ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಂಬಿ ಹರಿಯುತ್ತಿದೆ ಗಲೀಜು ನೀರು: ಮೂಗು ಮುಚ್ಚಿಕೊಳ್ಳಿ!

Last Updated 27 ಅಕ್ಟೋಬರ್ 2017, 6:59 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ಪಿ.ಬಿ. ರಸ್ತೆಯ ಹೊಸೂರು ವೃತ್ತದ ಬಳಿ ಇರುವ ಶೆಲ್ಲಿಕೇರಿ ಕ್ರಾಸ್ ಬಳಿ ಕಳೆದ 10 ದಿನಗಳಿಂದ ಮ್ಯಾನ್‌ಹೋಲ್‌ ಒಡೆದು ಉಕ್ಕಿ ಹರಿಯುತ್ತಿದೆ. ಇದರಿಂದ ಮುಖ್ಯರಸ್ತೆಯಲ್ಲಿ ಓಡಾಡುವ ವಾಹನ ಸವಾರರು, ಪಾದಚಾರಿಗಳು ಮತ್ತು ಸ್ಥಳೀಯ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ.

ಶೆಲ್ಲಿಕೇರಿ ಕ್ರಾಸ್‌ನಲ್ಲಿ ಇರುವ ಕಟ್ಟಡದ ಸಮೀಪ ಅನೇಕ ವಾಣಿಜ್ಯ ಕಟ್ಟಡಗಳು ಇವೆ. ಸಾಕಷ್ಟು ಸಂಖ್ಯೆಯಲ್ಲಿ ಜನರು ಇಲ್ಲಿ ಓಡಾಡುತ್ತಾರೆ. ಗಲೀಜು ನೀರು ನೋಡಿದ ಕೂಡಲೇ ಮೂಗು ಮುಚ್ಚಿಕೊಳ್ಳುತ್ತಾರೆ. ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಾರೆ. ವಾಹನ ಸವಾರರು, ಪಾದಚಾರಿಗಳು ಸ್ವಲ್ಪ ಎಚ್ಚರ ತಪ್ಪಿದರೂ ಗಲೀಜು ನೀರು ಮೈಮೇಲೆ ಸಿಡಿಯಲಿದೆ.

ಅನತಿ ದೂರದಲ್ಲೇ ಇರುವ ಅಯ್ಯಪ್ಪ ಗುಡಿಯ ಮುಂದಿನ ಖಾಲಿ ಜಾಗದಲ್ಲಿ ಮ್ಯಾನ್‌ಹೋಲ್‌ ಒಡೆದು ಉಕ್ಕಿ ಹರಿಯುತ್ತಿದೆ. ಇಡೀ ಮೈದಾನ ಗಲೀಜು ನೀರಿನಿಂದ ಆವರಿಸಿ ಪಿ.ಬಿ. ರಸ್ತೆಯ ಒಂದು ಬದಿಯಲ್ಲಿ ಹರಿಯುತ್ತಿದೆ. ಇಲ್ಲಿನ ಸ್ಥಳೀಯ ನಿವಾಸಿಗಳು, ಪಾದಚಾರಿಗಳು ದುರ್ನಾತವನ್ನೇ ಸೇವಿಸಿ ಅನಿವಾರ್ಯವಾಗಿ ದಿನದೂಡುತ್ತಿದ್ದಾರೆ.

‘ಸುಮಾರು ಹತ್ತು ದಿನಗಳಿಂದ ಗಲೀಜು ನೀರು ಇಲ್ಲಿ ಹರಿಯುತ್ತಿದೆ. ಯಾರೂ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ನೀರು ಹರಿದು ಹೋಗಲು ಸಣ್ಣ ಹಳ್ಳ ತೋಡಿದ್ದಾರೆ ಹೊರತು ಬಂದ್‌ ಆಗಿರುವ ಮ್ಯಾನ್‌ಹೋಲ್‌ ಸರಿಪಡಿಸಿಲ್ಲ. ನಿತ್ಯ ಮೂಗು ಮುಚ್ಚಿಕೊಂಡೇ ಓಡಾಡಬೇಕಾದ ಪರಿಸ್ಥಿತಿ ಇದೆ.

ಗಲೀಜು ನೀರಿನ ಮೇಲೆ ವಾಹನ ಬಿಟ್ಟರೆ ಅದು ಮೈಮೇಲೆ ಸಿಡಿಯುತ್ತದೆ. ಪಿ.ಬಿ. ರಸ್ತೆಯಲ್ಲಿ ನಿತ್ಯ ಅಧಿಕಾರಿಗಳು ಓಡಾಡುತ್ತಾರೆ. ನೋಡಿಯೂ ನೋಡದಂತೆ ಹೋಗುತ್ತಾರೆ. ಇನ್ನಾದರೂ ಇತ್ತ ಗಮನ ಹರಿಸಿ ಮ್ಯಾನ್‌ಹೋಲ್‌ ಸರಿಪಡಿಸಬೇಕು’ ಎಂದು ಹೊಸೂರು ನಿವಾಸಿ ಮುಕುಂದ ಮೆಹರವಾಡೆ ‘ಪ್ರಜಾವಾಣಿ’ಗೆ ತಿಳಿಸಿದರು.

’ಅಯ್ಯಪ್ಪ ಗುಡಿ ಮುಂಭಾಗದ ಮೈದಾನದಲ್ಲಿ ಇರುವ ಖಾಲಿ ಜಾಗದಲ್ಲಿ ಗಲೀಜು ನೀರು ಹರಿಯಲು ಆರಂಭವಾಗಿ 20 ದಿನಗಳೇ ಕಳೆದಿವೆ. ಸ್ಥಳೀಯರು ಪಾಲಿಕೆ ನಿಯಂತ್ರಣ ಕೊಠಡಿಗೆ ದೂರು ನೀಡಿದ್ದರೂ ಇನ್ನೂ ಸರಿಪಡಿಸಿಲ್ಲ. ಸುತ್ತಮುತ್ತಲು ಇರುವ ನಿವಾಸಿಗಳು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.

ಗಾಳಿ ಬೀಸಿದರೆ ದುರ್ನಾತ ಮೂಗಿಗೆ ಬಡಿಯುತ್ತದೆ. ಗಲೀಜು ನೀರು ಹರಿಯುವುದನ್ನ ನೋಡಿದರೆ ವಾಕರಿಕೆ ಬರುತ್ತದೆ. ಮ್ಯಾನ್‌ಹೋಲ್‌ ಸರಿಪಡಿಸಲು ಪಾಲಿಕೆ ಅಧಿಕಾರಿಗಳು ಇನ್ನು ಎಷ್ಟು ದಿನ ತೆಗೆದುಕೊಳ್ಳುತ್ತಾರೋ ಗೊತ್ತಿಲ್ಲ’ ಎಂದು ಸ್ಥಳೀಯ ವೀರಣ್ಣ ಅಂಗಡಿ ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT