ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

100ಸಿಸಿ ಒಳಗಿನ ದ್ವಿಚಕ್ರ ವಾಹನ ನಿಷೇಧ: ನೀವು ತಿಳಿದಿರಲೇ ಬೇಕಾದ ವಿಷಯಗಳು

ನಿದ್ದೆಗೆಡಿಸಿದ ಕಾಯ್ದೆ 143!
Last Updated 30 ಅಕ್ಟೋಬರ್ 2017, 14:17 IST
ಅಕ್ಷರ ಗಾತ್ರ
ADVERTISEMENT

ಬೆಂಗಳೂರು: ಪ್ರೀತಿ, ಪ್ರೇಮ ಹಾಗೂ ಪ್ರಣಯದ ಹಿಂದೆ ಬೀಳುವ ಹುಡುಗ, ಹುಡುಗಿಯರ ಸಂವಹನದ ಗುಪ್ತ ಸಂಖ್ಯೆ 143. ಕೆಲವರು ಇದನ್ನು ತಮ್ಮ ವಾಹನದ ಮೇಲೆ ಹಾಕಿಸಿಕೊಳ್ಳುವುದುಂಟು. ಇನ್ನೂ ಕೆಲವರು ಬಹಳಷ್ಟು ’ಕಸರತ್ತು’ ಮಾಡಿ ಈ ಸಂಖ್ಯೆಯನ್ನೇ ಬೈಕ್‌ನ ನೋಂದಣಿ ಸಂಖ್ಯೆಯನ್ನಾಗಿಸಿಕೊಂಡು ಬೀಗುವುದೂ ಉಂಟು. ಆದರೆ ಇದೇ ಸಂಖ್ಯೆ ಇಂದು ಸರ್ಕಾರ, ಸಾರಿಗೆ ಇಲಾಖೆ, ಬೈಕ್‌ ತಯಾರಕರ ನಿದ್ದೆಗೆಡಿಸಿದೆ.

143 ಎಂದು ಯಾರನ್ನಾದರೂ ಕೇಳಿದರೆ ಸುಲಭವಾಗಿ I LOVE YOU, I LIKE YOU, I KISS YOU – ಹೀಗೆ ಹದಿಹರೆಯದಲ್ಲಿ ತಲೆಯಲ್ಲಿ ಹೊಯ್ದಾಡುವ ವಯೋಸಹಜ ವಾಕ್ಯಗಳು ಹೊರಬಂದರೆ ತಪ್ಪೇನೂ ಇಲ್ಲ. ಆದರೆ ವಯಸ್ಸಾದವರನ್ನೂ ಕಾಡುವ 143 (3) ಈ ಸಂಖ್ಯೆಯಲ್ಲಿ ನಮೂದಾಗಿರುವ ಕಾಯ್ದೆ 100ಸಿಸಿ ಒಳಗಿನ ಬೈಕ್‌ಗಳಲ್ಲಿ ಹಿಂಬದಿ ಸವಾರ ಕೂರುವಂತಿಲ್ಲ ಎಂದು ಹೈಕೋರ್ಟ್‌ ಹೇಳುವವರೆಗೂ ಸಾರಿಗೆ ಇಲಾಖೆಯ ಬಹಳಷ್ಟು ಅಧಿಕಾರಿಗಳಿಗೇ ತಿಳಿದಿರಲಿಲ್ಲ ಎಂದರೆ ಆಶ್ಚರ್ಯವಾದರೂ ಸತ್ಯ.

2009ರಲ್ಲಿ ಮೈಸೂರಿನಲ್ಲಿ ನಡೆದ ಒಂದು ಪ್ರಕರಣ. ಹೇಮಂತ್‌ ಎಂಬುವವರು ತಮ್ಮ ಸ್ನೇಹಿತನೊಂದಿಗೆ ಬೈಕ್‌ನ ಹಿಂಬದಿ ಕುಳಿತು ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಸಂಭವಿಸಿದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡರು. ಬೈಕ್‌ಗೆ ನ್ಯೂ ಇಂಡಿಯಾ ವಿಮಾ ಕಂಪೆನಿಯಲ್ಲಿ ವಿಮೆ ಮಾಡಿಸಿದ್ದರು. ಹಿಂಬದಿ ಸವಾರನಿಗೆ ವಿಮೆ ಸಿಗಬೇಕು ಎಂಬ ವಾದ ನಡೆಯುತ್ತಿತ್ತು. ಈ ಸಂದರ್ಭದಲ್ಲಿ 1989ರ ಕರ್ನಾಟಕ ಮೋಟಾರು ಕಾಯ್ದೆಯಲ್ಲಿನ 143 (3) ಉಲ್ಲೇಖಿಸಿದಂತೆ 100ಸಿಸಿ ಒಳಗಿನ ಬೈಕ್‌ನಲ್ಲಿ ಒಬ್ಬರೇ ಪ್ರಯಾಣಿಸಬೇಕು ಎಂಬ ನಿಯಮವನ್ನು ಮುಂದಿಟ್ಟ ವಕೀಲರ ವಾದವನ್ನು ಹೈಕೋರ್ಟ್‌ ಪುರುಸ್ಕರಿಸಿತು. ಇದು ವಾಹನ ಮಾಲೀಕರಿಗೆ ಆಘಾತವನ್ನುಂಟು ಮಾಡಿದರೆ, ಸಾರಿಗೆ ಇಲಾಖೆ, ವಾಹನ ತಯಾಕರನ್ನು ಪೆಚ್ಚಾಗಿಸಿತು.

1989ರಲ್ಲಿ ಜಾರಿಗೆ ಬಂದ ಕರ್ನಾಟಕ ಮೋಟಾರು ವಾಹನ ಕಾಯ್ದೆಯ 143 (3) ಈಗ ಇಡೀ ರಾಷ್ಟ್ರದ ಗಮನ ಸೆಳೆದಿದೆ. ಈ ಆದೇಶದಿಂದಾಗಿ ರಾಜ್ಯದ ಎಲ್ಲಾ ಪ್ರಾದೇಶಿಕ ಸಾರಿಗೆ ಇಲಾಖೆಗಳಿಗೆ ಸುತ್ತೋಲೆ ಹೊರಡಿಸಿರುವ ಸರ್ಕಾರ 100ಸಿಸಿ ಒಳಗಿನ ಬೈಕ್‌ಗಳ ನೋಂದಾಯಿಸದಂತೆ ಆದೇಶ ಮಾಡಿದೆ. ಹೀಗಾಗಿ ವರ್ಷಗಟ್ಟಲೆ ಹಣ ಕೂಡಿಟ್ಟು ದೀಪಾವಳಿಗೆ 100ಸಿಸಿ ಒಳಗಿನ ಬೈಕ್‌ಗಳನ್ನು ತಿಳಿಯದೇ ಖರೀದಿಸಿದವರು ಈಗ ಅಕ್ಷರಶಃ ಆತಂಕ ಹಾಗೂ ಗೊಂದಲದಲ್ಲಿದ್ದಾರೆ. ಈ ಆದೇಶ ಹೊರಬೀಳುವವರೆಗೂ 100ಸಿಸಿಗಿಂತ ಕಡಿಮೆ ಸಾಮರ್ಥ್ಯದ ಬೈಕ್‌ಗಳು ನೋಂದಣಿಯಾಗುವಾಗ 1+1 ಎಂದೇ ನಮೂದಾಗಿದೆ. ಈಗ ನೋಂದಣಿ ಇಲ್ಲದೆ ಬೈಕ್‌ಗಳು ಮನೆಯಲ್ಲಿ ನಿಂತಿವೆ. ರಸ್ತೆಗಿಳಿಸಿದ ಸ್ಥಿತಿ ಸವಾರರದ್ದು.

ಭಾರತದಲ್ಲಿವೆ ಅತಿ ಹೆಚ್ಚು 100ಸಿಸಿ ಬೈಕ್‌ಗಳು
ಒಂದು ಕಾಲದಲ್ಲಿ ಸೈಕಲ್‌ ಖರೀದಿಯೇ ಆರ್ಥಿಕ ಪ್ರಗತಿಯ ಸೂಚಕದಂತಿತ್ತು. ಕಾಲ ಉರುಳಿದಂತೆ ಮೊಪೆಡ್‌ ಖರೀದಿ, 50ಸಿಸಿ, 80ಸಿಸಿ (ಹಾಲು ಮಾರುವವರು ಹೆಚ್ಚು ಬಳಸುವ ಎಂಎಐಟಿ) ಹೀಗೆ ಪ್ರಗತಿ ಹೊಂದುತ್ತಾ ಸಾಗುವ ಹಾದಿಯಲ್ಲಿ 100ಸಿಸಿ ಬೈಕ್‌ ಖರೀದಿ ಒಂದು ಘಟ್ಟವಿದ್ದಂತೆ. ಬುಲೆಟ್‌, ಕೆಟಿಎಂ ಡ್ಯೂಕ್‌ ಈ ವರ್ಗದವರ ಪಾಲಿಗೆ ಸದ್ಯಕ್ಕಿನ್ನೂ ಗಗನ ಕುಸುಮ. ಆದರೆ ₹50ಸಾವಿರ ಒಳಗಿನ ಬೈಕ್‌ ಖರೀದಿಸಿ, ಅದರಲ್ಲೇ ಇಡೀ ಕುಟುಂಬ ಸಂತೋಷ ಕಂಡುಕೊಂಡಿದ್ದಾರೆ.

ಒಂದು ವಾಹನ ಖರೀದಿ ಎಂದರೆ ಭಾರತದಲ್ಲಿ ಮನೆಗೊಬ್ಬ ಸದಸ್ಯನನ್ನು ಕರೆತಂದಂತೆ. ಮನೆಗೆ ಜೋಡಿ ಎತ್ತು ತಂದರೆ ಅದು ಮನೆಯ ಕಳೆ ಹೆಚ್ಚಿಸುವಂತೆ ಅದರ ಆರೈಕೆ, ಪೂಜೆ ಇತ್ಯಾದಿಗಳು ನಡೆಯುತ್ತವೆ. ಹಾಗೆಯೇ ಅದನ್ನು ಉಳುಮೆಗೂ ಬಳಸುತ್ತಾರೆ, ಜಾತ್ರೆ, ಸಮಾರಂಭಗಳಿಗೆ ಸಿಂಗಾರಗೊಳಿಸಿ ಅದರ ಮೇಲೆ ಕೂತು ಹೋಗಲೂ ಬಳಕೆಯಾಗುತ್ತದೆ. ಹಾಗೆ ದೀಪಾವಳಿಯಲ್ಲಿ ಅತ್ಯಂತ ಶ್ರೇಷ್ಠ ಸ್ಥಾನದಲ್ಲಿ ಪೂಜೆಗೂ ಭಾಜನವಾಗುತ್ತದೆ.

ನಾವು ಖರೀದಿಸುವ ಬೈಕ್‌ಗಳ ಸ್ಥಿತಿಯೂ ಹೀಗೇ. ಮನೆಗೆ ಬರುವಾಗ ಪೂಜೆ, ಬಲೂನು ಕಟ್ಟಿ, ಹಾರ ಹಾಕಿ ಕರೆತರುತ್ತೇವೆ. ನಂತರ ಹೆಂಡತಿ, ಮಕ್ಕಳೊಂದಿಗೆ ಪೇಟೆ ಸುತ್ತಲೂ ಅದೇ ಬೈಕ್ ಬಳಕೆ, ಮನೆಗೆ ಮೇವಿನ ಮೂಟೆ ತರಲೂ ಅದೇ ವಾಹನ, ಹಾಲು ಮಾರಲೂ ಅದೇ ವಾಹನ, ವ್ಯಾಪಾರ ನಡೆಸುವವರು ಅದನ್ನೇ ಮಿನಿ ಟ್ರಕ್ ಎಂಬಂತೆ ಭಾವಿಸದಿರೂ ಅದು ತಪ್ಪಲ್ಲ.

100ಸಿಸಿ ಎಂದು ಮಾರಾಟವಾಗುವ ಹಿರೊ ಸ್ಪ್ಲೆಂಡರ್‌, ಟಿವಿಎಸ್‌ ಸ್ಪೋರ್ಟ್‌, ಹಿರೊ ಡಿಲಕ್ಸ್‌, ಟಿವಿಎಸ್‌ ಎಕ್ಸೆಲ್‌ 100, ಕವಸಾಕಿ ಕೆಎಕ್ಸ್‌ 100 ಹೀಗೆ ನೂರು ಸಿಸಿ ಎಂದು ಮಾರಟವಾಗುತ್ತಿದ್ದರೂ, ಇವುಗಳ ಎಂಜಿನ್‌ ಸಾಮರ್ಥ್ಯ 97ರಿಂದ 99ಸಿಸಿ. ಆದರೆ ಈವರೆಗೂ ಖರೀದಿದಾರರೂ ಸಿಸಿ ಬಗ್ಗೆ ಅಷ್ಟೊಂದು ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ ಹೈಕೋರ್ಟ್‌ನ ಈ ಆದೇಶದಿಂದಾಗಿ ಪ್ರತಿಯೊಬ್ಬರೂ ಸಿಸಿ ಎಂದರೇನು? ಎಂಬುದನ್ನು ಹುಡುಕುತ್ತಿದ್ದಾರೆ.

100ಸಿಸಿ ಎಂದು ಕಡಿಮೆ ಸಿಸಿ ಏಕೆ?
ಇದು ತಿರಾ ತಂತ್ರಜ್ಞಾನಕ್ಕೆ ಸಂಬಂಧಿಸಿದ ವಿಷಯ. ಇದಕ್ಕೊಂದು ಉದಾಹರಣೆ ತೆಗೆದುಕೊಳ್ಳೋಣ. ಆಭರಣ ತಯಾರಿಸುವಂತೆ ಅಕ್ಕಸಾಲಿಗರೊಬ್ಬರಿಗೆ ಹೇಳಿದ್ದೇವೆ ಎಂದಿಟ್ಟುಕೊಳ್ಳೋಣ. ತಯಾರಿಕೆಗೂ ಮೊದಲು 20ಗ್ರಾಂ ಚಿನ್ನದಲ್ಲಿ ಆಭರಣ ಸಿದ್ದಪಡಿಸುವುದಾಗಿ ಆತ ಹೇಳಿದ್ದಾನೆ. ಸಿದ್ಧಗೊಂಡ ನಂತರ ಅದು 21.250ಗ್ರಾಂ ಇದೆ. ಇದು ಸಾಧಾರಣವಾಗಿ ಚಿನ್ನ ಖರೀದಿಸುವ ಸಂದರ್ಭದಲ್ಲಿ ಇಂಥದ್ದೊಂದು ವ್ಯವಹಾರ ಸಹಜ. ಇದರಂತೆಯೇ ಬೈಕ್‌ಗ ಎಂಜಿನ್‌ ತಯಾರಿ ಸಂದರ್ಭದಲ್ಲೂ ನಿರ್ದಿಷ್ಟವಾಗಿ 100ಸಿಸಿ ಎಂಜಿನ್‌ ಸಿದ್ಧಪಡಿಸುವುದು ಕಷ್ಟಸಾಧ್ಯ. ಹೀಗಾಗಿ 97.2, 99, 98.7, 102ಸಿಸಿ ದ್ವಿಚಕ್ರ ವಾಹನಗಳು ಇವೆ. 350 ಸಿಸಿ ಬುಲೆಟ್‌ ಕೂಡಾ ನೋಂದಣಿ ಸಂದರ್ಭದಲ್ಲಿ ನಮೂದಾಗುವುದು 347ಸಿಸಿ ಎಂದೇ ಹೊರತು 350 ಸಿಸಿ ಎಂದಲ್ಲ.

ಆದರೆ ಮಾರುಕಟ್ಟೆ ದೃಷ್ಟಿಯಿಂದ ಇವುಗಳನ್ನು 100, 150, 200, 220, 350, 500ಸಿಸಿ ಎಂದು ಕರೆಯುವುದು ಸುಲಭ. ಆದರೆ ಈಗ ಹೈಕೋರ್ಟ್‌ನ ಈ ಆದೇಶ ಮಸೂರ ಹಿಡಿದು ಸಿಸಿ ನೋಡುವಂತೆ ಮಾಡಿರುವುದಂತೂ ಸುಳ್ಳಲ್ಲ. ಮೊದಲು ಬೈಕ್‌ ಖರೀದಿ ಸಂದರ್ಭದಲ್ಲಿ ಅದರ ಬೆಲೆ, ಹೊರನೋಟ, ಉಡುಗೊರೆ ಇತ್ಯಾದಿಗಳನ್ನು ಮಾತ್ರ ನೋಡುತ್ತಿದ್ದ ಗ್ರಾಹಕರು ಈಗ ತಪ್ಪದೇ ಸಿಸಿ ಕುರಿತು ವಿಚಾರಿಸುತ್ತಿದ್ದಾರೆ.

ಮುಂದೇನು?
ಹೈಕೋರ್ಟ್‌ನಲ್ಲಿ ನಡೆದ ಪ್ರಕರಣದಲ್ಲಿ ಸಾರಿಗೆ ಇಲಾಖೆಯನ್ನು ಪ್ರತಿವಾದಿಗಳನ್ನಾಗಿ ಮಾಡಿಲ್ಲ ಎಂದು ಇಲಾಖೆಯ ಅಧಿಕಾರಿಗಳು ಹೇಳುತ್ತಿದ್ದಾರೆ. ಒಂದೊಮ್ಮೆ ಆಗಿದ್ದರೆ ಅದಕ್ಕೆ ಪೂರಕ ದಾಖಲೆ ನೀಡಬಹುದಿತ್ತು. ಆದರೆ ಈಗ ಮೇಲ್ಮನವಿ ಸಲ್ಲಿಸುವುದೊಂದೇ ಬಾಕಿ.

ಹಾಗಿದ್ದರೆ ಮೇಲ್ಮನವಿ ಸಲ್ಲಿಸುವವರು ಯಾರು?
ಇದಕ್ಕೆ ಪ್ರತಿಕ್ರಿಯಿಸುವ ವಾಹನ ತಯಾರಕರು, ನಾವು ಒಕ್ಕುಟ ವ್ಯವಸ್ಥೆಯಲ್ಲಿದ್ದೇವೆ. ಹೀಗಿರುವಾಗ ಕರ್ನಾಟಕದಲ್ಲೊಂದು ಕಾನೂನು, ಮತ್ತೊಂದು ರಾಜ್ಯದಲ್ಲಿ ಬೇರೊಂದು ಕಾನೂನು ಮಾಡಿದರೆ ಒಂದೊಂದು ರಾಜ್ಯಕ್ಕೂ ಬೇರೆ ಬೇರೆ ವಾಹನ ತಯಾರಿಸಿ ಬಿಡಲು ಸಾಧ್ಯವೇ? ಇದಕ್ಕೆ ಏಕರೂಪ ಕಾನೂನು ರಚಿಸುವುದೇ ಒಳಿತು. ಎಂದೆನ್ನುತ್ತಿದ್ದಾರೆ. ಜತೆಗೆ ಮೇಲ್ಮನವಿ ಸಲ್ಲಿಸಲು ಸಿದ್ಧತೆಯನ್ನೂ ಆರಂಭಿಸಿದ್ದಾರೆ.

ಈಗಿರುವ ಕಟ್ಟಕಡೆಯ ಪ್ರಶ್ನೆ
ಗಡಿ ಪ್ರದೇಶದಲ್ಲಿ ಈ ಕಾನೂನು ಹೇಗೆ ಅನ್ವಯವಾಗುತ್ತದೆ. 100ಸಿಸಿ ಬೈಕ್‌ ಖರೀದಿ ಕರ್ನಾಟಕದಲ್ಲಾಗಿ, ಅಪಘಾತ ಪಕ್ಕದ ರಾಜ್ಯದಲ್ಲಾದರೆ ಅದಕ್ಕೆ ವಿಮೆ ಸಿಗಲಿದೆಯೇ? ಅಥವಾ ಪಕ್ಕದ ರಾಜ್ಯಕ್ಕೆ ಸೇರಿದ ಬೈಕ್‌ನಲ್ಲಿ ರಾಜ್ಯಕ್ಕೆ ಬಂದು ಇಲ್ಲಿ ಅಪಘಾತವಾದರೆ ಅವರಿಗೆ ವಿಮೆ ಸಿಗುವುದಿಲ್ಲವೇ? ಈಗಾಗಲೇ ಪ್ರಾದೇಶಿಕ ಸಾರಿಗೆ ಇಲಾಖೆ 100ಸಿಸಿ ಒಳಗಿನ ಬೈಕ್‌ಗಳಿಗೆ 1+1 ಎಂದೇ ನೋಂದಾಯಿಸಿಕೊಂಡಿದೆ. ಹಾಗಿದ್ದರೆ ಅವರ ಪಾಡೇನು? ಇಂಥ ಪ್ರಶ್ನೆಗಳಿಗೆ ಇನ್ನಷ್ಟೇ ಉತ್ತರ ದೊರೆಯಬೇಕಿದೆ.

100ಸಿಸಿ ಒಳಗಿನ ದ್ವಿಚಕ್ರ ವಾಹನಗಳು

ಟಿವಿಎಸ್‌ ಸ್ಕೂಟಿ ಪೆಪ್‌ ಪ್ಲಸ್‌  87.8ಸಿಸಿ
ಟಿವಿಎಸ್‌ ಸ್ಪೋರ್ಟ್‌  99.77ಸಿಸಿ
ಹಿರೊ ಎಚ್‌ಎಫ್ ಡಿಲಕ್ಸ್‌  97.2ಸಿಸಿ
ಟಿವಿಎಸ್‌ ಎಕ್ಸ್‌ಎಲ್‌ 100  99.7ಸಿಸಿ
 ಹಿರೊ ಸ್ಪ್ಲೆಂಡರ್‌ ಪ್ರೊ  97.2ಸಿಸಿ
ಬಜಾಜ್‌ ಸಿಟಿ 100  99.27ಸಿಸಿ
ಹಿರೊ ಫ್ಯಾಷನ್‌ ಪ್ರೊ ಐ3ಎಸ್‌  97.2ಸಿಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT