ಶಾವಿಗೆಯ ಹೊಸ ಸವಿರುಚಿ

ಶುಕ್ರವಾರ, ಮೇ 24, 2019
26 °C

ಶಾವಿಗೆಯ ಹೊಸ ಸವಿರುಚಿ

Published:
Updated:
ಶಾವಿಗೆಯ ಹೊಸ ಸವಿರುಚಿ

ಶಾವಿಗೆಯಿಂದ ಬರೀ ಪಾಯಸ ಮಾತ್ರವಲ್ಲ, ಇನ್ನೂ ಅನೇಕ ಖಾದ್ಯಗಳನ್ನು ತಯಾರಿಸಬಹುದು ಎಂಬುದು ಅನೇಕರಿಗೆ ತಿಳಿದಿಲ್ಲ. ಇದರಿಂದ ಪಲಾವ್, ಇಡ್ಲಿ, ಹಲ್ವಾ, ಕಟ್ಲೇಟ್‌ ಮೊದಲಾದ ರುಚಿಕರ ತಿಂಡಿಗಳು ತಯಾರಾಗುತ್ತದೆ ಎಂಬುದನ್ನು ವಿವರಿಸಿದ್ದಾರೆ

ಶಾವಿಗೆ ಇಡ್ಲಿ

ಬೇಕಾಗುವ ಸಾಮಗ್ರಿಗಳು: ಶಾವಿಗೆ – 1ಕಪ್‌, ಮೊಸರು – 4ಕಪ್, ತೆಂಗಿನ ತುರಿ – 1ಕಪ್‌, ಹಸಿಮೆಣಸಿನ ಚೂರು – 2ಚಮಚ, ಸಾಸಿವೆ – 1ಚಮಚ, ಉದ್ದಿನ ಬೇಳೆ – 1ಚಮಚ, ಕರಿಬೇವಿನ ಚೂರು – ಸ್ವಲ್ಪ, ಕೊತ್ತಂಬರಿಸೊಪ್ಪು – ಸ್ವಲ್ಪ, ತುಪ್ಪ – 3ಚಮಚ, ಗೋಡಂಬಿ ಚೂರು – ಸ್ವಲ್ಪ, ಉಪ್ಪು – ರುಚಿಗೆ.

ತಯಾರಿಸುವ ವಿಧಾನ: ಬಾಣಲೆಯನ್ನು ಒಲೆಯ ಮೇಲಿಟ್ಟು ತುಪ್ಪ ಹಾಕಿ. ಬಿಸಿಯಾದಾಗ ಉದ್ದಿನ ಬೇಳೆ ಮತ್ತು ಸಾಸಿವೆಯನ್ನು ಸೇರಿಸಿ. ಸಾಸಿವೆ ಸಿಡಿದಾಗ ಹಸಿಮೆಣಸಿನ ಚೂರು, ಕರಿಬೇವಿನ ಚೂರು, ಕೊತ್ತಂಬರಿಸೊಪ್ಪು, ಗೋಡಂಬಿ ಚೂರಗಳನ್ನು ಸೇರಿಸಿ ಹುರಿಯಿರಿ. ನಂತರ ಶಾವಿಗೆ ಸೇರಿಸಿ ಕಂದುಬಣ್ಣ ಬರುವ ತನಕ ಹುರಿದು, ರವೆಯನ್ನು ಸೇರಿಸಿ ತೊಳಸಿ. ನಂತರ ಕೆಳಗಿಳಿಸಿ ಮೊಸರು, ತೆಂಗಿನ ತುರಿ, ಉಪ್ಪನ್ನು ಸೇರಿಸಿ 1 ಗಂಟೆ ಇಡಿ. ನಂತರ ಇಡ್ಲಿತಟ್ಟೆಯಲ್ಲಿ ಹಾಕಿ ಉಗಿಯಲ್ಲಿ ಬೇಯಿಸಿ. ಚಟ್ನಿಯೊಂದಿಗೆ ಸವಿಯಿರಿ.

*ಶಾವಿಗೆ ಸುಕ್ಕಾಬೇಕಾಗುವ ಸಾಮಗ್ರಿಗಳು:
ಶಾವಿಗೆ – 1ಕಪ್‌, ಕ್ಯಾರೆಟ್‌ – 1, ಬೀನ್ಸ್‌ – 1/4ಕಪ್, ಈರುಳ್ಳಿ – 2, ಹಸಿಮೆಣಸು – 1–2, ಗರಂಮಸಾಲೆಪುಡಿ – 1ಚಮಚ, ಟೊಮೆಟೊ ಸಾಸ್‌ – ಸ್ವಲ್ಪ, ಎಣ್ಣೆ – 3ರಿಂದ 4 ಚಮಚ, ಉಪ್ಪು – ರುಚಿಗೆ.

ತಯಾರಿಸುವ ವಿಧಾನ: ಶಾವಿಗೆಯನ್ನು ಸಣ್ಣಗೆ ತುಂಡು ಮಾಡಿ ಸ್ವಲ್ಪ ಎಣ್ಣೆಗೆ ಹಾಕಿ ಕಂದುಬಣ್ಣ ಬರುವಂತೆ ಹುರಿಯಿರಿ. ಅದಕ್ಕೆ ಸ್ವಲ್ಪ ನೀರು, ಉಪ್ಪನ್ನು ಸೇರಿಸಿ ಬೇಯಿಸಿ. ಬಾಣಲೆ ಒಲೆಯ ಮೇಲಿಟ್ಟು ಎಣ್ಣೆ ಹಾಕಿ. ಬಿಸಿಯಾದಾಗ ಈರುಳ್ಳಿಯ ಚೂರುಗಳನ್ನು ಸೇರಿಸಿ ಕಂದುಬಣ್ಣ ಬರುವ ತನಕ ಹುರಿದು ಹೆಚ್ಚಿದ ಕ್ಯಾರೆಟ್, ಬೀನ್ಸ್, ಟೊಮೆಟೊ ಸಾಸ್ ಮತ್ತು ಗರಂಮಸಾಲೆ ಪುಡಿ ಸೇರಿಸಿ ಬೇಯಿಸಿ. ನಂತರ ಶಾವಿಗೆ ಸೇರಿಸಿ. ನೀರಿನ ಪಸೆ ಇಂಗುವ ತನಕ ತೊಳಸಿ. ನಂತರ ಕೊತ್ತಂಬರಿಸೊಪ್ಪನ್ನು ಸೇರಿಸಿ ಈಗ ರುಚಿಯಾದ ಶಾವಿಗೆ ಸುಕ್ಕಾ ತಿನ್ನಲು ಸಿದ್ಧ.

*

ಶಾವಿಗೆ ಪಲಾವ್

ಬೇಕಾಗುವ ಸಾಮಗ್ರಿಗಳು:
ಶಾವಿಗೆ – 1ಕಪ್, ಎಣ್ಣೆ – 2ರಿಂದ 3ಚಮಚ, ಲವಂಗ – 2ರಿಂದ3, ಉದ್ದದ ಚಕ್ಕೆ – 1/2, ಶುಂಠಿ ಬೆಳ್ಳುಳ್ಳಿ – 2ಚಮಚ, ಗರಂಮಸಾಲೆ – 1ಚಮಚ, ಪಲಾವ್ ಎಲೆ – 1, ಈರುಳ್ಳಿ – 2, ಕ್ಯಾರೆಟ್‌ – 1/4ಕಪ್‌, ಬೀನ್ಸ್‌ – 1/4ಕಪ್‌, ಆಲೂ – 1–4 ಕಪ್‌. ಹಸಿರು ಬಟಾಣಿ – 1/4ಕಪ್‌, ಹಸಿಮೆಣಸು – 1ರಿಂದ 2, ಉಪ್ಪು – ರುಚಿಗೆ, ಕೊತ್ತಂಬರಿಸೊಪ್ಪು – ಸ್ವಲ್ಪ, ಸಾಸಿವೆ – 1/4ಚಮಚ, ನಿಂಬೆರಸ – 2ಚಮಚ.

ತಯಾರಿಸುವ ವಿಧಾನ: ಮೊದಲು ಶಾವಿಗೆಯನ್ನು ಬೇಯಿಸಿಡಿ. ಬಾಣಲೆಯನ್ನು ಒಲೆಯ ಮೇಲಿಟ್ಟು ತುಪ್ಪ ಮತ್ತು ಎಣ್ಣೆ ಹಾಕಿ. ಬಿಸಿಯಾದಾಗ ಸಾಸಿವೆ ಹಾಕಿ. ನಂತರ ಲವಂಗ, ಏಲಕ್ಕಿ, ಚಕ್ಕೆ, ಪಲಾವ್ ಎಲೆ, ಸಣ್ಣಗೆ ಹಚ್ಚಿದ ಹಸಿಮೆಣಸು ಸೇರಿಸಿ ಹುರಿಯಿರಿ. ಎಲ್ಲವೂ ಬೆಂದ ಮೇಲೆ ಬೇಯಿಸಿದ ಶಾವಿಗೆಯನ್ನು ಬೆರೆಸಿ. ನಂತರ ನಿಂಬೆರಸ ಹಾಕಿ, ಕೊತ್ತಂಬರಿಸೊಪ್ಪನ್ನು ಹಾಕಿ ಅಲಂಕರಿಸಿ. ಈಗ ರುಚಿ ರುಚಿಯಾದ ಪಲಾವ್ ಸವಿಯಲು ಸಿದ್ಧ.

*ಶಾವಿಗೆ ಕಟ್ಲೆಟ್

ಬೇಕಾಗುವ ಸಾಮಗ್ರಿಗಳು:
ಶಾವಿಗೆ – 1ಕಪ್‌, ಆಲೂಗಡ್ಡೆ – 3ರಿಂದ 4, ಈರುಳ್ಳಿ – 1ರಿಂದ2, ಕೊತ್ತಂಬರಿಸೊಪ್ಪು – 1ಕಂತೆ, ಧನಿಯಾಪುಡಿ – 1ಚಮಚ, ಜೀರಿಗೆಪುಡಿ – 1ಚಮಚ, ಉಪ್ಪು – ರುಚಿಗೆ.

ತಯಾರಿಸುವ ವಿಧಾನ: ಶಾವಿಗೆಯನ್ನು ಮೊದಲು ಬೇಯಿಸಿಡಿ. ಆಲೂಗಡ್ಡೆಯನ್ನು ಬೇಯಿಸಿ ಪುಡಿ ಮಾಡಿ. ನಂತರ ಇದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ, ಕೊತ್ತಂಬರಿಸೊಪ್ಪು, ಧನಿಯಾಪುಡಿ, ಜೀರಿಗೆಪುಡಿ, ಉಪ್ಪನ್ನು ಹಾಕಿ ಬೆರೆಸಿ. ನಂತರ ಬೇಯಿಸಿದ ಶಾವಿಗೆಯನ್ನು ಈ ಮಿಶ್ರಣಕ್ಕೆ ಬೆರೆಸಿ ಕಲಸಿ. ನಂತರ ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ, ಸ್ವಲ್ಪ ಚಪ್ಪಟೆಯಾಕಾರದಲ್ಲಿ ತಟ್ಟಿ ಕಾದ ತವಾದ ಮೇಲೆ ಎಣ್ಣೆ ಹಾಕಿ 2 ಬದಿ ಕೆಂಪಗೆ ಹದ ಉರಿಯಲ್ಲಿ ಬೆಯಿಸಿ. ಎಣ್ಣೆಯಲ್ಲಿಯೂ ಕರಿಯಬಹುದು. ಆರೋಗ್ಯದ ದೃಷ್ಟಿಯಿಂದ ತವಾದ ಮೇಲೆ ಬೇಯಿಸಿದರೆ ಒಳ್ಳೆಯದು. ಪುದೀನಾ ಚಟ್ನಿ ಅಥವಾ ಟೊಮೆಟೊ ಸಾಸ್‌ನೊಂದಿಗೆ ಇದು ಸವಿಯಲು ರುಚಿ.

*ಮೊಸರು ಶಾವಿಗೆ

ಬೇಕಾಗುವ ಸಾಮಾಗ್ರಿಗಳು:
ಬೇಯಿಸಿದ ಶಾವಿಗೆ – 1ಕಪ್‌, ಮೊಸರು – 2ಕಪ್‌, ತುಪ್ಪದಲ್ಲಿ ಹುರಿದ ಗೋಡಂಬಿ – 7ರಿಂದ8, ಹುರಿದ ಒಣದ್ರಾಕ್ಷಿ  – 10ರಿಂದ12, ಎಣ್ಣೆ – 1ಚಮಚ, ಸಾಸಿವೆ – 1/2ಚಮಚ, ಅಲಂಕರಿಸಲು ದಾಳಿಂಬೆಬೀಜ, ಎಣ್ಣೆ – 1/2ಚಮಚ.

ತಯಾರಿಸುವ ವಿಧಾನ: ಒಂದು ಬೌಲಿಗೆ ಬೇಯಿಸಿದ ಶಾವಿಗೆ ಹಾಕಿ. ಅದರ ಮೇಲೆ ಗಟ್ಟಿ ಮೊಸರು, ಉಪ್ಪು, ತುಪ್ಪದಲ್ಲಿ ಹುರಿದ ಗೋಡಂಬಿ, ಒಣದ್ರಾಕ್ಷೆ ಹಾಕಿ. ಸಾಸಿವೆಯ ಒಗ್ಗರಣೆ ಕೊಡಿ. ನಂತರ ಮೇಲೆ ದಾಳಿಂಬೆ ಬೀಜದಿಂದ ಅಲಂಕರಿಸಿ. ಈಗ ರುಚಿಯಾದ ಮೊಸರು ಶಾವಿಗೆ ಸವಿಯಲು ಸಿದ್ಧ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry