ಭಾನುವಾರ, ಸೆಪ್ಟೆಂಬರ್ 22, 2019
23 °C

ರಸ್ತೆಗಳ ಗುಂಡಿ ಮುಚ್ಚಲು ಆಗ್ರಹ

Published:
Updated:

ರಾಮನಗರ: ಜಿಲ್ಲೆಯಾದ್ಯಂತ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚುವಂತೆ ಒತ್ತಾಯಿಸಿ ಜಯ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ಲೋಕೋಪಯೋಗಿ ಇಲಾಖೆಯ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಧಿಕ್ಕಾರ ಕೂಗಿದ ಸಂಘಟನೆಯ ಕಾರ್ಯಕರ್ತರು, ಒಂದು ತಿಂಗಳ ಅವಧಿಯೊಳಗೆ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳದೇ ಇದ್ದಲ್ಲಿ ಜನಾಂದೋಲನ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.

ಸಂಘಟನೆಯ ರಾಜ್ಯ ವಕ್ತಾರ ಪ್ರಕಾಶ್ ರೈ ಮಾತನಾಡಿ ‘ಅಧಿಕಾರಿಗಳು ಕೇವಲ ಹಣ ಲೂಟಿ ಮಾಡುವುದರಲ್ಲಿಯೇ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕೋಟ್ಯಂತರ ರೂಪಾಯಿ ಹಣ ಬಿಡುಗಡೆ ಆಗುತ್ತಿದ್ದರೂ ರಸ್ತೆಗಳ ಸ್ಥಿತಿ ಮಾತ್ರ ಹಿಂದೆಂದಿಗಿಂತ ಶೋಚನೀಯವಾಗಿದೆ’ ಎಂದು ದೂರಿದರು.

‘ಇಲಾಖೆಯ ಸಣ್ಣಪುಟ್ಟ ಗುತ್ತಿಗೆದಾರರು ಹಣ ಮಾಡಿಕೊಂಡು ಚುನಾವಣೆಗೆ ನಿಲ್ಲುವಷ್ಟು ಬಲಾಢ್ಯರಾಗಿದ್ದಾರೆ. ಅಧಿಕಾರಿಗಳು ಕಮಿಷನ್‌ ದಂಧೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈ ಪ್ರವೃತ್ತಿ ಹೀಗೆಯೇ ಮುಂದುವರಿದಲ್ಲಿ ಮಾಹಿತಿ ಹಕ್ಕು ಮೂಲಕ ಭ್ರಷ್ಟಾಚಾರವನ್ನು ಬಯಲಿಗೆಳೆದು ಹೋರಾಟ ಹಮ್ಮಿಕೊಳ್ಳಲಾಗುವುದು’ ಎಂದು ಎಚ್ಚರಿಸಿದರು.

‘ಈಚೆಗೆ ಸುರಿದ ಭಾರಿ ಮಳೆಯಿಂದಾಗಿ ಹಳ್ಳಿಗಾಡಿನ ರಸ್ತೆಗಳು ತೀರ ಹದಗೆಟ್ಟಿವೆ. ಅಕ್ರಮವಾಗಿ ಮರಳು ಗಣಿಗಾರಿಕೆ ಮತ್ತು ಕ್ರಷರ್‌ ಘಟಕಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಲಾರಿಗಳು ಭಾರಿ ತೂಕದ ಸರಕುಗಳನ್ನು ಸಾಗಣೆ ಮಾಡುತ್ತಾ ರಸ್ತೆಗಳನ್ನು ಹಾಳು ಮಾಡುತ್ತಿವೆ. ಆದಾಗ್ಯೂ ಅಧಿಕಾರಿಗಳು ಕಣ್ಣಿದ್ದು ಕುರುಡರಾಗಿದ್ದಾರೆ’ ಎಂದು ಸಂಘಟನೆಯ ಜಿಲ್ಲಾ ಅಧ್ಯಕ್ಷ ಡಿ.ಜಿ. ಕುಮಾರ್ ದೂರಿದರು.

‘ರಸ್ತೆ ಗುಂಡಿಗಳಿಂದಾಗಿ ಅಪಘಾತಗಳು ಹೆಚ್ಚಾಗುತ್ತಿದ್ದು, ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿರುವುದಕ್ಕೆ ಇಲಾಖೆಯ ಸಿಬ್ಬಂದಿಯೇ ಹೊಣೆಯಾಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಸಂಸದರು ಇನ್ನಾದರೂ ಎಚ್ಚೆತ್ತು ರಸ್ತೆ ಅಭಿವೃದ್ಧಿಗೆ ಮುಂದಾಗಬೇಕು. ಕೂಡಲೇ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚಬೇಕು. ಇಲ್ಲವಾದಲ್ಲಿ ಮುಂದಿನ ತಿಂಗಳು ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು’ ಎಂದು ಅವರು ಎಚ್ಚರಿಸಿದರು.

ಸಂಘಟನೆಯ ರಾಜ್ಯ ಸಲಹೆಗಾರ ಕುಮಾರಸ್ವಾಮಿ, ಜಿಲ್ಲಾ ಕಾರ್ಯಾಧ್ಯಕ್ಷ ಕೆ. ರವಿ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಪಿ. ಕೃಷ್ಣಪ್ಪ, ಪದಾಧಿಕಾರಿಗಳಾದ ವೆಂಕಟೇಶ್‌, ಅರುಣ್‌ಕುಮಾರ್, ರಾಜು, ನಾಗೇಶ್‌, ಆನಂದ್‌, ಪ್ರಶಾಂತ್‌, ಯೋಗೇಶ್‌, ಪ್ರಸಾದ್‌, ಮಂಜು, ಪ್ರಕಾಶ್‌, ತಿಮ್ಮರಾಜು, ಮಧು, ಕಿರಣ್‌ ಪಾಲ್ಗೊಂಡಿದ್ದರು.

Post Comments (+)