಗಾರು ಬಿತ್ತನೆ ಸಂದರ್ಭದಲ್ಲಿ ವಾಡಿಕೆ ಪ್ರಕಾರ 53 ಮಿಲಿ ಮೀಟರ್ ಮಳೆ ಆಗಬೇಕಾಗಿತ್ತು. ಆದರೆ ಸುರಿದಿದ್ದು, ಬರೀ 8 ಮಿಲಿ ಮೀಟರ್ ಮಳೆ. ಸೆಪ್ಟಂಬರ್ ತಿಂಗಳಲ್ಲಿ 108 ಮಿಲಿ ಮೀಟರ್ ವಾಡಿಕೆ ಮಳೆ. ಆದರೆ, ಈ ಬಾರಿ 159 ಮಿಲಿ ಮೀಟರ್ ಮಳೆ ಬಿದ್ದಿದೆ’ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.

‘ಮುಂಗಾರು ಆರಂಭದಲ್ಲಿ ನಿರೀಕ್ಷಿತ ಮಳೆ ಸುರಿಯಲಿಲ್ಲ. ಅದಾಗ್ಯೂ, ರೈತರು ಕೊಳವೆ ಬಾವಿ ನೆಚ್ಚಿ ಬಿತ್ತನೆ ಮಾಡಿದ್ದರು. ಇನ್ನೇನು ಬೆಳೆ ಕಟಾವಿಗೆ ಬಂದಿದೆ ಎನ್ನುವಾಗ ಮಳೆ ದಿಢೀರ್ ಎಂದು ನಿರಂತರವಾಗಿ ಸುರಿಯಿತು. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ’ ಎಂದು ಬಂಕಾಪುರ ರೈತ ಬಸವರಾಜ ವಳಗೇರಿ ಹೇಳಿದರು.

‘ಈ ಹಂತದಲ್ಲಿ ಸುರಿದ ಮಳೆಗೆ ಶೇಂಗಾ, ಗೋವಿನಜೋಳ ಹಾಗೂ ಸೋಯಾಬಿನ್‌ ಬೀಜ ಮೊಳಕೆ ಒಡೆದು ಹಾಳಾಗಿವೆ. ಅದರಂತೆ ಬೆಳೆದು ನಿಂತ ಹತ್ತಿಯು ಮಳೆ ನೀರಿನೊಂದಿಗೆ ಮಣ್ಣು ಪಾಲಾಗಿದೆ. ಒಟ್ಟಾರೇ, ಇಡೀ ಮುಂಗಾರು ಬೆಳೆಗಳು ರೈತರ ಕೈ ಸೇರದೇ ನಷ್ಟ ಉಂಟು ಮಾಡಿವೆ’ ಎಂದು ಅವರು ಅಳಲು ತೋಡಿಕೊಂಡರು.
ಶೇಕಡಾ 80ರಷ್ಟು ಬೆಳೆ ಹಾಕಿ: ಕಳೆದೆರಡು ತಿಂಗಳಲ್ಲಿ ಸುರಿದ ಮಳೆಗೆ ತಾಲ್ಲೂಕಿನಲ್ಲಿ ಶೇಕಡಾ 80ರಷ್ಟು ಬೆಳೆಗಳು ಹಾನಿಗೊಂಡಿವೆ.

ತಾಲ್ಲೂಕಿನಲ್ಲಿ 38,870 ಸಾವಿರ ಹೆಕ್ಟೇರ್ ಭೂಪ್ರದೇಶ ಸಾಗುವಳಿ ಕ್ಷೇತ್ರ ಇದ್ದು, ಅದರಲ್ಲಿ ಅಂದಾಜು 38,300 ಹೆಕ್ಟೇರ್‌ ಭೂಪ್ರದೇಶದಲ್ಲಿ ಬಿತ್ತನೆ ಮಾಡಲಾಗಿತ್ತು.
‘ಈ ಪೈಕಿ 8,790 ಹೆಕ್ಟೇರ್‌ನಲ್ಲಿ ಹತ್ತಿ ಬಿತ್ತನೆ ಆಗಿತ್ತು. ಅದರಲ್ಲಿ ಮಳೆ ಅಬ್ಬರಕ್ಕೆ 7,280 ಹೆಕ್ಟೇರ್‌ನಷ್ಟು ಪ್ರದೇಶದ ಬೆಳೆ ನಾಶಗೊಂಡಿದೆ. ಈ ಬಾರಿ 5,575 ಹೆಕ್ಟೇರ್‌ ಪ್ರದೇಶದಲ್ಲಿ ಶೇಂಗಾ ಬಿತ್ತನೆ ಆಗಿತ್ತು.

ಅದರಲ್ಲಿ 4,100 ಹೆಕ್ಟೇರ್‌ನಷ್ಟು ಶೇಂಗಾ ವರುಣನ ಅಬ್ಬರಕ್ಕೆ ಹಾನಿಗೊಂಡಿದೆ. ಇನ್ನು, ಭತ್ತ ಬಿತ್ತನೆ ಮಾಡಿದ್ದ 8,300 ಹೆಕ್ಟೇರ್‌ ಪೈಕಿ, 6,700 ಹೆಕ್ಟರ್‌ ಪ್ರದೇಶದಲ್ಲಿನ ಬೆಳೆ ಬಹುತೇಕ ಹಾನಿಗೆ ಈಡಾಗಿದೆ. ಅಂದಾಜು 10,700 ಸಾವಿರ ಹೆಕ್ಟೇರ್‌ ಭೂಮಿಯಲ್ಲಿ ಬಿತ್ತಿದ್ದ ಗೋವಿನ ಜೋಳವೂ ಸಾಕಷ್ಟು ಹಾನಿಗೊಂಡಿದೆ.

ತಾಲ್ಲೂಕಿನಲ್ಲಿ ಬಿತ್ತನೆಯಾಗಿದ್ದ ಅಂದಾಜು 3,750 ಹೆಕ್ಟೇರ್‌ ಸೋಯಾಬಿನ್‌ ಪೈಕಿ, 3,200 ಹೆಕ್ಟೇರ್‌ನಷ್ಟು ಬೆಳೆ ನಾಶವಾಗಿದೆ’ ಎಂದು ಕೃಷಿ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ‘ಈ ವರ್ಷ ಯಾವುದೇ ಬೆಳೆಯೂ ಸಮರ್ಪಕವಾಗಿ ಕೈ ಸೇರಿಲ್ಲ. ಮಳೆಯನ್ನೇ ನಂಬಿ ಬದುಕುವ ರೈತರ ಬದುಕು ಅತಂತ್ರದಲ್ಲಿ ಸಿಲುಕಿನ ನರಳುವಂತಾಗಿದೆ’ ಎಂದು ಹುಲಗೂರಿನ ರೈತ ಸಿದ್ದನಗೌಡ ಮರಿಗೌಡ್ರ ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT