ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 3 ಕೋಟಿ ವೆಚ್ಚದ ಯೋಜನೆ

Last Updated 27 ಅಕ್ಟೋಬರ್ 2017, 8:42 IST
ಅಕ್ಷರ ಗಾತ್ರ

‘ಮಂಗಳೂರು ದಸರಾ’ ಮೂಲಕ ವಿಶ್ವವಿಖ್ಯಾತಿ ಗಳಿಸಿರುವ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರವು ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಈಗಾಗಲೇ ಹಲವು ಕ್ರಾಂತಿಕಾರಿ ಹೆಜ್ಜೆಯನ್ನು ಇಟ್ಟಿದೆ. ಇದೀಗ ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಮತ್ತೊಂದು ಮೈಲಿಗಲ್ಲಿಗೆ ವೇದಿಕೆ ಸಿದ್ಧಗೊಂಡಿದೆ. ಆರ್ಥಿಕ ದುರ್ಬಲರಿಗೆ ನೆರವಾಗುವ ಸದಾಶಯದೊಂದಿಗೆ ‘ಆರೋಗ್ಯ ನಿಧಿ’, ‘ವಿದ್ಯಾ ನಿಧಿ’ ಮತ್ತು ‘ಸಾಮೂಹಿಕ ವಿವಾಹ ಯೋಜನೆ’ಯನ್ನು ಹಮ್ಮಿಕೊಂಡಿದೆ. ಈ ನಿಟ್ಟಿನಲ್ಲಿ ₹ 3 ಕೋಟಿ ಅಂದಾಜು ವೆಚ್ಚದ ಯೋಜನೆಯನ್ನು ಹಾಕಿಕೊಂಡಿದೆ

ಪ್ರತಿನಿತ್ಯ ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತ ಸಮುದಾಯಕ್ಕೆ, ಆಸುಪಾಸಿನ ಶಾಲಾ ಕಾಲೇಜುಗಳ ಸಾವಿರಾರು ಬಡ ವಿದ್ಯಾರ್ಥಿಗಳಿಗೂ ಮಧ್ಯಾಹ್ನದ ಅನ್ನ ಪ್ರಸಾದದ ವ್ಯವಸ್ಥೆಯನ್ನು ಭಕ್ತರ, ದಾನಿಗಳ ನೆರವಿನಿಂದ ಮಾಡಲಾಗುತ್ತಿದೆ. ಇದೀಗ ಕ್ಷೇತ್ರದ ಅಭಿವೃದ್ಧಿಯ ರೂವಾರಿ, ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಅವರ ನಿರೀಕ್ಷೆಯಂತೆ ಈ ಹೊಸ ಮೂರು ಯೋಜನೆ ಆರಂಭಿಸಲಾಗಿದೆ. ನವರಾತ್ರಿ ಸಂದರ್ಭ ಜಿಲ್ಲಾಧಿಕಾರಿ ಡಾ.ಕೆ.ಜಿ. ಜಗದೀಶ್, ದೇವಳ ಅಭಿವೃದ್ಧಿ ಸಮಿತಿ ಅಧ್ಯಕ್ಷ ಜಯ ಸಿ.ಸುವರ್ಣ ಈ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ.

ವಿದ್ಯಾ ನಿಧಿ: ನಾರಾಯಣ ಗುರುಗಳ ‘ಶಿಕ್ಷಣದಿಂದ ಸ್ವತಂತ್ರರಾಗಿರಿ, ಸಂಘಟನೆಯಿಂದ ಬಲಯುತರಾಗಿರಿ’ ಎಂಬ ತತ್ವದಂತೆ ಶಿಕ್ಷಣಕ್ಕೆ ಉತ್ತೇಜನ ನೀಡಲು ಕ್ಷೇತ್ರ ಮುಂದಾಗಿದೆ. ಆರ್ಥಿಕ ಸಂಕಷ್ಟದಿಂದಾಗಿ ವಿದ್ಯಾಭ್ಯಾಸವನ್ನು ಮುಂದುವರಿಸಲಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವಾಗಲು ‘ಶ್ರೀ ಗೋಕರ್ಣನಾಥ ವಿದ್ಯಾನಿಧಿ’ ಸ್ಥಾಪಿಸಲಾಗಿದೆ.

ಈ ಯೋಜನೆಗೆ ಆರಂಭಿಕವಾಗಿ ₹ 1 ಕೋಟಿ ವಿನಿಯೋಗಿಸಲು ಚಿಂತಿಸಲಾಗಿದೆ. ಆಯ್ದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಪಠ್ಯ ಸಾಮಗ್ರಿ ವಿತರಣೆ, ಶೈಕ್ಷಣಿಕ ದತ್ತ ಸ್ವೀಕಾರದಂತಹ ಕಾರ್ಯಕ್ರಮಗಳನ್ನು ಕಾರ್ಯಕ್ರಮ ನಡೆಸಲು ಚಿಂತಿಸಲಾಗಿದೆ. ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ, ಪೋಷಿಸಲು ಉದ್ದೇಶಿಸಲಾಗಿದೆ.

ಆರೋಗ್ಯ ನಿಧಿ: ಕಾಯಿಲೆಗಳಿಗೆ ಶ್ರೀಮಂತ– ಬಡವ ಎಂಬ ಭೇದಭಾವ ಇಲ್ಲ. ಆದರೆ, ಹಣ ಉಳ್ಳವರು ಹೈಟೆಕ್‌ ಆಸ್ಪತ್ರೆಗಳಿಗೆ ಹೋಗಿ ಹೇಗೋ ಬಚಾವಾಗುತ್ತಾರೆ. ಆದರೆ, ಬಡವರು ಹಣವೂ ಇಲ್ಲದೆ, ಚಿಕಿತ್ಸೆಯೂ ಸರಿಯಾಗಿ ಸಿಗದೆ ನರಕಯಾತನ ಪಡುತ್ತಾರೆ. ಆದ್ದರಿಂದ ಮನುಷ್ಯನಿಗೆ ಎಲ್ಲದಕ್ಕಿಂತ ಮುಖ್ಯ ಆರೋಗ್ಯ. ಆರೋಗ್ಯವಿದ್ದರೆ ಮಾತ್ರ ಎಲ್ಲ. ಈ ನಿಟ್ಟಿನಲ್ಲಿ ಕ್ಷೇತ್ರದಿಂದ ಆರೋಗ್ಯ ನಿಧಿಗಾಗಿ ₹ 1 ಕೋಟಿ ವಿನಿಯೋಗಿಸಲು ಯೋಜಿಸಲಾಗಿದೆ.

ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಅನುಕೂಲ ಮಾಡುವ ದೃಷ್ಟಿಕೋನದಿಂದ ಇದನ್ನು ಆರಂಭಿಸಿದೆ. ಇದರಲ್ಲಿ ನಗರದ ನಾನಾ ಆಸ್ಪತ್ರೆಗಳೊಂದಿಗೆ ಒಪ್ಪಂದ ಮಾಡಿಕೊಂಡು, ಆರೋಗ್ಯ ಕಾರ್ಡ್ ಸೇರಿದಂತೆ ನಾನಾ ಸೌಲಭ್ಯ ನೀಡುವ ಪ್ರಯತ್ನಗಳು ನಡೆಯುತ್ತಿವೆ.

ಸಾಮೂಹಿಕ ವಿವಾಹ: ಅದೇಷ್ಟೋ ಬಡ ತಂದೆ-ತಾಯಿಗಳು ತಮ್ಮ ಮಕ್ಕಳ ಮದುವೆಗೆ ಸಾಲ ಮಾಡಿ, ಆಸ್ತಿ ಮಾರಿ ನೋವು ಅನುಭವಿಸುತ್ತಾರೆ. ಒಂದು ಮದುವೆ ಇಡೀ ಕುಟುಂಬದ ಆರ್ಥಿಕ ಸ್ಥಿತಿಗತಿಯನ್ನೇ ಅಲ್ಲೋಲ ಕಲ್ಲೋಲ ಮಾಡುತ್ತದೆ. ಇದನ್ನು ತಡೆಯುವ ನಿಟ್ಟಿನಲ್ಲಿ ದೇವಾಲಯದಲ್ಲಿ ವರ್ಷಕ್ಕೊಮ್ಮೆ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲು ಉದ್ದೇಶಿಸಿದೆ. ವಧು– ವರರಿಗೆ ಬೇಕಾದ ವಸ್ತ್ರ, ಮಾಂಗಲ್ಯ ಸೇರಿದಂತೆ ಬೇಕಾದ ಸಾಮಗ್ರಿಯನ್ನು ಕ್ಷೇತ್ರದಿಂದಲೇ ನೀಡುವ ಯೋಜನೆ ಇದಾಗಿದ್ದು, ಇದಕ್ಕೂ ₹ 1 ಕೋಟಿ ಕಾಯ್ದಿರಿಸಲು ಚಿಂತಿಸಲಾಗಿದೆ.

ಆರ್ಥಿಕ ಮೂಲಕ್ಕೆ ದೇಣಿಗೆ: ಕ್ಷೇತ್ರದಲ್ಲಿ ನಡೆಯುವ ಎಲ್ಲ ಯೋಜನೆಗಳನ್ನು ಕಾರ್ಯಗತಗೊಳಿಸಲು ಪ್ರತಿ ವರ್ಷ ₹ 5 ರಿಂದ 6 ಕೋಟಿ ವೆಚ್ಚ ತಗಲಬಹುದೆಂದು ಅಂದಾಜಿಸಲಾಗಿದೆ. ದಸರಾ ಮಹೋತ್ಸವದ ವ್ಯವಸ್ಥೆಯೊಂದಕ್ಕೆ ಸುಮಾರು ₹ 2.5 ರಿಂದ 3 ಕೋಟಿ ವೆಚ್ಚವಾಗುತ್ತಿದೆ. ಈ ಕಾರ್ಯಕ್ರಮ ಹಾಗೂ ಹೊಸ ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗಲು ಕ್ಷೇತ್ರದಲ್ಲಿ ಕಾಯಂ ನಿಧಿಯನ್ನು ಸ್ಥಾಪಿಸಲಾಗಿದೆ ಎಂದು ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷ ಎಚ್.ಎಸ್. ಸಾಯಿರಾಂ ಹೇಳುತ್ತಾರೆ.

‘ಸಮಾಜದಲ್ಲಿ ಕನಿಷ್ಠ ಹತ್ತು ಸಾವಿರ ಭಕ್ತರು/ ದಾನಿಗಳನ್ನು ಗುರುತಿಸಿ ಪ್ರತಿ ವರ್ಷ ತಲಾ ಕನಿಷ್ಠ ₹ 5 ಸಾವಿರದಷ್ಟು ದೇಣಿಗೆಯನ್ನು ನೀಡುವ ವ್ಯವಸ್ಥೆಯೊಂದು ರೂಪುಗೊಂಡರೆ ಈ ಎಲ್ಲ ಯೋಜನೆಗಳು ಸುಸೂತ್ರವಾಗಿ ಅನುಷ್ಠಾನ ಮಾಡಬಹುದು. ಊರ ಪರವೂರುಗಳಲ್ಲಿ ನೆಲೆಸಿರುವ ಉದ್ಯಮಿಗಳು, ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರಗಳಲ್ಲಿ ದುಡಿಯುತ್ತಿರುವವರು, ಕೃಷಿಕರು, ಜಮೀನುದಾರರು, ಆರ್ಥಿಕವಾಗಿ ಸಾಮರ್ಥ್ಯವಿರುವವರು, ಭಕ್ತರು, ತಮ್ಮ ಸಂಪರ್ಕದಲ್ಲಿರುವ ಕುಟುಂಬದ ಸದಸ್ಯರು ಈ ನಿಟ್ಟಿನಲ್ಲಿ ಉದಾರ ದೇಣಿಗೆಯನ್ನು ನೀಡುವಂತೆ ಕ್ಷೇತ್ರದ ಪರವಾಗಿ ಕೋರುತ್ತಿದ್ದೇವೆ’ ಎಂದು ಮನವಿ ಮಾಡಿದ್ದಾರೆ.

‘ಕ್ಷೇತ್ರದ ನಿಧಿಗೆ ದೇಣಿಗೆ ನೀಡುವವರು ಕ್ಷೇತ್ರದ ಈ ಕೆಳಕಂಡ ಬ್ಯಾಂಕ್ ಖಾತೆಗೆ ನೇರವಾಗಿ ಅಥವಾ ಆನ್ ಲೈನ್ (ಆರ್‌ಟಿಜಿಎಸ್‌/ ನೆಫ್ಟ್‌) ಮೂಲಕ ಸಂದಾಯ ಮಾಡಬಹುದಾಗಿದೆ. ಅದೇ ರೀತಿ ತಮ್ಮ ಹೆಸರು/ ವಿಳಾಸ/ ಮೊಬೈಲ್ ಸಂಖ್ಯೆ ಇತ್ಯಾದಿ ವಿವರಗಳನ್ನು ದೇವಸ್ಥಾನದ ಕಚೇರಿಯಲ್ಲಿ ನೇರವಾಗಿ ಅಥವಾ Email ಗೆ ಕಳುಹಿಸಿಕೊಡಬಹುದು. 

ದೇಣಿಗೆ ನೀಡಿದವರ ವಿವರಗಳನ್ನು ಕ್ಷೇತ್ರದಲ್ಲಿ ಶಾಶ್ವತವಾಗಿ ದಾಖಲಿಸಿ ಇಟ್ಟುಕೊಂಡು, ಶ್ರೀ ದೇವರ ಪ್ರಸಾದವನ್ನು ಕಳುಹಿಸಿಕೊಡುವ ವ್ಯವಸ್ಥೆಯನ್ನು ಮಾಡಲಾಗುವುದು. ಈಗಾಗಲೇ ಈ ಮೂರು ನಿಧಿಗೆ ಎಲ್ಲ ಧರ್ಮದ ದಾನಿಗಳಿಂದ, ಭಕ್ತರಿಂದ ಉತ್ತಮ ಸ್ಪಂದನೆ ದೊರಕಿದೆ. ನಮ್ಮ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿ, ಸ್ವಯಂಪ್ರೇಯಣೆಯಿಂದ ದೇಣಿಗೆ ನೀಡಲು ಮುಂದಾಗುತ್ತಿದ್ದಾರೆ’ ಎಂದು ಆಡಳಿತ ಮಂಡಳಿ ಖಜಾಂಜಿ ಪದ್ಮರಾಜ್‌ ಆರ್‌. ಹೇಳಿದ್ದಾರೆ. ಮಾಹಿತಿಗೆ ಪದ್ಮರಾಜ್‌ ಅವರ ಮೊಬೈಲ್‌: 94482 83999 ಸಂಪರ್ಕಿಸಬಹುದು.
ಬ್ಯಾಂಕ್ ಖಾತೆ ವಿವರ:
ಶ್ರೀ ಗೋಕರ್ಣನಾಥ ಕ್ಷೇತ್ರ
ಕರ್ಣಾಟಕ ಬ್ಯಾಂಕ್, ಕುದ್ರೋಳಿ ಶಾಖೆ
SB A/c No. 4772500101392101
IFSC- KARB0000477

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT