ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳ್ಳಂಬೆಳ್ಳ ಕೆರೆ ತೂಬು ಮುಚ್ಚಿದ ರೈತರು

Last Updated 27 ಅಕ್ಟೋಬರ್ 2017, 9:34 IST
ಅಕ್ಷರ ಗಾತ್ರ

ಶಿರಾ: ತಾಲ್ಲೂಕಿನ ಕಳ್ಳಂಬೆಳ್ಳ ಕೆರೆಯಿಂದ ಯಲಿಯೂರು ಕೆರೆಗೆ ನೀರು ಹರಿಸಲು ಬುಧವಾರ ರಾತ್ರಿ ತಾಲ್ಲೂಕು ಆಡಳಿತ ಮುಂದಾಗಿದ್ದು ಇದನ್ನು ವಿರೋಧಿಸಿ ಕಳ್ಳಂಬೆಳ್ಳ ಭಾಗದ ರೈತರು ತೂಬುಗಳನ್ನು ಮುಚ್ಚಿದ್ದಾರೆ. ಇತ್ತೀಚೆಗೆ ಸುರಿದ ಮಳೆ ಮತ್ತು ಹೇಮಾವತಿ ನೀರಿನಿಂದ ಕಳ್ಳಂಬೆಳ್ಳ ಕೆರೆ ಭರ್ತಿಯಾಗಿತ್ತು.

ಕಳ್ಳಂಬೆಳ್ಳ ಕೆರೆಯಿಂದ ಶಿರಾ ಕೆರೆಗೆ ನೀರು ಹರಿಸಲಾಯಿತು. ಇದರಿಂದ ಶಿರಾ ಕೆರೆ ಅರ್ಧದಷ್ಟು ತುಂಬಿತು. ಒಂದು ರೀತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿದಿತ್ತು. ಆದರೆ ಯಲಿಯೂರು ಕೆರೆಗೆ ಇದುವರೆಗೂ ನೀರು ಹರಿಸಿರಲಿಲ್ಲ. ಕಳ್ಳಂಬೆಳ್ಳ ಕೆರೆ ತುಂಬಿದ ಸಮಯದಲ್ಲಿ ಅಧಿಕಾರಿಗಳು ಶಿರಾ ಮತ್ತು ಯಲಿಯೂರು ಕೆರೆ ತುಂಬಿಸುವ ಬದಲು ಮದಲೂರು ಕೆರೆಗೆ ನೀರು ಹರಿಸಿದ್ದರಿಂದ ಈಗ ಸಮಸ್ಯೆ ಉಂಟಾಗಿದೆ.

ಕಳ್ಳಂಬೆಳ್ಳ ಕೆರೆ ನೈಸರ್ಗಿಕವಾಗಿ ಮಳೆ ನೀರಿನಿಂದ ತುಂಬಿದೆ. ಹೇಮಾವತಿ ನೀರನ್ನು ಶಿರಾ ಮತ್ತು ಮದಲೂರು ಕೆರೆಗೆ ತೆಗೆದುಕೊಂಡು ಹೋಗಲಾಗಿದೆ. ಕಳ್ಳಂಬೆಳ್ಳ ಕೆರೆಗೆ ಬರುತ್ತಿದ್ದ ಹೇಮಾವತಿ ನೀರನ್ನು ನಿಲ್ಲಿಸಿ 5 ದಿನವಾಗಿದೆ. ಈಗ ಕೆರೆಯ ನೀರನ್ನು ತೆಗೆದುಕೊಂಡು ಹೋಗುತ್ತಿರುವುದರಿಂದ 2 ಅಡಿ ನೀರು ಕಡಿಮೆಯಾಗಿದೆ. ಯಾವುದೇ ಕಾರಣಕ್ಕೂ ನೀರನ್ನು ಬಿಟ್ಟುಕೊಡುವುದಿಲ್ಲ ಎಂದು ರೈತರು ತೂಬುಗಳನ್ನು ಬಂದ್ ಮಾಡಿದರು.

ನೀರು ಬಿಡುವುದಿಲ್ಲ: ಕಳ್ಳಂಬೆಳ್ಳ ಗ್ರಾಮದ ಅಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಗುರುವಾರ ಸಭೆ ನಡೆಸಿದ ಕಳ್ಳಂಬೆಳ್ಳ ಕೆರೆ ರೈತರು ಮತ್ತು ನೀರು ಬಳಕೆದಾರರ ಸಂಘದವರು ಕೆರೆಯಲ್ಲಿ ಸಂಗ್ರಹವಾಗಿರುವ ನೀರನ್ನು ಯಾವುದೇ ಕಾರಣಕ್ಕೂ ಬೇರೆ ಕೆರೆಗಳಿಗೆ ಬಿಟ್ಟು ಕೊಡದಿರಲು ಸರ್ವಾನುಮತದಿಂದ ನಿರ್ಣಯ ಕೈಗೊಂಡರು.

ಪತ್ರಿಕೆಯೊಂದಿಗೆ ಮಾತನಾಡಿದ ಕಳ್ಳಂಬೆಳ್ಳ ಕೆರೆ ರೈತರು ಮತ್ತು ನೀರು ಬಳಕೆದಾರರ ಸಂಘದ ಅಧ್ಯಕ್ಷ ಆರ್.ಪಿ.ರಂಗನಾಥಪ್ಪ, ‘ಬುಧವಾರ ರಾತ್ರಿ ತಹಶೀಲ್ದಾರ್ ಹಾಗೂ ಅಧಿಕಾರಿಗಳು ಏಕಾಏಕಿ ತೂಬುಗಳನ್ನು ತೆರೆದು ನೀರನ್ನು ಬೇರೆ ಕೆರೆಗಳಿಗೆ ಹರಿಸಲು ಮುಂದಾದರು. ತಡೆಯಲು ಹೋದ ರೈತರ ಮೇಲೆ ಪ್ರಕರಣ ದಾಖಲಿಸಿರುವುದಾಗಿ ಬೆದರಿಕೆ ಹಾಕಿದರು. ಪ್ರಕರಣ ದಾಖಲಿಸಿದರು ಸಹ ನಾವು ಹೆದರುವುದಿಲ್ಲ. ನೀರಿಗಾಗಿ ಪ್ರಾಣವನ್ನು ಕೊಡಲು ಸಿದ್ದ’ ಎಂದರು.

ಹಾಲೇನಹಳ್ಳಿ ತಿಮ್ಮಕ್ಕ ಮಾತನಾಡಿ, ‘ನೀರಿಲ್ಲದೆ ನಮ್ಮ 3 ತೋಟಗಳು ಒಣಗಿವೆ. ಈಗ ಮಳೆ ಬಂದು ಕೆರೆ ತುಂಬಿರುವ ಸಮಯದಲ್ಲಿ ಈ ನೀರನ್ನು ತೆಗೆದುಕೊಂಡು ಹೋಗಲು ಮುಂದಾಗಿದ್ದಾರೆ. ಮಹಿಳೆಯರು ನೀರು ಹರಿಯುವ ತೂಬಿನ ಬಳಿ ಮಲಗುತ್ತೇವೆ ಇವರ ಬೆದರಿಕೆಗೆ ಬಗ್ಗುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಹಶೀಲ್ದಾರ್ ಆರ್.ಗಂಗೇಶ್, ‘ಕುಡಿಯುವ ನೀರಿಗಾಗಿ ಯಲಿಯೂರು ಕೆರೆಗೆ ನೀರು ಹರಿಸಬೇಕು ಇಲ್ಲಿಂದ 23 ಗ್ರಾಮಗಳಿಗೆ ನೀರು ಪೂರೈಕೆ ಮಾಡಲಾಗುವುದು. ಕಳ್ಳಂಬೆಳ್ಳ ಭಾಗದ ರೈತರನ್ನು ಮಾತುಕತೆಗೆ ಕರೆದರು ಸಹ ಬಂದಿಲ್ಲ. ಯಲಿಯೂರು ಭಾಗದ ಜನರು ಕುಡಿಯುವ ನೀರಿಗಾಗಿ ನೀರು ಹರಿಸುವಂತೆ ಮನವಿ ಮಾಡುತ್ತಿದ್ದಾರೆ. ಮುಂದೆ ಕಾನೂನು ರೀತಿಯಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT