ಪ್ರತಿ ಗಿಡದಿಂದ 45ರಿಂದ 53 ಕೆಜಿ ಇಳುವರಿ!

ಗುರುವಾರ , ಜೂನ್ 27, 2019
23 °C

ಪ್ರತಿ ಗಿಡದಿಂದ 45ರಿಂದ 53 ಕೆಜಿ ಇಳುವರಿ!

Published:
Updated:
ಪ್ರತಿ ಗಿಡದಿಂದ 45ರಿಂದ 53 ಕೆಜಿ ಇಳುವರಿ!

ಚಿಂಚೋಳಿ: ಹೈದರಾಬಾದಿನಲ್ಲಿ ಲೇವಾದೇವಿ ವ್ಯವಹಾರ ನಡೆಸುತ್ತಿದ್ದ ರೈತ ಮಾಣಿಕರೆಡ್ಡಿ ಪಟಲೋಲ್‌ ಅವರು ಆಸಕ್ತಿಯಿಂದ ಕೃಷಿಯಲ್ಲಿ ತೊಡಗಿದ್ದು, ಕಳೆದ 5 ವರ್ಷಗಳಿಂದ ಗಮನಾರ್ಹ ಸಾಧನೆ ಮಾಡಿದ್ದಾರೆ. ರಾಜ್ಯದ ಗಡಿಗೆ ಹೊಂದಿಕೊಂಡ ಕುಂಚಾವರಂ ಪಕ್ಕದಲ್ಲಿ ಬರುವ ತೆಲಂಗಾಣ ರಾಜ್ಯಕ್ಕೆ ಸೇರಿದ ತೋರಮಾಮಡಿ ಗ್ರಾಮದ ರೈತ ಮಾಣಿಕರೆಡ್ಡಿ ಪಟಲೋಲ್‌ ಅವರ ತೋಟದ ಬಾಳೆ ಬೆಳೆ ನೋಡುವುದಕ್ಕೆ ರೈತರು ದೂರದ ಊರುಗಳಿಂದ ಬಂದು ಹೋಗುತ್ತಿದ್ದಾರೆ.

ಗ್ಯಾಂಡ್‌ 9 (ಅಂಗಾಂಶ) ತಳಿಯ ಬಾಳೆ ಬೇಸಾಯದ ಮೂಲಕ ಗಮನ ಸೆಳೆದ ಈ ರೈತನ ತೋಟದಲ್ಲಿ ಸದ್ಯ ಬಾಳೆಯ ಎರಡನೇ ಫಸಲು ನೋಡಲು ಸಿಗುತ್ತದೆ. ಇದರಲ್ಲಿ ಈಗಾಗಲೇ ಶೇ 75ರಷ್ಟು ಫಸಲು ಮಾರಾಟ ಮಾಡಿದ್ದಾರೆ.

ಬದು ಮಾಡದೇ ಒಂದು ಸಸಿಯಿಂದ ಮತ್ತೊಂದು ಸಸಿಗೆ 7 ಅಡಿ ಅಂತರವಿಟ್ಟು ಸಸಿ ನೆಟ್ಟಿದ್ದು ರೈತನಿಗೆ ವರದಾನವಾಗಿ ಪರಿಣಮಿಸಿದೆ. ಜತೆಗೆ ಕೋಳಿ ಗೊಬ್ಬರ, ತಿಪ್ಪೆ ಗೊಬ್ಬರ ಬಳಸಿದ ಇವರು, ಬೆಳೆಯನ್ನು ರೋಗದಿಂದ ರಕ್ಷಿಸಿಕೊಳ್ಳಲು ಮೊಬೈಲ್‌ ಆ್ಯಪ್‌ ಮೊರೆ ಹೋಗಿ ಯಶಸ್ವಿಯಾಗಿದ್ದಾರೆ.

ರೋಗಗ್ರಸ್ತ ಸಸಿ ಎಲೆ, ಕಾಂಡ, ಬೇರು, ಹೂವು, ಗೊನೆಗಳ ಫೋಟೊ ತೆಗೆದು ಆ್ಯಪ್‌ಗೆ ಅಪಲೋಡ್‌ ಮಾಡುತ್ತಾರೆ. ಫೋಟೊ ಪರಿಶೀಲಿಸಿ ಅದಕ್ಕೆ ಪರಿಹಾರ ಕ್ರಮಗಳನ್ನು ಕರೆ ಮಾಡಿ ತಿಳಿಸುತ್ತಾರೆ. ಇದು ನನಗೆ ಅತ್ಯಂತ ಉಪಯುಕ್ತವಾಗಿದೆ ಎಂದು ರೈತ ಮಾಣಿಕರೆಡ್ಡಿ ವಿವರಿಸಿದರು.

ಸೆಪ್ಟೆಂಬರ್‌ 2015ರಲ್ಲಿ ಬಾಳೆ ಸಸಿ ನೆಟ್ಟ ಇವರು 2 ಎಕರೆ 30 ಗುಂಟೆ ಜಮೀನಿನಲ್ಲಿ ಇಲ್ಲಿವರೆಗೆ ₹12.5 ಲಕ್ಷ ಆದಾಯ ಜೇಬು ತುಂಬಿಸಿಕೊಂಡಿದ್ದಾರೆ. ಇನ್ನೂ ಒಂದು ಲಕ್ಷ ಆದಾಯ ಬರಲಿದೆ ಎಂದು ವಿಶ್ವಾಸದಿಂದ ನುಡಿದರು.

ಮೊದಲ ಫಸಲಿನಲ್ಲಿ ಪ್ರತಿ ಗಿಡವು 45ರಿಂದ 53 ಕೆಜಿ ಇಳುವರಿ ನೀಡಿದರೆ, ಎರಡನೇ ಫಸಲಿನಲ್ಲಿ 36ರಿಂದ42 ಕೆಜಿ ಇಳುವರಿ ಬಂದಿದೆ. ಕಳೆದ ವರ್ಷ ಕೆಜಿಗೆ ₹12.5 ದರ ಲಭಿಸಿದರೆ ಪ್ರಸಕ್ತ ವರ್ಷ ₹11 ದರ ಲಬಿಸಿದೆ. ಮೊದಲನೇ ಫಸಲು 90 ಟನ್‌ ಇಳುವರಿ ನೀಡಿದರೆ, ಎರಡನೇ ಫಸಲು 60 ಟನ್‌ ಇಳುವರಿ ಪಡೆಯಲಾಗಿದೆ. ಇನ್ನೂ 15 ಟನ್‌ ಇಳುವರಿ ಗಿಡದಲ್ಲಿದೆ.

‘ಕಲಬುರ್ಗಿ ಹಾಗೂ ಬೀದರ್‌ ಜಿಲ್ಲೆಯಲ್ಲಿ ಇಷ್ಟು ಪ್ರಮಾಣದಲ್ಲಿ ಬಾಳೆ ಇಳುವರಿ ಬಂದಿದ್ದು ಇದೇ ಮೊದಲು. ಒಂದೊಂದು ಗಿಡದ ಗೊನೆಯಲ್ಲಿ 20ರಿಂದ 21 ಹಣಿಗೆ ಬಿಟ್ಟಿದ್ದು, ಎರಡನೇ ಫಸಲಿನಲ್ಲಿ 14ರಿಂದ15 ಹಣಿಗೆ ಬಿಟ್ಟಿದ್ದು ವಿರಳವಾಗಿದೆ’ ಎನ್ನುತ್ತಾರೆ ಸಿಂಜೆಂಟಾ ಕಂಪೆನಿಯ ಕ್ಷೇತ್ರ ಸಹಾಯಕ ರಮೇಶ ಪೋಲಕಪಳ್ಳಿ. ‘ಕೇವಲ ಎಕರೆಗೆ ₹65 ಸಾವಿರ ಖರ್ಚು ಮಾಡಿದ ನಾನು ರಸಗೊಬ್ಬರಗಳಿಗಿಂತಲೂ ಹೆಚ್ಚಾಗಿ ತಿಪ್ಪೆ ಗೊಬ್ಬರ ಬಳಸಿದ್ದೇನೆ. ಬಂಪರ್‌ ಆದಾಯ ಸಿಕ್ಕಿದೆ.

ಇಲ್ಲಿನ ಬೆಳೆ ನೋಡಲು ಚಿಂಚೋಳಿ ತಾಲ್ಲೂಕಿನ ಚಿಕ್ಕಲಿಂಗದಳ್ಳಿ, ಅಣವಾರ್‌, ಪೋಲಕಪಳ್ಳಿ, ಕಲ್ಲೂರು, ಸೋಮಲಿಂಗದಳ್ಳಿಯ ರೈತರು ಭೇಟಿ ನೀಡಿದ್ದಾರೆ. ನಾನು ಎರಡು ತಿಂಗಳ ಹಿಂದೆ ತೋರಮಾಮಡಿಗೆ ಭೇಟಿ ನೀಡಿ ಬಾಳೆ ಬೆಳೆ ಪರಿಶೀಲಿಸಿದ್ದೇನೆ.

ಮಾಣಿಕರೆಡ್ಡಿ ಅವರಿಂದ ಪಡೆದ ಮಾಹಿತಿಯಂತೆ ಅಣವಾರ ಗ್ರಾಮದ ನನ್ನ ತೋಟದಲ್ಲಿ ಸಸಿಯಿಂದ ಸಸಿಗೆ 7 ಅಡಿ ಅಂತರದಲ್ಲಿ ಬಾಳೆ ಸಸಿ ನೆಟ್ಟು 5ಎಕರೆಯಲ್ಲಿ ಬೇಸಾಯದಲ್ಲಿ ತೊಡಗಿದ್ದೇನೆ’ ಎಂದು ಝರಣಪ್ಪ ಪೂಜಾರಿ ‘ಪ್ರಜಾವಾಣಿ’ಗೆ ತಿಳಿಸಿದರು. ಮಾಹಿತಿಗಾಗಿ (ಮಾಣಿಕರೆಡ್ಡಿ ತೋರಮಾಮಡಿ: 09959999410) ಸಂಪರ್ಕಿಸಬಹುದಾಗಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry