ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಾನಮುಕ್ತ ಗ್ರಾಮ: ಮನಪರಿವರ್ತನೆ ಅಗತ್ಯ’

Last Updated 27 ಅಕ್ಟೋಬರ್ 2017, 8:26 IST
ಅಕ್ಷರ ಗಾತ್ರ

ಕೊಪ್ಪಳ: ಗ್ರಾಮಗಳನ್ನು ಪಾನಮುಕ್ತಗೊಳಿಸಲು, ಜನರ ಮನಪರಿವರ್ತನೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಅಗತ್ಯ ಎಂದು ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಎಚ್.ಸಿ. ರುದ್ರಪ್ಪ ಹೇಳಿದರು. ಮದ್ಯಪಾನ ಮತ್ತು ಮಾದಕ ವಸ್ತುಗಳ ಬಳಕೆಯಿಂದಾಗುವ ದುಷ್ಪರಿಣಾಮಗಳ ಕುರಿತು ಜನಜಾಗೃತಿ ಮೂಡಿಸುವ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

’ಕೇವಲ ಕಾನೂನು ಪ್ರಯೋಗಿಸಿ, ಎಲ್ಲವನ್ನೂ ಸರಿಪಡಿಸಲು ಸಾಧ್ಯವಿಲ್ಲ. ಮದ್ಯ ಮತ್ತು ಮಾದಕಗಳ ಬಳಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಅರಿವು ಮೂಡಬೇಕು. ಮಹಿಳೆ ಮನಸ್ಸು ಮಾಡಿದಲ್ಲಿ, ತನ್ನ ಇಡೀ ಸಂಸಾರ ತಪ್ಪು ದಾರಿಗೆ ಹೋಗುವುದನ್ನು ತಡೆಗಟ್ಟಲು ಸಾಧ್ಯವಿದೆ. ಹೀಗಾಗಿ ಸಂಯಮ ಮಂಡಳಿಯು ಪಂಚಾಯತಿ ಮಟ್ಟದಿಂದ ತಾಲ್ಲೂಕು ಹಾಗೂ ಜಿಲ್ಲಾಮಟ್ಟದಲ್ಲಿ ಮಹಿಳಾ ಕೇಂದ್ರಿತ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಿದೆ’ ಎಂದರು.

'ಒಂದೆಡೆ ಅಬಕಾರಿ ಇಲಾಖೆಗೆ ಮದ್ಯ ಮಾರಾಟದ ಗುರಿ ನಿಗದಿಪಡಿಸಲಾಗುತ್ತಿದೆ. ಇನ್ನೊಂದೆಡೆ ಮದ್ಯಪಾನದ ದುಷ್ಪರಿಣಾಮಗಳ ಬಗ್ಗೆ ಸರ್ಕಾರವೇ ಜಾಗೃತಿ ಮೂಡಿಸಲು ಶ್ರಮ ಪಡುತ್ತಿದೆ. ಇದೇಕೆ ಹೀಗೆ ಎನ್ನುವ ಜಿಜ್ಞಾಸೆ ಜನರಲ್ಲಿ ಮೂಡುವುದು ಸಹಜ. ಆಹಾರ, ಹವ್ಯಾಸಗಳು ಆಯಾ ವ್ಯಕ್ತಿಯ ವೈಯಕ್ತಿಕ ವಿಷಯವಾಗಿದ್ದು, ಆಯಾ ಇಲಾಖೆಗಳು ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತವೆ.

ಈ ದಿಸೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ರಾಜ್ಯದಾದ್ಯಂತ ಮದ್ಯವರ್ಜನ ಶಿಬಿರಗಳನ್ನು ಹಮ್ಮಿಕೊಳ್ಳುತ್ತಿರುವುದು ಸ್ವಾಗತಾರ್ಹ. ಇಂತಹ ಶಿಬಿರಗಳಿಂದ ಈವರೆಗೆ ರಾಜ್ಯದಲ್ಲಿ 80 ಸಾವಿರ ಜನ ಪಾನಮುಕ್ತರಾಗಿದ್ದಾರೆ. ಒಟ್ಟಾರೆಯಾಗಿ ಮನ ಪರಿವರ್ತನೆ ಮಾಡುವುದು ಬಹು ಮುಖ್ಯ ಅಂಶವಾಗಿದೆ’ ಎಂದು ಹೇಳಿದರು.

’ಹಾಸ್ಟೆಲ್‍ಗಳಲ್ಲಿ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಬೇಕು. ಪೊಲೀಸ್ ಮತ್ತು ಅಬಕಾರಿ ಇಲಾಖೆಯವರು ಹಳ್ಳಿಗಳಲ್ಲಿ ಅಕ್ರಮವಾಗಿ ಮದ್ಯ ಪೂರೈಸುವವರ ಮೇಲೂ ಕ್ರಮ ಆಗಬೇಕು' ಎಂದು ರುದ್ರಪ್ಪ ಹೇಳಿದರು.

ಅಬಕಾರಿ ಉಪ ಅಧೀಕ್ಷಕ ಡಿ.ದೇಮಣ್ಣ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 139 ಪರವಾನಿಗೆ ಹೊಂದಿರುವ ಮದ್ಯ ಮಾರಾಟಗಾರರಿದ್ದು, ಕಳೆದ ವರ್ಷ ₹ 24 ಕೋಟಿ ಆದಾಯ ಸಂಗ್ರಹವಾಗಿದೆ ಎಂದರು. ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅನೂಪ್ ಶೆಟ್ಟಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT