ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿವಿಲಿಯರ್ಸ್ ಅರಾಧಕನ ದಾಖಲೆಗಳ ಹಾದಿ...

Last Updated 27 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಓದಿದ್ದು ಬರೀ ಮೆಟ್ರಿಕ್; ಅದೂ ಮನೆಯವರ ಬಲವಂತಕ್ಕೆ. ಉಸಿರಾಡಿದ್ದು ಕ್ರಿಕೆಟ್. ಮೊಹಮ್ಮದ್ ಬಾಬರ್ ಅಜಮ್ ಪಾಕಿಸ್ತಾನದಲ್ಲಿ ವಿರಾಟ್ ಕೊಹ್ಲಿಯಷ್ಟೇ ಜನಪ್ರಿಯನಾಗುತ್ತಿರುವ ಕ್ರಿಕೆಟಿಗ. ಬಾಲ್ಯ ಎಂದೊಡನೆ ಅವರು ಹೇಳಿಕೊಳ್ಳುವುದು ಕ್ರಿಕೆಟ್ ಪ್ರೀತಿಯ ಕುರಿತೇ. ಹರೆಯದ ವಿಷಯಕ್ಕೆ ಬಂದರೂ ಅದೇ ಕ್ರಿಕೆಟ್... ಕ್ರಿಕೆಟ್.

ಅಜಮ್ ಮನೆಯಲ್ಲಿ ಎಲ್ಲರೂ ಕ್ರಿಕೆಟ್ ಪ್ರಿಯರೇ. ದಕ್ಷಿಣ ಆಫ್ರಿಕಾದ ಎ.ಬಿ. ಡಿವಿಲಿಯರ್ಸ್ ಹೊಡೆತಗಳನ್ನು ಹರೆಯದಲ್ಲಿ ಅನುಕರಿಸತೊಡಗಿದ ಅಜಮ್, ಈಗ ತನ್ನ ರುಜುವಾತು ಮೂಡಿಸಿ ಆಗಿದೆ.

ಎಲ್ಲವೂ ಫಾಸ್ಟ್ ಪಾರ್ವರ್ಡ್ ಆದಂತೆ ಭಾಸವಾಗುತ್ತದೆ. ಚಿಕ್ಕಪ್ಪನ ಜೊತೆ ಕ್ರಿಕೆಟ್ ಆಡಿದ ದಿನಗಳು, 19 ವರ್ಷದೊಳಗಿ ನವರ ತಂಡಕ್ಕೆ ಆಯ್ಕೆಯಾದಾಗ ಸ್ವರ್ಗಸದೃಶ ಸಂತೋಷ ಅನುಭವಿಸಿದ್ದು, ಪಾಕಿಸ್ತಾನದ ಅಂತರರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದಾಗ ಕುಣಿದದ್ದು, ಜಿಂಬಾಬ್ವೆಗೆ ಮೊದಲ ಪ್ರವಾಸ ಹೋದಾಗ ತಡಬಡಾಯಿಸಿದ್ದು, ಆಮೇಲೆ ನೋಡನೋಡುತ್ತಲೇ ಲಯ ಕಂಡುಕೊಂಡಿದ್ದು... ಎಲ್ಲವೂ ಚಕಚಕನೆ ಆದವೇನೋ ಎಂದು ಖುದ್ದು ಅಜಮ್‌ಗೆ ಅನಿಸತೊಡಗಿದೆ.

ಮಿಸ್ಬಾ ಉಲ್ ಹಕ್ ಹಾಗೂ ಇಂಜಮಾಮ್ ಉಲ್ ಹಕ್ ತರಹದ ಘಟಾನುಘಟಿ ಬ್ಯಾಟ್ಸ್‌ಮನ್‌ಗಳು ದೀರ್ಘ ಕಾಲ ಛಾಪು ಮೂಡಿಸಿದ ನಂತರ ಪಾಕಿಸ್ತಾನ ಕ್ರಿಕೆಟ್ ನ ಭವಿಷ್ಯದ ಕುರಿತು ಪ್ರಶ್ನೆಗಳಿದ್ದವು. ಆ ನೆಲದಲ್ಲಿ ಆಡಲು ಬಹುತೇಕ ತಂಡಗಳು ಹಿಂದು ಮುಂದು ನೋಡುವ ಪರಿಸ್ಥಿತಿ. ಅಂಥ ಹೊತ್ತಿನಲ್ಲಿ ಅಜಮ್ ಭರವಸೆಯ ಬೆಳಕಿನ ಕೋಲಿನಂತೆ ಕಂಡರು.

ಅಜಮ್ ಚಿಕ್ಕಪ್ರಾಯದಲ್ಲೇ ಕೀರ್ತಿ, ಟೀಕೆ ಎರಡನ್ನೂ ಎದುರುಗೊಂಡವರು. 2012ರಲ್ಲಿ 19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್ ನಡೆದಾಗ ಅವರು ಪಾಕ್ ತಂಡದ ನಾಯಕ. ಕ್ವಾರ್ಟರ್ ಫೈನಲ್‌ ವರೆಗೆ ಒಂದು ಲಯದಲ್ಲಿ ಆಡಿದ್ದ ತಂಡದ ಮೇಲೆ ದೇಶದ ಭರವಸೆ ಇತ್ತು. ಆದರೆ, ಎಂಟರ ಘಟ್ಟದಲ್ಲಿ ಭಾರತ ಒಂದೇ ಒಂದು ವಿಕೆಟ್ ನಿಂದ ಗೆದ್ದಿತು. ಭಾರತದ ಎದುರು ಸೋಲುಂಡು ವಿಶ್ವಕಪ್ ನಿಂದ ನಿರ್ಗಮಿಸುವ ಕಷ್ಟ ಅನುಭವಿಸಿದವರಿಗೇ ಗೊತ್ತು. ಅಜಮ್ ಅಂತ ಕಷ್ಟದ ನಿಕಷಕ್ಕೆ ಒಡ್ಡಿಕೊಂಡರು.

2015ರ ಮೇ ತಿಂಗಳಲ್ಲಿ ಜಿಂಬಾಬ್ವೆ ಪ್ರವಾಸಕ್ಕೆ ಆಯ್ಕೆಯಾದರು. ಅದು ಮೊದಲ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ ಆಡುವ ಅವಕಾಶ. ಮೇ 31ರಂದು ಚೊಚ್ಚಲ ಪಂದ್ಯದಲ್ಲಿ ಅರ್ಧ ಶತಕ ಗಳಿಸಿದರಾದರೂ ಆಮೇಲೆ ಅದೃಷ್ಟ ಕೈಕೊಟ್ಟಿತು. ಸೆಪ್ಟೆಂಬರ್‌ನಲ್ಲಿ ಮತ್ತೆ ಜಿಂಬಾಬ್ವೆ ವಿರುದ್ಧ ಆಡುವ ತಂಡಕ್ಕೇನೋ ಆಯ್ಕೆಯಾದರು. ಆದರೆ, ಒಂದೂ ಪಂದ್ಯ ಆಡುವ ಅವಕಾಶ ಸಿಗಲಿಲ್ಲ. ಅದೇ ವರ್ಷ ಅಕ್ಟೋಬರ್‌ನಲ್ಲಿ ಇಂಗ್ಲೆಂಡ್ ಎದುರು ಏಕದಿನ ಪಂದ್ಯದಲ್ಲಿ 62 ಎಸೆತಗಳಲ್ಲಿ ಅಷ್ಟೇ ರನ್ ಕಲೆಹಾಕಿ, ಗೆಲುವು ತಂದಿತ್ತರು. ಕರಾಚಿ ಹುಡುಗನ ವೃತ್ತಿಪರ ಕ್ರಿಕೆಟ್‌ಗೆ ಅದು ಮಹತ್ವದ ತಿರುವು.

2016ರಿಂದ ಲಯದಾಟ ಶುರು. ಜನವರಿಯಲ್ಲಿ ನ್ಯೂಜಿಲೆಂಡ್ ಪ್ರವಾಸ. 2 ಇನಿಂಗ್ಸ್ ಗಳಲ್ಲಿ 72.50 ಸರಾಸರಿಯಲ್ಲಿ 145 ರನ್ ಗಳಿಸಿದ್ದೇ ಆತ್ಮಬಲ ಹೆಚ್ಚಾಯಿತು. ಅದೇ ವರ್ಷ ಅಕ್ಟೋಬರ್ 5ರಂದು 3 ಇನಿಂಗ್ಸ್‌ಗಳಲ್ಲಿ ಸತತ ಮೂರು ಶತಕ ಗಳಿಸಿದ ದಿಟ್ಟನೆಂಬ ಹೆಗ್ಗಳಿಕೆಗೆ ಪಾತ್ರರಾದರು. ವೆಸ್ಟ್ ಇಂಡೀಸ್ ತಂಡದ ಎದುರು ಹೊನಲು ಬೆಳಕಿನ ಟೆಸ್ಟ್ ಪಂದ್ಯದಲ್ಲಿ ಅರ್ಧ ಶತಕ ಗಳಿಸಿದರು. ದೀಪದ ಬೆಳಕಿನಲ್ಲಿ ಅಂಥ ಸಾಧನೆಯನ್ನು ಟೆಸ್ಟ್ ಕ್ರಿಕೆಟ್‌ನಲ್ಲಿ ಮಾಡಿದ ಮೊದಲಿಗ ಅವರು.

ದಾಖಲೆಗಳ ಅವರ ಪಥ ಒಂದು ವರ್ಷದಿಂದ ಎದ್ದುಕಾಣುತ್ತಿದೆ. ಬರೀ 33 ಏಕದಿನದ ಪಂದ್ಯಗಳಲ್ಲಿ 7 ಶತಕಗಳನ್ನು ವಿಶ್ವದ ಬೇರೆ ಯಾವ ಬ್ಯಾಟ್ಸ್‌ಮನ್ ಕೂಡ ಗಳಿಸಿಲ್ಲ. ಯುನೈಟೆಡ್ ಅರೇಬಿಕ್ ಎಮಿರೇಟ್ಸ್‌ನಲ್ಲಿ ಸತತ 5 ಶತಕಗಳನ್ನು ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ ದಾಖಲಿಸಿದ್ದು ಇನ್ನೊಂದು ಸಾಧನೆ. ಕಳೆದ ಒಂದು ವರ್ಷದಲ್ಲಿ ಪಾಕಿಸ್ತಾನದ ಪರವಾಗಿ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ಮೂರನೇ ಕ್ರಮಾಂಕದ ಆಟಗಾರ ಅಜಮ್. 18 ಪಂದ್ಯಗಳಲ್ಲಿ 1133 ರನ್ ಕಲೆಹಾಕಿದ್ದಾರೆ. ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್, ಭಾರತದ ವಿರಾಟ್ ಕೊಹ್ಲಿ ಹಾಗೂ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಮಾತ್ರ ಇವರಿಗಿಂತ ವರ್ಷದ ರನ್ ಗಳಿಕೆಯಲ್ಲಿ ಮುಂದಿದ್ದಾರೆ.

2016ರಲ್ಲಿ ಅಜಮ್ ಆಡುವ ರೀತಿ ನೋಡಿ ಪಾಕಿಸ್ತಾನದ ತರಬೇತುದಾರ ಮಿಕಿ ಆರ್ಥರ್ ಹೀಗೆ ಹೇಳಿದ್ದರು: ‘ಭಾರತದ ವಿರಾಟ್ ಕೊಹ್ಲಿ ಈ ವಯಸ್ಸಿನಲ್ಲಿ ಹೇಗೆ ಆಡುತ್ತಿದ್ದನೋ, ಅಜಮ್ ಕೂಡ ಹಾಗೆಯೇ ಆಡುತ್ತಿದ್ದಾನೆ. ಇವನಿಗೆ ಒಳ್ಳೆಯ ಭವಿಷ್ಯವಿದೆ’.

ಸಚಿನ್ ತೆಂಡೂಲ್ಕರ್ ಮೊದಲ ಶತಕ ಗಳಿಸಿದ್ದೇ 70 ಚಿಲ್ಲರೆ ಇನಿಂಗ್ಸ್‌ಗಳ ನಂತರ. ಅಜಮ್ ತರಹದ ಯುವಕರ ವೇಗ ನೋಡಿದರೆ, ಈ ತಲೆಮಾರಿನವರ ಉತ್ಕಟತೆಯ ರೂಪಕದಂತೆ ಕಾಣುತ್ತದೆ. ಇದೇ ತಿಂಗಳ 14ಕ್ಕೆ ಅವರಿಗೆ 23 ವರ್ಷ ತುಂಬಿತು. ಅವರ ಮುಂದಿನ ಆಟ ನೋಡುವ ಕುತೂಹಲಿಗಳ ಸಂಖ್ಯೆಯಂತೂ ದೊಡ್ಡದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT