ಶನಿವಾರ, ಸೆಪ್ಟೆಂಬರ್ 21, 2019
21 °C

9ನೇ ದಿನಕ್ಕೆ ಕಾಲಿಟ್ಟ ಧರಣಿ ಸತ್ಯಾಗ್ರಹ

Published:
Updated:
9ನೇ ದಿನಕ್ಕೆ ಕಾಲಿಟ್ಟ ಧರಣಿ ಸತ್ಯಾಗ್ರಹ

ಬಸವನಬಾಗೇವಾಡಿ: ಪಟ್ಟಣದಲ್ಲಿ ಹಾದು ಹೋಗುವ ಮನಗೂಳಿ–ಬಿಜ್ಜಳ ರಾಜ್ಯ ಹೆದ್ದಾರಿಯನ್ನು ಈಗಿರುವ ಬಸವೇಶ್ವರ ದೇವಸ್ಥಾನದ ಜಾಗದವರೆಗೆ ವಿಸ್ತರಿಸದೇ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಆಗ್ರಹಿಸಿ ಬಸವೇಶ್ವರ ದೇವಾಲಯ ಸಂರಕ್ಷಣಾ ಸಮಿತಿ ಸದಸ್ಯರು ದೇವಸ್ಥಾನದ ಹೊರ ಆವರಣದಲ್ಲಿ ಆರಂಭಿಸಿರುವ ಧರಣಿ ಗುರುವಾರ 9ನೇ ದಿನಕ್ಕೆ ಕಾಲಿಟ್ಟಿತು.

ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಮೆರವಣಿಗೆ ಮೂಲಕ ಧರಣಿ ಸ್ಥಳಕ್ಕೆ ಬಂದ ಪ್ರತಿಭಟನಾಕಾರರು ಧರಣಿ ಮುಂದುವರಿಸಿದರು. ಸಂಗೊಳ್ಳಿ ರಾಯಣ್ಣ ಸಂಘದವರು ಡೊಳ್ಳಿನ ಪದಗಳನ್ನು ಹಾಡಿದರು. ಮುಖಂಡ ಸಂಗನಗೌಡ ಚಿಕ್ಕೊಂಡ ಮಾತನಾಡಿ, ‘ರಾಜ್ಯ ಹೆದ್ದಾರಿ ವಿಸ್ತರಣೆಗಾಗಿ ದೇವಸ್ಥಾನದ ಮುಂಭಾಗದ ಕೈತೋಟದ ಜಾಗವನ್ನು ಪಡೆಯದೇ ಈಗಿರುವ ರಸ್ತೆಯನ್ನು ಯಥಾಸ್ಥಿತಿ ಇರುವಂತೆ ನೋಡಿಕೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಹುಬ್ಬಳ್ಳಿ ಸಮೀಪದ ಯಮನೂರಿನಲ್ಲಿ ದೇವಸ್ಥಾನಕ್ಕೆ ಬರುವ ಭಕ್ತರಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಬೈಪಾಸ್‌ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಸುರಪುರ, ಅಥಣಿ ಹಾಗೂ ಸಿಂದಗಿಯಲ್ಲಿ ಬೈಪಾಸ್‌ ರಸ್ತೆಗಳಿವೆ. ಆದರೆ ಸರ್ಕಾರ ಬಸವನಬಾಗೇವಾಡಿಯಲ್ಲಿ ಏಕೆ ಬೈಪಾಸ್‌ ರಸ್ತೆ ನಿರ್ಮಾಣಕ್ಕೆ ಮುಂದಾಗುತ್ತಿಲ್ಲ ಎಂಬುದನ್ನು ಸಂಬಂಧಿಸಿದವರು ತಿಳಿಸಬೇಕಿದೆ. ರಾಜ್ಯ ಹೆದ್ದಾರಿ ಮಾರ್ಗಕ್ಕೆ ಅನುಕೂಲವಾಗುವಂತೆ ಪಟ್ಟಣದ ಹೊರ ಭಾಗದಲ್ಲಿ ಹಾದು ಹೋಗುವಂತೆ ವರ್ತುಲ್‌ ರಸ್ತೆ ನಿರ್ಮಾಣ ಮಾಡಬೇಕು’ ಎಂದು ಆಗ್ರಹಿಸಿದರು.

ಧರಣಿಯಲ್ಲಿ ಸೋಮಲಿಂಗ ಈರಕಾರ ಮುತ್ಯಾ, ಬಶೆಟ್ಟೇಪ್ಪ ಅಂಗಡಿ, ವಿಠ್ಠಲ ಹೆರಕಲ್‌, ಅಮೋಘಸಿದ್ದ ಒಡೆಯರ, ಪ್ರವೀಣ ಪವಾರ, ಮಲ್ಲೇಶಪ್ಪ ತೊರವಿ, ಸಂತೋಷ ಯರನಾಳ, ಮಲ್ಲು ಇಂಗಳೇಶ್ವರ, ಗೋಪಾಲ ಪವಾರ, ಅಂಬೋಜಿ ಪವಾರ, ಬಸವರಾಜ ಹೆರಕಲ್, ಕಾಂತು ಅಂಗಡಿ, ಹುಚ್ಚಪ್ಪ ಮೇಟಿ, ಸುರೇಶ ಯರನಾಳ, ಚಂದು ಪವಾರ, ಹಣಮಂತ ನಾಗರಾಳ, ಪ್ರವೀಣ ಪವಾರ, ಮಹೇಶ ವಾಲಿಕಾರ ಇತರರು ಭಾಗವಹಿಸಿದ್ದರು.

Post Comments (+)