ಲೇಡಿಹಿಲ್‌–ಪಿವಿಎಸ್‌: ನಡುವೆ ಅಡೆತಡೆ ರಹಿತ ರಸ್ತೆ

ಗುರುವಾರ , ಜೂನ್ 20, 2019
27 °C

ಲೇಡಿಹಿಲ್‌–ಪಿವಿಎಸ್‌: ನಡುವೆ ಅಡೆತಡೆ ರಹಿತ ರಸ್ತೆ

Published:
Updated:

ಮಂಗಳೂರು: ನಗರದ ಲೇಡಿಹಿಲ್‌ ವೃತ್ತದಿಂದ ಪಿವಿಎಸ್‌ ವೃತ್ತದವರೆಗಿನ ರಸ್ತೆಯನ್ನು ಅಡೆತಡೆ ಇಲ್ಲದ ರಸ್ತೆಯಾಗಿ (ಝೀರೋ ಟಾಲರೆನ್ಸ್‌ ರಸ್ತೆ) ಮೇಲ್ದರ್ಜೆಗೆ ಏರಿಸಲಾಗುವುದು ಎಂದು ಮೇಯರ್‌ ಕವಿತಾ ಸನಿಲ್‌ ಹೇಳಿದರು.

ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯ ವತಿಯಿಂದ ಗುರುವಾರ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ‘ಮೊದಲ ಹಂತದಲ್ಲಿ ಲೇಡಿಹಿಲ್‌ ವೃತ್ತದಿಂದ ಲಾಲ್‌ಬಾಗ್‌ವರೆಗಿನ ರಸ್ತೆಯನ್ನು ಮೇಲ್ದರ್ಜೆಗೆ ಏರಿಸಲಾಗುವುದು. ಸಂಚಾರಕ್ಕೆ ಯಾವುದೇ ಅಡೆತಡೆ ಇಲ್ಲದಂತೆ ರಸ್ತೆಯನ್ನು ರೂಪಿಸುವುದಲ್ಲದೆ, ರಸ್ತೆ ವಿಭಜಕಗಳನ್ನು ಸುಂದರಗೊಳಿಸಲಾಗುವುದು.

ಎರಡನೇ ಹಂತದಲ್ಲಿ ಲಾಲ್‌ಬಾಗ್‌ನಿಂದ ಪಿವಿಎಸ್‌ ವರೆಗಿನ ರಸ್ತೆಯನ್ನು ಮೇಲ್ದರ್ಜೆಗೇರಿಸಲಾಗುವುದು. ಇದಕ್ಕೆ ಸಂಬಂಧಿಸಿ ₹ 6.5 ಕೋಟಿ ವೆಚ್ಚದ ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿ ಅವರ ಅನುಮೋದನೆಗೆ ಕಳುಹಿಸಲಾಗುವುದು. ಒಟ್ಟು ಕಾಮಗಾರಿಗೆ ₹ 10 ಕೋಟಿಗೂ ಅಧಿಕ ಮೊತ್ತದ ಅಗತ್ಯವಿದೆ. ಆದರೆ ಸದ್ಯಕ್ಕೆ ಲಭ್ಯವಿರುವ ಹಣದಲ್ಲಿ ಕೇಬಲ್ ಮತ್ತು ವಿದ್ಯುತ್‌ ತಂತಿಗಳನ್ನು ನೆಲದಡಿ ಅಳವಡಿಸುವ ಉದ್ದೇಶವಿದೆ. ಒಳಚರಂಡಿಯನ್ನು ಸಮರ್ಪಕಗೊಳಿಸಲಾಗುವುದು’ ಎಂದು ಹೇಳಿದರು.

ಸ್ಮಾರ್ಟ್‌ ಸಿಟಿ ಯೋಜನೆಯಡಿಯ ವ್ಯಾಪ್ತಿಗೆ ಬಂದರು ಪ್ರದೇಶವನ್ನು ಸೇರಿಸಿಕೊಳ್ಳಲಾಗಿದ್ದು, ಅದಕ್ಕೆ ಪೂರಕವಾದ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧವಾಗಿದೆ. ಮುಂದಿನ ವರ್ಷಗಳಲ್ಲಿ ಬಂದರು ಪ್ರದೇಶದ ಸಂಪೂರ್ಣ ಚಿತ್ರಣವೇ ಬದಲಾಗಲಿದೆ ಎಂದು ಅವರು ಹೇಳಿದರು.

ಕಸ ವಿಲೇವಾರಿ ಎಲ್ಲ ನಗರಗಳಿಗೂ ಸವಾಲು ಎನ್ನಬಹುದು. ಆದರೆ ಮಂಗಳೂರಿನ ಸ್ವಚ್ಛತೆಯ ಬಗ್ಗೆ ಇತರ ಊರಿನವರೂ ಪ್ರಶಂಸೆ ವ್ಯಕ್ತಪಡಿಸುತ್ತಾರೆ. ಇ–ಶೌಚಾಲಯ ನಿರ್ಮಾಣಕ್ಕಾಗಿ ವಿವಿಧ ಕಂಪೆನಿಗಳ ಸಿಎಸ್‌ಆರ್‌ ನಿಧಿಯನ್ನು ಬಳಸಿಕೊಳ್ಳಲಾಗುತ್ತಿದೆ. ಹಸಿ ಕಸ ಮತ್ತು ಒಣ ಕಸವನ್ನು ಪ್ರತ್ಯೇಕಿಸುವ ಬಗ್ಗೆ ಮಾತ್ರ ಜನರು ಆಸಕ್ತಿ ವಹಿಸುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಕೆಸಿಸಿಐ ಅಧ್ಯಕ್ಷ ವತಿಕಾ ಪೈ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ನಗರದ ವಿವಿಧ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿ ಮನವಿಯೊಂದನ್ನು ಅವರು ಮೇಯರ್‌ ಕವಿತಾ ಅವರಿಗೆ ಸಲ್ಲಿಸಿದರು. ಸಂವಾದದಲ್ಲಿ ಮಾತನಾಡಿದ ಕೆಸಿಸಿಐ ಮಾಜಿ ಅಧ್ಯಕ್ಷ ಟಿ. ಸುಬ್ಬಯ್ಯ ಶೆಟ್ಟಿ, ಕೆಪಿಟಿ ವೃತ್ತದಲ್ಲಿ ಅತಿಕ್ರಮಣ ಆಗಿರುವುದರಿಂದ ಸಂಚಾರಕ್ಕೆ ಆಗುತ್ತಿರುವ ತೊಡಕಿನ ಬಗ್ಗೆ ಗಮನ ಸೆಳೆದರು. ಎಚ್‌.ಆರ್‌. ಆಳ್ವ, ಪಾಂಡುರಂಗ ಭಟ್‌, ಯೂಲಾಲಿಯಾ ಡಿಸೋಜ, ಶರತ್‌ ರಾವ್ ಮಹಾನಗರದ ಅವ್ಯವಸ್ಥೆಯ ಬಗ್ಗೆ ದೂರುಗಳನ್ನು ನೀಡಿದರು.

ವೇದಿಕೆಯಲ್ಲಿ ಕೆಸಿಸಿಐ ಪದಾಧಿಕಾರಿಗಳಾದ ಟಿ.ಪಿ. ಅಬ್ದುಲ್‌ ಹಮೀದ್‌, ಶಶಿಧರ್‌ ಪೈ ಮಾರೂರು, ಪ್ರಶಾಂತ್‌ ಸಿ.ಜಿ., ಐಸಾಕ್‌ ವಾಸ್‌ ಇದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry