‘ನಿಮ್ಮೊಳಗೇ ನಿಮ್ಮ ಪ್ರಶ್ನೆಗೆ ಉತ್ತರವಿದೆ’

ಗುರುವಾರ , ಜೂನ್ 20, 2019
26 °C

‘ನಿಮ್ಮೊಳಗೇ ನಿಮ್ಮ ಪ್ರಶ್ನೆಗೆ ಉತ್ತರವಿದೆ’

Published:
Updated:
‘ನಿಮ್ಮೊಳಗೇ ನಿಮ್ಮ ಪ್ರಶ್ನೆಗೆ ಉತ್ತರವಿದೆ’

1. ನಾನು ಬಿಇ ಮೊದಲ ವರ್ಷದಲ್ಲಿ ಓದುತ್ತಿದ್ದೇನೆ. ಇತ್ತೀಚೆಗೆ ‘ನನಗಾಗಿ ಯಾರೂ ಇಲ್ಲ, ಎಲ್ಲರೂ ಅವರಿಗೆ ಸಹಾಯವಾಗುವಾಗ ಮಾತ್ರ ನನ್ನೊಂದಿಗಿರುತ್ತಾರೆ. ಕೆಲಸವಾದ ಮೇಲೆ ನಾನು ಅವರಿಗೆ ಬೇಡ’ ಎಂದು ಅನಿಸುವುದಕ್ಕೆ ಶುರುವಾಗಿದೆ. ನಾನು ಯಾರಿಗೂ ನೋವು ಮಾಡಲು ಇಷ್ಟಪಡುವುದಿಲ್ಲ. ನನ್ನಿಂದ ಎಷ್ಟು ಸಾಧ್ಯವೋ ಅಷ್ಟು ಸಹಾಯ ಮಾಡುತ್ತೇನೆ. ಆದರೆ ಯಾರೂ ಯಾಕೆ ನನ್ನನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ?

–ಇಬ್ಬನಿ, ಊರು ಬೇಡ

ಉತ್ತರ: ಕಾಲೇಜಿನ ಮೊದಲ ವರ್ಷದಲ್ಲಿ ಅನೇಕ ಹೊಸ ವ್ಯಕ್ತಿಗಳು ನಿಮ್ಮ ಸುತ್ತಲೂ ಇರುತ್ತಾರೆ. ನೀವು ಹೊಸ ಸ್ನೇಹಿತರನ್ನು ಆಯ್ಕೆ ಮಾಡಿಕೊಳ್ಳಲು, ಅವರನ್ನು ಅರ್ಥ ಮಾಡಿಕೊಳ್ಳಲು, ಅವರ ಬಗ್ಗೆ ತಿಳಿದುಕೊಳ್ಳಲು, ಯಾರೂ ನಿಮ್ಮೊಂದಿಗೆ ಮುಂದಿನ ಜೀವನದಲ್ಲಿ ಬರುತ್ತಾರೆ ಎಂದೆಲ್ಲಾ ತಿಳಿಯಲು ಸ್ವಲ್ಪ ಸಮಯ ಹಿಡಿಯುತ್ತದೆ. ಹಾಗಾಗಿ ಸ್ನೇಹಿತರನ್ನು ಆಯ್ಕೆ ಮಾಡಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳಿ. ಅಲ್ಲಿಯವರೆಗೆ ಎಲ್ಲರನ್ನು ಪರಿಚಯ ಮಾಡಿಕೊಳ್ಳಿ. ಪ್ರತಿಯೊಬ್ಬ ವ್ಯಕ್ತಿಯ ವ್ಯಕ್ತಿತ್ವವೂ ಭಿನ್ನವಾಗಿರುತ್ತದೆ. ನೀವು ನಡೆದುಕೊಳ್ಳುವಂತೆ, ನೀವು ಯೋಚಿಸುವಂತೆ ಅವರು ಇರಬೇಕು ಅಂತೇನು ಇಲ್ಲ. ಹಾಗಾಗಿ ಅವರು ಹೇಗಿದ್ದಾರೋ ಹಾಗೇ ಅವರನ್ನು ಒಪ್ಪಿಕೊಳ್ಳಿ.

ಬೇರೆಯವರಿಗೆ ಸಹಾಯ ಮಾಡುವುದು ಮತ್ತು ಇನ್ನೊಬ್ಬರಿಗೆ ನೋಯಿಸದೇ ಇರುವುದು ನಿಮ್ಮಲ್ಲಿರುವ ಗುಣ. ಇನ್ನೊಬ್ಬರಿಂದ ಏನನ್ನು ಮರಳಿ ಪಡೆಯುವ ಬಗ್ಗೆ ನಿರೀಕ್ಷೆ ಇರಿಸಿಕೊಳ್ಳಬೇಡಿ. ಬೇರೆಯವರಿಗೆ ಸಹಾಯ ಮಾಡಿ, ಅವರಿಂದ ಅದನ್ನು ಮರಳಿ ನಿರೀಕ್ಷೆ ಮಾಡುವುದು ಸರಿಯಾದ ದಾರಿಯಲ್ಲ. ಅತಿಯಾದ ನಿರೀಕ್ಷೆಯನ್ನು ಕಡಿಮೆ ಮಾಡಿ. ಸಮಯ ಸರಿದಂತೆ ನಿಮ್ಮ ಪಾಲು ನಿಮಗೆ ದಕ್ಕೇ ದಕ್ಕುತ್ತದೆ. ಯಾವಾಗಲೂ ಒಳ್ಳೆಯ ಯೋಚನೆಯನ್ನೇ ಮಾಡಿ, ಖುಷಿಯಾಗಿರಿ. ಇದು ನಿಮ್ಮ ಸುತ್ತ ಒಂದು ಧನಾತ್ಮಕ ಸೆಳೆತವನ್ನು ಮೂಡಿಸುತ್ತದೆ. ಅಷ್ಟೇ ಅಲ್ಲದೆ, ಇದರಿಂದ ನೀವು ಜೀವನಪರ್ಯಂತ ಸಂತೋಷವಾಗಿರಬಹುದು. 

2. ನನ್ನ ಮಗ 8ನೇ ತರಗತಿಯಲ್ಲಿ ಓದುತ್ತಿದ್ದಾನೆ. ಅವನು ಓದಿನ ಮೇಲೆ ಗಮನ ಹರಿಸುವುದಿಲ್ಲ. ಅವನು ನೋಟ್ಸ್‌ಗಳನ್ನು ಸರಿಯಾಗಿ ಬರೆಯುವುದಿಲ್ಲ. ಅವನಿಗೆ 11 ವಿಷಯವಿದೆ. ಅದರಲ್ಲಿ 6 ವಿಷಯಗಳಲ್ಲಿ ಫೇಲ್ ಆಗಿದ್ದಾನೆ. ಈಗ ನಾನು ಏನು ಮಾಡಬೇಕು?

–ವೀಣಾ, ಊರು ಬೇಡ

ಉತ್ತರ: ಕಾಲಚಕ್ರ ಸರಿದಂತೆಲ್ಲ ಇಂದಿನ ಶಿಕ್ಷಣ ಪದ್ಧತಿ ಕಠಿಣವಾಗುತ್ತಿದೆ. ಮಕ್ಕಳು ಇದನ್ನು ನಿಭಾಯಿಸಲು ತುಂಬ ಕಷ್ಟಪಡುತ್ತಿದ್ದಾರೆ. ನಿಮ್ಮ ಮಗ ಯಾವ ವಿಷಯದಲ್ಲಿ ಕಡಿಮೆ ಅಂಕ ಗಳಿಸುತ್ತಿದ್ದಾನೆ ಎಂದು ತಿಳಿದುಕೊಂಡು ಅವನೊಂದಿಗೆ ಮಾತನಾಡಿ. ಪ್ರತಿದಿನ ಅವನೊಂದಿಗೆ ಸ್ವಲ್ಪ ಸಮಯ ಕಳೆಯಿರಿ. ಯಾವಾಗಲೂ ಸೋಲನ್ನೇ ಆಡಿಕೊಳ್ಳುವ ಬದಲು ಅವನಿಗೆ ಪ್ರೇರಣೆ ನೀಡುತ್ತಿರಿ. ಓದನ್ನು ಚಾಲೆಂಜ್ ಆಗಿ ಸ್ವೀಕರಿಸಲು ಅವನನ್ನು ಬಿಟ್ಟು ಬಿಡಿ. ಯಾವಾಗಲೂ ಅವನ ಬಳಿ ಅವನ ಓದಿಗೆ ಏನು ಅಡ್ಡಿಪಡಿಸುತ್ತಿದೆ ಎಂಬುದನ್ನು ಕೇಳುತ್ತಿರಿ. ‘ನಿನ್ನಿಂದ ಪಾಸಾಗಲು ಸಾಧ್ಯ’ ಎಂದು ಯಾವಾಗಲೂ ಹುರಿದುಂಬಿಸುತ್ತಿರಿ.

ಅವನು ಓದುವ ಕ್ರಮವನ್ನು ಬದಲಾಯಿಸಿ. ಅವನ ಜೊತೆ ಕುಳಿತು ಒಂದು ಟೈಮ್ ಟೇಬಲ್ ರಚಿಸಿ. ಅವನಿಗೆ ಕಷ್ಟ ಎನ್ನಿಸುವ ವಿಷಯಗಳಿಗೆ ಹೆಚ್ಚು ಸಮಯ ಸಿಗುವಂತೆ ನೋಡಿಕೊಳ್ಳಿ. ಶಾಲೆಯಲ್ಲಿ ಅವನಿಗೆ ಕಷ್ಟ ಎನ್ನಿಸುವ ವಿಷಯವನ್ನು ಪ್ರತಿದಿನ ಪುನಾವರ್ತಿಸುವಂತೆ ನೋಡಿಕೊಳ್ಳಿ. ಆಗ ವಿಷಯವನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಲು ಸಹಾಯವಾಗುತ್ತದೆ. ‌ಪ್ರತಿದಿನ ಅಭ್ಯಾಸ ಮಾಡುವುದೊಂದೆ ಇದಕ್ಕಿರುವ ಮುಖ್ಯ ಪರಿಹಾರ, ಹಾಗಾಗಿ ಪ್ರತಿದಿನ ಅಭ್ಯಾಸ ಮಾಡಿಸಿ. ಓದಿನ ಜೊತೆಗೆ ಕೆಲವು ಏಕ್ಸ್‌ಸೈಜ್‌ಗಳನ್ನು ಅಭ್ಯಾಸ ಮಾಡಿಸಿ. ಇದರಿಂದ ನಿಮ್ಮ ಮಗ ಕ್ರಿಯಾಶೀಲನಾಗಿ, ಗಮನ ಹರಿಸಲು ಸಾಧ್ಯ. ಈ ಕೆಲವು ಸಣ್ಣಪುಟ್ಟ ಬದಲಾವಣೆಗಳು ಅವನು ಒಳ್ಳೆಯ ಅಂಕ ಗಳಿಸಲು ಸಹಾಯ ಮಾಡುತ್ತದೆ.

3. ನನಗೆ ಮನಸ್ಸಿನಲ್ಲಿ ಸಾವಿರ ಗೊಂದಲಗೊಳಿವೆ. ಆದರೂ ನಾನು ಸಂತೋಷದಿಂದ ಇರುತ್ತೇನೆ. ಹೊರಗಡೆ ಕಾಣಿಸುವವರಿಗೆ ‘ಇವನೆಷ್ಟು ಸಂತೋಷದಿಂದ ಇದ್ದಾನೆ’ ಎಂದೆನಿಸುತ್ತದೆ. ಆದರೆ ನನ್ನ ಮನಸ್ಸಿನೊಳಗೆ ಗೊಂದಲದ ಗೂಡೇ ಇದೆ. ಮನಸ್ಸಿನ ನೋವು ಮತ್ತು ಗೊಂದಲವನ್ನು ಪರಿಹರಿಸಿಕೊಳ್ಳಲು ನನ್ನಿಂದ ಸಾಧ್ಯವಾಗುತ್ತಿಲ್ಲ.

–ಹೆಸರು, ಊರು ಬೇಡ

ಉತ್ತರ: ನಿಮ್ಮೊಳಗೇ ನಿಮ್ಮ ಪ್ರಶ್ನೆಗೆ ಉತ್ತರವಿದೆ. ನಮ್ಮ ಮನಃಸ್ಥಿತಿಯೇ ಎಲ್ಲದ್ದಕ್ಕೂ ಕಾರಣ. ಸುತ್ತಲಿನ ಜನರೊಂದಿಗೆ ಹೇಗೆ ಸಂತೋಷದಿಂದಿರಬೇಕು ಎಂಬುದು ನಿಮಗೆ ತಿಳಿದಿದೆ. ಸ್ವಲ್ಪ ಗಮನಿಸಿ, ನೀವು ಯಾವಾಗ ಬೇರೆಯವರ ಜೊತೆ ಸಂತೋಷದಿಂದಿರುತ್ತೀರೋ ಆಗ ಮನಸ್ಸಿನ ನೋವನ್ನು ಮರೆಯುತ್ತೀರಿ. ಆದರೆ ಯಾವಾಗ  ಒಬ್ಬಂಟಿಯಾಗಿರುತ್ತೀರೋ ಆಗ ಮನಸ್ಸು ಮತ್ತೆ ದುಃಖಕ್ಕೆ ಮರಳುತ್ತದೆ. ಹಾಗಾಗೀ ನೀವೇ ನಿಮ್ಮ ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕು, ನೀವು ಜೀವನದಲ್ಲಿ ಏನನ್ನು ನಿರೀಕ್ಷೆ ಮಾಡುತ್ತಿದ್ದೀರಿ, ನಿಮ್ಮನ್ನು ಕಾಡುತ್ತಿರುವುದು ಏನು – ಎಂಬುದನ್ನು ತಿಳಿಯಿರಿ; ಅದೇ ನಿಮ್ಮನ್ನು ದುಃಖಕ್ಕೆ ತಳ್ಳುತ್ತಿದೆ. ನಿಮ್ಮಿಂದ ಸಾಧ್ಯವಾದರೆ ಜೀವನದ ನಿಮ್ಮ ನಿರೀಕ್ಷೆಗಳನ್ನು ಪೂರೈಸಿಕೊಳ್ಳಿ, ಸಾಧ್ಯವಿಲ್ಲವೆಂದರೆ ಅದರ ಬಗ್ಗೆ ತಲೆ ಕಡೆಸಿಕೊಳ್ಳಬೇಡಿ. ನಿರೀಕ್ಷೆಯನ್ನು ಕಡಿಮೆಗೊಳಿಸಿ. ಧನಾತ್ಮಕವಾಗಿ ಯೋಚಿಸುವುದನ್ನು ರೂಢಿಸಿಕೊಳ್ಳಿ. ಅನಗತ್ಯವಾಗಿ ಚಿಂತಿಸಿ ನಿಮ್ಮ ಮನಸ್ಸಿಗೆ ನೀವೇ ಹೊರೆ ನೀಡಬೇಡಿ. ಧನಾತ್ಮಕ ವ್ಯಕ್ತಿತ್ವ ಹೊಂದಿರುವ ವ್ಯಕ್ತಿಗಳ ಜೊತೆ ಸಾಮಾಜಿಕವಾಗಿ ಬೆರೆಯಿರಿ. ಇದರಿಂದ ನೀವು ಎಲ್ಲಾ ಸಮಯದಲ್ಲೂ ಸಂತೋಷದಿಂದಿರಲು ಸಾಧ್ಯ.

4. ನಾನು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೇನೆ. ನನಗೆ ಮದುವೆ ಫಿಕ್ಸ್ ಆಗಿದೆ. ಹುಡುಗ ಬ್ಯುಸಿನೆಸ್ ಮಾಡುತ್ತಿದ್ದಾರೆ.  ಅವರು ಯಾವಾಗಲೂ ಬ್ಯುಸಿ ಇರುತ್ತಾರೆ. ನಾನು ಓದುತ್ತಿರುವುದರಿಂದ ಮದುವೆ ತಡವಾಗುತ್ತಿದೆ. ಅವರಿಗೆ ನಾನು ಕಾಲ್ ಮಾಡಿದರೆ ಕೋಪ ಮಾಡಿಕೊಳ್ಳುತ್ತಾರೆ. ‘ಈಗ ಸುಮ್ನೆ ಓದ್ಕೋ’ ಎನ್ನುತ್ತಾರೆ. ಅವರು ಹಾಗೆ ನಡೆದುಕೊಳ್ಳುವುದರಿಂದ ಓದುವುದಕ್ಕೆ ಮನಸ್ಸೇ ಆಗುತ್ತಿಲ್ಲ. ನಾನು ಕೆಲಸಕ್ಕೆ ಹೋಗುವುದು ಅನಿವಾರ್ಯ. ನನಗೆ ಮನಸ್ಸು ಯಾವಾಗಲೂ ಬದಲಾಗುತ್ತಿರುತ್ತದೆ. ನನಗೆ ಪರಿಹಾರ ತಿಳಿಸಿ.

– ಹೆಸರು, ಊರು ಬೇಡ

ಉತ್ತರ: ನಿಮಗೆ ತಿಳಿದಿರುವಂತೆ ನಿಮಗೆ ಈಗ ಕೆಲಸ ಮುಖ್ಯ. ಹಾಗಾಗಿ ನೀವು ಮೊದಲು ಅದರತ್ತ ನಿಮ್ಮ ಚಿತ್ತ ಹರಿಸಿ. ನಿಮ್ಮ ನಿತ್ಯದ ಕೆಲಸಗಳ ಮೇಲೆ ಹೆಚ್ಚು ಗಮನ ಕೊಡಿ. ಈಗ ನೀವು ಪರೀಕ್ಷೆಗೆ ತಯಾರಿ ನಡೆಸಬೇಕಿದೆ. ಹಾಗಾಗಿ ಮೊದಲು ಅದರ ಮೇಲೆ ನಿಮ್ಮ ಗಮನವಿರಲಿ. ನಿಮ್ಮನ್ನು ಮದುವೆಯಾಗುವ ಹುಡುಗ ಕೂಡ ಅದನ್ನೇ ಹೇಳುತ್ತಿರುವುದು. ನಿಮ್ಮ ಮನಸನ್ನು ತಲ್ಲಣಗೊಳಿಸಿಕೊಳ್ಳಬೇಡಿ. ಓದಿನ ಮೇಲೆ ಏಕಾಗ್ರತೆಯಿರಲಿ. ನಿಮ್ಮ ನಿತ್ಯದ ಅವಶ್ಯಕತೆಗಳ ಮೇಲೆ ಗಮನ ಕೊಡುವುದನ್ನು ನಿಲ್ಲಿಸಬೇಡಿ. ಒಮ್ಮೆ ನೀವು ಪರೀಕ್ಷೆಯನ್ನು ಮುಗಿಸಿದರೆ ಉಳಿದಿದ್ದೆಲ್ಲವೂ ತಂತಾನೇ ಮುಂದುವರಿಯುತ್ತದೆ. ನಿಮ್ಮ ಹುಡುಗನ ಬ್ಯುಸಿ ಜೀವನದ ನಡುವೆಯೂ ಆಗಾಗ ನೀವು ಅವರೊಂದಿಗೆ ಕೆಲ ಸಮಯವನ್ನು ಕಳೆಯಬಹುದು. ಎಲ್ಲವೂ ಒಳ್ಳೆಯದೇ ಆಗುತ್ತದೆ. ನಿಮ್ಮ ಪರೀಕ್ಷೆ ಮುಗಿಯುವವರೆಗೂ ಕಾಯಿರಿ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry