ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಕೋ ಎನ್ನುತ್ತಿರುವ ಶೋರೂಂಗಳು

Last Updated 27 ಅಕ್ಟೋಬರ್ 2017, 9:44 IST
ಅಕ್ಷರ ಗಾತ್ರ

ಯಾದಗಿರಿ: 100 ಸಿಸಿ (ಕ್ಯೂಬಿಕ್‌ ಕೆಪಾಸಿಟಿ) ಗಿಂತ ಕಡಿಮೆ ಎಂಜಿನ್‌ ಸಾಮರ್ಥ್ಯದ ದ್ವಿಚಕ್ರ ವಾಹನಗಳು ಒಂದೇ ಆಸನ ಹೊಂದಿರಬೇಕು. ಇಲ್ಲದಿದ್ದಲ್ಲಿ ಅಂತಹ ದಿಚಕ್ರ ವಾಹನಗಳನ್ನು ನೋಂದಣಿ ಮಾಡದಿ ರಲು ರಾಜ್ಯ ಸರ್ಕಾರ ಆದೇಶ ನೀಡಿರುವ ಹಿನ್ನೆಲೆಯಲ್ಲಿ ನಗರದಲ್ಲಿ ದ್ವಿಚಕ್ರ ಮಾರಾಟ ಮಾಡುವ ಶೋರೂಂಗಳು ಬಿಕೋ ಎನ್ನತೊಡಗಿವೆ.

ನಗರದಲ್ಲಿ ಮುದ್ನಾಳ, ವೆಂಕಟೇಶ, ಬಾಜಾಜ್, ಆವಂಟಿ ಟಿವಿಎಸ್ ಹೆಸರಿನ ನಾಲ್ಕು ಶೋರೂಂ ಇವೆ. ಈ ಎಲ್ಲಾ ಶೋರೂಂಗಳಲ್ಲಿ 97ಸಿಸಿ ಘನ ಸಾಮರ್ಥ್ಯದ ಎಂಜಿನ್ ಹೊಂದಿರುವ ದ್ವಿಚಕ್ರ ವಾಹಗಳ ಮಾರಾಟ ನಡೆ ಯುತ್ತದೆ. ಆದರೆ, ಸರ್ಕಾರದ ಆದೇಶ ಹೊರಬಿದ್ದ ಮೇಲೆ ಇವು ಬಿಕೋ ಎನ್ನುತ್ತಿವೆ. ದ್ವಿಚಕ್ರಗಳ ದುರಸ್ತಿ ಕಾರ್ಯಕ್ಕಷ್ಟೇ ಕದ ತೆರೆಯುಂತಾಗಿದೆ.

ವಿವಿಧ ಕಂಪೆನಿಗಳ ಮಾರಾಟ ಪ್ರತಿನಿಧಿಗಳ ಪ್ರಕಾರ ‘ಪ್ರತಿ ಶೋರೂಂನಲ್ಲಿ ನಿತ್ಯ 15ರಿಂದ 20 ದಿಚಕ್ರ ವಾಹನಗಳು ಮಾರಾಟ ಆಗುತ್ತವೆ. ಆದರೆ, ಮಾಧ್ಯಮಗಳಲ್ಲಿ ಸರ್ಕಾರದ ಆದೇಶ ಕುರಿತ ಸುದ್ದಿ ಬಂದ ಮೇಲೆ ಮಾರಾಟ ಸ್ಥಗಿತಗೊಂಡಿದೆ. ಇದರಿಂದ ಮಾರುಕಟ್ಟೆಯ ಮೇಲೆ ತಾತ್ಕಾಲಿಕ ಹೊಡೆತ ಬಿದ್ದಿದೆ. ಆದರೆ, ಕಂಪೆನಿಗಳು ಸರ್ಕಾರದ ಆದೇಶದ ವಿರುದ್ಧ ಸುಪ್ರಿಂಕೋರ್ಟಿಗೆ ಅಪೀಲ್ ಹೋಗಿದ್ದು, ಮುಂದಿನ ಸೋಮವಾರದ ಒಳಗಾಗಿ ಸರ್ಕಾರದ ಆದೇಶಕ್ಕೆ ತಡೆ ಬೀಳಲಿದೆ’ ಎಂಬುದಾಗಿ ತಿಳಿಸಿದರು.

‘ಸರ್ಕಾರದ ಆದೇಶದಿಂದಾಗಿ ದ್ವಿಚಕ್ರ ವಾಹನ ನೋಂದಣಿ ಮೇಲೆ ಅಷ್ಟೊಂದು ಪರಿಣಾಮ ಬಿದ್ದಿಲ್ಲ. ಜಿಲ್ಲೆಯಲ್ಲಿ ಪ್ರತಿ ತಿಂಗಳು 1,300 ದ್ವಿಚಕ್ರಗಳನ್ನು ನೋಂದಣಿ ಮಾಡಲಾಗುತ್ತದೆ. ಅವುಗಳಲ್ಲಿ 100 ಸಿಸಿಗಿಂತ ಕಡಿಮೆ ಸಾಮರ್ಥ್ಯದ ದ್ವಿಚಕ್ರಗಳ ಸಂಖ್ಯೆ 50ರಿಂದ 70 ಇರಬಹುದು.

ಹಾಗಾಗಿ, ನೋಂದಣಿ ಮತ್ತು ಸರ್ಕಾರಿ ತೆರಿಗೆ ಆದಾಯದ ಮೇಲೆ ಅಂತಹ ಗಂಭೀರ ಹೊಡೆತ ಬಿದ್ದಿಲ್ಲ. ಒಂದಷ್ಟು ತಿಂಗಳ ಕಾಲ ಈ ಆದೇಶ ಪಾಲನೆಯಾದಲ್ಲಿ ಉಂಟಾಗಲಿರುವ ಏರುಪೇರು ಗೊತ್ತಾಗಲಿದೆ’ ಎಂದು ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ ಲಕ್ಷ್ಮಿಕಾಂತ ನಾಲವಾರ ಹೇಳುತ್ತಾರೆ.

ಸರ್ಕಾರದ ಆದೇಶದಿಂದಾಗಿ ಜಿಲ್ಲೆಯ ಗ್ರಾಹಕರಿಗೆ ಸಮಸ್ಯೆ ಉಂಟಾಗಿದೆ. ಜಿಲ್ಲೆಯಲ್ಲಿ ಬಹುತೇಕ ಗ್ರಾಮೀಣ ಭಾಗದ ರೈತರು, ಮಧ್ಯಮ ವರ್ಗದ ಜನರು ಹೆಚ್ಚಾಗಿ 100 ಸಿಸಿಗಿಂತ ಕಡಿಮೆ ಇರುವ ಹೀರೊ ಸ್ಪ್ಲೆಂಡರ್ ಪ್ಲಸ್‌ನಂತಹ ದ್ವಿಚಕ್ರಗಳನ್ನೇ ಹೆಚ್ಚು ಇಷ್ಟಪಡುತ್ತಾರೆ. ಅಲ್ಲದೇ 100 ಸಿಸಿಗಿಂತ ಕಡಿಮೆ ಸಾಮರ್ಥ್ಯದ ಎಂಜಿನ್ ಮೈಲೇಜ್ ಹೆಚ್ಚು ನೀಡುತ್ತದೆ ಎಂಬುದಾಗಿ ಹೇಳುತ್ತಾರೆ. ಹೆಚ್ಚು ಬೇಡಿಕೆ ಇರುವ ದ್ವಿಚಕ್ರಗಳ ಮಾರಾಟ ಸ್ಥಗಿತಕ್ಕೆ ಸರ್ಕಾರ ಮುಂದಾಗಿರುವುದನ್ನು ಜಿಲ್ಲೆಯ ಗ್ರಾಹಕರು ಆಕ್ಷೇಪಿಸಿದ್ದಾರೆ. ನಗರ ಪ್ರದೇಶದಲ್ಲಿ ಬಹುಬೇಡಿಕೆ ಇರುವ ಮಹಿಳೆಯರ ಅಚ್ಚುಮೆಚ್ಚಿನ ಸ್ಕೂಟಿ ಕೂಡಾ ಸಂಕಷ್ಟಕ್ಕೆ ಸಿಲುಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT